ಶಿರೋಮಣಿ ಅಕಾಲಿದಳ ಪಕ್ಷದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ನಿವಾಸದ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ. ಪ್ರತಿಭಟನಾ ನಿರತ ಸುಖಬೀರ್ ಸಿಂಗ್ ಬಾದಲ್ ಅವರನ್ನು ಪೊಲೀಸರು ತಕ್ಷಣ ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಪಂಜಾಬ್ ಸರ್ಕಾರದ ವಿವಿಧ ಹಗರಣಗಳ ವಿರುದ್ಧ ಸುಖಬೀರ್ ಸಿಂಗಲ್ ಮತ್ತು ಸಾವಿರಾರು ಶಿರೋಮಣಿ ಅಕಾಲಿದಳ ಕಾರ್ಯಕರ್ತರು ಬೃಹತ್ ಪ್ರತಿಭಟನೆಯನ್ನು ನಡೆಸಿದ್ದರು. ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ನೂರಾರು ಕಾರ್ಯಕರ್ತರು ಗುಂಪುಗೂಡಿದ್ದು ಕೆಲಹೊತ್ತು ಮುಖ್ಯಮಂತ್ರಿ ನಿವಾಸದ ಎದುರು ಆತಂಕವನ್ನು ಸೃಷ್ಟಿಸಿತ್ತು.
“ವ್ಯಾಕ್ಸೀನ್ ಖರೀದಿ, ರೇಷನ್ ಕಿಟ್, SC ವಿದ್ಯಾರ್ಥಿಗಳ ಸ್ಕಾಲರ್‌ಶಿಪ್, ರೈತರ ಜಮೀನು ಬಲವಂತವಾಗಿ ವಶಪಡಿಸಿಕೊಳ್ಳುವುದು ಹೀಗೆ ಪಂಜಾಬ್‌ನ ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲಿಯೇ ಮುಳುಗಿಹೋಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ನ ಎಲ್ಲಾ ನಾಯಕರನ್ನು ಹಗರಣಗಳಿಗೆ ಹೊಣೆಗಾರರನ್ನಾಗಿ ಮಾಡುತ್ತೇವೆ. ರಾಜ್ಯದಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರದ ವಿರುದ್ಧ ಆಕ್ರೋಶವಿದೆ. ಜನರ ಆಕ್ರೋಶ ಬೃಹತ್ ಸುನಾಮಿಯಾಗಿ ಮಾರ್ಪಡುತ್ತದೆ. ಸುನಾಮಿಯ ಅಲೆಗಳು ಬಂದಾಗ ಯಾವ ಕ್ಯಾಪ್ಟನ್‌ನಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ” ಎಂದು ಸುಖಬೀರ್ ಸಿಂಗ್ ಬಾದಲ್ ಪ್ರತಿಭಟನೆಯ ವೇಳೆ ಪಂಜಾಬ್ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಶಿರೋಮಣಿ ಅಖಾಲಿದಳ ಮತ್ತು ಬಹುಜನ ಸಮಾಜ ಪಕ್ಷ (BSP) 25 ವರ್ಷಗಳ ನಂತರ ಮತ್ತೆ ಮೈತ್ರಿ ಮಾಡಿಕೊಂಡಿವೆ. ಈ ಸಾರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರವನ್ನು ಕೆಳಗಿಳಿಸದೇ ಯಾವ ಅಕಾಲಿಯೂ ವಿಶ್ರಮಿಸುವುದಿಲ್ಲ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸುವ ಸೂಚನೆಯನ್ನು ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ನೀಡಿದ್ದಾರೆ.
ಇದನ್ನೂ ಓದಿ :ಪ್ರಶಾಂತ್ ಕಿಶೋರ್ ಇಲ್ಲದೆಯೂ TMC ಗಾಗಿ ಕೆಲಸ ಮಾಡಲಿದೆ I-PAC!


