ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಚುನಾವಣೆ ಪೂರ್ವ ಮೈತ್ರಿ ಮೂಲಕ ಮಹಾರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿಯಲು ಹಗ್ಗಜಗ್ಗಾಟ ನಡೆಸಿದ್ದ ಎನ್‍ಡಿಎ ಹಾಗೂ ಶಿವಸೇನೆ ಮೈತ್ರಿ ಮುರಿದುಕೊಂಡಿವೆ. ಬಿಜೆಪಿ ಹಾಕಿದ್ದ ಸವಾಲಿಗೆ ಶಿವಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಬಿಜೆಪಿ ಜತೆಗಿನ ಮೂವತ್ತು ವರ್ಷದ ಸಂಬಂಧಕ್ಕೆ ಎಳ್ಳು-ನೀರು ಬಿಟ್ಟಿದೆ.
ಚುನಾವಣಾ ಫಲಿತಾಂಶ ಬಂದು 15 ದಿನಗಳು ಕಳೆದರೂ ಸಿಎಂ ಹುದ್ದೆಗಾಗಿ ಶಿವಸೇನೆ ಮತ್ತು ಬಿಜೆಪಿ ಕದನ ನಡೆಸಿದ್ದವು. ಆದರೆ ಬಿಜೆಪಿ, ಶಿವಸೇನೆಯ 50:50 ಸೂತ್ರಕ್ಕೆ ಸೊಪ್ಪು ಹಾಕಲಿಲ್ಲ. ಇದರಿಂದ ಕೆರಳಿದ ಶಿವಸೇನೆ, ಮುಖ್ಯಮಂತ್ರಿ ಸ್ಥಾನ ನಮಗೇ ಬೇಕು ಎಂದು ಬಿಗಿಪಟ್ಟು ಸಾಧಿಸಿತ್ತು. ಸರ್ಕಾರ ರಚಿಸುವಲ್ಲಿ ವಿಫಲರಾಗಿರುವ ದೇವೇಂದ್ರ ಫಡ್ನವೀಸ್ ಈಗಾಗಲೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದು, ಶಿವಸೇನೆ ಜನಾದೇಶಕ್ಕೆ ಅಪಮಾನ ಮಾಡುತ್ತಿದೆ ಎಂದು ಕಿಡಿಕಾರಿದ್ದರು. ಅಲ್ಲದೇ ಬಿಜೆಪಿ ಸರ್ಕಾರ ರಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಚುನಾವಣೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಶಿವಸೇನೆ ಸರ್ಕಾರ ರಚನೆ ಮಾಡಲಿ ಎಂದು ಹೇಳಿದೆ.
ಈಗ ಕಾಂಗ್ರೆಸ್ ಮತ್ತು ಎನ್‍ಸಿಪಿ ಜತೆ ಮೈತ್ರಿ ಮಾಡಿಕೊಳ್ಳುವುದಾಗಿ ಶಿವಸೇನೆ ಹೇಳಿತ್ತು. ತದನಂತರ ಕಾಂಗ್ರೆಸ್ ಮತ್ತು ಎನ್‍ಸಿಪಿ ನಾಯಕರು ಸಭೆ ನಡೆಸಿದ್ದರು. ನಂತರ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು. ಇನ್ನು ಮೂಲಗಳ ಮಾಹಿತಿಯ ಪ್ರಕಾರ, ಶಿವಸೇನೆ ಜತೆ ಮೈತ್ರಿ ಮಾಡಿಕೊಳ್ಳಬೇಕೆಂದರೆ ಬಿಜೆಪಿಯಿಂದ ಶಿವಸೇನೆ ಮೈತ್ರಿ ಮುರಿದುಕೊಂಡು ಬೇರೆಯಾಗಬೇಕು ಎಂದು ಎನ್‍ಸಿಪಿ ಷರತ್ತು ವಿಧಿಸಿತ್ತೆಂದು ಹೇಳಲಾಗಿದೆ. ಹೀಗಾಗಿಯೇ ಶಿವಸೇನೆ, ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡಿದ್ದು, ಎನ್‍ಸಿಪಿ ನಾಯಕ ಶರತ್ ಪವಾರ್ ಅವರನ್ನು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಇಂದು ಭೇಟಿಯಾಗುವ ಸಾಧ್ಯತೆ ಇದೆ.
ಇತ್ತ ಕಾಂಗ್ರೆಸ್ ನಾಯಕರೂ ಸಹ ಸಭೆ ನಡೆಸಿದ್ದಾರೆ. ಶಿವಸೇನೆ ವಕ್ತಾರ ಸಂಜಯ್ ರಾವತ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಬಿಜೆಪಿ ಜತೆ ಶಿವಸೇನೆ ಮೈತ್ರಿ ಮುರಿದುಕೊಳ್ಳುತ್ತಿದ್ದಂತೆ, ಕೇಂದ್ರ ಸಚಿವ ಸಂಪುಟದಲ್ಲಿ ಪಕ್ಷದಿಂದ ಮಂತ್ರಿಯಾಗಿದ್ದ ಅರವಿಂದ್ ಸಾವಂತ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ರಾಜೀನಾಮೆ ಪತ್ರವನ್ನು ಟ್ವೀಟ್ ಮಾಡಿದ್ದಾರೆ. ಶಿವಸೇನೆ ಪಕ್ಷ ಸತ್ಯವನ್ನೇ ಹೇಳುತ್ತಿದೆ. ಸುಳ್ಳಿನ ವಾತಾವರಣದಲ್ಲಿ ಇರಲು ಮತ್ತು ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ಇತ್ತ ಸರ್ಕಾರ ರಚನೆ ಸಂಬಂಧ ಕಾಂಗ್ರೆಸ್ ಮತ್ತು ಎನ್‍ಸಿಪಿ ಸಭೆ ನಡೆಸಿದ್ದು, ಶಿವಸೇನೆಗೆ ಸಾಥ್ ನೀಡಬೇಕೋ ಬೇಡವೋ ಎಂಬುದು ಸಭೆಯ ನಂತರ ನಿರ್ಧಾರವಾಗಲಿದೆ. ಶಿವಸೇನೆಗೆ ಸಾಥ್ ನೀಡುವ ಆಲೋಚನೆಯಲ್ಲಿರುವ ಕಾಂಗ್ರೆಸ್‍ಗೆ ಎಚ್ಚರಿಕೆ ನೀಡಿದ್ದಾರೆ ಸಂಜಯ್ ನಿರುಪಮ್. ಶಿವಸೇನೆ ಮತ್ತು ಬಿಜೆಪಿ ಮಧ್ಯೆ ನಡೆಯುತ್ತಿರುವುದು ಕದನವಲ್ಲ. ಅದೊಂದು ನಾಟಕ. ಇದೆಲ್ಲದರಿಂದ ಕಾಂಗ್ರೆಸ್ ದೂರವುಳಿಯಬೇಕು ಎಂದು ಹೇಳಿದ್ದಾರೆ.


