ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯ ಮನೆಯಿಂದ ಮಂಗಳವಾರ (ಫೆ.11) ಬೆಳಿಗ್ಗೆ ಅಪರಿಚಿತರು ಹಿರಿಯ ಪತ್ರಕರ್ತ ಲಾಬಾ ಯಂಬೆಮ್ ಅವರನ್ನು ಬಂದೂಕು ತೋರಿಸಿ ಅಪಹರಿಸಿದ್ದರು, ಬಳಿಕ ಬಿಡುಗಡೆ ಮಾಡಿದ್ದಾರೆ.
ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಲಾಬಾ ಯಂಬೆಮ್ ಅವರನ್ನು ಬಿಡುಗಡೆ ಮಾಡಲಾಗಿದೆ. ಅವರನ್ನು ಪೊಲೀಸರು ಕುಟುಂಬದ ಜೊತೆ ಸೇರಿಸಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ (ಫೆ.9) ಮಣಿಪುರ ಸಿಎಂ ಬಿರೇನ್ ಸಿಂಗ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಬಳಿಕ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಪತ್ರಕರ್ತ ಯಂಬೆಮ್ ಟಿವಿ ವಾಹಿನಿಯೊಂದರಲ್ಲಿ ಮಾತನಾಡಿದ್ದರು. ಅಲ್ಲಿಂದ ಹಿಂದಿರುಗಿದ ಕೆಲವೇ ಗಂಟೆಗಳಲ್ಲಿ ಯಂಬೆಮ್ ಅವರನ್ನು ಅಪಹರಿಸಲಾಗಿದೆ ಎಂದು ಅವರ ಹಿರಿಯ ಸಹೋದರ, ನಿವೃತ್ತ ಸೇನಾ ಮೇಜರ್ ಯಂಬೆಮ್ ಅಂಗಂಬಾ ಹೇಳಿದ್ದಾರೆ.
69 ವರ್ಷದ ಲಾಬಾ ಯಂಬೆಮ್ ಅವರು ರಾಷ್ಟ್ರೀಯ ಇಂಗ್ಲಿಷ್ ದಿನಪತ್ರಿಕೆ ಸ್ಟೇಟ್ಸ್‌ಮನ್‌ನ ವಿಶೇಷ ವರದಿಗಾರರಾಗಿದ್ದು, ಬೆಳಗಿನ ಜಾವ 3:30 ರ ಸುಮಾರಿಗೆ 15 ರಿಂದ 20 ಮಂದಿ ಬಂದೂಕುಧಾರಿಗಳ ಗುಂಪೊಂದು ಅವರನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿತ್ತು ಎಂದು ಅಂಗಂಬಾ ವಿವರಿಸಿದ್ದಾರೆ.
ಎರಡು ದಿನಗಳ ಹಿಂದೆ ಲಾಬಾ ಅವರ ಮನೆ ಮೇಲೆ ಬಂಡುಕೋರರು ಗುಂಡಿನ ದಾಳಿ ನಡೆಸಿ, ಅವರನ್ನು ಟೀಕಿಸಿ ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್ ಡಿಲಿಟ್ ಮಾಡುವಂತೆ ಸೂಚಿಸಿದ್ದರು. ಅದಾಗಿ ಎರಡು ದಿನಗಳ ನಂತರ ಅವರ ಅಪಹರಣ ನಡೆದಿದೆ.
ಲಾಬಾ ಅವರು ಮಣಿಪುರ ಮಾನವ ಹಕ್ಕುಗಳ ಆಯೋಗದ ಮಾಜಿ ಸದಸ್ಯರಾಗಿದ್ದಾರೆ.
“ಬಹುಶಃ ಲಾಬಾ ಅವರನ್ನು ಅಪಹರಿಸಿದವರಿಗೆ ಅವರ ಹೇಳಿಕೆ ತೃಪ್ತಿಯಾಗದೇ ಇರಬಹುದು. ಆದರೆ, ಅವರು ಹೇಳಿದ್ದೆಲ್ಲವೂ ಪತ್ರಕರ್ತರ ನೈತಿಕತೆಗೆ ಅನುಗುಣವಾಗಿತ್ತು. ಪತ್ರಕರ್ತನಿಗೆ ಸಮಾಜ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಬರೆಯಲು ಮತ್ತು ಮಾತನಾಡಲು ಹಕ್ಕಿದೆ” ಎಂದು ಸಹೋದರ ಅಂಗಂಬಾ ಹೇಳಿದ್ದಾರೆ. ಕುಟುಂಬಸ್ಥರು ಎಫ್‌ಐಆರ್ ದಾಖಲಿಸಿದ ನಂತರ ಮಂಗಳವಾರ ಬೆಳಿಗ್ಗೆ ಪೊಲೀಸರು ಅವರ ಮನೆಗೆ ಭೇಟಿ ನೀಡಿದ್ದರು ಎಂದು ಅಂಗಂಬಾ ತಿಳಿಸಿದ್ದಾರೆ.
” ಈ ಹಿಂದೆಯೂ ಲಾಬಾ ಅವರ ಮನೆಯ ಮೇಲೆ ದಾಳಿ ನಡೆದಿತ್ತು. ಮಣಿಪುರದ ಕೆಲವು ಶಕ್ತಿಗಳು ಪತ್ರಕರ್ತರು ಮುಕ್ತವಾಗಿ ಮತ್ತು ನ್ಯಾಯಯುತವಾಗಿ ಕೆಲಸ ಮಾಡುವುದನ್ನು ಇಷ್ಟಪಡುವುದಿಲ್ಲ ಎಂದು ತೋರುತ್ತದೆ” ಎಂದು ಅಂಗಂಬಾ ಹೇಳಿದ್ದಾರೆ.
ಭಾನುವಾರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಮಣಿಪುರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಮಧ್ಯೆ ಈ ಘಟನೆ ನಡೆದಿದೆ. ಸಂಘರ್ಷ ಪೀಡಿತ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ತಪ್ಪಿಸಲು ಮತ್ತು ಬಿರೇನ್ ಅವರನ್ನು ಬದಲಿಸಲು ಬಿಜೆಪಿ ಒಮ್ಮತದ ಅಭ್ಯರ್ಥಿಯನ್ನು ಹುಡುಕುತ್ತಿದೆ.
ಭಿನ್ನಮತದ ವದಂತಿ ನಡುವೆ ಪಂಜಾಬ್ ಸಿಎಂ, ಶಾಸಕರೊಂದಿಗೆ ಕೇಜ್ರಿವಾಲ್ ಮಹತ್ವದ ಸಭೆ


