Homeಮುಖಪುಟಭಯೋತ್ಪಾದನೆಯೆಂಬ ಜಾಗತಿಕ ಸಂಕಟ: ಶ್ರೀಲಂಕಾ ದಾಳಿಯ ಹಿನ್ನೆಲೆಯಲ್ಲಿ

ಭಯೋತ್ಪಾದನೆಯೆಂಬ ಜಾಗತಿಕ ಸಂಕಟ: ಶ್ರೀಲಂಕಾ ದಾಳಿಯ ಹಿನ್ನೆಲೆಯಲ್ಲಿ

- Advertisement -

| ರೇಣುಕಾ ನಿಡಗುಂದಿ |

ಈಸ್ಟರ್ ಭಾನುವಾರದಂದು ದ್ವೀಪರಾಷ್ಟ್ರದಲ್ಲಿ ನಡೆದ ಸರಣಿ ಬಾಂಬ್‍ಸ್ಫೋಟ ಮತ್ತೊಮ್ಮೆ ವಿಶ್ವವನ್ನು ಬೆಚ್ಚಿಬೀಳಿಸಿದೆ. ಭಯೋತ್ಪಾದನೆಯೆಂಬುದು ಇಂದು ಜಾಗತಿಕ ಪಿಡುಗಾಗಿದೆ. ಎಲ್ಲೆಂದರಲ್ಲಿ ಬಾಂಬ್ ಸ್ಫೋಟಿಸಿ ಸಾಮಾಜಿಕ ವ್ಯವಸ್ಥೆಯನ್ನು ಕದಡಿ ಮನುಷ್ಯ ಸಂಕುಲಕ್ಕೆ ಮಾರಕವಾಗುತ್ತಿರುವ ಮೂಲಭೂತವಾದಿಗಳ ಹೇಯಕೃತ್ಯವನ್ನು ಕಂಡಾಗ ಮುಂದಿನ ದಿನಗಳಲ್ಲಿ ಜಗತ್ತು ಇನ್ನೆಷ್ಟು ಕ್ರೂರವಾಗಬಹುದು ಎನ್ನುವ ಆತಂಕ ಕಾಡತೊಡಗುತ್ತಿದೆ.

1990ರಿಂದ 2009ರವರೆಗಿನ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಇಲಂ (ಎಲ್‍ಟಿಟಿಇ) ಪ್ರಬಲವಾಗಿದ್ದ ಕಾಲದಲ್ಲಿ ಅದು ಅತ್ಯಾಧುನಿಕ ರೀತಿಯಲ್ಲಿ ಆತ್ಮಹತ್ಯಾ ದಾಳಿಗಳನ್ನು ನಡೆಸಿತ್ತು. ಅನೇಕ ಸ್ಫೋಟಗಳಲ್ಲಿ ಅಸಂಖ್ಯ ಅಮಾಯಕರು ಬಲಿಯಾಗಿದ್ದರು. ಈ ಅವಧಿಯಲ್ಲಿ ಇನ್ನಿತರ ಸಂಘಟನೆಗಳಿಗಿಂತ ಹೆಚ್ಚಾಗಿ ಎಲ್‍ಟಿಟಿಇ ಮಹಿಳಾ ಆತ್ಮಹತ್ಯಾ ಬಾಂಬರುಗಳನ್ನು ಬಳಸಿತ್ತು. 1991ರ ಮೇ ತಿಂಗಳಲ್ಲಿ ಮಾಜಿ ಪ್ರಧಾನಿ ಸನ್ಮಾನ್ಯ ರಾಜೀವ್ ಗಾಂಧಿ ಅವರಿಗೆ ಹಾರಹಾಕುವ ನೆಪದಲ್ಲಿ ಹತ್ಯೆಗೈದಿದ್ದು ಮೊದಲ ಎಲ್‍ಟಿಟಿಇ ಆತ್ಮಹತ್ಯಾ ಬಾಂಬರ್ ಧನು ಎಂಬ ಮಹಿಳೆ. ಈಗ ನಡೆದ ಆತ್ಮಹತ್ಯಾದಾಳಿಯಲ್ಲಿ ಮಹಿಳೆಯೂ ಶಾಮೀಲಾಗಿದ್ದು ಮಕ್ಕಳೊಂದಿಗೆ ಆಕೆ ಆತ್ಮಹತ್ಯಾ ಬಾಂಬ್ ಸ್ಪೋಟಿಸಿದ್ದು ಗಮನಿಸಬೇಕಾದ ಅಂಶ.

ದಶಕಗಳಿಂದಲೂ ಬುದ್ಧನ ಅನುಯಾಯಿಗಳು ಬಹುಸಂಖ್ಯಾತರಾಗಿರುವ ದ್ವೀಪದಲ್ಲಿ ಶಾಂತಿ ಸ್ಥಾಪನೆಯಾಗಿ ಬದುಕು ಸುಸ್ಥಿರವಾಗಿತ್ತು. ಈಗ ಅಲ್ಪಸಂಖ್ಯಾತ ಕ್ಯಾಥೊಲಿಕ್ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯನ್ನು ವಿಶ್ವವೇ ಖಂಡಿಸಿದೆ. ವಿಶ್ವದ ಅನೇಕ ಬಲಿಷ್ಠ ದೇಶಗಳಲ್ಲಿಯೂ ಈ ಆಂತರಿಕ ಭಯೋತ್ಪಾದನೆಯನ್ನು ಮೂಲಭೂತವಾದಿ ಶಕ್ತಿಗಳು ಪ್ರಚೋದಿಸುತ್ತಿವೆ. ಇತ್ತೀಚೆಗೆ ಅಓಓ ಪ್ರಕಟಿಸಿದ ಒಂದು ವರದಿಯ ಪ್ರಕಾರ ವಿಶ್ವದ ಭಯೊತ್ಪಾದಕ ಗುಂಪಿಗೆ ಸೇರಿರುವ ಯುವಕರಲ್ಲಿ ಬಹುಪಾಲು ಶ್ರೀಮಂತ ವರ್ಗದವರು. ಅಲ್ ಖೈದಾದ ನಾಯಕನಾಗಿದ್ದ ಅಯಮನ್ ಅಲ್ ಜಾವಾಹಿರಿ ಈಜಿಪ್ಟಿನ ಕುಟುಂಬದ ಒಬ್ಬ ಶಸ್ತ್ರಚಿಕಿತ್ಸಕನಾಗಿದ್ದ. ಅಮೇರಿಕದ ನಿದ್ದೆಗೆಡಿಸಿದ್ದ ಓಸಮಾ ಬಿನ್ ಲಾಡೆನ್ ಕೂಡ ಶ್ರಿಮಂತ ಕುಟುಂಬದವನಾಗಿದ್ದ ಎನ್ನುತ್ತದೆ ಅಓಓ ವರದಿ. ಆತ್ಮಹತ್ಯಾದಾಳಿ ನಡೆಸಿದವರು ಉಚ್ಚ ಮಧ್ಯಮವರ್ಗದ ಸುಶಿಕ್ಷಿತ ಯುವಕರು ಎಂದು ಶ್ರೀಲಂಕಾದ ರಕ್ಷಣಾ ಮಂತ್ರಿ ರುವಾನ್ ವಿಜಯವರ್ಧನೆ ಸಮರ್ಥಿಸಿದ್ದಾರೆ.

ಶ್ರೀಲಂಕಾದ ಒಟ್ಟು ಜನಸಂಖ್ಯೆಯಲ್ಲಿ ಶೇ.7 ಕ್ರೈಸ್ತರಿದ್ದರೆ, ಬೌದ್ಧರು, ಸಿಂಹಳೀಯರು ಬಹುಸಂಖ್ಯಾತರು. ಈ ಘಟನೆಯನ್ನು ನೋಡಿದರೆ ಇದೊಂದು ಪೂರ್ವನಿಯೋಜಿತ ದಾಳಿಯೆನ್ನುವುದರಲ್ಲಿ ಸಂಶಯವಿಲ್ಲ. ಇತ್ತೀಚಿನ ವರದಿಗಳಲ್ಲಿ ದ್ವೀಪರಾಷ್ಟ್ರದ ದಾಳಿ ನ್ಯೂಜಿಲೆಂಡಿನ ಮಸೀದಿಗಳ ಮೇಲಾದ ಉಗ್ರದಾಳಿಯ ಪ್ರತೀಕಾರಕ್ಕೆ ನಡೆಸಿದ ದಾಳಿಯೆಂದು ಶಂಕಿಸಲಾಗಿದೆ. ಎಲ್ಲಾ ಅನುಮಾನಗಳ ಚಕ್ರವ್ಯೂಹವನ್ನು ಬೇಧಿಸುವಂತೆ ಈ ವಿನಾಶಕಾರಿ ಆತ್ಮಹತ್ಯಾದಾಳಿಯ ಹೊಣೆಯನ್ನು ಸ್ಥಳೀಯ ನ್ಯಾಷನಲ್ ಥೊವಿತ್ ಜಮಾತ್ ವಹಿಸಿದೆ. ಎನ್‍ಟಿಜೆಯ ಸಂಸ್ಥಾಪಕ ಜಹರನ್ ಹಾಶಮಿ ಎಂಬ ಕಟ್ಟರ್ ಶರಿಯಾ ಮೂಲಭೂತವಾದಿಯೂ ಆತ್ಮಾಹುತಿಯಲ್ಲಿ ಅಸುನೀಗಿದ್ದಾನೆ. ಅತ್ಯದ್ಭುತವಾಗಿ ಮಾತುಗಾರಿಕೆಯುಳ್ಳ ಹಾಶ್ಮಿ ಇಸ್ಲಾಮಿಕ್ ಸ್ಟೇಟ್ಸ್ ಸಂಪರ್ಕದಲ್ಲಿದ್ದು ತನ್ನ ಉಗ್ರ ಧಾರ್ಮಿಕ ವಿಚಾರಗಳಿಂದ ಜನಸಮೂಹವನ್ನು ಪ್ರಭಾವಿಸುತ್ತ ಬಂದಿದ್ದ. ಒಂದು ವಾರದ ಬಳಿಕ ಶ್ರೀಲಂಕಾ ಜಿಹಾದಿಗಳಿಗೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳ ಸಂಪರ್ಕವಿತ್ತು ಹಾಗೂ ಸರಣಿ ಸ್ಪೋಟದಲ್ಲಿ ಐಸಿಸ್ ಕೈವಾಡವಿತ್ತೆಂದು ಖಚಿತವಾಗಿದೆ.

ಬಾಂಬ್ ದಾಳಿ ನಡೆಯುವ ಬಗ್ಗೆ ಭಾರತ ನಮಗೆ ಮುನ್ಸೂಚನೆ ನೀಡಿತ್ತು ಆದರೂ ಲೋಪ ಸಂಭವಿಸಿದೆ ಎಂದು ಹೇಳಿದ ಶ್ರೀಲಂಕಾದ ಪ್ರಧಾನಮಂತ್ರಿ ಶ್ರೀ ರನಿಲ್ ವಿಕ್ರಮಸಿಂಘೆ ಅವರ ಮಾತು ಹಾಸ್ಯಾಸ್ಪದವಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಗೊಳಗಾಗಿದೆ. ಶ್ರೀಲಂಕಾದ ದಾಳಿಯ ಮುನ್ಸೂಚನೆ ಭಾರತಕ್ಕೆ ಮೊದಲೇ ಆಗಿದ್ದರೆ, ಫುಲ್ವಾಮಾದ ದಾಳಿಯ ಬಗ್ಗೆ ಮುನ್ಸೂಚನೆ ಯಾಕಿದ್ದಿಲ್ಲ ಎಂದು ನೆಟ್ಟಿಗರು ಸವಾಲ್ ಹಾಕಿದ್ದಾರೆ.

ಇದಿಷ್ಟು ಶ್ರೀಲಂಕಾದ ಆತ್ಮಹತ್ಯಾ ಬಾಂಬ್ ಸ್ಫೋಟದ ಸಂಗತಿಯಾದರೆ ಇದಕ್ಕೂ ಮೊದಲು ಮಾರ್ಚಿನಲ್ಲಿ ನ್ಯೂಜಿಲೆಂಡಿನ ಕ್ರಿಸ್ಟ ಚರ್ಚ ಮಸೀದಿಗಳ ಮೇಲಿನ ಬಾಂಬ್ ಸ್ಫೋಟದ ಗಾಯಗಳಿನ್ನೂ ಹಸಿಯಾಗಿರುವಾಗಲೇ ಈ ಘಟನೆ ವಿಶ್ವದ ಶಾಂತಿಯನ್ನು ಕದಡಿದೆ. ಶಾಂತಿಪ್ರಿಯರ ನಿದ್ದೆಗೆಡಿಸಿದೆ. ಆ ದೇಶದ ಮೂಲ ನಿವಾಸಿಗಳಿಗೆ ಹೊರಗಿನಿಂದ ವಲಸೆ ಬಂದು ನೆಲೆಸಿದ ಅಲ್ಪಸಂಖ್ಯಾತ ಮುಸ್ಲಿಮರೇ ಟಾರ್ಗೆಟ್ !! ಅದೂ ಕೂಡ ಪೂರ್ವಯೋಜಿತ ದಾಳಿಯಾಗಿತ್ತು.

ಫೆ. 14ರಂದು ಫುಲ್ವಾಮಾದಲ್ಲಿ ನಡೆದ ಬಾಂಬ್ ದಾಳಿಗೆ ನಮ್ಮ ದೇಶದ ನಲ್ವತ್ತು ಸೈನಿಕರು ಹುತಾತ್ಮರಾದರು. ಅದೂ ಎಪ್ಪತ್ತು ದಶಕಗಳಿಂದ ಹೊತ್ತಿ ಉರಿಯುತ್ತಿರುವ ಕೋಮುದ್ವೇಷ, ಕಾಶ್ಮೀರ ಕೇಂದ್ರಿತ ಹಳೇ ಜಗಳ. ಉಗ್ರ ದಾಳಿಯ ಹೊಣೆ ಹೊತ್ತ ಜೈಷ್ ಎ ಮೊಹಮ್ಮದ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಶ್ವದ ಅನೇಕ ರಾಷ್ಟ್ರಗಳು ಪಾಕಿಸ್ತಾನದ ಮೇಲೆ ಒತ್ತಡ ಹೇರಿದ್ದವು. ಮುಂದಿನ ಪರಿಣಾಮ ನಮ್ಮ ಕಣ್ಣ ಮುಂದೇ ಇದೆ.

ಅಷ್ಟಕ್ಕೂ ಈ ಭಯೋತ್ಪಾದನೆಯೆಂಬ ಪಿಶಾಚಿ ಭೂಮಿಯಿಂದ ತೊಲಗುತ್ತಿಲ್ಲವೇಕೆ? ಇಸ್ಲಾಮಿನ ಜಿಹಾದ್‍ಗೂ ಭಯೋತ್ಪಾದನೆಗೂ ಸಂಬಂಧವಿಲ್ಲ ಎಂದು ಮುಸ್ಲಿಂ ಪಂಡಿತರುಗಳು ಹೇಳುತ್ತಾರಾದರೂ ಮತಾಂಧತೆಯ ಅಮಲು ಎಷ್ಟಿದೆಯೆಂದರೆ ಅದು ಮನುಷ್ಯ ವಿರೋಧಿಯಾಗಿಯಾದರೂ ಅಡ್ದಿಯಿಲ್ಲ ಧರ್ಮವೇ ಶ್ರೇಷ್ಠವೆನ್ನುತ್ತದೆ. ಧರ್ಮಕ್ಕಾಗಿ ಪ್ರಾಣವನ್ನು ಬಲಿ ಕೊಡುವುದರಿಂದ ಸ್ವರ್ಗಪ್ರಾಪ್ತಿಯೆಂಬ ಅಂಧಶ್ರದ್ಧೆಯೇ ಎಲ್ಲ ಭಯೋತ್ಪಾದಕರ ಮೂಲತತ್ವ. ಮೂಲಭೂತವಾದಿಗಳು ತಮ್ಮ ಸಿದ್ಧಾಂತಗಳನ್ನು ಒಪ್ಪದವರನ್ನು , ವಿರೋಧಿಸುವವರನ್ನು ಹಿಂಸೆಯಿಂದ ಒಪ್ಪಿಸಲು ಅಥವಾ ವಿರೋಧವನ್ನು ಹತ್ತಿಕ್ಕಲು ಯಾವ ಚರ್ಚೆಗೂ ಅವಕಾಶ ನೀಡದೇ ಕೊಲೆ, ಬಲಾತ್ಕಾರ. ಬಂಧನ ಹಿಂಸೆಯನ್ನು ಭಯೋತ್ಪಾದನೆ ಎಂದು ಹೇಳಲಾಗುತ್ತದೆ. ಭಯೋತ್ಪಾದನೆಯನ್ನು ಸಾಕುತ್ತಿರುವ ತಾಲಿಬಾನ್ ಗುಂಪುಗಳು ಹತ್ತು ಸಾವಿರಷ್ಟು ಬಡಕುಟುಂಬದ ಯುವಕರನ್ನು ನೇಮಕ ಮಾಡಿಕೊಂಡು ಅವರಿಗೆ ಮಾಸಿಕ ವೇತನವನ್ನೂ ನೀಡುತ್ತಾರೆ. ಮುಗ್ಧರನ್ನು ಕೊಲ್ಲುವುದರಿಂದ ಯಾವ ಇಸ್ಲಾಮಿ ರಾಮರಾಜ್ಯದ ಸೃಷ್ಟಿಯಾಗುವುದಿಲ್ಲವೆಂದು ಇಸ್ಲಾಮಿಕ್ ಧರ್ಮೋಪದೇಶಕರು ಈ ಜಿಹಾದಿ ಭಯೋತ್ಪಾದಕರಿಗೆ ತಿಳಿವಳಿಕೆ ನೀಡಿ ಕೈಜೋಡಿಸಿದಾಗಲೇ ಬಹುಶಃ ಈ ಪಿಡುಗು ತೊಲಗಬಹುದು. . “ಶಸ್ತ್ರಾಸ್ತ್ರಗಳನ್ನು ಅವಲಂಬಿಸಿದವರು ಹೃದಯದ ಮಾತನ್ನು ಕೇಳಲು ನಿಲ್ಲಿಸಿಬಿಟ್ಟಿರುತ್ತಾರೆ, ಅವರು ತಮ್ಮ ಆಯುಧಗಳ ಗುಲಾಮರಾಗಿಬಿಟ್ಟಿರುತ್ತಾರೆ” ಎಂದಿದ್ದರು ಡಾ.ಲೋಹಿಯಾ.

ಭಾರತವನ್ನೇ ತೆಗೆದುಕೊಳ್ಳಿ. ಇಂದು ಫ್ಯಾಸಿಸ್ಟರು ರೂಪಿಸುತ್ತಿರುವ ಭಾರತ ಭಯ ಹುಟ್ಟಿಸುತ್ತಿದೆ. ಇಂದಿನ ರಾಜಕಾರಣದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸವೆಂದರೆ ಗಾಂಧಿ ಮತ್ತು ಗೋಡ್ಸೆ ನಡುವಿನ ಇತಿಹಾಸವೆಂದು ಎರಡು ಪಂಥಗಳ ಘರ್ಷಣೆಯಾಗಿ ರೂಪು ತಳೆದಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿ ಅಂದರೆ ಒಂದು ಪ್ರಖರ ತತ್ವ-ಸಿದ್ಧಾಂತದ ಪರ್ಯಾಯ ಹೆಸರಾಗಿತ್ತು. ಅವರ ತತ್ವ ಚಿಂತನೆಯೊಳಗೆ ಎಲ್ಲ ಭಾರತೀಯರೂ ಸೇರಿದ್ದರು. ಧರ್ಮ-ಚರ್ಮ-ಜಾತಿ-ಭಾಷೆಗಳ ಹಂಗಿಲ್ಲದೇ ಎಲ್ಲರನ್ನೂ ಒಪ್ಪಿಕೊಳ್ಳುವ ಬಹುತ್ವ ಭಾರತದ ವಿಚಾರಧಾರೆಯನ್ನು ಅವರು ಪ್ರತಿನಿಧಿಸಿದ್ದರು. ಇಂದು ಅನೇಕತೆಯನ್ನು ಪೂರ್ಣವಾಗಿ ತಿರಸ್ಕರಿಸುವ ಗೋಡ್ಸೆ ತತ್ವ ಸಿದ್ಧಾಂತದ ಪ್ರಬಲ ಪ್ರತಿಪಾದಕರು ಆಂತರಿಕ ಭಯೋತ್ಪಾದನೆಯನ್ನು ಸೃಷ್ಟಿಸಿದ್ದಾರೆ.

ಗಾಂಧೀಜಿಯ ಅಹಿಂಸಾ ತತ್ವಗಳಿಂದ ದೂರ ಸರಿಯುತ್ತ ಹಿಂಸೆಯ ಪ್ರತೀಕವಾದ ಗೋಡ್ಸೆಯನ್ನು ಪೂಜಿಸುವ ಗೌರವಿಸುವ ಶಕ್ತಿಗಳು ಪ್ರಬಲರಾಗುತ್ತಿರುವ ಭಾರತಕ್ಕೆ ಲೋಹಿಯಾ, ಅಂಬೇಡ್ಕರ್‍ರಂಥ ನಾಯಕತ್ವದ ಅಗತ್ಯವಿದೆ. ಕಾಶ್ಮೀರ ಕಣಿವೆಯಲ್ಲಿ ಇಸ್ಲಾಮಿಕ್ ಮೂಲಭೂತವಾದವನ್ನು ಉತ್ತೇಜಿಸುವ ಅಂಶಗಳನ್ನು ಗುರುತಿಸಿ, ಅಂಥ ಶಕ್ತಿಗಳನ್ನು ದುರ್ಬಲಗೊಳಿಸುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಕಣಿವೆಯ ಎಲ್ಲಾ ನಿವಾಸಿಗಳನ್ನು ವಿಶ್ವಾಸಘಾತುಕರೆಂದು, ದೇಶದ್ರೋಹಿಗಳೆಂದು ಪರಿಗಣಿಸದೇ ಅವರ ಮೇಲೆ ಹಲ್ಲೆಯಾಗದಂತೆ ಕಾಪಾಡಬೇಕಾದುದು ಆಳುವ ಪಕ್ಷದ ಆದ್ಯ ಕರ್ತವ್ಯವಾಗಿದೆ. ಅತಂತ್ರರಾಗಿರುವ, ಸದಾ ಉಗ್ರರ ಭೀತಿಯಲ್ಲಿ ಜೀವನ ಸಾಗಿಸುತ್ತಿರುವ, ಕರುಳಕುಡಿಗಳನ್ನು,ಬಂಧು-ಬಾಂಧವರನ್ನು ಕಳೆದುಕೊಳ್ಳುತ್ತಿರುವ ಕಾಶ್ಮೀರಿಗಳಲ್ಲಿ ನಾವೆಲ್ಲ ಅವರೊಂದಿಗಿದ್ದೇವೆ ಎಂಬ ವಿಶ್ವಾಸವನ್ನು ಮೂಡಿಸಬೇಕಿದೆ. ದೇಶದ ಐಕ್ಯತೆ, ಸೌಹಾರ್ದತೆ ಮತ್ತು ಬಹುತ್ವ ನಾಶವಾಗಬಾರದು. ಹಿಂಸೆಯನ್ನು ಪ್ರಚೋದಿಸುವ, ಕಾಶ್ಮೀರಿಗಳನ್ನು ಪರಕೀಯರಂತೆ, ಅಪರಾಧಿಗಳಂತೆ ಕಾಣುವ ಈ ಸಮೂಹಸನ್ನಿಗೆ ಮೊದಲು ಮದ್ದುಕೊಡಬೇಕಿದೆ.

ಇತ್ತೀಚಿಗಿನ ನ್ಯೂಜಿಲೆಂಡ್ ಮಸೀದಿಗಳ ಮೇಲಾದ ಭಯೋತ್ಪಾದಕ ಮಾರಣಹೋಮದೊಡನೆ ಆ ದೇಶದ ಪ್ರಧಾನಿ ಜೆಸಿಂಡಾ ಆರ್ಡರ್ನ ಎತ್ತಿಹಿಡಿದ ರಾಜಧರ್ಮ, ಮಾನವೀಯ ಮೌಲ್ಯಗಳ ನೆಲೆಯಲ್ಲಿ ಇಂದಿನ ಭಾರತದಲ್ಲಿ ಉಲ್ಬಣಿಸಿರುವ ಫ್ಯಾಸಿಸಂನ ಭೀಕರತೆಯನ್ನು ಅರ್ಥಮಾಡಿಕೊಳ್ಳಬೇಕಿದೆ. ಇಡೀ ಜಗತ್ತೇ ಬೆರಗಾಗುವಂತೆ ನ್ಯೂಜಿಲೆಂಡ್ ನೊಂದವರನ್ನು ಅಪ್ಪಿಕೊಂಡು ಸಂತೈಸಿತು.

ಜೆಸಿಂಡಾರೊಂದಿಗೆ ದೇಶದ ಎಲ್ಲ ನಾಗರಿಕರೂ ತಮ್ಮ ಜಾತಿ ಧರ್ಮ ಮರೆತು ಶಿರವಸ್ತ್ರಧರಿಸಿ, ನಮಾಜು ಪ್ರಾರ್ಥನೆ ಸಲ್ಲಿಸಿ ನೊಂದವರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಬೆಚ್ಚಗಿನ ಭಾವ ಹುಟ್ಟಿಸಿದರು ಆಕೆ ತೋರಿದ ಹೆಂಗರುಳಿನ ಕಾಳಜಿ, ಮಾನವೀಯತೆ ಮತ್ತು ಇಂಥ ಬರ್ಬರ ಕೃತ್ಯಗಳು ಭವಿಷ್ಯದಲ್ಲಿ ನಡೆಯದಂತೆ ಶಸ್ತ್ರಾಸ್ತ್ರ ನಿಯಂತ್ರಣ ಕಾನೂನನ್ನು ತಕ್ಷಣವೇ ಜಾರಿಗೊಳಿಸಿದ ದಿಟ್ಟತನ ವಿಶ್ವಕ್ಕೆ ಮಾದರಿಯಾಗಿದೆ.

ಇನ್ನು ಶ್ರಿಲಂಕಾದಲ್ಲಿ ಮುನ್ನೂರಕ್ಕಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಬಾಂಬ್ ದಾಳಿಯ ಸತ್ಯಾಂಶಗಳು ಹೊರಬೀಳುವ ಮುನ್ನವೇ ಚುನಾವಣಾ ರ್ಯಾಲಿಯಲ್ಲಿ ಶ್ರೀಲಂಕಾ ಬಾಂಬ್ ಸ್ಪೋಟವನ್ನು ಬತ್ತಳಿಕೆಯಾಗಿಸಿ ಕಮಲಕ್ಕೆ ನಿಮ್ಮ ಮತ ಒತ್ತಿದರೆ, ಭಯೋತ್ಪಾದನೆಯನ್ನು ನಾಶಗೊಳಿಸಿದಂತೆ ಎನ್ನುವ ನಮ್ಮ ದೇಶದ ಪ್ರಧಾನಿಗಳ ವೋಟ್ ಪ್ರೇರಿತ ಮಾತುಗಳು ರೇಜಿಗೆ ಹುಟ್ಟಿಸುತಿವೆ.

ಅಧಿಕಾರಕ್ಕಾಗಿ ಮನುಷ್ಯ ಮನುಷ್ಯರನ್ನು ಶತ್ರುಗಳಾಗಿಸಿ ಕಾದಾಡಿಸಬಹುದು, ಗೋವಿನ ಹೆಸರಲ್ಲಿ ಸಾಯಬಡಿಯಬಹುದು, ಏನು ಬೇಕಾದರೂ ಮಾಡಬಹುದು. ಚುನಾವಣಾ ಸಂದರ್ಭದಲ್ಲಿ ಚರ್ಚಿಸಬೇಕಿದ್ದ ರೈತರ ಸಮಸ್ಯೆ, ನಿರುದ್ಯೋಗ, ವಾಯುಮಾಲಿನ್ಯ, ನೀರಿನ ಕೊರತೆ, ಕಸ ಮತ್ತು ತ್ಯಾಜ್ಯದ ವಿಲೇವಾರಿ ಸಮಸ್ಯೆ, ನಿತ್ಯವೂ ನಡೆಯುವ ಮಕ್ಕಳ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರದಂಥ ಸಂವೇದನಶೀಲ ಸಂಗತಿಗಳನ್ನು ಮೂಲೆಗೊತ್ತಿ ಸುಳ್ಳು ರಾಷ್ಟ್ರವಾದ, ದೇಶಭಕ್ತಿಯ ಆವೇಶದ ಮಾತುಗಳಿಂದ ಏನಾದರೂ ಸುಧಾರಣೆಯಾಗಲಿದೆಯೇ ?

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ | Naanu Gauri

ಯುಪಿ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ

0
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) 159 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹೆಸರಿಸಲಾದ ಪ್ರಮುಖ ಮುಖಗಳಲ್ಲಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು...
Wordpress Social Share Plugin powered by Ultimatelysocial
Shares