ಕೊರೊನ ಬಡಜನರ ನೈತಿಕ ಸ್ಥೈರ್ಯವನ್ನು ಕುಗ್ಗುವಂತೆ ಮಾಡಿದೆ. ವಲಸೆ ಕಾರ್ಮಿಕರ ನಡಿಗೆ ಇನ್ನೂ ನಿಂತಿಲ್ಲ. ಗೂಡು ಸೇರಿದವರ ಪಾಡು ಕೇಳುವವರೇ ಇಲ್ಲ. ಮನೆಯಲ್ಲಿ ಅಕ್ಕಿ ಇಲ್ಲ, ಜೇಬಿನಲ್ಲಿ ಹಣ ಕಂಡಿಲ್ಲ, ಮಾಡಲು ಕೆಲಸವೂ ಇಲ್ಲ. ನಗರದಿಂದ ಹಳ್ಳಿಗೆ ಹಿಂತಿರುಗಿರುವವರು ಮಂಕಾಗಿದ್ದಾರೆ. ಕಡಿಮೆ ಕೂಲಿ ಅಂದ್ರೂ ಕೆಲಸಕ್ಕೆ ಹೋಗುವ ಪರಿಸ್ಥಿತಿ ಇದೆ. ಲಾಕ್ ಡೌನ್ ಬಡವರ ಹೊಟ್ಟೆಯನ್ನು ಬರಿದು ಮಾಡಿದಲ್ಲದೆ ಅವರ ಜೀವನವನ್ನೂ ಲಾಕ್ ಮಾಡಿ ಬಿಟ್ಟಿದೆ.
ಕೊರೊನ ಲಾಕ್‌ಡೌನ್ ರೈತರು, ವಲಸೆ ಕಾರ್ಮಿಕರು, ಮಹಿಳೆಯರು, ಯುವಕರ ಬದುಕನ್ನು ಮೂರಾಬಟ್ಟೆ ಮಾಡಿದೆ. ಇಂಥ ಹೊತ್ತಿನಲ್ಲಿ ಕಾರ್ಮಿಕರು, ಕೃಷಿಕರು, ಗ್ರಾಮೀಣ ಆರ್ಥಿಕತೆ ಮತ್ತು ಪರಿಸರವನ್ನು ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಪೊಲಿಟಿಕ್ಸ್ ಫಾರ್ ದಿ ಪೂರ್ ಎಂಬ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ಜೂನ್ 5ರಂದು ಉದ್ಘಾಟನೆಯಾಗಿರುವ ಈ ಸಂಘಟನೆ ದೇಶಾದ್ಯಂತ ಸರಣಿ ಉಪವಾಸ ನಡೆಸುತ್ತಾ ಬರುತ್ತಿದೆ.
ಬಿಹಾರದ ಚಂಪಾರಣ್ ಕೇಂದ್ರಬಿಂದುವನ್ನಾಗಿ ಇಟ್ಟುಕೊಂಡು ಸರಣಿ ಉಪವಾಸ ಆರಂಭವಾಗಿದೆ. ದಿನಕ್ಕೆ ಒಬ್ಬರಂತೆ ಸರಣಿ ಉಪವಾಸ ನಡೆಸುವುದು ಸಂಘಟನೆಯ ಭಾಗವಾಗಿದೆ. ಜೂನ್ 5 ರ ಪರಿಸರ ದಿನದಂದು ಆರಂಭವಾಗಿರುವ ಸರಣಿ ಉಪವಾಸ ಸತ್ಯಾಗ್ರಹ ಮಹಾತ್ಮಗಾಂಧೀ ಅವರ ಗ್ರಾಮೋದ್ದಾರದ ಕನಸನ್ನು ಹೊತ್ತು ಸಾಗುತ್ತಿದೆ. ಉಪವಾಸ ಸತ್ಯಾಗ್ರಹ ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನ ಪೂರ್ಣಗೊಳ್ಳಲಿದೆ
ಗಾಂಧೀಜಿ ಚಂಪಾರಣ್‌ನಲ್ಲಿ ಸತ್ಯಾಗ್ರಹ ನಡೆಸಿದ್ದರು. ಹಾಗಾಗಿ ಅಲ್ಲಿಂದಲೇ ಈ ಸರಣಿ ಸತ್ಯಾಗ್ರಹ ಆರಂಭಿಸಿರುವ ಪೊಲಿಟಿಕ್ಸ್ ಫಾರ್ ದಿ ಪೂರ್ ಗ್ರಾಮೀಣ ಅಭಿವೃದ್ದಿ ಮತ್ತು ಪರಿಸರ ಜಾಗೃತಿ ಮೂಡಿಸುತ್ತಿದೆ. ಕಳೆದ ಆರು ದಿನಗಳಿಂದ ದೇಶದ ಎಲ್ಲಾ ರಾಜ್ಯಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.
ಇದರ ಭಾಗವಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕಂದೀಕೆರೆಯಲ್ಲಿ ಪರಿಸರ, ವಿಜ್ಞಾನ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ ಇದರ ತಾಲೂಕು ಅಧ್ಯಕ್ಷೆ ಎನ್. ಇಂದಿರಮ್ಮ ಜೂನ್ 10ರ ಬೆಳಗ್ಗೆ 6 ಗಂಟೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು ನಾಳೆ ಬೆಳಗ್ಗೆ 6ಗಂಟೆಗೆ ಪೂರ್ಣಗೊಳಿಸುತ್ತಾರೆ.
ನಾನುಗೌರಿ.ಕಾಮ್ ಜೊತೆ ಮಾತನಾಡಿದ ಎನ್. ಇಂದಿರಾ, ಕೊರೊನ ವೇಳೆ ವಲಸೆ ಕಾರ್ಮಿಕರು, ಕೃಷಿಕರು, ಬಡವರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರಲ್ಲಿ ನೈತಿಕ ಬಲ ತುಂಬುದು ಇದರ ಉದ್ದೇಶ. ರಾಜಕೀಯ ವ್ಯಕ್ತಿಗಳು ನಾಯಕರು ಬಡವರು, ಕೃಷಿಕರು, ಕಾರ್ಮಿಕರ ಪರ ನಿಂತಿಲ್ಲ, ನಿಲ್ಲುವುದೂ ಇಲ್ಲ. ಇಂಥ ಸಂದರ್ಭದಲ್ಲಿ ದುಡಿಯುವ ಜನರಿಗ ನೈತಿಕ ಬಲ ತುಂಬುತ್ತೇವೆ. ಕಾರ್ಮಿಕರು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವಂತೆ ಒತ್ತಾಯಿಸುವುದು ಕೂಡ ಉದ್ದೇಶದಲ್ಲೊಂದು.
ಅಮೇಜಾನ್ ಕಾಡು ಕಡಿದು ನಾಶವಾಗುತ್ತಿದೆ. ಕೃಷಿ ಪದ್ದತಿ ಬದಲಾಗಿದೆ. ಬೆಳೆಗೆ ರಾಸಾಯಿನಿಕ ಗೊಬ್ಬರ ಹಾಕುತ್ತಿದ್ದಾರೆ. ಯಂತ್ರನಾಗರಿಕತೆ ಬಂದಿದೆ. ಈ ಎಲ್ಲಾ ಕಾರಣಗಳಿಗೆ ಪರಿಸರ ಅಸಮತೋಲನವಾಗಿದೆ. ಹಾಗಾಗಿ ಪರಿಸರ ಉಳಿಸಬೇಕು. ಗಿಡಮರಗಳನ್ನು ಬೆಳೆಸಬೇಕು. ಪರಿಸರ ಸ್ನೇಹಿ ಯೋಜನೆ ರೂಪಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ, ಸೊಪ್ಪು ತರಕಾರಿ ಬೆಳೆಯುವುದು, ಗುಡಿಕೈಗಾರಿಕೆ ಕೈಗೊಂಡರೆ ಗ್ರಾಮೋದ್ದಾರ ಆಗುತ್ತದೆ. ಜೀವನವೂ ಹಸನಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದ ಜನ ನಗರಗಳಿಗೆ ಹೋಗಕೂಡದು. ನಗರದ ಜನರೇ ಹಳ್ಳಿಗೆ ಬಂದು ವಸ್ತುಗಳನ್ನು ಖರೀದಿಸುವಂತಹ ವಾತಾವರಣ ಸೃಷ್ಠಿಯಾಗಬೇಕು. ಹಣ ನಗರದಿಂದ ಗ್ರಾಮೀಣ ಭಾಗಕ್ಕೆ ಹರಿದರೆ ಗಾಂಧೀ ಕನಸು ನನಸಾಗುತ್ತದೆ ಎಂದು ತಿಳಿಸಿದ್ದಾರೆ.
ಓದಿ: ಪರಿಸರ ದಿನ: ಪರಿಸರ ಮಾಲಿನ್ಯಕ್ಕೆ ಯಾರನ್ನು ದೂಷಿಸಬೇಕು? ನಾವೇನು ಮಾಡಬೇಕು?


