ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪ ಪ್ರಕರಣದ ದೂರುದಾರನ ಬಂಧನವಾಗಿರುವುದು ನಿಜ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.
ಉಡುಪಿ ಜಿಲ್ಲೆ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಕಿರಿಯರ ಕ್ರೀಡಾಕೂಟದ ಉದ್ಘಾಟನೆಗೆ ಆಗಮಿಸಿದ ಅವರು, ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ದೂರುದಾರನ ಮೇಲೆ ಸಂಶಯ ಮೂಡಿ ಬಂಧಿಸಿದ್ದಾರಾ..ಯಾವ ಉದ್ದೇಶಕ್ಕೆ, ಯಾವ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದಾರೆ ಎಂಬುವುದು ಎಸ್‌ಐಟಿಗೆ ಗೊತ್ತು ಎಂದು ಗೃಹ ಸಚಿವರು ಹೇಳಿದ್ದಾರೆ.
ಎಸ್‌ಐಟಿಯವರು ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸುತ್ತಾರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, “ಎಸ್ಐಟಿ ಹೇಗೆ ತನಿಖೆ ಮಾಡಬೇಕು ಎಂದು ಸರ್ಕಾರ ನಿರ್ದೇಶಿಸಲು ಸಾಧ್ಯವಿಲ್ಲ. ಅದು ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು, ಎಸ್ಐಟಿ ಅಂತಿಮ ವರದಿ ಸಲ್ಲಿಸಿದ ಬಳಿಕ ಸರ್ಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದಿದ್ದಾರೆ.
ಸುಜಾತಾ ಭಟ್ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, “ಎಸ್‌ಐಟಿ ತನಿಖೆ ನಡೆಯುತ್ತಿರುವುದರಿಂದ ಮಧ್ಯದಲ್ಲಿ ನಾನು ಹೇಳಿಕೆ ಕೊಡಲು ಸಾಧ್ಯವಿಲ್ಲ. ಇದರಿಂದ ತನಿಖೆಯ ಮೇಲೆ ಪರಿಣಾಮ ಬೀರಲಿದೆ. ಅನನ್ಯಾ ಭಟ್ ಪ್ರಕರಣವನ್ನು ಎಸ್‌ಐಟಿಗೆ ವಹಿಸಲಾಗಿದೆ. ಹಾಗಾಗಿ, ಎಸ್‌ಐಟಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದು ತಿಳಿಸಿದ್ದಾರೆ.
ದೂರುದಾರನನ್ನು ಬಂಧಿಸಿದ ಎಸ್‌ಐಟಿ ಅಧಿಕಾರಿಗಳು ಬೆಳ್ತಂಡಿಯ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಬಳಿಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ನ್ಯಾಯಾಲಯ ಯಾವ ಆದೇಶ ನೀಡಲಿದೆ ಎಂದು ಕಾದು ನೋಡಬೇಕಾಗಿದೆ.
ದೂರುದಾರನ ಬಂಧನ ಬೆನ್ನಲ್ಲೇ ಆತನ ಹೆಸರು ಮತ್ತು ಫೋಟೋ ಬಹಿರಂಗಗೊಂಡಿದೆ. ಎಸ್‌ಐಟಿ ಅಧಿಕಾರಿಗಳೇ ಹೆಸರು, ಫೋಟೋ ರಿವೀಲ್ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ನಡುವೆ, ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ, “ಯಾರಾದರೂ ಸುಳ್ಳು ದೂರು ಕೊಟ್ಟಿದ್ದರೆ ಅವರ ವಿರುದ್ದವೂ ಕ್ರಮ ಕೈಗೊಳ್ಳಲಾಗುತ್ತದೆ. ಈ ವಿಷಯದಲ್ಲಿ ಎಸ್‌ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಈ ಪ್ರಕರಣದ ಹಿಂದೆ ಯಾವುದೋ ಗುಂಪಿನ ಕೈವಾಡ ಇದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಒಟ್ಟಿನಲ್ಲಿ ಸತ್ಯ ಹೊರಗೆ ಬರಲಿದೆ” ಎಂದು ಹೇಳಿದ್ದಾರೆ.
ಹೇಳಿಕೆ ಬದಲಿಸುತ್ತಿರುವ ಸುಜಾತಾ ಭಟ್: ಅನನ್ಯಾ ಭಟ್ ಪ್ರಕರಣದ ಸುತ್ತ ಹಲವು ಗೊಂದಲ


