ಕನ್ನಡದ ಹಿರಿಯ ಸಾಹಿತಿ, ಕಥೆಗಾರ, ವಿಮರ್ಶಕ ಮತ್ತು ದಲಿತ ಕಾವ್ಯ ಚಳವಳಿಯ ಪ್ರಮುಖ ಧ್ವನಿಯಾಗಿದ್ದ ಡಾ. ಮೊಗಳ್ಳಿ ಗಣೇಶ್ ಭಾನುವಾರ (ಅ.5) ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಗಣೇಶ್ ಅವರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
ಡಾ. ಮೊಗಳ್ಳಿ ಗಣೇಶ್ ಅವರು 1962ರ ಜುಲೈ 1ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಂತೇಮೊಗಳ್ಳಿ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲೇ ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದರು. ನಂತರ ಜಾನಪದ ಅಧ್ಯಯನದಲ್ಲಿ ಡಾಕ್ಟರೇಟ್ ಪಡೆದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇರಿ, ಕೊನೆಗೆ ವಿಭಾಗದ ಮುಖ್ಯಸ್ಥರಾದರು. ಅವರ ಸಂಶೋಧನಾ ಕೃತಿ ‘ಆದಿಮ’ ಜಾನಪದ ಚಿಂತನೆಯಲ್ಲಿ ಮಹತ್ವದ ಕೊಡುಗೆಯಾಗಿದೆ.
ಕಥೆ, ಕವನ, ವಿಮರ್ಶೆ ಮತ್ತು ಆತ್ಮಕಥನದಲ್ಲಿ ಗಣೇಶ್ ಅವರು ತಮ್ಮ ಛಾಪು ಮೂಡಿಸಿದ್ದರು. ಅವರ ಮೊದಲ ಕಥಾ ಸಂಕಲನ ‘ಬುಗುರಿ’ (1993) ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿತ್ತು. ನಂತರದ ಎರಡು ವರ್ಷಗಳಲ್ಲಿ ಮತ್ತೆ ಎರಡು ಬಾರಿ ಮೊದಲ ಬಹುಮಾನ ಪಡೆದಿದ್ದರು. ‘ಮಣ್ಣು’, ‘ಅತ್ತೆ’, ‘ಭೂಮಿ’, ‘ಕನ್ನೆಮಳೆ’, ‘ದೇವರ ದಾರಿ’ ಗಣೇಶ್ ಅವರ ಇತರ ಕಥಾ ಸಂಕಲನಗಳು. ‘ಮೊಗಳ್ಳಿ ಕಥೆಗಳು’ ಗಣೇಶ್ ಅವರ ಬಹುಪಾಲು ಕಥೆಗಳ ಸಂಕಲನವಾಗಿದೆ. ಇದು ದೇಸಿ ಜೀವನದ ಸೂಕ್ಷ್ಮತೆಗಳನ್ನು ಬಿಂಬಿಸುತ್ತವೆ. ‘ದೇವರ ದಾರಿ’ಗೆ ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಲಭಿಸಿದೆ.
ಕಾವ್ಯ ಕ್ಷೇತ್ರದಲ್ಲಿ ‘ದೇವಸ್ಮಶಾನ’ ಸಂಕಲನ ಮಹತ್ವದ್ದು. ಇದಕ್ಕೆ ಪು.ತಿ.ನ. ಕಾವ್ಯ ಪ್ರಶಸ್ತಿ ಲಭಿಸಿದೆ. ದಲಿತ ಕಾವ್ಯ ಮತ್ತು ಸಾಹಿತ್ಯಕ್ಕೆ ಗಣೇಶ್ ಅವರ ಕೊಡುಗೆ ಅಪಾರ. ದಲಿತರ ದೌರ್ಜನ್ಯ ಮತ್ತು ಜಾಗತೀಕರಣದ ಪ್ರಭಾವಗಳನ್ನು ಅವರು ಕಾವ್ಯಾತ್ಮಕವಾಗಿ ವ್ಯಕ್ತಪಡಿಸಿದರು. ವೈಚಾರಿಕ ವಿಮರ್ಶೆಯಲ್ಲಿ ‘ದಲಿತರು ಮತ್ತು ಜಾಗತೀಕರಣ (1998) ಮತ್ತು ‘ತಕರಾರು’ ಕೃತಿಗಳು ಮಹತ್ವದ್ದು. ‘ತಕರಾರು’ಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ.
‘ನಾನೆಂಬುದು ಕಿಂಚಿತ್ತು’ ಆತ್ಮಕಥನದಲ್ಲಿ ಗಣೇಶ್ ಅವರು ದಲಿತ ಅನುಭವಗಳನ್ನು ಸಮಾಜ ವಿಮರ್ಶೆಯೊಂದಿಗೆ ಜೋಡಿಸಿ, ದಲಿತ ಚಳವಳಿಯನ್ನು ಬಲಪಡಿಸಿದರು. ಲಂಕೇಶ್ ಪತ್ರಿಕೆಯಲ್ಲಿ ಬರೆದ ವಿಮರ್ಶೆಗಳು ಮತ್ತು ಕಥೆಗಳು ಅವರನ್ನು ಪ್ರಸಿದ್ಧಿಗೆ ತಂದವು.
ಗಣೇಶ್ ಅವರ ನಿಧನದಿಂದ ಕನ್ನಡದ ಪ್ರಗತಿಪರ ಸಾಹಿತ್ಯ ಲೋಕವು ತನ್ನ ಅತ್ಯಂತ ಪ್ರಭಾವಿ ಧ್ವನಿಯನ್ನು ಕಳೆದುಕೊಂಡಂತಾಗಿದೆ. ಸಾಹಿತಿಗಳು ಸೇರಿದಂತೆ ಅನೇಕ ಪ್ರಮುಖರು ಗಣೇಶ್ ಅವರ ಅಗಲಿಕೆಗೆ ಶೋಕ ವ್ಯಕ್ತಪಡಿಸಿದ್ದಾರೆ.
ಇಂದು ಸಂಜೆ ಮದ್ದೂರಿನ ಮಾದನಾಯಕನಹಳ್ಳಿಯಲ್ಲಿ ಗಣೇಶ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.


