ದೇಶದಲ್ಲಿ ಮತ್ತೊಮ್ಮೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸುದ್ದಿಯಲ್ಲಿದ್ದಾರೆ. 2021 ರ ಪಶ್ಚಿಮ ಬಂಗಾಳ ಚುನಾವಣೆಯ ತೃಣಮೂಲ ಗೆಲುವಿನೊಂದಿಗೆ ತಮ್ಮ ರಾಜಕೀಯ ತಂತ್ರಗಾರಿಕೆಯ ವೃತ್ತಿಯಿಂದ ನಿವೃತ್ತಿ ಹೊಂದುವುದಾಗಿ ಹೇಳಿ ಪ್ರಶಾಂತ್ ಕಿಶೋರ್ ಆಶ್ಚರ್ಯ ಮೂಡಿಸಿದ್ದರು. ಇದರ ನಡುವೆ ಪ್ರಶಾಂತ್ ಕಿಶೋರ್ ರಾಜಕೀಯಕ್ಕೆ ಪ್ರವೇಶಿಸುತ್ತಾರ ಎಂಬ ಸುದ್ದಿಗಳು ಕೆಲವುದಿನ ಹರಿದಾಡುತ್ತಿತ್ತು. ಬಿಹಾರ ಮೂಲದ ಚುನಾವಣಾ ತಂತ್ರಜ್ಞ ಸದ್ಯ ರಾಜಕೀಯದ ಕಡೆ ಮುಖ ಮಾಡಿಲ್ಲ. ಹಾಗೆಂದು ರಾಜಕೀಯದಿಂದ ದೂರವೂ ಉಳಿದಿಲ್ಲ. ಇದರ ನಡುವೆ ತೃಣಮೂಲ್ ಕಾಂಗ್ರೆಸ್ ಪ್ರಶಾಂತ್ ಕಿಶೋರ್ ಹುಟ್ಟು ಹಾಕಿದ I-PAC ಚುನಾವಣಾ ವಿಶ್ಲೇಷಣಾ ಸಂಸ್ಥೆಯ ಜೊತೆ ತನ್ನ ಒಪ್ಪಂದವನ್ನು ಮುಂದುವರೆಸಿದೆ. ಪಶ್ಚಿಮ ಬಂಗಾಳದ ಜಿಲ್ಲಾ ಪಂಚಾಯತಿ, ಸ್ಥಳೀಯ ಸಂಸ್ಥೆಗಳು, ಇತರ ಚುನಾವಣೆಗಳು ಸೇರಿ ಎಲ್ಲಾ ಚುನಾವಣಾ ಪ್ರಕ್ರಿಯೆಯಲ್ಲಿ I-PAC ತೃಣಮೂಲ ಕಾಂಗ್ರೆಸ್‌ಗೆ ಸಹಾಯ ಮಾಡಲಿದೆ. ತೃಣಮೂಲ ಕಾಂಗ್ರೆಸ್‌ ಮತ್ತು I-PAC ನಡುವಿನ ಒಪ್ಪಂದ 2026 ರ ವರೆಗೂ ಮುಂದುವರೆಯಲಿದೆ. ಆದರೆ ಈಗ I-PAC ನಲ್ಲಿ ಮುಖ್ಯಸ್ಥರಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡುತ್ತಿಲ್ಲ. ಅವರ ಬದಲಾಗಿ 9 ಜನ ಹಿರಿಯ ಸದಸ್ಯರ ನೇತೃತ್ವದಲ್ಲಿ I-PAC ಕಾರ್ಯನಿರ್ವಹಿಸುತ್ತಿದೆ. ಪ್ರಶಾಂತ್ ಕಿಶೋರ್ ಇಲ್ಲದೇ ತೃಣಮೂಲ್-I-PAC ಜೋಡಿ ಚುನಾವಣೆಗಳಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಬಂಗಾಳದ ಉಪಚುನಾವಣೆಗಳು ಸ್ಪಷ್ಟಪಡಿಸಲಿವೆ.

ಇದನ್ನೂ ಓದಿ : ಕೇಂದ್ರ ಸರ್ಕಾರ ಸದ್ದಿಲ್ಲದೇ CAA ಜಾರಿಗೊಳಿಸುತ್ತಿದೆ: ಸುಪ್ರೀಂನಲ್ಲಿ IUML ಪ್ರಶ್ನೆ

ಇವೆಲ್ಲದರ ನಡುವೆ ಇತ್ತ ಪ್ರಶಾಂತ್ ಕಿಶೋರ್ ಸದ್ದಿಲ್ಲದೇ ಶರತ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಬಂಗಾಳ ಚುನಾವಣೆಯಲ್ಲಿ ಬೆಂಬಲಿಸಿದ್ದಕ್ಕೆ ಕೃತಜ್ಞತೆ ತಿಳಿಸಲು ಪವಾರ್ ಭೇಟಿಯಾಗಿದ್ದಾಗಿ ಪ್ರಶಾಂತ್ ಕಿಶೋರ್ ಹೇಳುತ್ತಿದ್ದಾರಾದರೂ  ಭೇಟಿ ಹಿಂದೆ ಮಹತ್ವದ ರಾಜಕೀಯ ಉದ್ಧೇಶವಿದೆಯೆಂದು ಹೇಳಲಾಗುತ್ತಿದೆ. ಮಮತಾ ಬ್ಯಾನರ್ಜಿ ಪರವಾಗಿ ಪ್ರಶಾಂತ್ ಕಿಶೋರ್ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದಾರೆ. ಮಮತಾ ಬ್ಯಾನರ್ಜಿ ರಾಷ್ಟ್ರ ಮಟ್ಟದಲ್ಲಿ ವಿರೋಧ ಪಕ್ಷಗಳ ಒಕ್ಕೂಟಗಳನ್ನು ಸಂಘಟಿಸಲು ಆರಂಭಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ತೃಣಮೂಲ್ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಪಕ್ಷವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವ ಅವಶ್ಯಕತೆಯಿದೆಯೆಂದು ಹೇಳಿದ್ದಾರೆ. ಮತ್ತೊಬ್ಬ ತೃಣಮೂಲ್ ನಾಯಕ ಅಭಿಷೇಕ್ ಬ್ಯಾನರ್ಜಿ ಕೂಡ ಇದೇ ರೀತಿಯ ಹೇಳಿಕೆಯನ್ನು ಇತ್ತೀಚೆಗೆ ನೀಡಿದ್ದಾರೆ. ಪ್ರಶಾಂತ್ ಕಿಶೋರ್ ಶರದ್ ಪವಾರ್ ಅವರನ್ನು ಭೇಟಿಯಾಗಿರುವುದು, ಮಮತಾ ಬ್ಯಾನರ್ಜಿಯವರ ರಾಷ್ಟ್ರ ರಾಜಕಾರಣದ ಕನಸು ಎಲ್ಲವನ್ನೂ ತಾಳೆಹಾಕಿ ನೋಡಿದರೆ ತೃಣಮೂಲ ಕಾಂಗ್ರೆಸ್‌ ತೆರೆಮರೆಯಲ್ಲಿ ರಾಷ್ಟ್ರರಾಜಕಾರಣದಲ್ಲಿ ಮಹತ್ವದ ಹೆಜ್ಜೆಯಿಡಲು ಸಜ್ಜಾಗುತ್ತಿರುವುದು ಸ್ಪಷ್ಟವಾಗುತ್ತದೆ.

ಬಂಗಾಳದ ಗೆಲುವು ಮಮತಾ ಬ್ಯಾನರ್ಜಿ ಅವರಲ್ಲಿ ದೆಹಲಿ ಗದ್ದುಗೆಯ ಕನಸನ್ನು ಬಿತ್ತಿರಬಹುದು. ಹಾಗಾಗಿ ಮಮತಾ ಈಗಿನಿಂದಲೇ ಪ್ರಧಾನಿ ಮೋದಿ ವಿರುದ್ಧ ವಿರೋಧ ಪಕ್ಷಗಳ ಒಕ್ಕೂಟವನ್ನು ಸಂಘಟಿಸುವ ಯತ್ನಕ್ಕೆ ಕೈ ಹಾಕಿದ್ದಾರೆ. ಬಂಗಾಳ ಚುನಾವಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳು ಒಟ್ಟಾದರೆ ಪ್ರಧಾನಿ ಮೋದಿಯವರನ್ನು ಸೋಲಿಸಬಹುದು ಎಂದಿದ್ದರು. ಹಾಗೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ಹಲವು ನಾಯಕರುಗಳಿಗೆ ಬೆಂಬಲ ಕೋರಿ ಪತ್ರ ಬರೆದಿದ್ದರು.

ಇದಕ್ಕೂ ಹಿಂದೆ 2019 ರ ಲೋಕಸಭೆ ಚುನಾವಣೆಯ ಸಮಯದಲ್ಲೂ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷಗಳ ಒಕ್ಕೂಟವಾದ ತೃತೀಯ ರಂಗವನ್ನು ಸಂಘಟಿಸಲು ಪ್ರಯತ್ನಿಸಿದ್ದರು. ಈ ನಡುವೆ ಮಮಾತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿಯವರ ನಡುವಿನ ವಾಕ್ಸಮರಗಳು, ಅಧಿಕಾರಿ ವರ್ಗಾವಣೆ ತಿಕ್ಕಾಟಗಳನ್ನು ಗಮನಿಸಿದರೆ ಪ್ರಶಾಂತ್ ಕಿಶೋರ್ ಶರದ್‌ ಪವಾರ್ ಭೇಟಿಯೆ ಹಿಂದೆ ಹಲವು ಅರ್ಥಗಳು ಹುಟ್ಟಿಕೊಳ್ಳುತ್ತವೆ. ಜೊತೆಗೆ ಪ್ರಶಾಂತ್ ಕಿಶೋರ್ ಸ್ಥಾಪಿಸಿದ I-PAC  ಸಂಸ್ಥೆ ಜೊತೆ ತೃಣಮೂಲ್ ಒಪ್ಪಂದವನ್ನು ಮುಂದುವರೆಸಿರುವುದು ಸಹ ಮಮತಾ ಬ್ಯಾನರ್ಜಿಯವರ ರಾಷ್ಟ್ರ ರಾಜಕಾರಣದ ಮಹತ್ವಾಕಾಂಕ್ಷೆಯ ಜಾಡನ್ನು ಸೂಚಿಸುವಂತಿದೆ.

ಒಟ್ಟಿನಲ್ಲಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಗೆಲುವು, ಚುನಾವಣೆಯ ನಂತರದ ಬಿಜೆಪಿ ನಾಯಕರ ವಲಸೆ, ಪ್ರಶಾಂತ್ ಕಿಶೋರ್- ಶರದ್ ಪವಾರ್ ನಿಗೂಢ ಭೇಟಿ ಎಲ್ಲವೂ ಮಮತಾ ಬ್ಯಾನರ್ಜಿ ಅವರನ್ನು ಮತ್ತೊಮ್ಮೆ ರಾಷ್ಟ್ರ ರಾಜಕಾರಣದ ಮುನ್ನೆಲೆಗೆ ತಂದು ನಿಲ್ಲಿಸಿವೆ.


ಇದನ್ನೂ ಓದಿ : ಅಕ್ರಮ‌ ಹಣ ವರ್ಗಾವಣೆ ಆರೋಪ: ಬಿಎಸ್‌ವೈ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here