ಕೇಂದ್ರ ಸರ್ಕಾರ ಎಲ್ಲಾ ಸ್ಮಾರ್ಟ್ ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯಗೊಳಿಸಿರುವುದರಿಂದ ಜನರು ಗೌಪ್ಯತೆ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಈ ಕುರಿತು ಬುಧವಾರ (ಡಿ.3) ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ದೂರ ಸಂಪರ್ಕ ಸಚಿವ ಜೋತಿರಾಧಿತ್ಯ ಸಿಂಧಿಯಾ, “ಸಂಚಾರ್ ಸಾಥಿ’ ಆ್ಯಪ್ ಮೂಲಕ ಗೂಡಾಚರ್ಯೆ ನಡೆಯಲು ಸಾಧ್ಯವಿಲ್ಲ. ಜನರ ಪ್ರತಿಕ್ರಿಯೆಗಳನ್ನು ಅನುಸರಿಸಿ ಮೊಬೈಲ್‌ಗಳಲ್ಲಿ ಆ್ಯಪ್ ಇನ್‌ಸ್ಟಾಲ್‌ಗೆ ಸಂಬಂಧಿಸಿದ ಆದೇಶದಲ್ಲಿ ಬದಲಾವಣೆಗಳನ್ನು ಮಾಡಲು ಸಚಿವಾಲಯ ಸಿದ್ಧವಾಗಿದೆ” ಎಂದು ಹೇಳಿದ್ದಾರೆ.
ಸಂಚಾರ್ ಸಾಥಿ ಆ್ಯಪ್‌ನಿಂದ ಬೇಹುಗಾರಿಕೆ ಕುರಿತು ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿಂಧಿಯಾ, “ಸಂಚಾರ್ ಸಾಥಿ ಆ್ಯಪ್‌ನಿಂದ ಯಾವುದೇ ಗೂಢಚಾರಿಕೆ ಸಾಧ್ಯವಿಲ್ಲ, ಯಾವುದೇ ಗೂಢಚಾರಿಕೆ ಸಂಭವಿಸುವುದಿಲ್ಲ” ಎಂದು ತಿಳಿಸಿದ್ದಾರೆ.
ಎಲ್ಲಾ ಸ್ಮಾರ್ಟ್ ಫೋನ್ ತಯಾರಕರು ಹೊಸ ಮೊಬೈಲ್ ಫೋನ್‌ಗಳಲ್ಲಿ ಅವುಗಳ ಮಾರಾಟಕ್ಕೂ ಮುನ್ನ ಸಂಚಾರ್ ಸಾಥಿ ಆ್ಯಪ್ ಪ್ರಿ ಇನ್‌ಸ್ಟಾಲ್ ಮಾಡಬೇಕು. ಇಗಾಗಲೇ ಮಾರಾಟವಾಗಿ ಬಳಕೆಯಲ್ಲಿರುವ ಮೊಬೈಲ್ ಫೋನ್‌ಗಳಲ್ಲಿ ಸಾಫ್ಟ್‌ವೇರ್ ಅಪ್ಡೇಟ್ ಮೂಲಕ ಆ್ಯಪ್ ಇನ್‌ಸ್ಟಾಲ್ ಮಾಡಿಸಬೇಕು ಎಂದು ನವೆಂಬರ್ 28ರಂದು ನೀಡಿದ ನಿರ್ದೇಶದಲ್ಲಿ ಕೇಂದ್ರ ದೂರ ಸಂಪರ್ಕ ಸಚಿವಾಲಯ ಹೇಳಿದೆ.
ಈ ನಿರ್ದೇಶನದ ಬಗ್ಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮತ್ತು ಇತರ ಸಾರ್ವಜನಿಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಕೇಂದ್ರ ಸರ್ಕಾರ ಜನರ ಮೇಲೆ ಕಣ್ಗಾವಲು ಇಡಲು ಮಾಡಿರುವ ಹೊಸ ತಂತ್ರ ಎಂದು ಆರೋಪಿಸಿದ್ದಾರೆ.
ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಸಿಂಧಿಯಾ, “ಸಂಚಾರ್ ಸಾಥಿ ಆ್ಯಪ್ ಡಿಲಿಟ್ ಮಾಡಲು ಸಾಧ್ಯವಾಗದಂತೆ ಎಂಬೆಡ್ ಮಾಡಲಾಗುತ್ತಿದೆ ಎನ್ನುವುದು ಸುಳ್ಳು. ಆ್ಯಪ್ ಪ್ರಿ ಇನ್‌ಸ್ಟಾಲ್‌ಗೆ ನಿರ್ದೇಶಿಸಿರುವುದು ನಿಜ. ಆದರೆ, ಅದು ಬೇಡವಾದಾಗ ಬಳಕೆದಾರರು ಅನ್ ಇನ್‌ಸ್ಟಾಲ್ ಮಾಡಬಹುದು” ಎಂದಿದ್ದಾರೆ.
ಜನರ ಮೊಬೈಲ್ ಫೋನ್‌ಗಳಲ್ಲಿ ಆ್ಯಪ್ ಇನ್‌ಸ್ಟಾಲ್ ಮಾಡುವುದನ್ನು ಕಡ್ಡಾಯಗೊಳಿಸುವ ಮೂಲಕ ಅವರ ಮೆಸೇಜ್‌ಗಳು ಸೇರಿದಂತೆ ಚಲನವಲನಗಳ ಮೇಲೆ ಕಣ್ಣಿಡಲು ಸರ್ಕಾರ ಪ್ರಯತ್ನಿಸುತ್ತಿದೆ. ಇದು ಸಂವಿಧಾನ ಖಾತ್ರಿಪಡಿಸಿದ ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಆ್ಯಪ್ ಜನರನ್ನು ಸೈಬರ್ ವಂಚನೆಯಂತಹ ಕೃತ್ಯಗಳಿಂದ ರಕ್ಷಿಸಲು ಇನ್‌ಸ್ಟಾಲ್ ಮಾಡಿಸಲಾಗುತ್ತಿದೆ. ಈ ವಿಚಾರದಲ್ಲಿ ಜನರಿಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದು ಸಿಂಧಿಯಾ ಸಮರ್ಥಿಸಿಕೊಂಡಿದ್ದಾರೆ. ಮೊಬೈಲ್ ಬಳಕೆದಾರರು ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿಲ್ಲ ಎಂದರೆ, ಅದು ಕಾರ್ಯನಿರ್ವಹಿಸುವುದಿಲ್ಲ. ಅಲ್ಲದೆ, ಬೇಡವಾದಾಗ ಆ್ಯಪ್ ಡಿಲಿಟ್ ಮಾಡಬಹುದು ಎಂದು ಸಿಂಧಿಯಾ ಲೋಕಸಭೆಗೆ ತಿಳಿಸಿದ್ದಾರೆ.
ಸುಮಾರು 1.5 ಕೋಟಿ ಅಪ್ಲಿಕೇಶನ್ ಈಗಾಗಲೇ ಡೌನ್‌ಲೋಡ್ ಆಗಿವೆ. ಪೋರ್ಟಲ್ ಮತ್ತು ಅಪ್ಲಿಕೇಶನ್ ಮೂಲಕ 26 ಲಕ್ಷ ಕದ್ದ ಹ್ಯಾಂಡ್‌ಸೆಟ್‌ಗಳನ್ನು ಪತ್ತೆಹಚ್ಚಲಾಗಿದೆ, 7 ಲಕ್ಷ ಕದ್ದ ಹ್ಯಾಂಡ್‌ಸೆಟ್‌ಗಳನ್ನು ಗ್ರಾಹಕರಿಗೆ ಹಿಂತಿರುಗಿಸಲಾಗಿದೆ, 41 ಲಕ್ಷ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಮತ್ತು 6 ಲಕ್ಷ ವಂಚನೆಗಳನ್ನು ತಡೆಯಲಾಗಿದೆ ಎಂದು ಸಿಂಧಿಯಾ ಮಾಹಿತಿ ನೀಡಿದ್ದಾರೆ.


