ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ವಿರುದ್ಧ ಶರದ್ ಪವಾರ್ ಅವರ ಎನ್‌ಸಿಪಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ವೇಳೆ, ಸುಪ್ರೀಂಕೋರ್ಟ್ ಅಜಿತ್ ಕುಮಾರ್ ಅವರಿಗೆ ”ನಿಮ್ಮ ಕಾಲಿನ ಮೇಲೆ ನಿಲ್ಲಿ” ಎಂದು ಬುಧವಾರ ಹೇಳಿದೆ. ಚುನಾವಣೆಯ ಪ್ರಚಾರ ಸಾಮಗ್ರಿಗಳಲ್ಲಿ ಶರದ್ ಪವಾರ್ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಬಳಸದಂತೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಮೌಖಿಕವಾಗಿ ಸೂಚಿಸಿದೆ. ಶರದ್ ಪವಾರ್ ಚಿತ್ರ
ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ತಮ್ಮ ಪ್ರತ್ಯೇಕ ಗುರುತಿನ ಆಧಾರದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಸುಪ್ರಿಂಕೋರ್ಟ್ ಹೇಳಿದೆ. ಶರದ್ ಪವಾರ್ ಅವರ ಚಿತ್ರಗಳು ಮತ್ತು ವೀಡಿಯೊಗಳನ್ನು ಬಳಸದಂತೆ ಅವರ ಪಕ್ಷದ ಸದಸ್ಯರಿಗೆ ಸೂಚನೆ ನೀಡುವಂತೆ ನ್ಯಾಯಾಲಯವು ಅಜಿತ್ ಪವಾರ್ ಅವರನ್ನು ಕೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಅಜಿತ್ ಪವಾರ್ ಅವರ ಪಕ್ಷವು ‘ಗಡಿಯಾರ’ ಚಿಹ್ನೆಯನ್ನು ಬಳಸುವುದನ್ನು ತಡೆಯುವಂತೆ ಕೋರಿ ಶರದ್ ಪವಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ. ಈ ಹಿಂದೆ, ಗಡಿಯಾರದ ಚಿಹ್ನೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ‘ವಿಚಾರಣಾಧೀನ’ ಎಂಬ ಸೂಚನೆಗಳನ್ನು ಪ್ರಕಟಿಸುವಂತೆ ಅಜಿತ್ ಪವಾರ್ ಅವರಿಗೆ ನ್ಯಾಯಾಲಯ ಸೂಚಿಸಿತ್ತು. ಶರದ್ ಪವಾರ್ ಚಿತ್ರ
ಬುಧವಾರ ಶರದ್ ಪವಾರ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ಪ್ರಕಟಿಸಲಾದ ಪೋಸ್ಟರ್‌ಗಳ ಫೋಟೋಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಕೆಲವು ವಸ್ತುಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ”ಎನ್‌ಸಿಪಿ (ಅಜಿತ್ ಪವಾರ್) ಅಭ್ಯರ್ಥಿ ಅಮೋಲ್ ಮಿಟ್ಕರಿ ಅವರು ಶರದ್ ಪವಾರ್ ಅವರ ಚಿತ್ರವನ್ನು ಮಾತ್ರ ಫೋಟೋಗಳನ್ನು ಪ್ರಕಟಿಸಿದ್ದಾರೆ, ಅವರ ಖ್ಯಾತಿಯನ್ನು ಬಳಸಿಕೊಂಡು ಅಜಿತ್ ಪವಾರ್ ಅವರ ಕಡೆಯವರು ‘ಲಾಭ’ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ವಕೀಲ ಸಿಂಘ್ವಿ ವಾದಿಸಿದ್ದಾರೆ.
ಅಜಿತ್ ಪವಾರ್ ಪರ ವಾದಿಸಿದ ಹಿರಿಯ ವಕೀಲ ಬಲ್ಬೀರ್ ಸಿಂಗ್ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದು, ಸಿಂಘ್ವಿ ಕೋರ್ಟ್‌ಗೆ ಸಲ್ಲಿಸಿದ ಸಾಮಗ್ರಿಗಳು “ತಿದ್ದುಪಡಿ” ಮಾಡಿರುವುದಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಂಘ್ವಿ, ಈ ಸಾಮಾಗ್ರಿಗಳನ್ನು ಅಮೋಲ್ ಮಿತ್ಕಾರಿ ಅವರ ಅಧಿಕೃತ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಿಂದ ಪಡೆಯಲಾಗಿದೆ ಎಂದು ಹೇಳಿದ್ದಾರೆ.
“ಅಜಿತ್ ಪವಾರ್ ಮತ್ತು ಶರದ್ ಪವಾರ್ ನಡುವಿನ ಸಂಬಂಧ ಚೆನ್ನಾಗಿದೆ ಎಂದು ಅಜಿತ್ ಕಡೆಯವರು ಬಿಂಬಿಸುತ್ತಿದ್ದಾರೆ. ವ್ಯಕ್ತಿಯೊಬ್ಬ ಅಜಿತ್ ಪವಾರ್ ಕಡೆಯವರಿಗೆ ಮತ ಹಾಕಿದರೆ ಅದು ಅವಿಭಜಿತ ಪವಾರ್ ಕುಟುಂಬಕ್ಕೆ ಹಾಕುವ ಮತ ಎಂಬ ಸುಳ್ಳಾದ ಚಿತ್ರಣವನ್ನು ಬಿಂಬಿಸಲು ಅವರು ಪ್ರಯತ್ನಿಸುತ್ತಿದ್ದಾರೆ” ಎಂದು ಸಿಂಘ್ವಿ ಕೋರ್ಟ್‌ಗೆ ಹೇಳಿದ್ದಾರೆ. ಸುಮಾರು 36 ಕ್ಷೇತ್ರಗಳಲ್ಲಿ ಅಜಿತ್ ಪವಾರ್ ಮತ್ತು ಶರದ್ ಪವಾರ್ ಅವರ ಪಕ್ಷವು ನೇರ ಪ್ರತಿಸ್ಪರ್ಧಿಗಳಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ವೇಳೆ ಅಜಿತ್ ಪವಾರ್ ಅವರ ಕಡೆ ತಿರುಗಿದ ನ್ಯಾಯಮೂರ್ತಿ ಕಾಂತ್, “ಇದು ಹಳೆಯ ವೀಡಿಯೊ ಆಗಿರಲಿ ಅಥವಾ ಇಲ್ಲದಿರಲಿ. ಶರದ್ ಪವಾರ್ ಅವರೊಂದಿಗೆ ನೀವು ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದೀರಿ ಮತ್ತು ನೀವು ಅವರ ವಿರುದ್ಧ ಸ್ಪರ್ಧಿಸುತ್ತಿದ್ದೀರಿ. ನೀವು ನಿಮ್ಮ ಕಾಲಿನ ಮೇಲೆ ನಿಲ್ಲಲು ಪ್ರಯತ್ನಿಸಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬುಲ್ಡೋಝರ್ ಅ’ನ್ಯಾಯ’ಕ್ಕೆ ಲಗಾಮು ಹಾಕಿದ ಸುಪ್ರೀಂ ಕೋರ್ಟ್ : ಕಟ್ಟಡ ಕೆಡವಲು ಮಾರ್ಗಸೂಚಿ ಪ್ರಕಟ
ಬುಲ್ಡೋಝರ್ ಅ’ನ್ಯಾಯ’ಕ್ಕೆ ಲಗಾಮು ಹಾಕಿದ ಸುಪ್ರೀಂ ಕೋರ್ಟ್ : ಕಟ್ಟಡ ಕೆಡವಲು ಮಾರ್ಗಸೂಚಿ ಪ್ರಕಟ


