ಕುತೂಹಲ ಹೆಚ್ಚಿಸಿದ ಅಮರಿಂದರ್ ಸಿಂಗ್ ಮತ್ತು ಪ್ರಶಾಂತ್ ಕಿಶೋರ್ ಭೇಟಿ
PC: Indiatoday

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ಭೇಟಿಯಾಗಿದ್ದು, ಪಂಜಾಬ್ ರಾಜ್ಯ ಚುನಾವಣೆಗೆ ಮುನ್ನ ನಡೆದಿರುವ ಈ ಭೇಟಿ ರಾಜಕೀಯವಾಗಿ ಕುತೂಹಲ ಹೆಚ್ಚಿಸಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಒಂದು ದಿನದ ಬಳಿಕ ಅಮರಿಂದರ್ ಸಿಂಗ್  ದೆಹಲಿಯ ಕಪೂರ್‌ಥಲಾ ಸದನದಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿದ್ದಾರೆ. ರಾಜಕೀಯವಾಗಿ ಅನೇಕ ಚುನಾವಣಾ ವಿಜಯಗಳ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಶಾಂತ್ ಕಿಶೋರ್ ಮತ್ತು ಅಮರಿಂದರ್ ಸಿಂಗ್ ಜೋಡಿ 2017 ರ ಪಂಜಾಬ್ ಚುನಾವಣೆಯಲ್ಲಿ ಕೆಲಸ ಮಾಡಿತ್ತು.

ಹೀಗಾಗಿ ಕ್ಯಾಪ್ಟನ್ ಅಮರಿಂದರ್‌ ಸಿಂಗ್, 2022 ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯ ಕಾರ್ಯತಂತ್ರ ರೂಪಿಸಲು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಭೇಟಿಯಾಗಿದ್ದಾರೆ ಎನ್ನಲಾಗಿದೆ. ಪಂಜಾಬ್‌ನಲ್ಲಿ ನವಜೋತ್ ಸಿಂಗ್ ಸಿಧು ಅವರೊಂದಿಗಿನ ಭಿನ್ನಮತ ಕೂಡ ಅಮರಿಂದರ್‌ ಸಿಂಗ್‌ಗೆ ಹಿನ್ನಡೆಯಾಗಿದೆ.

ಇದನ್ನೂ ಓದಿ: ವಿಪಕ್ಷಗಳನ್ನು ಭೇಟಿಯಾಗುತ್ತಿರುವ ಪ್ರಶಾಂತ್‌ ಕಿಶೋರ್‌: ಪರ್ಯಾಯ ಒಕ್ಕೂಟದ ಚರ್ಚೆ?

ನವಜೋತ್ ಸಿಂಗ್ ಸಿಧು ಜೊತೆಗಿನ ಬಿರುಕನ್ನು ಪರಿಹರಿಸಲು ಕಾಂಗ್ರೆಸ್‌ನಿಂದ ಕೂಡ ಸಾಧ್ಯವಾಗದ ಹಿನ್ನೆಲೆಯಲ್ಲಿ ಸದ್ಯ ಅಮರಿಂದರ್‌ ಸಿಂಗ್‌ಗೆ, ಪ್ರಶಾಂತ್ ಕಿಶೋರ್‌ ಅವರ ಅಗತ್ಯವಿದೆ ಎನ್ನಲಾಗಿದೆ.

ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡಿ ಅಥವಾ ರಾಜ್ಯದಲ್ಲಿ ಕ್ಯಾಬಿನೆಟ್ ಪುನರ್ರಚನೆಗೆ ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್ ಸಮಿತಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ಗೆ ಸೂಚಿಸಿದೆ.

“ನವಜೋತ್ ಸಿಂಗ್ ಸಿಧು ಸಾಬ್ ಬಗ್ಗೆ ನನಗೆ ಏನೂ ತಿಳಿದಿಲ್ಲ. ಕಾಂಗ್ರೆಸ್ ಅಧ್ಯಕ್ಷರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೂ, ನಾವು ಅದನ್ನು ಅನುಸರಿಸುತ್ತೇವೆ” ಎಂದು ಅಮರಿಂದರ್‌ ಸಿಂಗ್‌ ಮಾಧ್ಯಮಗಳಿಗೆ ತಿಳಿಸಿದ್ದರೂ ಕೂಡ, ಈ ಎರಡೂ ಆಯ್ಕೆಗಳನ್ನು ಮುಖ್ಯಮಂತ್ರಿ ವಿರೋಧಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಪ್ರಶಾಂತ್‌ ಕಿಶೋರ್‌ ಅವರನ್ನು ಒಂದು ತಿಂಗಳಲ್ಲಿ ಎರಡು ಬಾರಿ ಭೇಟಿಯಾಗಿದ್ದಾರೆ. ಮುಂದಿನ 2024 ರ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ರಚನೆಯಾಗಲಿದೆ ಎನ್ನಲಾಗಿರುವ ತೃತೀಯ ರಂಗದ ಊಹಾಪೋಹಗಳಿಗೆ ಇವರ ಭೇಟಿಯು ಮತ್ತಷ್ಟು ಪುಷ್ಠಿ ನೀಡಿದೆ.

2014 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯ ಪರವಾಗಿ ಕೆಲಸ ಮಾಡಿದ್ದ ಪ್ರಶಾಂತ್‌‌ ಕಿಶೋರ್ ನಂತರ ಅವರೊಂದಿಗೆ ಮುನಿಸಿಕೊಂಡಿದ್ದರು. ಅದರ ನಂತರ ಅವರು ಹಲವಾರು ಬಿಜೆಪಿ ಮೈತ್ರಿ ಕೂಟದ ವಿರುದ್ದವಾಗಿ ಚುನಾವಣೆಗಳಲ್ಲಿ ಕೆಲಸ ಮಾಡಿದ್ದಾರೆ.


ಇದನ್ನೂ ಓದಿ: ಶರದ್ ಪವಾರ್‌ ಮತ್ತು ಪ್ರಶಾಂತ್‌ ಕಿಶೋರ್‌ 2 ನೇ ಭೇಟಿ; 2024 ರ ಚುನಾವಣೆಗೆ ವಿರೋಧ ಪಕ್ಷಗಳು ಸಜ್ಜು?

LEAVE A REPLY

Please enter your comment!
Please enter your name here