ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಬುಧವಾರ (ಜ.29) ಬೆಳಗ್ಗಿನ ಜಾವ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
‘ಮೌನಿ ಅಮಾವಾಸ್ಯೆ’ ಪ್ರಯುಕ್ತ ಪವಿತ್ರ ಸ್ನಾನಕ್ಕಾಗಿ (ಎರಡನೇ ಶಾಹಿ ಸ್ನಾನ) ತ್ರಿವೇಣಿ ಸಂಗಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಗಿ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಪ್ರದೇಶದ ಸುಮಾರು 12 ಕಿ.ಮೀ ವ್ಯಾಪ್ತಿಯಲ್ಲಿ ನದಿ ತೀರದಲ್ಲಿ ಮಹಾ ಕುಂಭ ಮೇಳ ಪ್ರಯುಕ್ತ ಲಕ್ಷಾಂತರ ಜನರು ಸೇರಿದ್ದರು. ಬುಧವಾರ ಬೆಳಗಿನ ಜಾವ 1ರಿಂದ 2 ಗಂಟೆಯ ಸುಮಾರಿಗೆ ಕಾಲ್ತುಳಿತ ದುರಂತ ಸಂಭವಿಸಿದೆ. ಈ ವೇಳೆ ಹಲವಾರು ಜನರು ಗಾಯಗೊಂಡಿದ್ದು, ಅನೇಕ ಕುಟುಂಬಗಳು ಬೇರ್ಪಟ್ಟಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸುಮಾರು 10 ಮಂದಿ ಸಾವನ್ನಪ್ಪಿರುವ ಶಂಕೆಯಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಘಟನೆ ನಡೆದ ತಕ್ಷಣ ಆಂಬ್ಯಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಕುಂಭಮೇಳ ಪ್ರದೇಶದ ತಾತ್ಕಾಲಿಕ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಎರಡನೇ ಪವಿತ್ರ ಸ್ನಾನವನ್ನು ತಾತ್ಕಾಲಿಕ ನಿಲ್ಲಿಸಲಾಯಿತು. ಸ್ನಾನ ಮಾಡಿದವರು ಸ್ಥಳದಿಂದ ದೂರ ಹೋಗುವಂತೆ ಅಧಿಕಾರಿಗಳು ಮನವಿ ಮಾಡಿದರು ಎಂದು ವರದಿ ಹೇಳಿದೆ.
ಬೆಳಗಾವಿಯ ಮೂವರು ಸಾವು :
ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಬೆಳಗಾವಿಯ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬೆಳಗಾವಿ ನಗರದ ವಡಗಾವಿಯ ನಿವಾಸಿ ಜ್ಯೋತಿ ಹತ್ತರವಾಠ (50), ಅವರ ಪುತ್ರಿ ಮೇಘಾ ಹತ್ತರವಾಠ (18) ಮತ್ತು ಬೆಳಗಾವಿಯ ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ ಎಂಬವರು ಸಾವನ್ನಪ್ಪಿದ್ದಾಗಿ ಪ್ರಜಾವಾಣಿ ವರದಿ ಮಾಡಿದೆ.
ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದೇನು?
ಕೆಲವು ಭಕ್ತರು ಬ್ಯಾರಿಕೇಡ್‌ಗಳನ್ನು ದಾಟಿ ಹಾರಿದ್ದರಿಂದ ಕಾಲ್ತುಳಿತ ಉಂಟಾಯಿತು. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಹಾ ಕುಂಭ ಮೇಳದ ಬಗ್ಗೆ ವದಂತಿಗಳನ್ನು ಹರಡದಂತೆ ಅವರು ಮನವಿ ಮಾಡಿದ್ದಾರೆ.
ವಿಐಪಿ ಸಂಪ್ರದಾಯಕ್ಕೆ ಲಗಾಮು ಹಾಕಿ: ರಾಹುಲ್ ಗಾಂಧಿ
ಕಾಲ್ತುಳಿತ ದುರಂತಕ್ಕೆ ಅಸಮರ್ಪಕ ವ್ಯವಸ್ಥೆ ಮತ್ತು ಸಾಮಾನ್ಯ ಭಕ್ತರ ಬದಲಿಗೆ ವಿಐಪಿ ಚಲನವಲನಕ್ಕೆ ವಿಶೇಷ ಆದ್ಯತೆ ನೀಡಿರುವುದು ಕಾರಣ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರಗಳ ವಿರುದ್ದ ಕಿಡಿಕಾರಿದ್ದಾರೆ. ವಿಐಪಿ ಸಂಪ್ರದಾಯಕ್ಕೆ ಸಂಪೂರ್ಣ ಲಗಾಮು ಹಾಕಬೇಕಿದ್ದು, ಭಕ್ತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕಿದೆ ಎಂದಿದ್ದಾರೆ.
प्रयागराज महाकुंभ में भगदड़ के कारण कई लोगों के मौत और कईयों के घायल होने की ख़बर अत्यंत दुखद है।
शोकाकुल परिवारों के प्रति अपनी गहरी संवेदनाएं व्यक्त करता हूं और घायलों के शीघ्र स्वस्थ होने की आशा करता हूं।
इस दुखद घटना के लिए कुप्रबंधन, बदइंतजामी और आम श्रद्धालुओं की जगह VIP…
— Rahul Gandhi (@RahulGandhi) January 29, 2025
ಸಾವು ನೋವುಗಳ ಸಂಖ್ಯೆಯ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಮೌನ ವಹಿಸಿದ್ದರೂ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಅನೇಕ ಕೇಂದ್ರ ಸಚಿವರು, ಹಲವಾರು ಮುಖ್ಯಮಂತ್ರಿಗಳು ಮತ್ತು ಪಕ್ಷಾತೀತವಾಗಿ ವಿರೋಧ ಪಕ್ಷದ ನಾಯಕರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಕಾಲ್ತುಳಿತದಿಂದಾಗಿ ಮುಂದೂಡಲ್ಪಟ್ಟಿದ್ದ ಅಖಾಡಗಳ ಸಾಂಪ್ರದಾಯಿಕ ಸ್ನಾನ ‘ಅಮೃತ ಸ್ನಾನ’ ಮಧ್ಯಾಹ್ನ 2.30ಕ್ಕೆ ಪುನರಾರಂಭವಾಗಿದೆ ಎಂದು ದಿ ಹಿಂದೂ ವರದಿ ಹೇಳಿದೆ.
ತ್ರಿವಳಿ ತಲಾಖ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್


