ನಾಲ್ಕು ವರ್ಷದ ಮಗು ಹಾಗೂ ಮತ್ತೊಬ್ಬ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಹೈದ್ರಾಬಾದ್ ನಗರದಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಎರಡು ಘಟನೆಗಳು ಪ್ರತ್ಯೇಕ ಘಟನೆಗಳಾಗಿದ್ದು, ನಾಲ್ಕು ವರ್ಷದ ಬಾಲಕಿಯು ತನ್ನ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಪಕ್ಕದ ಮನೆಯ ವ್ಯಕ್ತಿ ಮಗುವನ್ನು ಮನೆಗೆ ಕರೆದೋಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
23 ವರ್ಷದ ಆರೋಪಿಯು ಮಗುವಿಗೆ ಪರಿಚಯವಿದ್ದನು ಹಾಗೂ ಆಗಾಗ್ಗೆ ಮಗುವಿನ ಮನೆಗೂ ಬರುತ್ತಿದ್ದನು ಎಂದು ರಾಜೇಂದ್ರನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ದುಷ್ಕೃತ್ಯವು ಆರೋಪಿಯ ಮನೆಯಲ್ಲಿ ನಡೆದಿದೆ. ಮಗು ಎಚ್ಚರಿಕೆಯನ್ನು ಸೂಚಿಸಿದಾಗ ಆತ ಮಗುವನ್ನು ಹೊರಗೆ ಬಿಟ್ಟು ಕಳುಹಿಸಿದ್ದಾನೆ. ಮಗುವಿನ ಮನೆಯವರಿಗೆ ತಿಳಿದು ಮನೆಗೆ ಹೋಗಿ ವಿಚಾರಿಸಿದಾಗ ಘಟನೆ ಹೊರಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಬಿ.ಗಂಗಾಧರ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಪೋಷಕರು ಗುರುವಾರ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಎರಡನೇ ಪ್ರಕರಣ: ಕೆಲವು ದಿನಗಳ ಹಿಂದೆ ಬಾಲಕಿಯ ಸ್ನೇಹಿತ ಮದುವೆಯಾಗುವುದಾಗಿ ನಂಬಿಸಿ ಕೆಲವು ದಿನಗಳ ಹಿಂದೆ ಅತ್ಯಾಚಾರ ಎಸಗಿದ್ದನು. ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯು ವಿದ್ಯಾರ್ಥಿನಿಯಾಗಿದ್ದು, ಆರೋಪಿಯು ದಿನಗೂಲಿ ನೌಕರನಾಗಿದ್ದಾನೆ.
ಇದನ್ನೂ ಓದಿರಿ: ಮಹಾರಾಷ್ಟ್ರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಬಂಧನ
ರಾಜಸ್ಥಾನದಲ್ಲಿ ಶಿಕ್ಷಕನಿಂದ ಅತ್ಯಾಚಾರ
ಇತ್ತೀಚಿನ ದಿನಗಳಲ್ಲಿ ಪುಟ್ಟ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. 31 ವರ್ಷದ ಶಿಕ್ಷಕ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ತಾನ ರಾಜ್ಯದಲ್ಲಿ ಇತ್ತೀಚೆಗೆ ನಡೆದಿತ್ತು. ನಡೆದಿದೆ. 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದ ಜುಂಜುನು ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕ ಕೇಶವ್ ಯಾದವ್‌ನನ್ನು ಬಂಧಿಸಲಾಗಿತ್ತು.
ಪಠ್ಯಪುಸ್ತಕದಲ್ಲಿದ್ದ ಸಹಾಯವಾಣಿಗೆ ಬಾಲಕಿ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿದಿತ್ತು. “ಶಾಲಾ ಅವಧಿಯ ನಂತರ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಕ್ಟೋಬರ್ 5ರಂದು ಅತ್ಯಾಚಾರ ಎಸಗಿದ್ದಾನೆ. ಬೇರೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಿಕ್ಷಕ ಬೆದರಿಕೆ ಹಾಕಿದ್ದ” ಎಂದು ಪೊಲೀಸರು ತಿಳಿಸಿದ್ದರು.
ಭಯಾನಕ ಸಾಮೂಹಿಕ ಅತ್ಯಾಚಾರ
ಮಹಾರಾಷ್ಟ್ರದ ಮುಂಬೈನಲ್ಲಿ 15 ವರ್ಷದ ಬಾಲಕಿ ಮೇಲೆ ಒಂಬತ್ತು ತಿಂಗಳ ಅವಧಿಯಲ್ಲಿ, ಇಬ್ಬರು ಅಪ್ರಾಪ್ತರು ಸೇರಿದಂತೆ 29 ಜನರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಭಯಾನಕ, ಅಮಾನವೀಯ ಘಟನೆಯ ವಿವರಗಳನ್ನು ಪೊಲೀಸರು ಇತ್ತೀಚೆಗೆ ಬಹಿರಂಗಪಟ್ಟಿದ್ದರು.
ಕಳೆದ ಜನವರಿಯಲ್ಲಿ ಬಾಲಕಿಯ ಗೆಳೆಯ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಅತ್ಯಾಚಾರವನ್ನು ವಿಡಿಯೊ ಮಾಡಿಕೊಂಡಿದ್ದನು. ಇದೆ ವಿಡಿಯೊವನ್ನು ಇಟ್ಟುಕೊಂಡು ಬಾಲಕಿಯನ್ನು ಬ್ಲಾಕ್ ಮೇಲೆ ಮಾಡುವ ಮೂಲಕ ಯುವಕನ ಗೆಳೆಯರು ಮತ್ತು ಇತರ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು.
ಬೆಚ್ಚಿ ಬೀಳಿಸಿದ್ದ ದಲಿತ ಬಾಲಕಿಯ ಅತ್ಯಾಚಾರ
9 ವರ್ಷದ ದಲಿತ ಬಾಲಕಿಯ ಮೇಲೆ ಭೀಕರವಾಗಿ ಅತ್ಯಾಚಾರ ನಡೆಸಿ, ಬಾಲಕಿಯನ್ನು ಸಾಯಿಸಿದ್ದಷ್ಟೇ ಅಲ್ಲದೇ, ಅತ್ಯಾಚಾರದ ಆರೋಪಿಗಳು ಬಲವಂತವಾಗಿ ಅಂತ್ಯಸಂಸ್ಕಾರ ನಡೆಸಿದ್ದ ಘಟನೆಗೆ ದೇಶದ ರಾಜಧಾನಿ ದೆಹಲಿ ಸಾಕ್ಷಿಯಾಗಿತ್ತು. ದೆಹಲಿಯ ಕಂಟೋನ್ಮೇಟ್ ಪ್ರದೇಶದಲ್ಲಿ, ಆಗಸ್ಟ್ 1ರಂದು ಘಟನೆ ನಡೆದಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ದೆಹಲಿ ಪೊಲೀಸರು, ಇದೇ ಮೊದಲ ಬಾರಿಗೆ ಬಾಲಕಿಯ ಸಾವಿನ ಕಾರಣವನ್ನು ನ್ಯಾಯಾಲಯಕ್ಕೆ ತಿಳಿಸಿದ್ದು, ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಮುಖ್ಯ ಆರೋಪಿ, ಪೂಜಾರಿ ರಾಧೆ ಶ್ಯಾಮ್ ಈ ಹಿಂದೆಯೂ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು. ಬಾಲಕಿಗೆ ಲೈಂಗಿಕ ಸಂದೇಶಗಳನ್ನು ಕಳುಹಿಸಿದ್ದನು, ಅಶ್ಲೀಲ ವಿಡಿಯೋಗಳನ್ನು ತೋರಿಸಿ ಪ್ರಚೋದಿಸಲು ಯತ್ನಿಸಿದ್ದನು ಎಂದು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ.
ಶ್ಮಶಾನದಲ್ಲಿ ವಾಟರ್ ಕೂಲರ್‌ನಿಂದ ನೀರು ತರುವಾಗ ವಿದ್ಯುತ್ ತಗುಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಯು ಬಾಲಕಿಯ ತಾಯಿಗೆ ಹೇಳಿದ್ದನು. ಆದಾಗ್ಯೂ, ವಾಟರ್ ಕೂಲರ್‌ನಲ್ಲಿ “ವಿದ್ಯುತ್ ಪ್ರವಾಹ” ಇಲ್ಲದ ಕಾರಣ ವಿದ್ಯುತ್ ಆಘಾತಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಇದನ್ನೂ ಓದಿರಿ: ಮಹಾರಾಷ್ಟ್ರ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ನಾಲ್ವರ ಬಂಧನ


