ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧದ ಹಾವಿನ ವಿಷ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಮತ್ತು ಕ್ರಿಮಿನಲ್ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಗುರುವಾರ (ಮಾ.19) ರದ್ದುಗೊಳಿಸಿದೆ.
ವನ್ಯಜೀವಿ (ರಕ್ಷಣೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲು ಅಧಿಕೃತ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಎಂ ಸುಂದ್ರೇಶ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠ ಹೇಳಿದೆ.
ಹಾಗೆಯೇ ಯಾದವ್ ವಿರುದ್ಧದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಅಪರಾಧಗಳು ಈ ಹಿಂದೆ ಗುರುಗ್ರಾಮದಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ಆಧರಿಸಿವೆ. ಆ ಪ್ರಕರಣದ ಅಂತಿಮ ವರದಿ ಈಗಾಗಲೇ ಸಲ್ಲಿಕೆಯಾಗಿದೆ ಎಂದು ಹೇಳಿದೆ.
ಎಲ್ವಿಶ್ ಯಾದವ್ ಅವರಿಂದ ನೇರವಾಗಿ ಯಾವುದೇ ಹಾವಿನ ವಿಷ ಅಥವಾ ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಸರಿಯಾದ ಪ್ರಕ್ರಿಯೆಯ ಮೂಲಕ ಸೆಕ್ಷನ್ 55 ರ ಅಡಿಯಲ್ಲಿ ದೂರು ದಾಖಲಿಸಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ನ್ಯಾಯಾಲಯವು ಸ್ವಾತಂತ್ರ್ಯ ನೀಡಿದೆ.
ಇನ್ನು ವಶಪಡಿಸಿಕೊಂಡ ದ್ರವ ಪದಾರ್ಥ, ಅಂದರೆ ಹಾವಿನ ವಿಷ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ (ಎನ್‌ಡಿಪಿಎಸ್) ಅಡಿಯಲ್ಲಿ ಬರುವ ನಿಷೇಧಿತ ಮಾದಕ ವಸ್ತುವಲ್ಲ. ಆದ್ದರಿಂದ ಈ ಕಾಯ್ದೆ ಅನ್ವಯವಾಗಲ್ಲ ಎಂದೂ ಕೋರ್ಟ್ ಹೇಳಿದೆ.
2023ರ ನವೆಂಬರ್ 22ರಂದು ಯಾದವ್ ವಿರುದ್ದ ಪ್ರಕರಣ ದಾಖಲಾಗಿತ್ತು. 2024ರ ಮಾರ್ಚ್ 17ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಬಳಸಿದ ಆರೋಪದ ಮೇಲೆ ಯಾದವ್ ಬಂಧನ ಮಾಡಲಾಗಿತ್ತು.
ಅಲಹಾಬಾದ್ ಹೈಕೋರ್ಟ್ ಯಾದವ್ ವಿರುದ್ಧದ ಆರೋಪವನ್ನು ರದ್ದುಗೊಳಿಸಲು ನಿರಾಕರಿಸಿ ಇದು ಗಂಭೀರ ಅಪರಾಧ ಎಂದು ಪರಿಗಣಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯಾದವ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವರ್ಷ ಆಗಸ್ಟ್ 6ರಂದು ಸುಪ್ರೀಂ ಯಾದವ್ ವಿರುದ್ಧದ ವಿಚಾರಣೆಗೆ ತಡೆ ನೀಡಿತ್ತು. ಇದೀಗ ಕಾನೂನು ಚೌಕಟ್ಟಿನಲ್ಲಿ ಈ ಪ್ರಕರಣ ಬರದು ಎಂದು ಎಫ್‌ಐಆರ್ ರದ್ದುಗೊಳಿಸಿದೆ.
ಪೊಲೀಸರು ಈ ಪ್ರಕರಣದಲ್ಲಿ ಸುಮಾರು 1200 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು.


