ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನದಲ್ಲಿ ಭಾಗವಹಿಸುತ್ತಿದ್ದ ಪಂಜಾಬ್‌ನ 72 ವರ್ಷದ ರೈತರೊಬ್ಬರು ಸಿಂಘು ಗಡಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶನಿವಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತಪಟ್ಟ ರೈತನನ್ನು ಮೊಗಾ ಜಿಲ್ಲೆಯ ಹನ್ಸಾ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಹರಿಯಾಣದ ಸೋನಿಪತ್‌ನ ಕುಂಡ್ಲಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಹೃದಯಾಘಾತದಿಂದ ನಿಧನರಾಗಿದ್ದು, ಅವರ ಮರಣೋತ್ತರ ಪರೀಕ್ಷೆಯನ್ನು ಶುಕ್ರವಾರ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕನ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ಬಹುಮಾನ ಘೋಷಿಸಿದ ಕಾಂಗ್ರೆಸ್ ನಾಯಕಿ
ಈ ಮಧ್ಯೆ ಶನಿವಾರ ಹರಿಯಾಣ ಮುಖ್ಯಮಂತ್ರಿ, “ಕೃಷಿ ಕಾನೂನುಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯು ಪಟ್ಟಭದ್ರರ ರಾಜಕೀಯ ಉದ್ದೇಶವನ್ನು ಈಡೇರಿಸಲು ಬೇಕಾಗಿ ಮಾಡಲಾಗುತ್ತಿದೆ. ಸಕಾರಾತ್ಮಕ ಸಂವಾದದ ಮೂಲಕ, ಈ ಕಾನೂನುಗಳಲ್ಲಿ ಯಾವುದೇ ತಿದ್ದುಪಡಿ ಅಗತ್ಯವಿದ್ದರೆ, ಸರ್ಕಾರ ಯಾವಾಗಲೂ ಸಿದ್ಧವಾಗಿರುತ್ತದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಹರಿಯಾಣ ಮತ್ತು ನರೆಯ ಪಂಜಾಬ್‌ನಲ್ಲಿ ಎರಡು ತಿಂಗಳುಗಳಿಂದಲೂ ಹೆಚ್ಚು ಕಾಲದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿನ ವಿರುದ್ದ ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೆ ಕೇಂದ್ರವು ಇವರೊಂದಿಗೆ 11 ಸುತ್ತಿನ ಮಾತುಕತೆ ನಡೆಸಿದ್ದು ಎಲ್ಲವೂ ವಿಫಲವಾಗಿದೆ. ರೈತರು ನೂತನ ಕೃಷಿ ಕಾಯಿದೆಯನ್ನು ವಾಪಾಸು ಪಡೆಯದೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: ತೆರೆಯದ ಸರ್ಕಾರಿ ವಸತಿ ಶಾಲೆಗಳು: 30,000 ಕ್ಕೂ ಹೆಚ್ಚು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ


