ಪ್ರಧಾನಮಂತ್ರಿಗಳ ಹೃದಯದಲ್ಲಿ ಮಾನವೀಯತೆ ಇದೆಯೆ?: ಸಿದ್ದರಾಮಯ್ಯ | Naanu gauri

ಸಂಪುಟ ಪುನರ್‌‌ರಚನೆಗೆ ಸಚಿವರ ಕಾರ್ಯನಿರ್ವಹಣೆಯೇ ಮಾನದಂಡವಾಗಿದ್ದರೆ ಮೊದಲು ನರೇಂದ್ರ ಮೋದಿಯವರನ್ನು ಪ್ರಧಾನಿ ಪಟ್ಟದಿಂದ ಕಿತ್ತುಹಾಕಬೇಕು. ನೋಟ್‌ಬ್ಯಾನ್ ನಿಂದ ಹಿಡಿದು ಕೊರೊನಾ ನಿಯಂತ್ರಣದವರೆಗೆ ಈ ಸರ್ಕಾರ ವಿಫಲಗೊಂಡಿದ್ದರೆ ಅದಕ್ಕೆ ನೇರ ಹೊಣೆ ನರೇಂದ್ರ ಮೋದಿಯೆ ಆಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಏಕವ್ಯಕ್ತಿ ಪ್ರದರ್ಶನವಾಗಿರುವ ಕೇಂದ್ರ ಸಚಿವ ಸಂಪುಟದ ವಿಸ್ತರಣೆಗೆ ಯಾವ ಮಹತ್ವವೂ ಇಲ್ಲ. ಮೋದಿಯವರ ಸಂಪುಟದಲ್ಲಿ ಯಾರು ಸಚಿವರಾದರೂ ಅವರೆಲ್ಲರೂ ನಾಮಕಾವಸ್ತೆ, ಹಣಕಾಸು, ಆರೋಗ್ಯ, ಶಿಕ್ಷಣ,ವಿದೇಶಾಂಗ ಯಾವುದೇ ಖಾತೆ ಇರಲಿ, ಅವುಗಳಿಗೆ ಸಂಬಂಧಿಸಿದ ನೀತಿ ನಿರ್ಧಾರಗಳನ್ನು ಪ್ರಕಟಿಸುವುದು ಮತ್ತು ಅದರ ಬಗ್ಗೆ ಮಾತನಾಡುವುದು ನರೇಂದ್ರ ಮೋದಿಯವರೇ ಆಗಿರುವ ಕಾರಣ ಆ ಖಾತೆಗಳ ವೈಫಲ್ಯಕ್ಕೆ ಅವರೇ ಹೊಣೆ ಹೊರಬೇಕಾಗುತ್ತದೆ” ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇದನ್ನೂ ಓದಿ: ಶಾಲಾ ಶುಲ್ಕ ವಿಚಾರ: ಸಮಸ್ಯೆ ಬಗೆಹರಿಸುವಂತೆ ಸಿಎಂ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ

“ಕೊರೊನಾ ಕಾಲದಲ್ಲಿ ಹತ್ತಾರು ಬಾರಿ ಟಿವಿಗಳಲ್ಲಿ ಮೋದಿಯವರು ಕಾಣಿಸಿಕೊಂಡಿದ್ದಾರೆ. ಜಾಗಟೆ ಬಡಿದು, ದೀಪ ಹಚ್ಚಿ ಕೊರೊನಾ ವೈರಸ್ ಓಡಿಸಲು ಹೇಳಿದ ಮಹಾನುಭಾವ ಮೋದಿ. ಕೊರೊನಾ ಚಿಕಿತ್ಸೆ ಮತ್ತು ನಿಯಂತ್ರಣಕ್ಕೆ ರಾಜ್ಯಗಳಿಗೆ ಹಣ ನೀಡದೆ ಸತಾಯಿಸಿದವರು. ಕಾರ್ಮಿಕರು ವಲಸೆ ಹೋಗುತ್ತಿರುವಾಗ ಕಣ್ಣುಮುಚ್ಚಿ ಕೂತವರು. ಕೊರೊನಾ ಸೋಂಕು ಹರಡುತ್ತಿರುವಾಗಲೇ ಚುನಾವಣಾ ಪ್ರಚಾರ ಸಭೆ ನಡೆಸಿದವರು.

ವ್ಯಾಕ್ಸಿನ್ ಬಗ್ಗೆ ಸುಳ್ಳು ಹೇಳಿದವರು. ನಮ್ಮಲ್ಲಿ ವ್ಯಾಕ್ಸಿನ್ ಕೊಡದೆ ವಿದೇಶಕ್ಕೆ ರಫ್ತು ಮಾಡಿದವರು ನರೇಂದ್ರ ಮೋದಿ. ಈಗ ಕೊರೊನಾ ನಿಯಂತ್ರಣದಲ್ಲಿನ ವೈಫಲ್ಯಕ್ಕೆ ಯಾರೋ ಡಾ.ಹರ್ಷವರ್ಧನ್ ಎಂಬ ಆರೋಗ್ಯ ಸಚಿವರನ್ನು ಕಿತ್ತುಹಾಕಿದ್ದಾರಂತೆ. ನಿಜವಾಗಿ ಮೋದಿಯವರು ರಾಜೀನಾಮೆ ನೀಡಬೇಕು ” ಎಂದು ಅವರು ಆಗ್ರಹಿಸಿದ್ದಾರೆ.

“ಹಿಂದಿನ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸ್ವತ: ವೈದ್ಯರಾಗಿದ್ದರೆ, ಹೊಸ ಆರೋಗ್ಯ ಸಚಿವ ಮನಸೂಕ್ ಮಾಂಡವೀಯ ರಾಜಕೀಯ ಶಾಸ್ತ್ರದಲ್ಲಿ ಪದವೀದರ. ಕೋರೊನಾ ಕಾಲದಲ್ಲಿ ಆರೋಗ್ಯ ಖಾತೆಯಲ್ಲಿಯೇ ಕೈತುಂಬಾ ಕೆಲಸ ಇರುವಾಗ ಹೊಸ ಆರೋಗ್ಯ ಸಚಿವರಿಗೆ ಹೆಚ್ಚುವರಿಯಾಗಿ ರಾಸಾಯಾನಿಕ ಮತ್ತು ರಸಗೊಬ್ಬರ ಖಾತೆಯನ್ನು ನೀಡಲಾಗಿದೆ. ಇವರಿಂದ ಯಾವ ಸಾಧನೆಯನ್ನು ನಿರೀಕ್ಷಿಸಬಹುದು?” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಮಂತ್ರಿಗಳ ಹೃದಯದಲ್ಲಿ ಮಾನವೀಯತೆ ಇದೆಯೆ?: ಸಿದ್ದರಾಮಯ್ಯ

“ಸಾಧನೆಯೇ ಮಾನದಂಡವಾಗಿದ್ದರೆ ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಿತ್ತುಹಾಕಬೇಕಿತ್ತಲ್ವಾ? ಆರೋಗ್ಯ ಕ್ಷೇತ್ರಕ್ಕಿಂತಲೂ ಹೆಚ್ಚಿನ ವೈಫಲ್ಯ ಕಾಣುವುವುದು ಆರ್ಥಿಕ ಕ್ಷೇತ್ರದಲ್ಲಿ. ನೋಟ್‌ಬ್ಯಾನ್, ಜಿಎಸ್‌ಟಿ, ಕೊರೊನಾ ಪರಿಹಾರ ಹೀಗೆ ಹಣಕಾಸು ಖಾತೆಗೆ ಸಂಬಂಧಿಸಿದ ವೈಫಲ್ಯಗಳಿಂದಾಗಿಯೇ ದೇಶ ಇಂದಿನ ದುಸ್ಥಿತಿಗೆ ಬಂದಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅದೇ ಖಾತೆಯಲ್ಲಿ ಮುಂದುವರಿದಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಬಹಳ ಮಂದಿ ಸಚಿವರನ್ನು ಕೈಬಿಟ್ಟಿರುವ ಸುದ್ದಿ ಕೇಳಿಯೇ ಅವರೆಲ್ಲ ಸಂಪುಟದಲ್ಲಿದ್ದರೆಂದು ದೇಶದ ಜನರಿಗೆ ಗೊತ್ತಾಗಿರುವುದು. ಈಗ ಹೊಸದಾಗಿ ಸೇರ್ಪಡೆಯಾದ ಸಚಿವರದ್ದೂ ಇದೇ ಕತೆ. ಇವರಲ್ಲಿ ಬಹಳಷ್ಟು ಮಂದಿ ಹೊಸಬರು. ದೇಶ ಎದುರಿಸುತ್ತಿರುವ ಇಂದಿನ ಸಂಕಷ್ಟದ ಕಾಲದಲ್ಲಿ ಈ ಹೊಸಬರನ್ನು ಕಟ್ಟಿಕೊಂಡು ಮೋದಿಯವರು ಏನು ಮಾಡುತ್ತಾರೋ ಗೊತ್ತಿಲ್ಲ. ಸಾಮಾನ್ಯವಾಗಿ ಅಸಮರ್ಥರು ಅಸಮರ್ಥರನ್ನೇ ಆಯ್ಕೆ ಮಾಡಿಕೊಂಡು ಜೊತೆಯಲ್ಲಿಟ್ಟುಕೊಳ್ತಾರೆ. ಹಾಗಿದೆ ಹೊಸ ಸಂಪುಟ” ಎಂದು ಅವರು ತಿಳಿಸಿದ್ದಾರೆ.

“ನರೇಂದ್ರ ಮೋದಿಯವರು ಮೊದಲು ಅಧಿಕಾರಕ್ಕೆ ಬಂದಾಗ ‘Minimum Government Maximum Governence’ ಎಂಬ ಘೋಷಣೆ ಕೂಗುತ್ತಿದ್ದರು. ಈಗಿನ ಸಚಿವ ಸಂಪುಟದಲ್ಲಿ 77 ಸದಸ್ಯರಿದ್ದಾರೆ. ಇದೇನಾ Minimum Government? ಹೇಳುವುದೊಂದು, ಮಾಡುವುದೊಂದು. ಇದಕ್ಕಾಗಿಯೇ ನಾನು ಮೋದಿಯವರ ಮನೆ ದೇವರೇ ಸುಳ್ಳು ಎಂದು ಹೇಳುತ್ತಿರುವುದು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ v/s ಡಿಕೆ ಶಿವಕುಮಾರ್‌‌: ರಾಜ್ಯ ಕಾಂಗ್ರೆಸ್‌‌ನಲ್ಲಿ ಎಲ್ಲವೂ ಸರಿಯಿಲ್ಲ!

“ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮೋದಿಯವರು ಸೋಷಿಯಲ್ ಎಂಜನಿಯರಿಂಗ್ ಮಾಡಿದ್ದಾರೆ, ಸಾಮಾಜಿಕ ನ್ಯಾಯವನ್ನು ಪಾಲಿಸಿದ್ದಾರೆ ಎಂದೆಲ್ಲ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಕರ್ನಾಟಕದಿಂದ ಆರು ಮಂದಿ ಈಗ ಕೇಂದ್ರ ಸಚಿವರಾಗಿದ್ದಾರೆ. ಇವರಲ್ಲಿ ಒಬ್ಬರೇ ಒಬ್ಬರು ಹಿಂದುಳಿದ ಜಾತಿಗೆ ಸೇರಿದವರಿಲ್ಲ. ಮೂವರು ಬ್ರಾಹ್ಮಣರು, ಒಕ್ಕಲಿಗ, ಲಿಂಗಾಯತ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ತಲಾ ಒಬ್ಬರು ಸಚಿವರಾಗಿದ್ದಾರೆ. ಯಾವ ಜಾತಿಗೆ ಕೊಟ್ಟರೂ ನನ್ನ ಆಕ್ಷೇಪ ಇಲ್ಲ. ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಸಮುದಾಯಗಳಿಗೆ ಪ್ರಾತಿನಿಧ್ಯ ನಿರಾಕರಿಸುವುದು ಯಾವ ಸೋಷಿಯಲ್ ಎಂಜನಿಯರಿಂಗ್? ಯಾವ ಸಾಮಾಜಿಕ ನ್ಯಾಯ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

“ಕರ್ನಾಟಕದಿಂದ ಸಚಿವರ ಆರಾಗಲಿ, ಹನ್ನೆರಡಾಗಲಿ ಅದರಿಂದ ರಾಜ್ಯಕ್ಕೆ ಏನೂ ಲಾಭವಾಗದು ಎನ್ನುವುದು ಈಗಾಗಲೇ ಸಾಬೀತಾಗಿದೆ. ಹೊಸಬರಲ್ಲಿ ಯಾರೂ ಸಂಪುಟ ದರ್ಜೆಯ ಸಚಿವರಿಲ್ಲ. ಮಹತ್ವದ ಖಾತೆಗಳೂ ಇಲ್ಲ. ಮಹತ್ವದ ಖಾತೆಗಳನ್ನು ಕೊಟ್ಟರೂ ಇವರಿಗೆ ನಿಭಾಯಿಸುವ ಸಾಮರ್ಥ್ಯವೂ ಇಲ್ಲ ಎಂದು ನರೇಂದ್ರ ಮೋದಿಯವರಿಗೆ ಗೊತ್ತಾಗಿರಬೇಕು” ಎಂದು ವ್ಯಂಗ್ಯವಾಡಿದ್ದಾರೆ.

“ಆದ್ದರಿಂದ ಈ ಸಂಪುಟ ವಿಸ್ತರಣೆ, ಪುನರ್ರಚನೆಯಿಂದ ರಾಜ್ಯಕ್ಕೆ ಯಾವ ಲಾಭವೂ ಇಲ್ಲ. ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ಎದುರು ಬಾಯಿಬಿಡುವ ಶಕ್ತಿ ಇಲ್ಲ. 25 ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ. ಹೀಗಿರುವಾಗ ಹೊಸದಾಗಿ ಸಚಿವ ಖಾತೆಯ ಕಿರೀಟ ಇಟ್ಟುಕೊಂಡು ಇವರೇನು ಮಾಡಬಹುದು?” ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹಿಂದುಳಿದ ಜಾತಿಗಳನ್ನು ಗುರುತಿಸುವ ಅಧಿಕಾರ ಮರಳಿ ರಾಜ್ಯಕ್ಕೆ: ಸಿದ್ದರಾಮಯ್ಯ ಸ್ವಾಗತ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here