ಹೊಸದಾಗಿ ರಚನೆಯಾದ “ಸಹಕಾರ ಸಚಿವಾಲಯ”ವನ್ನು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ನಿರ್ವಹಿಸಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಬುಧವಾರ ಒಕ್ಕೂಟ ಸರ್ಕಾರವು ಸಂಪುಟವನ್ನು ಪುನರ್‌ರಚನೆ ಮಾಡಿತ್ತು. ಅದರಲ್ಲಿ ಹೆಚ್ಚುವರಿ ಖಾತೆಯನ್ನು ಅಮಿತ್ ಷಾ ಅವರಿಗೆ ಹಸ್ತಾಂತರಿಸಲಾಯಿತು. ಸಂಪುಟ ಪುನರ್ರಚನೆಯಲ್ಲಿ ಹಲವರನ್ನು ಬದಲಾಯಿಸಿ, ಹೊಸಬರಿಗೆ ಮಣೆ ಹಾಕಲಾಗಿದೆ.
ದೇಶದಲ್ಲಿ ಸಹಕಾರಿ ಆಂದೋಲನವನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಸಹಕಾರ ಸಚಿವಾಲಯವನ್ನು ರಚಿಸಲಾಗಿದೆ ಎಂದು ಮಂಗಳವಾರ ಒಕ್ಕೂಟ ಸರ್ಕಾರ ಘೋಷಿಸಿದೆ. ಹೊಸ ಸಚಿವಾಲಯವು ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸಲು ಬೇಕಾಗಿ ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ ಚೌಕಟ್ಟುಗಳನ್ನು ಒದಗಿಸುತ್ತದೆ. ಇದು ಜನ ಆಧಾರಿತ ಚಳುವಳಿಯಾಗಿ ಕಟ್ಟಲು ತಳಮಟ್ಟದಲ್ಲಿ ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ.
ಸಹಕಾರಿ ಸಚಿವಾಲಯವನ್ನು ರಚಿಸುವ ನಿರ್ಧಾರವನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈ ವರ್ಷದ ಬಜೆಟ್ ಭಾಷಣದಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ನಿತೀಶ್ ಕುಮಾರ್‌ರವರ JDU ಯಾವಾಗ ಬೇಕಾದರೂ ಇಬ್ಭಾಗವಾಗಬಹುದು: ಚಿರಾಗ್ ಪಾಸ್ವಾನ್
ಪ್ರಧಾನಿ ನರೇಂದ್ರ ಮೋದಿಯ ರಾಜಕೀಯ ಜೀವನದಲ್ಲಿ ಅಮಿತ್ ಶಾ ಪ್ರಮುಖ ಒಡನಾಡಿಯಾಗಿದ್ದಾರೆ. ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಅಮಿತ್ ಷಾ ಅಲ್ಲಿನ ಗೃಹ ಸಚಿವರಾಗಿದ್ದರು. ಪ್ರಸ್ತುತ ಅಮಿತ್ ಶಾ ಅವರ ಸಹಾಯಕ್ಕೆ ರಾಜ್ಯ ಖಾತೆ ಸಚಿವರಾಗಿ ನಿತ್ಯಾನಂದ್ ರೈ, ಅಜಯ್ ಕುಮಾರ್ ಮತ್ತು ನಿಸಿತ್ ಪ್ರಮಾಣಿಕ್ ಇದ್ದಾರೆ.
ಒಕ್ಕೂಟ ಸರ್ಕಾರ ಹೊಸದಾಗಿ ಪ್ರಾರಂಭಿಸಿದ ಸಹಕಾರ ಸಚಿವಾಲಯದ ವಿರುದ್ದ ವಿರೋಧ ಪಕ್ಷಗಳು ಕಿಡಿ ಕಾರಿದೆ.
ಸಿಪಿಐಎಂ ನಾಯಕ ಸೀತಾರಾಮ್ ಯಚೂರಿ ಅವರು, “ನರೇಂದ್ರ ಮೋದಿಯವರೇ, ಹೊಸ ಸಹಕಾರ ಸಚಿವಾಲಯ ಯಾಕೆ? ಸಹಕಾರ ಕ್ಷೇತ್ರವೆಂಬುದು ಸಂವಿಧಾನದ 7 ನೇ ಶೆಡ್ಯೂಲ್ ಪ್ರಕಾರ ರಾಜ್ಯ ಪಟ್ಟಿಯಲ್ಲಿರುವ ವಿಷಯ. ಇದು ಒಕ್ಕೂಟ ವ್ಯವಸ್ಥೆಯ ಮೇಲೆ ಎಸಗಿದ ಮತ್ತೊಂದು ದಾಳಿ. ಸಾರ್ವಜನಿಕ ವಲಯದ ಬ್ಯಾಂಕ್ ಗಳ ಮೂಲಕ ಕ್ರೋನಿ ಬಂಡವಾಳಶಾಹಿಗಳಿಗೆ ಸಾವಿರಾರು ಕೋಟಿ ರುಪಾಯಿ ಸಾಲ ಕೊಟ್ಟು, ಈಗ ಇನ್ನೂ ಹೆಚ್ಚಿನ ಲೂಟಿ ಮಾಡಲು ದೇಶದಾದ್ಯಂತ ಇರುವ ಸಹಕಾರಿ ಬ್ಯಾಂಕುಗಳ ದುಡ್ಡಿನ ಮೇಲೆ ಕಣ್ಣು ಹಾಕಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Why a new Cooperation Ministry PM Modi?
Cooperative Societies is a State Subject in Constitution’s 7th Schedule. Yet another assault on federalism.
After looting PSU banks giving huge loans to cronies
now targeting deposits in cooperative banks across the country for more loot.— Sitaram Yechury (@SitaramYechury) July 7, 2021
ಇದನ್ನೂ ಓದಿ: ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ನಿಧನ, 3 ದಿನಗಳ ಶೋಕಾಚರಣೆ


