ಗದಗ (ಜನವರಿ 27); ರಾಜ್ಯ ಮತ್ತು ಕೇಂದ್ರ ಸರ್ಕಾರದ ಖಜಾನೆ ಖಾಲಿಯಾಗಿದೆ. ಹಣವೇ ಇಲ್ಲ ಎಂದ ಮೇಲೆ ಬಜೆಟ್ ಹೇಗೆ ಬರುತ್ತೆ? ಸಿಎಂ ಯಡಿಯೂರಪ್ಪ ಪೆದ್ದನಂತೆ ಮಾತನಾಡ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ರಾಜ್ಯ ಬಜೆಟ್ ಕುರಿತು ಇಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯ, “ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಹಣ ನೀಡಿಲ್ಲ. ನರೇಗಾ ಹಣ ಸಹ ಬಂದಿಲ್ಲ. ಕೇಂದ್ರ ಸರ್ಕಾರದ ತೆರಿಗೆ ವಸೂಲಿಯಲ್ಲೇ 2 ಲಕ್ಷ ಕೋಟಿ ಕಡಿಮೆ ಆಗಿದೆ.
ಕೇಂದ್ರದ ಬಳಿಯೇ ಹಣ ಇಲ್ಲ ಎಂದ ಮೇಲೆ ಅವರು ರಾಜ್ಯಗಳಿಗೆ ಹೇಗೆ ನೀಡುತ್ತಾರೆ? ಅಸಲಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಖಜಾನೆಗಳು ಖಾಲಿಯಾಗಿವೆ. ಹಣವೇ ಇಲ್ಲ ಎಂದ ಮೇಲೆ ಬಜೆಟ್ ಎಲ್ಲಿಂದ ಬರುತ್ತೆ? ಸಿಎಂ ಯಡಿಯೂರಪ್ಪ ಪೆದ್ದನಂತೆ ಮಾತನಾಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪಿಎಫ್ಐ ಸಂಘಟನೆಗೆ ಉಗ್ರ ಚಟುವಟಿಕೆ ನಡೆಸಲು ಪಾಕಿಸ್ತಾನದಿಂದ ಹಣ ಸಂದಾಯವಾಗುತ್ತದೆ ಎಂಬ ಆಡಳಿತ ಪಕ್ಷದ ನಾಯಕರ ಹೇಳಿಕೆಗೆ ಉತ್ತರಿಸಿರುವ ಸಿದ್ದರಾಮಯ್ಯ ಇದೊಂದು ಶುದ್ಧ ಸುಳ್ಳು ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.


