ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಐಫೋನ್ ತಯಾರಕ ಕಂಪನಿಯಲ್ಲಿ ನಡೆದ ದಾಂಧಲೆಗೆ ಎಸ್‌ಎಫ್‌ಐ ಕಾರ್ಯಕರ್ತರು ಕಾರಣರಾಗಿದ್ದಾರೆ ಎಂಬ ಸಂಸದ ಮುನಿಸ್ವಾಮಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಎಸ್‌ಎಫ್‌ಐ, ಇದು ರಾಜಕೀಯ ಪ್ರೇರಿತ ಹೇಳಿಕೆ ಎಂದಿದೆ.
3-4 ತಿಂಗಳ ಬಾಕಿ ಸಂಬಳ ನೀಡಬೇಕೆಂದು ಹಲವು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾವಿರಾರು ಕಾರ್ಮಿಕರು ನಿನ್ನೆ ಬೆಳಿಗ್ಗೆ ತಾಳ್ಮೆ ಕಳೆದುಕೊಂಡಿದ್ದು, ಕಂಪನಿಯ ಒಂದು ಭಾಗಕ್ಕೆ ಬೆಂಕಿ ಹಚ್ಚಿ, ಕಿಟಕಿ ಗಾಜುಗಳನ್ನು ಒಡೆದು, ಕಾರುಗಳನ್ನು ಜಖಂಗೊಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ನೂರಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಕ್ಕೆ ಹೇಳಿಕೆ ನಿಡಿದ್ದ ಸಂಸದ ಮುನಿಸ್ವಾಮಿಯವರು “ಎಸ್‌ಎಫ್‌ಐ ಸಂಘಟನೆ ಹೊರರಾಜ್ಯದ ಜನರನ್ನು ಕರೆಸಿಕೊಂಡು ದಾಂಧಲೆ ಸಂಘಟಿಸಿದೆ. ಎಸ್‌ಎಫ್‌ಐ ಕಾರ್ಯಕರ್ತರು ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿ ದಾಂಧಲೆಗೆ ಕಾರಣರಾಗಿದ್ದಾರೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಕುರಿತು ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿದ ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ, “ಎಸ್‌ಎಫ್‌ಐಗೂ ವಿಸ್ಟ್ರಾನ್ ಘಟನೆಗೂ ಯಾವುದೇ ಸಂಬಂಧವಿಲ್ಲದಿದ್ದರೂ ಕೋಲಾರದ ಸಂಸದ ಎಸ್. ಮುನಿಸ್ವಾಮಿಯವರು ರಾಜಕೀಯ ಪ್ರೇರಿತ ಆರೋಪ ಮಾಡಿ ನಿಷ್ಪಕ್ಷಪಾತ ತನಿಖೆಯನ್ನು ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಿರುವುದನ್ನು ಖಂಡಿಸುತ್ತೇನೆ” ಎಂದಿದ್ದಾರೆ.
ಎಸ್ಎಫ್ಐ ಯಾವುದೇ ಪ್ರತಿಭಟನೆಯನ್ನು ಸಂಘಟಿಸಿಲ್ಲರಲಿಲ್ಲ. ಎಸ್ಎಫ್ಐ ಒಂದು ವಿದ್ಯಾರ್ಥಿ ಸಂಘಟನೆಯಾಗಿದ್ದು ಅದು ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಹೋರಾಡುತ್ತಿದೆ. ಆದರೆ ವಿಸ್ಟ್ರಾನ್ ಘಟನೆ ಕಾರ್ಮಿಕರು ಮತ್ತು ಕೈಗಾರಿಕೆ ಆಡಳಿತ ಮಂಡಳಿಯ ವಿಷಯವಾಗಿದ್ದು, ಅನಾವಶ್ಯಕವಾಗಿ ವಿದ್ಯಾರ್ಥಿ ಸಂಘಟನೆಯ ಹೆಸರನ್ನು ಎಳೆದು ತರುವ ಪ್ರಯತ್ನವನ್ನು ಸಂಸದರು ನಡೆಸಿರುವುದು ಅವರ ಬೇಜವಾಬ್ದಾರಿತನ ತೋರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕರ ಕಾನೂನುಗಳನ್ನು ಉಲ್ಲಂಘಿಸಿ ಯುವಜನರನ್ನು ಕಡಿಮೆ ಸಂಬಳ ನೀಡಿ 12 ಗಂಟೆಗಳ ಕಾಲ ದುಡಿಸಿಕೊಂಡು ನಾಲ್ಕೈದು ತಿಂಗಳಿಂದ ಸಂಬಳ ನೀಡದೆ ಸತಾಯಿಸಿ, ಶೋಷಿಸುವುದರ ವಿರುದ್ಧ ಧ್ವನಿ ಎತ್ತಬೇಕಾಗಿದ್ದ ಕೋಲಾರದ ಸಂಸದ ಮುನಿಸ್ವಾಮಿ, ಬಂಡವಾಳಶಾಹಿ ಕಂಪನಿಗಳ ಪ್ರಭಾವಕ್ಕೆ ಒಳಗಾಗಿ ಕಾರ್ಮಿಕರ ಹಿತವನ್ನು ಮರೆತಿದ್ದಾರೆ. ಕಾರ್ಮಿಕರ ಶೋಷಣೆಯ ಮೂಲಕ ಕಾರ್ಪೋರೇಟ್ ಹಣಕಾಸು ಬಂಡವಾಳಶಾಹಿಗಳ ಆಸ್ತಿ ಹೆಚ್ಚಳಕ್ಕೆ ಕೈಜೋಡಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆ ನಡೆಯಲು ಕಾರ್ಮಿಕರ ಗುತ್ತಿಗೆ ಏಜೆನ್ಸಿ ಮತ್ತು ಕಾರ್ಮಿಕರ ನಡುವಿನ ವೇತನ ಶೋಷಣೆ ಮತ್ತು ಈ ಸಮಸ್ಯೆಯನ್ನು ನಿರ್ವಹಿಸುವಲ್ಲಿನ ಕಾರ್ಮಿಕ ಅಧಿಕಾರಿಗಳ ನಿರ್ಲಕ್ಷ್ಯತೆಯೇ ಕಾರಣ. ಹಾಗಾಗಿ ಕಾರ್ಮಿಕರು ರೊಚ್ಚಿಗೆದ್ದು ದಾಂಧಲೆಗೆ ಇಳಿದಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಸರ್ಕಾರ ಮತ್ತು ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಯಾಗಿ ಸಂಸದ ಮುನಿಸ್ವಾಮಿ ವಿಫಲರಾಗಿದ್ದಾರೆ. ಆದ್ದರಿಂದ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ವಿದ್ಯಾರ್ಥಿ ಸಂಘಟನೆಗಳ ವಿರುದ್ಧ ರಾಜಕೀಯ ಪ್ರೇರಿತ ಪಕ್ಷಪಾತಿ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ವಾಸುದೇವರೆಡ್ಡಿ ಕಿಡಿಕಾರಿದ್ದಾರೆ.
ಈ ರೀತಿಯ ದಾಂಧಲೆ ಹಾಗು ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಎಸ್ಎಫ್ಐ ತೀವ್ರವಾಗಿ ವಿರೋಧಿಸುತ್ತದೆ. ಈ ದಾಂಧಲೆ ನಡೆಸಿದವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಕಂಪನಿ ಪುನರ್ ಆರಂಭವಾಗಿ ನಡೆಯಬೇಕು. ಕಾರ್ಮಿಕ ವೇತನ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯ ತೋರಿರುವ ಕಾರ್ಮಿಕ ಅಧಿಕಾರಿಗಳು, ಕಂಪನಿ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳಬೇಕು. ಯಾವುದೇ ಸಾಕ್ಷ್ಯವಿಲ್ಲದೆ ಸಂಘಟನೆ ಹೆಸರು ಕೆಡಿಸಲು ಅನಗತ್ಯ ಆರೋಪ ಮಾಡಿರು ಸಂಸದ ಮುನಿಸ್ವಾಮಿಯವರು ತಮ್ಮ ಹೇಳಿಕೆಯನ್ನು ಈ ಕೂಡಲೇ ಬೇಷರತ್ತಾಗಿ ಹಿಂಪಡೆಯಬೇಕು. ಇಲ್ಲದಿದ್ದರೆ ಈ ಜಿಲ್ಲೆಯ ಯುವಜನರು ಸಂಸದ ಮುನಿಸ್ವಾಮಿ ರವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಶಿವಪ್ಪ.ಎನ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಂಬಳ ಕೊಡದ ಆರೋಪ: ನರಸಾಪುರದ ಐಫೋನ್ ತಯಾರಿಕ ‘ವಿಸ್ಟ್ರಾನ್’ ಕಂಪನಿಗೆ ಬೆಂಕಿ ಹಚ್ಚಿದ ಕಾರ್ಮಿಕರು


