ಹಾಸನ ಹಾಗೂ ಮಂಡ್ಯ ಜಿಲ್ಲೆಯ ಬಹುಭಾಗಕ್ಕೆ ನೀರುಣಿಸುವ ಹೇಮಾವತಿ ಎಡದಂಡೆ ನಾಲೆಯ ಸರಪಳಿಯಲ್ಲಿರುವ, ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ ಹಾದು ಹೋಗಿರುವ  ಕಾಲುವೆಯ (72.860 ರಿಂದ 214.300 ಕಿ.ಮೀ ವರೆಗಿನ) ಆಧುನೀಕರಣ ಕಾಮಗಾರಿಯಲ್ಲಿ 500 ಕೋಟಿಗೂ ಅಧಿಕ ಮೌಲ್ಯದ ಹಗರಣ ನಡೆಸಿದೆ ಎಂದು ರೈತರು ಆರೋಪಿಸಿದ್ದು, ಈ ಕುರಿತು ಲೋಕಾಯುಕ್ತ ವತಿಯಿಂದ ಮಂಗಳವಾರದಿಂದ ನಾಲ್ಕು ದಿನಗಳ ಕಾಲ ಕಾಲುವೆಯ ಉದ್ದಕ್ಕೂ ಸಂಚರಿಸಿ ಪರಿಶೀಲನೆ ನಡೆಯುತ್ತಿದೆ.

ನಾಲೆ ಆಧುನೀಕರಣಕ್ಕಾಗಿ ನೀಡಲಾಗಿದ್ದ 883 ಕೋಟಿ ರೂ ಮೌಲ್ಯದ ಟೆಂಡರ್‌ನಲ್ಲಿ ಸುಮಾರು 500 ಕೋಟಿ ರೂಗಳಷ್ಟು ಧೋಖಾ ನಡೆದಿದೆ ಎಂದು ಆರೋಪಿಸಿ ಕೆ.ಆರ್‌ ಪೇಟೆಯ ರೈತ ಮುಖಂಡ ನಾಗೇಗೌಡ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದೂರನ್ನು ಆಧರಿಸಿ ಕಾಲುವೆಯ ಉದ್ದಕ್ಕೂ ಲೋಕಯುಕ್ತದ ತಾಂತ್ರಿಕ ವಿಭಾಗದ ಚೀಫ್‌ ಎಂಜಿನಿಯರ್ ಪ್ರಸಾದ್ ಮತ್ತು ನಿರಂಜನ್‌ ನೇತೃತ್ವದ ತಂಡವು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಅರಂಭವಾಗುವ ನಾಲೆಯ 72.860 ಕಿ.ಮೀನಿಂದ ಪರಿಶೀಲನೆ ಅರಂಭಿಸಿ, ಕೆ.ಆರ್‌.ಪೇಟೆ, ಪಾಂಡವಪುರ ಮತ್ತು ನಾಗಮಂಗಲ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹಾದುಹೋಗಿರುವ ನಾಲೆಯ ಮೇಲೆ ಸಂಚರಿಸಿ 214.300 ಕಿ.ಮೀ ಪರಿಶೀಲನೆಯನ್ನು ನಡೆಸಲಾಗುತ್ತಿದೆ.

ಕಾಲುವೆ ಪುನಶ್ಚೇತನಕ್ಕಾಗಿ ನಡೆದ ಕಾಮಗಾರಿಯಲ್ಲಿ ಗ್ರಾವೆಲ್‌ ಮಣ್ಣು ಬಳಕೆ, ಮರಳು, ಕಾಲುವೆಯಲ್ಲಿ ಕೆಲವು ಬಂಡೆಗಳ ಸಿಡಿತ, ಕಾಲುವೆ ಬದಿಯಲ್ಲಿ ಹುಲ್ಲು ಹಾಸು, ಹೆಕ್ಟೋ ಮೀಟರ್ ಕಲ್ಲುಗಳು, ಗಡಿ ಕಲ್ಲುಗಳೂ ಸೇರಿದಂತೆ ಕಳಪೆ ಕಾಮಗಾರಿ ಮಾಡಿ 500 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಲೂಟಿ ನಡೆದಿರುವುದಕ್ಕೆ ಸಾಕ್ಷಾ-ಪುರಾವೆಗಳನ್ನು ಲೋಕಾಯುಕ್ತಕ್ಕೆ ನೀಡಿರುವುದಾಗಿ ರೈತ ಮುಖಂಡ ನಾಗೇಗೌಡ ತಿಳಿಸಿದ್ದಾರೆ.

ಕಾಲುವೆಗಳ ಲೈನಿಂಗ್‌ಗಳು, ರ್ಯಾಂಪ್‌ಗಳು, ಸೋಪನಂ ಕಟ್ಟೆಗಳನ್ನು ಕಳಪೆ ಕಾಮಗಾರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಇವುಗಳ ನಿರ್ಮಾಣಕ್ಕಾಗಿ ದುಪ್ಪಟ್ಟು ಬಿಲ್‌ ಕ್ಲೈಮ್‌ ಮಾಡಿಕೊಳ್ಳಲಾಗಿದೆ. ನಾಲೆಯಿಂದ 100 ಕಿ.ಮೀಗೂ ದೂರದಿಂದ ಗ್ರಾವೆಲ್‌ ಮಣ್ಣನ್ನು ತರಲಾಗಿದೆ, ಟಿ. ನರಸೀಪುರದಿಂದ ಮರಳನ್ನು ತರಲಾಗಿದೆ ಎಂದು ಬಿಲ್‌ ಕ್ಲೈಮ್‌ ಮಾಡಲಾಗಿದೆ. ಅದರೆ, ಕಾಲುವೆಯ ಉದ್ದಕ್ಕೂ ಎಲ್ಲಿಯೂ ಗ್ರಾವೆಲ್‌ ಮಣ್ಣನ್ನು ಬಳಸಿಲ್ಲ, ಅಲ್ಲದೆ, ಕಾಮಗಾರಿಗೆ ಮರಳಿನ ಬದಲಾಗಿ ಎಂ-ಸ್ಯಾಂಡ್‌ ಮಣ್ಣನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಟರ್ಫಿಂಗ್‌ ಹೆಸರಿನಲ್ಲಿ 4.34 ಕೋಟಿ ರೂ, ಚರಂಡಿ (ಡ್ರೈನ್‌) ಹೆಸರಿನಲ್ಲಿ 1.39 ಕೋಟಿ ರೂ, ಗಡಿ ಕಲ್ಲುಗಳು – 9.71 ಲಕ್ಷ ರೂ, ಬೆಂಚ್‌ ಮಾರ್ಕ್‌ ಕಲ್ಲು – 48.91 ಲಕ್ಷ ರೂ., ಕಿ.ಮೀ ತೋರಿಸುವ ಕಲ್ಲುಗಳು – 2.53 ಲಕ್ಷ ರೂ., ಹೆಕ್ಟೋಮೀಟರ್‌ ಕಲ್ಲುಗಳು – 15.29 ಲಕ್ಷ ರೂ., 10.50 ಕಿ.ಮೀ ವ್ಯಾಟ್‌ ಸಾಮರ್ಥ್ಯದ 3 ಜನರೇಟರ್‌ಗಳು – 20.40 ಲಕ್ಷ ರೂ., ಗಾರ್ಡ್‌ ಸ್ಟೋನ್‌ಗಳು (ರಕ್ಷಣಾ ಕಲ್ಲುಗಳು) ಹೆಸರಿನಲ್ಲಿ 4.79 ಕೋಟಿ ರೂ ಸೇರಿದಂತೆ ಒಟ್ಟು 11.65 ಕೋಟಿ ರೂ. ಸುಳ್ಳು ಲೆಕ್ಕ ತೋರಿಸಿ ಹಗಲು ದರೋಡೆ ಮಾಡಲಾಗಿದೆ ಎಂದು ನಾಗೇಗೌಡ ಆರೋಪಿಸಿದ್ದಾರೆ.

ಅಂದಾಜು 883 ಕೋಟಿ ರೂ ಮೊತ್ತದ ಟೆಂಡರ್‌ನಲ್ಲಿ ಈಗಾಗಲೇ 1200 ಕೋಟಿಗಳಿಗೂ ಅಧಿಕ ಹಣವನ್ನು ಬಿಲ್‌ ಮಾಡಿಕೊಳ್ಳಲಾಗಿದೆ ಎಂದು ರೈತರ ಮುಖಂಡರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಇಲಾಖೆಯ ತಂಡ ಜುಲೈ 13ರಿಂದ ನಾಲ್ಕು ದಿನಗಳ ಕಾಲ ನಾಲೆಯ ಉದ್ದಕ್ಕೂ ಸಂಚರಿಸಿ ಪರಿಶೀಲನೆ ನಡೆಸುತ್ತಿದೆ. ಕಾಲುವೆಗಳ ಲೈನಿಂಗ್‌ಗಳು, ರ್ಯಾಂಪ್‌ಗಳು, ಸೋಪನಂ ಕಟ್ಟೆ, ಸೇತುವೆಗಳಲ್ಲಿ ಲೋಪಗಳು ಕಂಡುಬಂದಿದ್ದು, ಪರಿಶೀಲನಾ ತಂಡವು ಅವುಗಳ ಸ್ಯಾಂಪಲ್‌ಗಳನ್ನು ತೆಗೆದುಕೊಂಡಿದ್ದು, ಲ್ಯಾಬ್‌ ಟೆಸ್ಟ್‌ಗೆ ಕಳಿಸಲಿದೆ.

“ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಲೋಕಯುಕ್ತದ ನಮ್ಮ ತಂಡ ಪರಿಶೀಲನೆಗೆ ಬಂದಿದ್ದೇವೆ. ನಾನು ನಾಲೆಯ ಉದ್ದಕ್ಕೂ ಕಾಮಗಾರಿಯ ಎಲ್ಲವನ್ನೂ ಗಮನಿಸುತ್ತಿದ್ದೇನೆ. ಈ ವೇಳೆ ಕಂಡುಬಂದಿರುವ ಎಲ್ಲಾ ರೀತಿಯ ಲೋಪಗಳನ್ನು ದಾಖಲಿಸಿಕೊಂಡಿದ್ದೇವೆ. ಎಲ್ಲವನ್ನೂ ಪರಿಶೀಲನಾ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಸುತ್ತೇವೆ” ಎಂದು ಲೋಕಯುಕ್ತದ ಚೀಫ್‌ ಎಂಜಿನಿಯರ್‌ ಪ್ರಸಾದ್‌ ತಿಳಿಸಿದ್ದಾರೆ.

ಪರಿಶೀಲನೆಯ ವೇಳೆ, ತಂಡದ ಮುಖ್ಯಸ್ಥ, ಚೀಫ್‌ ಎಂಜಿನಿಯರ್‌ ಪ್ರಸಾದ್‌, ನಿರಂಜನ್‌, ಚನ್ನರಾಯಪಟ್ಟಣ ಹೇಮಾವತಿ ನಾಲಾ ವಿಭಾಗದ ಅಧೀಕ್ಷಕ ಎಂಜಿನಿಯರ್ ಮಂಜುನಾಥ್‌, ಕೆಆರ್‌ಪೇಟೆ ಎಚ್‌ಎಲ್‌ಬಿಸಿ ವಿಭಾಗದ ಶ್ರೀನಿವಾಸ್‌, ಗುರುಪ್ರಸಾದ್, ದೂರುದಾರರಾದ ರೈತ ಹೋರಾಟಗಾರ ನಾಗೇಗೌಡ, ಕ.ರಾ.ರೈ.ಸಂಘದ ಮಂಡ್ಯ ಜಿಲ್ಲಾಧ್ಯಕ್ಷರಾದ ರಾಜೇಗೌಡ, ಕರೋಟಿ ತಮ್ಮಣ್ಣ, ಮಾಕವಳ್ಳಿ ರವಿ ಸೇರಿದಂತೆ ಹಲವರು ಸ್ಥಳದಲ್ಲಿದ್ದರು.


ಇದನ್ನೂ ಓದಿ: ಹರಿಯಾಣ: 100ಕ್ಕೂ ಹೆಚ್ಚು ರೈತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ ಪೊಲೀಸರು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here