ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾರವರ ಮಗ ಆಶಿಶ್ ಮಿಶ್ರಾ ಕಾರು ಹರಿಸಿ ನಾಲ್ವರು ರೈತರನ್ನು ಕೊಂದ ಘಟನೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕದ ಹಲವು ಕಡೆ ಪ್ರತಿಭಟನೆಗಳು ಭುಗಿಲೆದ್ದಿವೆ. ರೈತರ ಮೇಲೆ ಹಗೆ ಸಾಧಿಸುತ್ತಿರುವ ಉತ್ತರ ಪ್ರದೇಶ ಸರ್ಕಾರವನ್ನು ವಜಾ ಮಾಡಬೇಕೆಂದು ಕರ್ನಾಟಕದ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ರೈತರು ತನ್ನ ಶತ್ರುಗಳೆಂದು ತಿಳಿದುಕೊಂಡಿರುವ ಬಿಜೆಪಿಯು ಅವರನ್ನು ಪೋಲಿಸರ ಮೂಲಕ ದಮನಿಸಲು ಪ್ರಯತ್ನಿಸಿ ವಿಫಲವಾದ ನಂತರ ಈಗ ನೇರವಾಗಿ ಹತ್ಯೆ ನಡೆಸಲು ಹೊರಟಿದೆ. ಉತ್ತರಪ್ರದೇಶದಲ್ಲಿ ಸಚಿವರ ಮಗನ ಕಾರಿನಡಿಗೆ ಸಿಕ್ಕಿ ರೈತರು ಸಾವಿಗೀಡಾದ ಪ್ರಕರಣ ಬಿಜೆಪಿಯ ಕೊಲೆಗಡುಕ ಮನಸ್ಸಿಗೆ ಸಾಕ್ಷಿ” ಎಂದು ಕಿಡಿಕಾರದ್ದಾರೆ.
ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಗೂಂಡಾ ರಾಜ್ಯದಲ್ಲಿ ದಲಿತರು, ರೈತರು, ಮಹಿಳೆಯರು ಮತ್ತು ಬಡವರ ಮಾನ-ಪ್ರಾಣ ಯಾವುದೂ ಸುರಕ್ಷಿತ ಅಲ್ಲ. ಸಂವಿಧಾನವೇ ಕುಸಿದುಬಿದ್ದಿರುವ ಸ್ಥಿತಿಯಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಅಲ್ಲಿನ ಬಿಜೆಪಿ
ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಉತ್ತರಪ್ರದೇಶದ @myogiadityanath ಗೂಂಡಾ ರಾಜ್ಯದಲ್ಲಿ ದಲಿತರು,ರೈತರು,
ಮಹಿಳೆಯರು ಮತ್ತು ಬಡವರ ಮಾನ-ಪ್ರಾಣ ಯಾವುದೂ ಸುರಕ್ಷಿತ ಅಲ್ಲ.ಸಂವಿಧಾನವೇ ಕುಸಿದುಬಿದ್ದಿರುವ
ಸ್ಥಿತಿಯಲ್ಲಿ
ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ
ಅಲ್ಲಿನ @BJP4India ಸರ್ಕಾರವನ್ನು ವಜಾಗೊಳಿಸಬೇಕು.
2/3#FarmersProtest— Siddaramaiah (@siddaramaiah) October 4, 2021
ಬಿಜೆಪಿ ಮತ್ತು ಅದರ ರಾಜ್ಯ ಘಟಕಗಳು ಇಡೀ ದೇಶವನ್ನು ಗೂಂಡಾ ರಾಜ್ ಆಗಿ ಪರಿವರ್ತಿಸಿವೆ. ಅವರು ಮಾಡಿದ ತಪ್ಪುಗಳನ್ನು ಪ್ರಶ್ನಿಸಲು ಜಾಗವಿಲ್ಲ. ಆ ಮುಗ್ಧ ರೈತರು ಏನು ಮಾಡಿದರು, ಏಕೆ ಅವರನ್ನು ಕೊಲ್ಲಲಾಯಿತು? ಅವರು ನರೇಂದ್ರ ಮೋದಿಯವರ ನಿರಂಕುಶಾಧಿಕಾರವನ್ನು ಪ್ರಶ್ನಿಸಿದ್ದೇ ತಪ್ಪೇ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷಗಳು ರೈತರ ಜೊತೆ ನಿಲ್ಲುವುದನ್ನು ತಡೆಯಲು ಸಿಕ್ಕ ಸಿಕ್ಕವರನ್ನು ಬಂಧಿಸುತ್ತಿರುವ ಬಿಜೆಪಿಯ ತಾಲಿಬಾನ್ ಮನಸ್ಥಿತಿಯನ್ನು ಖಂಡಿಸುತ್ತೇನೆ. ಪ್ರಿಯಾಂಕ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರನ್ನು ಬಂಧಿಸಿರುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಕಳಂಕ. ನ್ಯಾಯ ಸಿಗುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಾರು ಹರಿಸಿ ನಾಲ್ವರು ರೈತರನ್ನು ಕೊಂದ ಘಟನೆ ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಆರಂಭವಾಗಿದೆ. ಸಂಯುಕ್ತ ಹೋರಾಟ ಕರ್ನಾಟಕ ಮತ್ತು ರೈತ ಸಂಘಟನೆಗಳು, ಪ್ರಗತಿಪರ ಮತ್ತು ಎಡ ಸಂಘಟನೆಗಳು ಮೈಸೂರು ಬ್ಯಾಂಕ್ ವೃತ್ತದ ಬಳಿ ಸೇರಿ ಆಕ್ರೋಶ ಹೊರ ಹಾಕಿದ್ದಾರೆ. ವಿದ್ಯಾರ್ಥಿ ಯುವಜನ ಸಂಘಟನೆಗಳು ಸಾಥ್ ನೀಡಿವೆ.
“ಸರ್ವಾಧಿಕಾರಿ ಸರ್ಕಾರ ಮಾತ್ರ ಇದನ್ನು ಮಾಡಲು ಸಾಧ್ಯ. ಉತ್ತರ ಪ್ರದೇಶ ಆಡಳಿತಾರೂಢ ಬಿಜೆಪಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಬಯಸುತ್ತಿದೆಯೇ? ಈ ರೀತಿಯಾದ ನಾಗರಿಕ ಹಕ್ಕುಗಳ ಉಲ್ಲಂಘನೆ ಸಂವಿಧಾನದ ಮನೋಭಾವಕ್ಕೆ ವಿರುದ್ಧವಾಗಿದೆ” ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯುಪಿ ರೈತರ ಹತ್ಯೆ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ- ಬಿಜೆಪಿ ವಿರುದ್ಧ ಆಕ್ರೋಶ


