ಇಂದು (ಜ.29) ‘ಮೌನಿ ಅಮಾವಾಸ್ಯೆ’ ಪ್ರಯುಕ್ತ ಪವಿತ್ರ ಸ್ನಾನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸಿದ್ದರಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ರೀತಿಯ ಘಟನೆ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
“ಸಂಗಮದಲ್ಲಿ ತಡೆಗೋಡೆ ಮುರಿದ ಪರಿಣಾಮ ಕೆಲವು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರ ನಿಖರ ಸಂಖ್ಯೆ ಇನ್ನೂ ಗೊತ್ತಾಗಿಲ್ಲ” ಎಂದು ಕುಂಭ ಮೇಳದ ವಿಶೇಷ ಕರ್ತವ್ಯ ಅಧಿಕಾರಿ ಆಕಾಂಕ್ಷಾ ರಾಣಾ ಹೇಳಿದ್ದಾಗಿ ದಿ ಹಿಂದೂ ವರದಿ ಮಾಡಿದೆ.
ಮೌನಿ ಅಮಾವಾಸ್ಯೆಯಂದು ನಡೆಯುವ ಅಮೃತ ಸ್ನಾನವು ಮಹಾ ಕುಂಭಮೇಳದ ಅತ್ಯಂತ ಮಹತ್ವದ ಆಚರಣೆಯಾಗಿದ್ದು, ಸುಮಾರು 10 ಕೋಟಿ ಯಾತ್ರಿಕರು ಆಗಮಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಮಹಾಕುಂಭ ನಗರದ ತ್ರಿವೇಣಿ ಮಾರ್ಗ, ಕಾಳಿ ಮಾರ್ಗ ಸೇರಿದಂತೆ ಸಂಗಮದ ಸುತ್ತಮುತ್ತಲಿನ ರಸ್ತೆಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಹೀಗಾಗಿ ಜನರ ನಿಯಂತ್ರಣಕ್ಕೆ ಅಧಿಕಾರಿಗಳು ಭದ್ರತೆ ಹೆಚ್ಚಿಸಿದ್ದಾರೆ. ಭಕ್ತರ ಓಡಾಟಕ್ಕೆ ಅನುಕೂಲವಾಗಲು ಈ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇತರ ರಾಜ್ಯ, ದೇಶಗಳಿಂದ ಬರುವ ವಾಹನಗಳಿಗೆ ನಗರದ ಹೊರವಲಯದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಜನರನ್ನು ನಿಯಂತ್ರಿಸಲು ಸಂಗಮದ ಸುತ್ತಮುತ್ತಲಿನ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಕಳೆದ ಎರಡು ದಿನಗಳಿಂದ 3 ಕೋಟಿ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದರು. ಆದರೆ, ಮಂಗಳವಾರ ಮಧ್ಯರಾತ್ರಿಯ ಬಳಿಕ ಬುಧವಾರ ನಸುಕಿನ 1 ಗಂಟೆಯ ಸುಮಾರಿಗೆ ಜನದಟ್ಟಣೆ, ನೂಕು ನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆಯ ಬೆನ್ನಲ್ಲೇ ಎರಡನೇ ಅಮೃತಸ್ನಾನವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.
ಕಾಲ್ತುಳಿತಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಮಾಹಿತಿ ಪಡೆದಿದ್ದು, ಘಟನಾ ಸ್ಥಳದಲ್ಲಿ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
ದನ ಕಳ್ಳ ಸಾಗಣೆ ಶಂಕೆಯಲ್ಲಿ ಸ್ವಘೋಷಿತ ‘ಗೋ ರಕ್ಷಕ’ರಿಂದ ಥಳಿತ : ವ್ಯಕ್ತಿ ಸಾವು


