ಆಗಸ್ಟ್ 18 2025ರಂದು ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟವು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ದಾಖಲಿಸಿತ್ತು. ರಾಜ್ಯ ಸರ್ಕಾರ ಒಳಮೀಸಲಾತಿ ಕುರಿತ ತನ್ನ ಆದೇಶವನ್ನು ಸಮರ್ಥಿಸಿಕೊಂಡು ಅಫಿಡವಿಟ್ ಸಲ್ಲಿಸಿದೆ. ಅಲ್ಲದೇ ರಿಟ್ ಅರ್ಜಿಯಲ್ಲಿ ಯಾವುದೇ ಉರುಳಿಲ್ಲ ಹಾಗಾಗಿ ರಿಟ್ ಅರ್ಜಿಯನ್ನು ತಿರಸ್ಕರಿಸಬೇಕು ಅಂದು ಮನವಿ ಮಾಡಿದೆ.
ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿಗಳನ್ನು 5 ಗುಂಪುಗಳಾಗಿ ವಿಂಗಡಿಸಿ ಅಲೆಮಾರಿ ಸಮುದಾಯ ಪ್ರವರ್ಗ ಎ ಎಂದು ವರ್ಗೀಕರಿಸಿ ಶೇ. 1 ಮೀಸಲಾತಿಯನ್ನು ನೀಡಿತ್ತು. ರಾಜ್ಯ ಸರ್ಕಾರದ ಸಚಿವ ಸಂಪುಟವು ಜಸ್ಟೀಸ್ ನಾಗಮೋಹನ್‌ದಾಸ್ ಆಯೋಗದ ವರದಿಯನ್ನು ಮಾರ್ಪಡಿಸಿ ಮಾದಿಗ ಸಂಬಂಧಿತ ಜಾತಿಗಳನ್ನು ಪ್ರವರ್ಗ-ಎ ಶೇ.6, ಹೊಲೆಯ ಸಂಬಂಧಿತ ಜಾತಿಗಳನ್ನು ಪ್ರವರ್ಗ-ಬಿ ಶೇ.6, ಬೋವಿ, ಕೊರಮ, ಕೊರಚ, ಲಂಬಾಣಿ ಸಮುದಾಯಗಳ ಜೊತೆಗೆ 59 ಅಸ್ಪೃಷ್ಯ ಅಲೆಮಾರಿ ಸಮುದಾಯಗಳನ್ನು ಸೇರಿಸುವ ಮೂಲಕ ಪ್ರವರ್ಗ ಎ ಗುಂಪಿನಲ್ಲಿದ್ದ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ಸಿಗೆ ಸೇರಿಸಿ ಶೇ.5 ಒಳಮೀಸಲಾತಿಯನ್ನು ಕಲ್ಪಿಸಿ ಆದೇಶ ಹೊರಡಿಸಿತ್ತು.
ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಕೊರಮ, ಕೊರಚ, ಲಂಬಾಣಿ ಸಮುದಾಯಗಳು ಉಳಿದ ಪರಿಶಿಷ್ಟ ಜಾತಿಗಳಿಗಿಂತ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುರೆದ ಜಾತಿಗಳಾಗಿದ್ದರಿಂದ ಹಾಗೂ ಸ್ಪೃಶ್ಯ ಸಮುದಾಯಗಳಾಪಗಿವೆ. ಈ ಸಮುದಾಯಗಳನ್ನು ಒಳಮೀಸಲಾತಿ ವರ್ಗೀಕರಣದಲ್ಲಿ ಪ್ರವರ್ಗ ಡಿ ಎಂದು ವರ್ಗೀಕರಿಸಿ ಶೇ. 4 ಒಳಮೀಸಲಾತಿಯನ್ನು ಒದಗಿಸಿತ್ತು. ರಾಜ್ಯ ಸರ್ಕಾರವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದ ಈ ಅಸ್ಪೃಶ್ಯ ಅಲೆಮಾರಿ ಸಮುದಾಯಗಳನ್ನು ಪರಿಸಿಷ್ಟ ಜಾತಿಗಳಲ್ಲಿಯೇ ಸಾಪೇಕ್ಷವಾಗಿ ಮುಂದುವರೆದ ಸೃಶ್ಯ ಸಮುದಾಯಗಳಾದ ಕೊರಮ, ಕೊರಚ, ಲಂಬಾಣಿ ಸಮುದಾಯಗಳ ಜೊತೆಗೆ ಸೇರಿಸಿರುವುದು ಸಾಮಾಜಿಕ ನ್ಯಾಯವಲ್ಲ ಎಂದು ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟವು ಹೈಕೋರ್ಟ್‌ನಲ್ಲಿ 2-12-2025ರಂದು ರಿಟ್ ಅರ್ಜಿ (WP 28612/2025) ಸಲ್ಲಿಸಿದ್ದವು.
ಸರ್ಕಾರವು ತನ್ನ ಅಫಿಡವಿಟ್‌ನಲ್ಲಿ, ಅಲೆಮಾರಿ ಸಮುದಾಗಳಿಗೆ ಶೇ. 1 ಒಳಮೀಸಲಾತಿಯಿಂದ ಹೆಚ್ಚಿನ ಲಾಭ ಸಿಗುವುದಿಲ್ಲ ಹಾಗಾಗಿ ಪ್ರವರ್ಗ ಸಿಗೆ ಸೇರಿಸಲಾಗಿದೆ ಎಂದು ವಾದಿಸಿದೆ. ಅಲ್ಲದೇ ಅಲೆಮಾರಿ ಸಮುದಾಯಗಳಲ್ಲಿ ಕೆಲವು ಜಾತಿಗಳು ಶೈಕ್ಷಣಿಕವಾಗಿ ಹಾಗೂ ಭೂಮಿಯ ಒಡೆತನದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ವರದಿಯಲ್ಲಿನ ಪ್ರವರ್ಗ-ಡಿ ಜಾತಿಗಳಿಗಿಂತ ಹಿಂದುಳಿದಿಲ್ಲ ಎಂದು ವಾದಿಸಿದೆ.
ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಅಲೆಮಾರಿ ಸಮುದಾಯಗಳಲ್ಲಿನ 5 ಜಾತಿಗಳಾದ ಬುಡ್ಗ ಜಂಗಮ, ಚನ್ನ ದಾಸರ್ , ಹೊಲೆಯ ದಾಸರ್, ಸಿಳ್ಳೆಕ್ಯಾತ , ಸುಡುಗಾಡು ಸಿದ್ದ ಸಮುದಾಯಗಳು ಸಾಪೇಕ್ಷವಾಗಿ ಉಳಿದ ಜಾತಿಗಳಿಗಿಂತ ಹಿಂದುಳಿದಿಲ್ಲ ಎಂದು ಹೇಳುತ್ತಾ ಉಳಿದ 54 ಜಾತಿಗಳನ್ನು ಸಾಪೇಕ್ಷವಾಗಿ ಮುಂದುವರೆದ ಸಮುದಾಯಗಳ ಜೊತೆಗೆ ಸೇರಿಸಿರುವುದರ ಕುರಿತು ರಾಜ್ಯ ಸರ್ಕಾರ ಯಾವುದೇ ಸಮರ್ತನೆಯನ್ನು ಮಾಡಿಕೊಳ್ಳಲಿಲ್ಲ.
ಇದರ ಮೂಲಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಪ್ರಾಶಸ್ತ್ಯದ ಒಳಮೀಸಲಾತಿಯನು ನಿರಾಕರಿಸಿದೆ.
#InternalReservation #Untouchable #Nomadic #SCReservation #Karnataka #ಅಸ್ಪೃಶ್ಯಅಲೆಮಾರಿಸಮುದಾಯಗಳು #ಒಳಮೀಸಲಾತಿ #ಹೈಕೋರ್ಟ್ #HighCourt
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


