ಒಕ್ಕೂಟ ಸರ್ಕಾರದ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ, ಮತ್ತೊಬ್ಬ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಕಾಂಗ್ರೆಸ್‌ನಿಂದ ತೃಣಮೂಲ ಕಾಂಗ್ರೆಸ್‌ಗೆ ಸೇರಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಶತ್ರುಘ್ನ ಸಿನ್ಹಾ ಅವರು 2019ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಇದೀಗ ಹಿರಿಯ ತೃಣಮೂಲ ನಾಯಕರು ಶತ್ರುಘ್ನ ಸಿನ್ಹಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದು, ಮಾತುಕತೆ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ. ಎಲ್ಲವೂ ಯೋಜಿಸಿದಂತೆ ನಡೆದರೆ ಅವರು ಜುಲೈ 21 ರಂದು ಮಮತಾ ಬ್ಯಾನರ್ಜಿ ಅವರ ನಾಯಕತ್ವ ಒಪ್ಪಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಮನೆಯಲ್ಲೇ ಲಸಿಕೆ ಪಡೆದ ಸಂಸದೆ ಪ್ರಜ್ಞಾ ಠಾಕೂರ್: ಖಂಡನೆ
ಶತ್ರುಘ್ನ ಅವರ ಇತ್ತೀಚಿನ ಕೆಲವು ಟ್ವೀಟ್‌ಗಳನ್ನು ಗಮನಿಸಿದ್ದ ರಾಜಕೀಯ ತಜ್ಞರು ಅವರು ಮತ್ತೆ ಬಿಜೆಪಿಗೆ ಸೇರಲಿದ್ದಾರೆ ಎಂದು ಸೂಚಿಸಿದ್ದರು. ಆದರೆ ಇದೀಗ ಅವರು ಪಶ್ಚಿಮ ಬಂಗಾಳದಲ್ಲಿ ಒಂಟಿಯಾಗಿ ನಿಂತು ಬಲಿಷ್ಠ ಬಿಜೆಪಿಯನ್ನು ಸೋಲಿಸಿದ್ದ ಮಮತಾ ಬ್ಯಾನರ್ಜಿ ಅವರ ತೃಣಮೂಲದ ಕಡೆಗೆ ಒಲವು ತೋರಿದ್ದಾರೆ ಎನ್ನಲಾಗಿದೆ.
ಬಿಜೆಪಿ ಪಕ್ಷವು “ಒನ್ ಮ್ಯಾನ್ ಪಾರ್ಟಿ ಮತ್ತು ಟೂ ಮೆನ್ ಆರ್ಮಿ” ಆಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿ ಅವರು ಬಿಜೆಪಿಯಿಂದ ಹೊರ ನಡೆದಿದ್ದರು.
ಟಿಎಂಸಿಯ ಎರಡು ರಾಜ್ಯ ಸಭಾ ಸ್ಥಾನಗಳು ಖಾಲಿಯಾಗಿದ್ದು, ಇದರಲ್ಲಿ ಒಂದು ಸ್ಥಾನವನ್ನು ಶ್ರತ್ರುಘ್ನ ಸಿನ್ಹಾ ಅವರಿಗೆ ನೀಡಲಾಗುತ್ತದೆ ಎಂದು ವರದಿಯಾಗಿದೆ.
ರಾಜ್ಯ ಸಭಾ ಸದಸ್ಯರಾಗಿದ್ದ, ಮಾಜಿ ಸಚಿವ ದಿನೇಶ್ ತ್ರಿವೇದಿ ಅವರು ಬಂಗಾಳ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರಿದ್ದು ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಮನಸ್ ಭೂನಿಯಾ ಅವರು ರಾಜ್ಯದ ಚುನಾವಣೆಯಲ್ಲಿ ಸ್ಪರ್ಧಿಸಿ ಮಮತಾ ಅವರ ಸತತ ಮೂರನೇ ಸರ್ಕಾರದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಟಿಎಂಸಿಯ ಎರಡು ರಾಜ್ಯ ಸಭಾ ಸ್ಥಾನಗಳು ತೆರವುಗೊಂಡಿತ್ತು.
ಇದನ್ನೂ ಓದಿ: ಅಫ್ಘಾನ್‌ನಲ್ಲಿ ಹತರಾದ ಖ್ಯಾತ ಫೋಟೊ ಜರ್ನಲಿಸ್ಟ್ ದಾನಿಶ್ ಕ್ಲಿಕ್ಕಿಸಿದ ಕೆಲವು ಫೋಟೊಗಳು!


