ಇಸ್ರೇಲ್ ವಿಧಿಸಿದ ದಿಗ್ಭಂಧನದಿಂದ ಆಹಾರ, ನೀರು ಗಾಝಾದಲ್ಲಿ ಮತ್ತೆ 6 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಹಸಿವು, ಅಪೌಷ್ಠಿಕತೆಯಿಂದ ಸಾವಿಗೀಡಾದವರ ಸಂಖ್ಯೆ 173ಕ್ಕೆ ಏರಿಕೆಯಾಗಿದೆ.
ಆಹಾರ ವಸ್ತುಗಳು ಸೇರಿದಂತೆ ಅಗತ್ಯ ಸಾಮಾಗ್ರಿಗಳು ಗಾಝಾ ತಲುಪದಂತೆ ಮಾರ್ಚ್ 2ರಿಂದ ಇಸ್ರೇಲ್ ದಿಗ್ಬಂಧನ ವಿಧಿಸಿದೆ. ಹಾಗಾಗಿ, ಯಾವುದೇ ನೆರವು ಟ್ರಕ್‌ಗಳು ಯುದ್ಧ ಪೀಡಿತ ಭೂಮಿಗೆ ಹೋಗುತ್ತಿಲ್ಲ. ಇದರಿಂದ ಗಾಝಾದ ಜನರ ಪರಿಸ್ಥಿತಿ ಇನ್ನಷ್ಟು ಶೋಚಣೀಯವಾಗಿದೆ.
ಈ 21ನೇ ಶತಮಾನದಲ್ಲಿ, ಮನುಷ್ಯರು ಚಂದ್ರನ ಮೇಲೆ ಹೋಗಿ ಬಂದಿರುವ ಕಾಲದಲ್ಲಿ, ನಮ್ಮ ಜೊತೆಯೇ ಈ ಭೂಮಿ ಮೇಲೆ ಬದುಕುತ್ತಿರುವ ಒಂದು ಪ್ರದೇಶದ ಜನರು ಆಹಾರ ಸಿಗದೆ ಸಾಯುತ್ತಿರುವುದು ಅಥವಾ ಆಹಾರ ಸಿಗದಂತೆ ಮಾಡಿ ಸಾಯಿಸುತ್ತಿರುವುದು ಸತ್ತು ಹೋಗಿರುವ ಮಾನವೀಯತೆಗೆ ಒಂದು ನಿದರ್ಶನವಾಗಿದೆ.
ಆಹಾರ ಸಿಗದೆ ಸಾಯುತ್ತಿರುವವರ ಕಥೆ ಒಂದೆಡೆಯಾದರೆ, ಸಿಗುತ್ತಿರುವ ಅಲ್ಪ ಸ್ವಲ್ಪ ಆಹಾರವನ್ನು ಪಡೆಯಲು ಹೋದವರು ವಾಪಸ್ ಬರುತ್ತಾರೆ ಎಂಬ ಧೈರ್ಯ ಗಾಝಾದ ಜನತೆಗೆ ಇಲ್ಲ. ಏಕೆಂದರೆ, ಆಹಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತವನ್ನು ಗುರಿಯಾಗಿಸಿ ಇಸ್ರೇಲ್ ಗುಂಡಿಕ್ಕುತ್ತಿದೆ. ಹಾಗಾಗಿ, ಆಹಾರ ಬದಲು ಅನೇಕರ ಹೆಣಗಳು ವಾಪಸ್ ತಾತ್ಕಾಲಿಕ ಟೆಂಟ್‌ಗಳಾದ ಮನೆಗಳಿಗೆ ಬಂದಿವೆ.
ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ಜಿಹೆಚ್‌ಎಫ್ ಗುಂಪು ಕಳೆದ ಮೇ ತಿಂಗಳಿನಿಂದ ಗಾಝಾದಲ್ಲಿ ಆಹಾರ ವಿತರಣೆ ನಡೆಸುತ್ತಿದೆ. ಇವರನ್ನು ಬಿಟ್ಟು ಬೇರೆಯವರಿಗೆ ಅವಕಾಶ ಇಲ್ಲ ಎಂಬ ವರದಿಗಳಿವೆ. ಈ ಜಿಹೆಚ್‌ಎಫ್‌ನ ನಾಲ್ಕು ಆಹಾರ ವಿತರಣಾ ಕೇಂದ್ರಗಳಲ್ಲಿ ಆಹಾರ ಪಡೆಯಲು ನಿಂತ 1,400 ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಪಡೆ ಗುಂಡಿಕ್ಕಿ ಕೊಂದಿದೆ. ಹಾಗಾಗಿ, ಆಹಾರ ವಿತರಣೆಯ ನೆಪದಲ್ಲಿ ಜನರನ್ನು ಕೊಲ್ಲಲೆಂದೇ ಅಮೆರಿಕ-ಇಸ್ರೇಲ್ ಜಿಹೆಚ್‌ಎಫ್ ಆಹಾರ ವಿತರಣಾ ಕೇಂದ್ರಗಳನ್ನು ತೆರೆದಂತೆ ತೋರುತ್ತಿದೆ.
ಮಾನವೀಯ ನೆರವು ವಿತರಣೆಯ ಮೇಲಿನ ಇಸ್ರೇಲ್ ನಿರ್ಬಂಧಗಳು ಇತ್ತೀಚಿನ ದಿನಗಳಲ್ಲಿ ಭಾಗಶಃ ತೆಗೆದುಹಾಕಲಾಗಿದ್ದರೂ, ಪ್ಯಾಲೆಸ್ತೀನಿಯರು ಹಸಿವಿನಿಂದ ಬಳಲುತ್ತಿದ್ದಾರೆ. ಅವರ ಕುಟುಂಬಗಳನ್ನು ಪೋಷಿಸಲು ಸಾಕಷ್ಟು ಆಹಾರವನ್ನು ಹುಡುಕಲು ಹೆಣಗಾಡುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಮತ್ತು ಇತರ ಮಾನವೀಯ ಸಂಸ್ಥೆಗಳ ಅಧಿಕಾರಿಗಳು ಹೇಳುತ್ತಾರೆ.
ಆಹಾರ ಸಿಗದಂತೆ ಮಾಡಿರುವ ಇಸ್ರೇಲ್‌ನ ಅಮಾನವೀಯ ನಡೆಗೆ ವಿಶ್ವದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಸ್ವತಃ ಇಸ್ರೇಲ್ ವಿಮಾನದ ಮೂಲಕ ಗಾಝಾದ ಜನತೆಗೆ ಆಹಾರ ವಿತರಣೆ ಮಾಡಿದೆ ಎಂದು ವರದಿಯಾಗಿದೆ. ಆದರೆ, ಮಾನವೀಯ ಗುಂಪುಗಳು ವಿಮಾನದಿಂದ ಅಗತ್ಯ ವಸ್ತುಗಳನ್ನು ಎಸೆಯುವುದನ್ನು ವಿರೋಧಿಸಿದೆ. ಎಲ್ಲಾ ಗಡಿಗಳನ್ನು ತೆರೆದು ಗಾಝಾಗೆ ಅಗತ್ಯ ಸಾಮಾಗ್ರಿಗಳು ತಲುಪುವಂತೆ ಮಾಡಬೇಕು ಎಂದು ಆಗ್ರಹಿಸಿವೆ.
ಮಾನವ ಹಕ್ಕುಗಳ ಗುಂಪುಗಳು ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳು ಇಸ್ರೇಲ್ ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ 24 ಗಂಟೆಯಲ್ಲಿ ಗಾಝಾದಾದ್ಯಂತ ಇಸ್ರೇಲಿ ಪಡೆಗಳು ಕನಿಷ್ಠ 22 ಜನರನ್ನು ಹತ್ಯೆಗೈದಿವೆ. ಇದರಲ್ಲಿ 16 ಮಂದಿ ನೆರವು ಪಡೆಯಲು ನಿಂತವರು ಎಂದು ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.
ಅಕ್ಟೋಬರ್ 7, 2023ರಿಂದ ಇಸ್ರೇಲ್ ಗಾಝಾ ಮೇಲೆ ನಡೆಸಿದ ದಾಳಿಯಿಂದ ಇದುವರೆಗೆ ಕನಿಷ್ಠ 60,430 ಜನರು ಸಾವನ್ನಪ್ಪಿದ್ದಾರೆ ಮತ್ತು 148,722 ಜನರು ಗಾಯಗೊಂಡಿದ್ದಾರೆ. ಇದುವರೆಗೆ 93 ಮಕ್ಕಳು ಸೇರಿದಂತೆ 175 ಜನರು ಹಸಿವು, ಅಪೌಷ್ಠಿಕತೆಯಿಂದ ಸಾವಿಗೀಡಾಗಿದ್ದಾರೆ.
ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದೆ ಎಂದು ತನಗೆ ತಿಳಿದುಬಂದಿದೆ: ಟ್ರಂಪ್


