ಜುಲೈ 14 ರಂದು ಮಧ್ಯಪ್ರದೇಶ, ಖಂಡವಾ ಜಿಲ್ಲೆಯ ಜಿಲ್ಲಾಡಳಿತದ ಅಧಿಕಾರಿಗಳು 40 ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ್ದಾರೆ ಎಂದು ಜಾಗೃತ ಆದಿವಾಸಿ ದಲಿತ ಸಂಘಟನೆ ಆರೋಪಿಸಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದೆ.

40 ಆದಿವಾಸಿ ಕುಟುಂಬಗಳು ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡು ನೆಲೆಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಡಳಿತ ಅರಣ್ಯ ಇಲಾಖೆ ಸಹಾಯದಿಂದ ಆದಿವಾಸಿಗಳ ಮನೆ-ಗುಡಿಸಲುಗಳನ್ನು ನೆಲಸಮ ಮಾಡಿ ನಾಶಗೊಳಿಸಿದ್ದಾರೆ.

ಅರಣ್ಯ ಇಲಾಖೆ ಜೊತೆಗೂಡಿ ನೆರೆಯ ಹಳ್ಳಿಯ ಜನರ ಗುಂಪು ಆದಿವಾಸಿಗಳ ಎಲ್ಲ ಆಹಾರಧಾನ್ಯ, ಮನೆಬಳಕೆಯ ವಸ್ತುಗಳು, ದನ, ಜಾನುವಾರುಗಳನ್ನು ಅಪಹರಿಸಿದ್ದಾರೆ. ಆದಿವಾಸಿಗಳಿಗಾಗಿ ಹೋರಾಡುವ  ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಸಂಘಟನೆ ಆರೋಪಿಸಿದೆ.

ಇದನ್ನೂ ಓದಿ: ಕೆ.ಆರ್‌ ಪೇಟೆ: ನಾಲೆ ಆಧುನೀಕರಣ ಹೆಸರಲ್ಲಿ 500 ಕೋಟಿ ಲೂಟಿ ಆರೋಪ; ಲೋಕಾಯುಕ್ತದಿಂದ ಪರಿಶೀಲನೆ!

ತಕ್ಷಣ ಮಧ್ಯಪ್ರದೇಶ ಸರ್ಕಾರ ಆದಿವಾಸಿ ಕುಟುಂಬಗಳನ್ನು ಅಕ್ರಮವಾಗಿ ಹೊರಹಾಕುವುದು, ಹಲ್ಲೆ ಮಾಡುವುದು ಮತ್ತು ಲೂಟಿ ಮಾಡಿದ್ದಕ್ಕಾಗಿ ಡಿಎಫ್‌ಒ ಚರಣ್ ಸಿಂಗ್ ಮತ್ತು ಇತರ ಅಧಿಕಾರಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಯಡಿ  ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಅರಣ್ಯ ಹಕ್ಕುಗಳ ಕಾಯ್ದೆ 2006 ರ ಉಲ್ಲಂಘನೆಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದೆ.

 

 

ಆದಿವಾಸಿಗಳ ಮೇಲೆ ಕಾನೂನುಬಾಹಿರ ಹಲ್ಲೆ, ಅಪಹರಣ ಮಾಡಿದ್ದಕ್ಕಾಗಿ ದೌರ್ಜನ್ಯ ತಡೆ ಕಾಯ್ದೆ 1989 ರ ಅಡಿಯಲ್ಲಿ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ನೌಕರರ ಮೇಲೆ ಪ್ರಕರಣ ದಾಖಲಿಸಬೇಕು ಮತ್ತು ಅವರನ್ನು ಬಂಧಿಸಬೇಕು. ಒಕ್ಕಲೆಬ್ಬಿಸಿರುವ ಕುಟುಂಬಗಳಿಗೆ ಪಡಿತರ ರೂಪದಲ್ಲಿ ತಕ್ಷಣ ಪರಿಹಾರ ನೀಡಬೇಕು. ಅರಣ್ಯ ಇಲಾಖೆಯ ಅಕ್ರಮ ಒಕ್ಕಲೆಬ್ಬಿಸುವಿಕೆಯಿಂದ ಉಂಟಾದ ನಷ್ಟವನ್ನು ಸರಿದೂಗಿಸಬೇಕು. ಬಂಧನಕ್ಕೊಳಗಾದವರಿಂದ ಕಳವು ಮಾಡಿದ ಮೊಬೈಲ್ ಫೋನ್‌ಗಳನ್ನು ತಕ್ಷಣವೇ ಹಿಂದಿರುಗಿಸಬೇಕು, ಬಂಧಿತರಿಂದ ಬಲವಂತವಾಗಿ ಸಹಿ ಪಡೆದಿರುವ ಎಲ್ಲಾ ಕಾಗದ ಪತ್ರಗಳನ್ನು ಸಂಪೂರ್ಣವಾಗಿ ವಜಾಗೊಳಿಸಬೇಕು ಎಂದು ಜಾಗೃತ ಆದಿವಾಸಿ ದಲಿತ ಸಂಘಟನೆ ಆಗ್ರಹಿಸಿದೆ.


ಇದನ್ನೂ ಓದಿ: ಯಾವ ಮಹಾತ್ಮರನ್ನು ಮನೆಗೆ ಕರೆಯಬಾರದಪ್ಪ…: ದೇವನೂರು ಮಹಾದೇವ ವಿಷಾಧ

LEAVE A REPLY

Please enter your comment!
Please enter your name here