ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮೇಲಿನ ನಿಷೇಧವನ್ನು ಕೇಂದ್ರ ಕ್ರೀಡಾ ಸಚಿವಾಲಯ ತೆಗೆದು ಹಾಕಿದೆ. ಕುಸ್ತಿಗೆ ಸಂಬಂಧಿಸಿದ ರಾಷ್ಟ್ರೀಯ ಕ್ರೀಡಾ ಒಕ್ಕೂಟ (ಎನ್‌ಎಸ್‌ಎಫ್) ಮಾನ್ಯತೆಯನ್ನು ಪುನಃ ಸ್ಥಾಪಿಸಿದೆ.
2023ರ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನಂದಿನಿ ನಗರದಲ್ಲಿ ಅಂಡರ್ -15 ಮತ್ತು ಅಂಡರ್-20 ರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಹೊಸದಾಗಿ ಆಯ್ಕೆಯಾದ ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್ ಘೋಷಿಸಿದ ನಂತರ ಕ್ರೀಡಾ ಸಚಿವಾಲಯ ಸಂಸ್ಥೆಯನ್ನು ಅಮಾನತುಗೊಳಿಸಿತ್ತು.
2023ರಲ್ಲಿ ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ವಿರುದ್ದ, ದೇಶದ ಖ್ಯಾತ ಕುಸ್ತಿಪಟುಗಳಾದ ಸಾಕ್ಷಿ ಮಲ್ಲಿಕ್, ವಿನೇಶ್ ಪೋಗಟ್ ಮತ್ತು ಭಜರಂಗ್ ಪುನಿಯಾ ಸೇರಿದಂತೆ ಹಲವರು, ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳದ ಆರೋಪ ಮಾಡಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟಿಸಿದ್ದರು.
ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ರಾಜೀನಾಮೆ ನೀಡಬೇಕು, ಅವರ ವಿರುದ್ದ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಬಂಧಿಸಬೇಕು ಮತ್ತು ಡಬ್ಲ್ಯುಎಫ್‌ಐಗೆ ಚುನಾವಣೆ ನಡೆಸಿ ಹೊಸ ಸಮಿತಿ ಆಯ್ಕೆ ಮಾಡಬೇಕು ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಆಗ್ರಹಿಸಿದ್ದರು.
ಕುಸ್ತಿಪಟುಗಳ ಪ್ರತಿಭಟನೆ ಹಿನ್ನೆಲೆ, ನಿಗದಿತ ಸಮಯದೊಳಗೆ ಚುನಾವಣೆ ನಡೆಸಲು ವಿಫಲವಾದ ಕಾರಣ, ಡಬ್ಯುಎಫ್‌ಐಗೆ 2023ರ ಆಗಸ್ಟ್‌ನಲ್ಲಿ, ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ನಿಷೇಧ ಹೇರಿತ್ತು.
2023ರಲ್ಲಿ ಡಿಸೆಂಬರ್‌ನಲ್ಲಿ ಡಬ್ಯುಎಫ್‌ಐಗೆ ನಡೆದ ಚುನಾವಣೆಯಲ್ಲಿ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಡಬ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದನ್ನು ವಿರೋಧಿಸಿ ಕುಸ್ತಿಪಟುಗಳು ಪ್ರತಿಭಟಿಸಿದ್ದರು.
ಚುನಾವಣೆಯ ಕೆಲ ದಿನಗಳ ನಂತರ, ಕೇಂದ್ರ ಕ್ರೀಡಾ ಸಚಿವಾಲಯ ಕುಸ್ತಿ ಫೆಡರೇಶನ್ ಅನ್ನು ಅಮಾನತುಗೊಳಿಸಿತ್ತು. ಸಂಸ್ಥೆಯ ದೈನಂದಿನ ವ್ಯವಹಾರಗಳನ್ನು ನಿರ್ವಹಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ (ಐಒಎ) ತಾತ್ಕಾಲಿಕ ಸಮಿತಿಯನ್ನು ರಚಿಸಿತ್ತು.
ಡಬ್ಲ್ಯುಎಫ್‌ಐ ಮೇಲಿನ ನಿಷೇಧವನ್ನು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ತೆಗೆದುಹಾಕಿದ್ದು, ಭವಿಷ್ಯದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಹೀಗಾಗಿ, ತಾತ್ಕಾಲಿಕ ಸಮಿತಿ ಅಗತ್ಯವಿಲ್ಲ ಎಂದು ಐಒಎ ಹೇಳಿದ ನಂತರ ಸಮಿತಿಯನ್ನು ವಿಸರ್ಜಿಸಲಾಗಿತ್ತು.
ಇದೀಗ ಕ್ರೀಡಾ ಸಚಿವಾಲಯ ಡಬ್ಲ್ಯುಎಫ್‌ಐಗೆ ರಾಷ್ಟ್ರೀಯ ಕ್ರೀಡಾ ಒಕ್ಕೂಟದ (ಎನ್‌ಎಸ್‌ಎಫ್) ಮಾನ್ಯತೆಯನ್ನು ಮರುಸ್ಥಾಪಿಸಿದೆ. ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ದದ ಲೈಂಗಿಕ ಕಿರುಕುಳ ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿದೆ.
“ಪ್ರಸ್ತುತ, ನಮ್ಮ ಆಟಗಾರರು ಮಾರ್ಚ್ 25 ರಿಂದ 30 ರವರೆಗೆ ಜೋರ್ಡಾನ್‌ನಲ್ಲಿ ನಡೆಯಲಿರುವ ಸೀನಿಯರ್ಸ್ ಏಷ್ಯನ್ ಚಾಂಪಿಯನ್‌ಶಿಪ್‌ಗಾಗಿ ತರಬೇತಿ ಪಡೆಯುತ್ತಿದ್ದಾರೆ. ದೇಶದ ವಿವಿಧ ಕ್ರೀಡಾ ಪ್ರಾಧಿಕಾರದ ಕೇಂದ್ರಗಳಲ್ಲಿ ಅಭ್ಯಾಸ ನಡೆಯುತ್ತಿದೆ. ಪ್ರಸ್ತುತ ನಂದಿನಿ ನಗರದಲ್ಲಿ (ಗೊಂಡಾದಲ್ಲಿ) ಯಾವುದೇ ಸ್ಪರ್ಧೆಗಳು ನಡೆಯುತ್ತಿಲ್ಲ. ಆದರೆ, ಸಚಿವಾಲಯದಿಂದ ಅನುಮೋದನೆ ಪಡೆದ ನಂತರ ಭವಿಷ್ಯದಲ್ಲಿ ಗೊಂಡಾದಲ್ಲಿ ತರಬೇತಿ ತರಗತಿಗಳು ಮತ್ತು ಸ್ಪರ್ಧೆಗಳನ್ನು ನಡೆಸಬಹುದು” ಎಂದು ಡಬ್ಲ್ಯುಎಫ್‌ಐ ಹಾಲಿ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
“ನನ್ನ ವಿರುದ್ಧ ಪಿತೂರಿ ನಡೆಸಿದವರು ನೆಲ ಕಚ್ಚಿದ್ದಾರೆ” ಬ್ರಿಜ್ ಭೂಷಣ್ ಸಿಂಗ್
ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ ) ಅಮಾನತು ರದ್ದುಗೊಳಿಸಿದ ಕ್ರೀಡಾ ಸಚಿವಾಲಯದ ನಿರ್ಧಾರವನ್ನು ಶ್ಲಾಘಿಸಿರುವ ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್, “ನ್ಯಾಯ ದೊರಕಿದೆ ಮತ್ತು ನನ್ನ ವಿರುದ್ಧ ಪಿತೂರಿ ನಡೆಸಿದ ಜನರು ನೆಲ ಕಚ್ಚಿದ್ದಾರೆ” ಎಂದು ಹೇಳಿದ್ದಾರೆ.
“ಕುಸ್ತಿಪಟುಗಳು ಎಂದು ಕರೆಯಲ್ಪಡುವ ಕೆಲವರು ಡಬ್ಲ್ಯುಎಫ್‌ಐ ಅಧ್ಯಕ್ಷ ಸ್ಥಾನದಿಂದ ನನ್ನನ್ನು ತೆಗೆದುಹಾಕಿಸಿದರು. ಇದು ನನ್ನ ಮತ್ತು ಡಬ್ಲ್ಯುಎಫ್‌ಐನಲ್ಲಿ ಉತ್ತರ ಪ್ರದೇಶದ ಪ್ರಾಬಲ್ಯವನ್ನು ಕುಗ್ಗಿಸಲು ಮಾಡಿದ ಪಿತೂರಿಯಾಗಿತ್ತು. ಅವರ ಯೋಜನೆಗಳು ವಿಫಲವಾಗಿವೆ. ಕ್ರೀಡಾ ಸಚಿವಾಲಯ ಅಮಾನತು ತೆಗೆದು ಹಾಕಿರುವುದು ಹೋಳಿಗೆ ಮುನ್ನ ಕೊಟ್ಟ ಉಡುಗೊರೆಯಾಗಿದೆ” ಎಂದಿದ್ದಾರೆ.


