ತುಮಕೂರು: ತುಮಕೂರು ಜಿಲ್ಲೆಯ ಸ್ಥಳೀಯ ದೇವಾಲಯವೊಂದರಲ್ಲಿ ಮಹಿಳಾ ಭಕ್ತರಿಗೆ ಕುಂಕುಮ ಹಚ್ಚುವ ನೆಪದಲ್ಲಿ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿ ಅರ್ಚಕರೊಬ್ಬರಿಗೆ ಭಕ್ತರು ಥಳಿಸಿದ್ದಾರೆ. ಭಾನುವಾರ ನಡೆದ ಈ ಘಟನೆಯಲ್ಲಿ, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ದೇವಾಲಯಕ್ಕೆ ಭೇಟಿ ನೀಡಿದ್ದ ಹಲವು ಮಹಿಳಾ ಭಕ್ತರು ವೃದ್ಧ ಅರ್ಚಕ ನಾಗಭೂಷಣಾಚಾರ್, ಆಶೀರ್ವಾದ ಮಾಡುವಾಗ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಈ ದೂರುಗಳು ಕೂಡಲೇ ಅಲ್ಲಿ ನೆರೆದಿದ್ದ ಭಕ್ತರಲ್ಲಿ ಹರಡಿ, ಕೋಪಗೊಂಡ ಜನರು ಅರ್ಚಕರನ್ನು ಸುತ್ತುವರೆದರು. ಪರಿಸ್ಥಿತಿ ಉದ್ವಿಗ್ನಗೊಂಡು, ಅವರಲ್ಲಿ ಕೆಲವರು ಅರ್ಚಕರನ್ನು ದೇವಾಲಯದ ಹೊರಗೆ ಎಳೆದು ತಂದು ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಇದು ಅರ್ಚಕರ ವಿರುದ್ಧ ಬಂದ ಮೊದಲ ಆರೋಪವಲ್ಲ. ಈ ಹಿಂದೆ ಸಹ ಮಹಿಳೆಯರು ಅವರ ನಡವಳಿಕೆಯ ಬಗ್ಗೆ ದೂರು ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಳ್ಳದ ಕಾರಣ ಜನರು ಸಹನೆ ಕಳೆದುಕೊಂಡು ಈ ರೀತಿ ವರ್ತಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ವೈರಲ್ ಆದ ನಂತರ, ಅನೇಕ ಬಳಕೆದಾರರು ಕೂಡ ಈ ಹಿಂದೆ ಅರ್ಚಕರಿಂದ ಇದೇ ರೀತಿಯ ಅನುಭವ ಆಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಆದರೂ, ಪೊಲೀಸರ ಬಳಿ ಈ ಬಗ್ಗೆ ಯಾವುದೇ ದೂರುಗಳು ದಾಖಲಾಗಿಲ್ಲ.
People are beating the temple priest at DD Hills, Tumkur, Karnataka, people are saying the priest touched a woman inappropriately during the worship. pic.twitter.com/bSaMtMS6Ph
— هارون خان (@iamharunkhan) August 24, 2025
ಪೊಲೀಸರ ಪ್ರಕಾರ, ಕಳೆದ 22 ವರ್ಷಗಳಿಂದ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ನಾಗಭೂಷಣಾಚಾರ್, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ತಾವು ಕೇವಲ ಭಕ್ತರ ಹಣೆಗೆ ಮತ್ತು ಕುತ್ತಿಗೆಗೆ ಕುಂಕುಮ ಹಚ್ಚುತ್ತಿದ್ದೆ ಎಂದು ಅವರು ಹೇಳಿದ್ದಾರೆ.
ತುಮಕೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ನಾವು ಈ ಪ್ರಕರಣ ದಾಖಲಿಸಿಕೊಂಡಿದ್ದೇವೆ ಮತ್ತು ಆರೋಪಗಳನ್ನು ಪರಿಶೀಲಿಸುತ್ತಿದ್ದೇವೆ. ಸಂತ್ರಸ್ತರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಈ ಘಟನೆ ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಲವರು ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಇಂತಹ ಪ್ರಕರಣಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕುದುರೆಮುಖದ ಜಾಗವನ್ನು ಅರಣ್ಯ ಇಲಾಖೆಗೆ ಕೊಡುವುದಕ್ಕೆ ವಿರೋಧ: ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗಡೆಯವರ ಎಚ್ಚರಿಕೆ


