ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿ ಅನ್ವಯ ಪರಿಶಿಷ್ಟ ಜಾತಿಯ (ಎಸ್‌ಸಿ) ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಹೋರಾಟ ತೀವ್ರಗೊಂಡಿದೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಸಿ.ಎಸ್. ದ್ವಾರಕಾನಾಥ್ ಮಾತನಾಡಿ, “ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಕೊಡುವುದಲ್ಲ, ಪ್ರಾತಿನಿಧ್ಯದ ಆಧಾರದ ಮೇಲೆ ಮೀಸಲಾತಿ ಕೊಡುವುದೇ ಸಾಮಾಜಿಕ ನ್ಯಾಯ. ಹಾಗಾಗಿ ಸರ್ಕಾರ ಮಿದುಳಿನಿಂದ ಅಲ್ಲದೇ ಹೃದಯದಿಂದ ಯೋಚಿಸಬೇಕಿದೆ. ಸರ್ಕಾರ ಹೃದಯದಿಂದ ಯೋಚಿಸಿ ಪ್ರಾತಿನಿಧ್ಯದ ಆಧಾರದ ಮೇಲೆ ಮೀಸಲಾತಿ ಕೊಡುವುದಾದರೆ ನನ್ನ ಪ್ರಕಾರ ಶೇ.1ಅಲ್ಲ 2 ಅಲ್ಲ ಶೇ.3 ಮೀಸಲಾತಿಯನ್ನು ಪ್ರಾತಿನಿಧ್ಯವೇ ಇಲ್ಲದ ಅಲೆಮಾರಿ ಸಮುದಾಯಕ್ಕೆ ಕೊಡಬೇಕಾಗುತ್ತದೆ. ಈ ಹೋರಾಟಕ್ಕಾಗಿ ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಬರಲು ಸಿದ್ದನಿದ್ದೇನೆ” ಎಂದು ಘೋಷಿಸಿದರು.
ಚಲನಚಿತ್ರ ನಟರು, ಸಾಮಾಜಿಕ ಹೋರಾಟಗಾರರಾದ ಚೇತನ್ ಮಾತನಾಡಿ, “ನಾನು ಕ್ಯಾಮೆರಾ ಆನ್ ಆದ್ರೆ ಮಾತ್ರ ನಟನೆ ಮಾಡೋನು. ಆದರೆ, ನೀವೆಲ್ಲಾ ಶತಮಾನಗಳಿಂದ ಕಲೆಯನ್ನು ಉಳಿಸಿ ಬೆಳಿಸಿದವರು. ನಾನು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದೇನೆ, ನೀವು ಬಡ ಕುಟುಂಬದಲ್ಲಿ ಹುಟ್ಟಿದ್ದೀರಿ ಯಾಕೆ? ಯಾಕೆಂದರೆ ಇದು ಸಮಾಜಿಕ ಅಸಮಾನತೆಯೇ ಕಾರಣವಾಗಿದೆ. ಈ ಅಸಮಾನತೆ ಸರಿ ಆಗಬೇಕು ಅಂದರೆ ಅಲೆಮಾರಿಗಳಿಗೆ ಜನಸಂಖ್ಯೆ ಆಧಾರದ ಮೇಲೆ ಪ್ರಾತಿನಿಧ್ಯದ ಒಳಮೀಸಲಾತಿ ಜಾರಿ ಆಗಲೇಬೇಕು. ಎಸ್.ಸಿ ಒಳಮೀಸಲಾತಿ ಮಾತ್ರವಲ್ಲ ಎಸ್.ಎಟಿ ಅಲೆಮಾರಿಗಳಿಗೂ ಒಳಮೀಸಲಾತಿ ಜಾರಿಯಾಗಲೇಬೇಕು. ಸರ್ಕಾರದ ಕುರ್ಚಿ ಅಲುಗಾಡಿಸುವ ಹೋರಾಟ ಮಾಡಿದಾಗ ಇದು ಜಾರಿ ಅಗಿಯೇ ಆಗುತ್ತದೆ” ಎಂದರು.
ಒಳಮೀಸಲಾತಿ ಹೋರಾಟಗಾರರಾದ ಎಸ್.ಮಾರೆಪ್ಪ ಮಾತನಾಡಿ, “ನಾಗಮೋಹನ್ ದಾಸ್ ಅವರು ಕೊಟ್ಟಿರುವ ವರದಿಯಲ್ಲಿ ಅಲೆಮಾರಿಗಳು 59 ಸಮುದಾಯ ಎಂದು ಹೇಳಿದ್ದಾರೆ; ಆದರೆ ನಾನು ಅದನ್ನು ಒಪ್ಪುವುದಿಲ್ಲ. ಕೇವಲ 49 ಜಾತಿಗಳನ್ನು ಮಾತ್ರ ನಾನು ಈವರೆಗಿನ ಅಲೆಮಾರಿಗಳ ಜೊತೆಗಿನ ನನ್ನ ಹೋರಾಟದಲ್ಲಿ ಗುರುತಿಸಿದ್ದೇನೆ. 2018ರಲ್ಲಿ ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಲೆಮಾರಿ ಸಮುದಾಯಗಳಿಗಾಗಿ ಅಲೆಮಾರಿ ಕೋಶ ಮಾಡಲಾಗಿದೆ. ಏಕೆಂದರೆ, ಈ 49 ಸಮುದಾಯಗಳು ಇಂದು ತೀವ್ರನಿಗಾಘಟಕದಲ್ಲಿವೆ” ಎಂದರು.
“ನಾಗಮೋಹನ್ ದಾಸ್ ಅವರ ವರದಿ ಪ್ರಕಾರ, 63 ಸಮುದಾಯಗಳಲ್ಲಿ 12 ಸಮುದಾಯಗಳು ಈವರೆಗೆ ಶಿಕ್ಷಣ, ನೌಕರಿ ಸೇರಿದಂತೆ ಇತರೆ ಯಾವುದೇ ಸೌಲಭ್ಯ ಪಡೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಅದರಲ್ಲಿ ಸುಡುಗಾಡು ಸಿದ್ದರು ಮತ್ತು ಸಿಳ್ಳೇಕ್ಯಾತ ಸೇರಿದಂತೆ ಹಲವು ಸಮುದಾಯಗಳಿವೆ. ಇವರು ಅತ್ಯಂತ ಕಡಿಮೆ ಪ್ರಮಾಣದ ಪ್ರಾತಿನಿಧ್ಯ ಪಡೆದುಕೊಂಡಿದ್ದಾರೆ. ನಾಗಮೋಹನ್ ದಾಸ್ ಅವರ ವರದಿಯಲ್ಲಿ ಅಲೆಮಾರಿಗಳ ವಿಷಯಗಳ ಕುರಿತಂತೆ ಸಾಕಷ್ಟು ತಪ್ಪುಗಳಿದ್ದರೂ, ಸಾಕಷ್ಟು ತಾಯ್ತನದ ಅಂಶಗಳನ್ನೂ ನಾನು ಕಂಡುಕೊಂಡಿದ್ದೇನೆ” ಎಂದರು.
ಸಾಮಾಜಿಕ ಚಿಂತಕರಾದ ಶಿವಸುಂದರ್ ಮಾತನಾಡಿ, “ಅಲೆಮಾರಿ ಸಮುದಾಯದಗಳು, ಆಗಿರುವ ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನಿರದೆ ಹೋರಾಟಕ್ಕೆ ಬಂದಿರುವುದಕ್ಕೆ ನಿಮಗೆ ಅಭಿನಂದನೆಗಳು. ಮಾದಿಗ ಸಮುದಾಯವು ಹೋರಾಟಕ್ಕೆ ಬೆಂಬಲವಾಗಿ ಬಂದಿರುವುದಕ್ಕೆ ಅವರಿಗೂ ಅಭಿನಂದನೆಗಳು” ಎಂದು ಪ್ರಶಂಸಿದರು.
“ಹಿಂದುಳಿದ ಜಾತಿಗಳೆಂದು ಕರೆಯಲಾಗುತ್ತದೆ. ಹಿಂದುಳಿದ ಜಾತಿಗಳಲ್ಲ, ಹಿಂದುಳಿಸಲ್ಪಟ್ಟ ಜಾತಿಗಳೆಂದು ಕರೆಯಬೇಕು. ಮೀಸಲಾತಿ ಸಮಾನತೆಯ ವಿಷಯ. ಎಲ್ಲರಿಗೂ ಸಮಾನತೆ ಇದ್ದಾಗ ಅತ್ಯಂತ ಶೋಷಿತರಿಗೆ ಮೊದಲ ಆದ್ಯತೆಯನ್ನು ನೀಡಬೇಕು. ಪರಿಶಿಷ್ಟ ಜಾತಿಯ ಯಾರನ್ನು ಕೂಡ ಮೀಸಲಾತಿಯಿಂದ ಹೊರಗಿಡುವುದಲ್ಲ. ಒಳಮೀಸಲಾತಿಯನ್ನು ಕೊಡಬೇಕಾದರೆ, ಯಾರು ಉಳಿದವರಿಗಿಂತ ಹಿಂದುಳಿದಿದ್ದಾರೋ ಅವರನ್ನು ಪ್ರತ್ಯೇಕ ವರ್ಗ ಮಾಡಬೇಕು. ಹೋಲಿಕೆಯಲ್ಲಿ ಅತ್ಯಂತ ಮುಂದುವರಿದ ಜಾತಿಗಳಲ್ಲಿ ಅತ್ಯಂತ ಹಿಂದುಳಿದ ಜಾತಿಗಳನ್ನು ಸೇರಿಸಿದರೆ ಅದು ಅನ್ಯಾಯ” ಎಂದರು.
“ಅಲೆಮಾರಿ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಯಾವುದೇ ಕಾರಣಕ್ಕೂ ಸಹಿಸಬಾರದು, ಅನ್ಯಾಯವಾಗಲು ಬಿಡಬಾರದು. ಅಲೆಮಾರಿ ಸಮುದಾಯಗಳಿಗೆ ನ್ಯಾಯ ಕೊಡಿಸುವ ಮೂಲಕ ಸಂವಿಧಾನ ವನ್ನು, ಸಾಮಾಜಿಕ ನ್ಯಾಯವನ್ನು ಉಳಿಸಿಕೊಳ್ಳಬೇಕು. ನಿಮ್ಮ ಹೋರಾಟದ ಜೊತೆ ನಾನೂ ಇರುತ್ತೇನೆ” ಎಂದು ಹೇಳಿದರು.
ಅಲೆಮಾರಿಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆ: ಒಳಮೀಸಲಾತಿ ಹೋರಾಟ ಸಮಿತಿ ಘೋಷಣೆ


