ಇತಿಹಾಸ ವಿಜ್ಞಾನಗಳಲ್ಲಿ ಇದರ (ರಾಷ್ಟ್ರ) ವ್ಯಾಖ್ಯಾನಕ್ಕಿಂತಲೂ ಹೆಚ್ಚು ಅಸ್ಪಷ್ಟವಾದದ್ದು ಮತ್ತೊಂದಿಲ್ಲ. ಒಂದೇರೀತಿಯ ಗುಂಪುಗಳನ್ನು ಬೇಕಾಬಿಟ್ಟಿಯಾಗಿ ಜನಗಳೆಂದೋ ಅಥವಾ ಜನಾಂಗವೆಂದೋ ಅಥವಾ ರಾಷ್ಟ್ರಗಳೆಂದೋ ಕರೆಯುವುದು, ರಾಷ್ಟ್ರೀಯತೆ (ನ್ಯಾಷನಲಿಸಂ), ದೇಶಪ್ರೇಮ (ಪೇಟ್ರಿಯಾಟಿಸಂ) ಮತ್ತು ಸಾಮ್ರಾಜ್ಯಶಾಹಿ (ಇಂಪೀರಿಯಲಿಸಂ) ಇವೆಲ್ಲವೂ ಸಮಾನಾರ್ಥಕಗಳೆಂಬಂತೆ ಬಳಸಿ ಆಡುವ ಅನೌಪಚಾರಿಕ ಮಾತುಕತೆ, ಜಗತ್ತಿನಲ್ಲಿ ಇರುವ ಎಲ್ಲ ಹೊಸ ಸಂಗತಿಗಳ ಬಗ್ಗೆ – ಒಳ್ಳೆಯದಕ್ಕಾಗಲಿ ಮತ್ತು ಕೆಟ್ಟದ್ದಕ್ಕಾಗಲಿ – ವಿವರಣೆ ನೀಡಲು ಬಳಸುವ ಇವುಗಳನ್ನು ಸಮಾನಾಂತರವಾಗಿ ಬಳಸುವುದು – ಇವೆಲ್ಲವೂ ವರ್ತಮಾನದ ಇತಿಹಾಸವಿಜ್ಞಾನದ ಪ್ರಮುಖ ಜನಪ್ರಿಯ ಲಕ್ಷಣಗಳಾಗಿದ್ದು ಸುಲಭವಾದ ಮತ್ತು ಅನುಕೂಲಕರ ಓದಿನ ಪುಸ್ತಕಗಳನ್ನು ಉತ್ಪಾದಿಸಲು ಅನುವಾಗುತ್ತವೆ ಮತ್ತು ಇವು ಜನರ ಮನಸ್ಸನ್ನು ಸ್ವಲ್ಪವೂ ವಿಚಲಗೊಳಿಸದೆ ಇಟ್ಟಿರುತ್ತವೆ. ಆದರೆ ಮತ್ತೊಂದು ತುದಿಯಲ್ಲಿ ಕೆಲವು ವಿದ್ಯಾರ್ಥಿಗಳು, ಮೇಲ್ಮಟ್ಟದ ವಿವರಣೆಯ ಕ್ಷೇತ್ರವನ್ನು ಹಿಂದಕ್ಕೆ ಬಿಟ್ಟು ಮುಂದುವರೆದಿರುವವರು, ಯಾವುದೋ ಒಂದು ನಿರ್ದಿಷ್ಟ ಆಯಾಮ ಅಥವಾ ಯಾವುದೋ ಒಂದು ನಿರ್ದಿಷ್ಟ ಹೊಸ ಅನ್ವೇಷಣೆಯ ಬಗ್ಗೆ ಮಾತ್ರ ಆಸಕ್ತಿ ವಹಿಸಿದೆ, ತಮಗೆ ತಿಳಿದಿರುವಂತಹ ಆಮೂಲಾಗ್ರತೆಯ ಪ್ರಶ್ನೆಯಿಂದ, ವ್ಯವಸ್ಥಿತ ವಿಮರ್ಶೆ ಮತ್ತು ಅವಲೋಕನಕ್ಕೆ ಮುಂದಾಗುವ ಒತ್ತಡಕ್ಕೆ ಒಳಗಾಗುವುದರಿಂದ, ಅವರಿಂದ ಎಲ್ಲರೂ ಒಪ್ಪುವ ಸುಲಭ ಪುಸ್ತಕಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.
ಡೆಲೋಸ್ ಅವರ ಅಧ್ಯಯನ ಎರಡನೇ ರೀತಿಯದ್ದು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ವಸ್ತು-ವಿಷಯದ ಬಗ್ಗೆ ಆಳವಾದ ಹಾಗೂ ವಿಸ್ತೃತ ಒಳನೋಟವಿರುವ ಅದ್ಭುತ ಪುಸ್ತಕ; ವಿಜ್ಞಾನದ ಅಂತಃಪುರದ ಒಳವಲಯದ ರಕ್ಷಣಾಕವಚದಲ್ಲಿ ಕಾಲ ಕಳೆಯದೆ ಇರುವುದರಿಂದ ಮತ್ತು ಅದರಿಂದ ವ್ಯವಸ್ಥಿತ ಮಾದರಿಯಲ್ಲಿ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಲು ತಮ್ಮ ಬರಹವನ್ನು ಸರಿಯಾದ ಕ್ರಮದಲ್ಲಿ ಜೋಡಿಸಲು ಸಮಯ ಅಥವಾ ಸಂಯಮ ಹೊಂದಿರದ ಲೇಖಕರ ಕೊರತೆಗಳೆಲ್ಲವೂ ಖಂಡಿತಾ ಇದರಲ್ಲಿಯೂ ಇವೆ. ಅತಿ ಉದ್ದನೆಯ ಉಲ್ಲೇಖಗಳು, ಪುನರಾವರ್ತನೆಗಳು ಮತ್ತು ಬಿಟ್ಟುಹೋಗಿರುವ ಪ್ರಮುಖ ವಿಷಯಗಳು ಹಾಗೂ ಹಲವು ಉಲ್ಲೇಖಗಳಿಗೆ ಬೆಸೆದ ಪಠ್ಯಗಳು – ಇವುಗಳಿಂದ ಡೆಲೋಸ್ ಪುಸ್ತಕ ಸೊರಗಿದೆ. ಇದನ್ನು ಟೀಕೆ ಮಾಡಬೇಕು ಎಂಬ ರೀತಿಯಲ್ಲಿ ಹೇಳುತ್ತಿರುವುದಲ್ಲ; ಆದರೆ ಇಂಗ್ಲಿಷ್ ಅನುವಾದದಿಂದಲೂ ಉದ್ಭವಿಸಿರಬಹುದಾದ ಉಪಟೀಕೆಯಾಗಿ ಹೇಳುತ್ತಿರುವ ಮಾತಿದು.
ನಮ್ಮ ಕಾಲದ ಮೂಲಭೂತ ರಾಜಕೀಯ ವಾಸ್ತವವನ್ನು ಎರಡು ಸಂಗತಿಗಳಿಂದ ನಿರ್ಧರಿಸಲಾಗುತ್ತದೆ: ಒಂದು ಕಡೆ ಅದು “ರಾಷ್ಟ್ರಗಳ” ಮೇಲೆ ಅವಲಂಬಿತವಾಗಿದ್ದರೆ, ಮತ್ತೊಂದು ಕಡೆ ಅದು “ರಾಷ್ಟ್ರವಾದದಿಂದ” ಶಾಶ್ವತವಾಗಿ ಪೀಡಿತವಾಗಿದೆ ಮತ್ತು ತೀವ್ರ ಬೆದರಿಕೆಗೆ ಒಳಪಟ್ಟಿದೆ. ಆದುದರಿಂದ ಡೆಲೋಸ್ ಅವರ ಅಧ್ಯಯನದ ಮುಖ್ಯ ಪ್ರಶ್ನೆ, ನಾಗರಿಕತೆಯೆಂಬ ವಿದ್ಯಮಾನಕ್ಕೆ ವಿಶಾಲ ಆಯಾಮವಿದ್ದು, ರಾಷ್ಟ್ರಗಳು ರಾಷ್ಟ್ರೀಯವಾದವನ್ನು ಬೆಳೆಸಿಕೊಳ್ಳದಂತೆ ತಡೆಯುವ ಮತ್ತು ಅಲ್ಲಿಂದ ಮುಂದಕ್ಕೆ ಅಧುನಿಕ ಜಗತ್ತಿನ ನಾಗರಿಕತೆಯನ್ನು ಪ್ರಸ್ತುತಪಡಿಸಿ ಉಳಿಸಿಕೊಳ್ಳಬಲ್ಲ ಅಂತಾರಾಷ್ಟ್ರೀಯ ಸಮುದಾಯದ ಮೂಲಭೂತ ಲಕ್ಷಣಗಳಿಗೆ ಅಡಿಪಾಯ ಹಾಕುವ ರಾಜಕೀಯ ತತ್ವಸೂತ್ರಗಳನ್ನು ಹುಡುಕುವುದಕ್ಕೆ ಮುಂದಾಗಿದೆ.
ಮನುಷ್ಯನ ಕಾಯಕ ಮತ್ತು ಮನುಷ್ಯನ ಚಿಂತನೆ – ಒಟ್ಟಾರೆಯಾಗಿ “ಮನುಷ್ಯನ ಯುಕ್ತಿ” – ಸಂಸ್ಥೆಗಳು ಮತ್ತು ಸಂಘಟನೆಗಳ ಮೂಲಕ ನಿರ್ದೇಶಿಸಲ್ಪಟ್ಟ ಒಟ್ಟು ಮೊತ್ತದ, ಜಗತ್ತಿನ ಭಾಗವನ್ನು ನಾಗರಿಕತೆ ಎಂದು ಕರೆಯಲಾಗುತ್ತದೆ. ಆಧುನಿಕ ಜಗತ್ತಿನ ಒಂದು ಪ್ರಮುಖ ವಿದ್ಯಮಾನ ಅಂದರೆ ಸಾರ್ವತ್ರಿಕತೆಯ ಮತ್ತು ಜಾಗತಿಕತೆಯ ತನ್ನ ಹಳೆಯ ಪ್ರತಿಪಾದನೆಯನ್ನು ನಾಗರಿಕತೆ ತೊರೆದು ಕೈಬಿಟ್ಟಿದ್ದು ಮತ್ತು ಈಗ ನಿರ್ದಿಷ್ಟ ಮಾತ್ರದ ರಾಷ್ಟ್ರೀಯ ನಾಗರಿಕತೆಯ ಸ್ವರೂಪದಲ್ಲಿ ತನ್ನನ್ನು ಪ್ರಸ್ತುತಪಡಿಸಿಕೊಳ್ಳುತ್ತಿರುವುದು. ಆಧುನಿಕ ನಾಗರಿಕತೆಯ ಮತ್ತೊಂದು ಪ್ರಮುಖ ಆಯಾಮ ಪ್ರಭುತ್ವದ ಮರುವಿಂಗಡನೆ (ಫ್ಯೂಡಲಿಸಂ ಕಾಲಾನಂತರ). ಆದಾಗ್ಯೂ ಈ ಮರುವಿಂಗಡನೆ ಪ್ರಭುತ್ವದ ಮೂಲಭೂತ ಸಮಸ್ಯೆಯನ್ನು ಬಗೆಹರಿಸುವುದಿಲ್ಲ: ಅದರ ಅಧಿಕಾರದ ಅಧಿಕೃತತೆಯ ಮತ್ತು ಅದು ಉದಯಿಸಿದ ಮೂಲದ ಪ್ರಶ್ನೆ. ಈ ಹೊಸ ವಿದ್ಯಮಾನದ ಮೂರನೇ ಆಯಾಮ ಜನಸಮೂಹಗಳು. ಪ್ರತಿ ನಾಗರಿಕತೆ ಈ ಜನಸಮೂಹಗಳನ್ನು ಪರಿಗಣಿಸಲೇಬೇಕಿದೆ ಏಕೆಂದರೆ ಸಾಮಾಜಿಕ ಸಂಘಟನೆಯಲ್ಲಿಯೇ ನಾಗರಿಕತೆಗಳ ಸಂರಚನೆ ಇರುವುದು.
ರಾಷ್ಟ್ರದ ಬಗೆಗಿನ ಪ್ರಸ್ತುತ ಅವಲೋಕನ “ರಾಷ್ಟ್ರಗಳೇ ಅಥವಾ ಜನಾಂಗಗಳೇ” ಎಂಬ ಪ್ರಶ್ನೆಯಿಂದ ಆರಂಭವಾಗುತ್ತದೆ ಮತ್ತು ಸಮಾಜ ವಿಜ್ಞಾನಗಳ ವಿದ್ಯಾರ್ಥಿ (ಕುಟುಂಬಗಳು ಮತ್ತು ರಾಷ್ಟ್ರಗಳು, ಜನಾಂಗ ಮತ್ತು ಧಾರ್ಮಿಕ ಗುಂಪುಗಳನ್ನು ತಿಳಿದಿರುವವರು) “ಫೇಶಿಯಲ್ ಅಥವಾ ಸೆಫಾಲಿಕ್ ಕ್ರಮಾಂಕ”ವನ್ನು (ತಲೆಬುರುಡೆ ಅಳತೆಯಲ್ಲಿ ನಿರ್ಧರಿಸುವ) ಆಧರಿಸಿರುವ ಮಾನವ ಸಮಾಜವನ್ನು ಇನ್ನೂ ತಡಕಿ ಕಂಡುಹಿಡಿಯಬೇಕಿದೆ ಎಂಬ ತೀರ್ಮಾನಕ್ಕೆ ಬರುತ್ತದೆ. ಎಲ್ಲ ಆಧುನಿಕ ಬಗೆಯ ರಾಷ್ಟ್ರವಾದಗಳು ಒಂದು ಹಂತಕ್ಕೆ ಜನಾಂಗೀಯ ತಾರತಮ್ಯವನ್ನು ಹೊಂದಿರುವಂತವೇ ಎಂಬ ಸರಿಯಾದ ಗ್ರಹಿಕೆ, ಲೇಖಕರಿಗೆ ವರ್ತಮಾನದ ಎಲ್ಲ ವೈಜ್ಞಾನಿಕ ಮತ್ತು ವಂಶಾವಳಿ ಚರ್ಚೆಗಳನ್ನು ವಿಸ್ತøತವಾಗಿ ಎಳೆದುಕೊಂಡುಬಂದಿದೆ. ಆದರೆ ದುರದೃಷ್ಟವಶಾತ್ ಅವುಗಳು ನಂಬಿಸುವ ಮೇಲ್ನೋಟವನ್ನೇ ಪುಸ್ತಕದಲ್ಲಿ ಬಿಂಬಿಸುವಂತೆ ಮಾಡಿದೆ. (ಜನಾಂಗ ಮತ್ತು ಮರುವಸತಿ ಎಸ್‍ಎಸ್ ಸೆಂಟ್ರಲ್ ಕಚೇರಿಯ ಅಧ್ಯಕ್ಷ ಮತ್ತು ಆಹಾರ ಹಾಗೂ ಕೃಷಿ ಜರ್ಮನ್ ಸಚಿವನಾಗಿದ್ದ ವಾಲ್ಟರ್ ಡಾರ್ರೆ ಅವರನ್ನು ಉಲ್ಲೇಖಿಸಿರುವುದು). ಈ ವಿಚಿತ್ರ ಗಂಭೀರತೆ – ನಾನು ಗಮನಿಸಿದಂತೆ ಅವರು ಒತ್ತು ನೀಡಿರುವ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರಮುಖ ತಪ್ಪು ಎಂದರೆ – ರಾಷ್ಟ್ರವಾದದ ಬೆಳವಣಿಗೆ ಅದು ಹೇಗೋ ವಸಾಹತುಶಾಹಿಗೆ ತಾರ್ಕಿಕವಾಗಿ ಕಾರಣವಾಗುತ್ತದೆ ಎಂಬ ಡೆಲೋಸ್ ಅವರ ದೃಢನಂಬಿಕೆ, ಆದರೆ ಈ ವಿಮರ್ಶಕಿಯ ಪ್ರಕಾರ ಅದು ಅಪೂರ್ಣ ಸತ್ಯ.
ಡೆಲೋಸ್ ಅವರು ಬರೆಯುವಂತೆ “ದೈಹಿಕ ಮತ್ತು ಜೈವಿಕ ಪ್ರಮಾಣಗಳ ಪ್ರಕಾರ ಜನಾಂಗಗಳು ವರ್ಗೀಕರಣಗೊಂಡಿದ್ದು ಅವು ಜನರ ಸಾಮಾಜಿಕ ಸಂಬಂಧಗಳು ಅಥವಾ ಅವರು ಯಾವ ಸಮುದಾಯಗಳಿಗೆ ಸೇರಿದ್ದಾರೆ ಎಂಬ ಸಂಗತಿಗಳನ್ನು ಪರಿಗಣಿಸದೆಯೇ ಕೃತಕವಾಗಿ ಜನರನ್ನು ಬೆಸೆದು ಒಗ್ಗೂಡಿಸುತ್ತದೆ” ಎಂಬ ಹೇಳಿಕೆ ನಿಜವಾಗಿದ್ದರೆ ಇದೊಂದು ಬಗೆಯ ವೈಜ್ಞಾನಿಕ ಪ್ರಮಾದ ಎಂಬ ಅವರ ಊಹೆ ತಪ್ಪು. ಇದಕ್ಕೆ ತದ್ವಿರುದ್ಧವಾಗಿ ಜನಾಂಗೀಯ ಹುಸಿ-ವಿಜ್ಞಾನಗಳ ಅಂತಿಮ ರಾಜಕೀಯ ಗುರಿ ಸಮಾಜಗಳ ಮತ್ತು ಸಮುದಾಯಗಳ ವಿನಾಶ ಹಾಗು ಇವುಗಳ ವಿಘಟನೆ ಸಾಮ್ರಾಜ್ಯಶಾಹಿ ವಿಸ್ತರಣೆಯ ಪೂರ್ವಅಗತ್ಯಗಳಲ್ಲಿ ಒಂದು.
ಅಧ್ಯಯನದಲ್ಲಿ ಇಲ್ಲಿಂದ ಮುಂದುವರಿಯುವುದು ಇತಿಹಾಸ ಬರವಣಿಗೆಯ ಕೆಲವು ಮೂಲ ಧೋರಣೆಗಳ ಸ್ವಾಗತಾರ್ಹ ಸ್ಪಷ್ಟೀಕರಣ. “ತನ್ನ ಇತಿಹಾಸದ ದೃಷ್ಟಿಯಿಂದ ಪ್ರಜ್ಞೆ ಕಟ್ಟಿಕೊಳ್ಳುವ ಮೂಲಕ” ಜನ ದೇಶವಾಗುತ್ತದೆ; ಅದರಂತೆಯೇ ಭೂತದ ದುಡಿಮೆ ಮತ್ತು ಇತಿಹಾಸ ತನ್ನ ಕುರುಹುಗಳನ್ನು ಬಿಟ್ಟಿರುವ ಸಂದರ್ಭಗಳ ಒಟ್ಟುಮೊತ್ತದ ಮಣ್ಣಿಗೆ – ಭೂಮಿಗೆ ದೇಶ ಬೆಸೆದುಕೊಂಡಿದೆ. ಮನುಷ್ಯ ಹುಟ್ಟಿದ “ಸಾಮಾಜಿಕ ಪರಿಸರ”ವನ್ನು ಅದು ಪ್ರತಿನಿಧಿಸುತ್ತದೆ. ಅದು ಮನುಷ್ಯನಿಗೆ ತನ್ನ ಹುಟ್ಟಿನ ಹಕ್ಕಿನಿಂದ ಸಿಕ್ಕುವ ಮುಚ್ಚಿದ ಸಮಾಜ. ಮತ್ತೊಂದು ಕಡೆ ಪ್ರಭುತ್ವ ಮುಕ್ತ ಸಮಾಜವಾಗಿದ್ದು, ತನಗೆ ಇರುವ ಅಧಿಕಾರದಿಂದ ರಕ್ಷಣೆ ನೀಡುವ ಕಾನೂನುಗಳನ್ನು ರೂಪಿಸಿ ಒಂದು ಭೂಪ್ರದೇಶದಲ್ಲಿ ಆಡಳಿತ ನಡೆಸುತ್ತದೆ. ಒಂದು ಶಾಸನಾತ್ಮಕ ಸಂಸ್ಥೆಯಾಗಿ, ಯಾವುದೇ ರಾಷ್ಟ್ರೀಯತೆ ಹೊಂದಿದ್ದರೂ ಪ್ರಭುತ್ವಕ್ಕೆ ಕೇವಲ ನಾಗರಿಕರು ಮಾತ್ರ ತಿಳಿದಿರುತ್ತದೆ; ತನ್ನ ಭೂಪ್ರದೇಶದಲ್ಲಿ ವಾಸಿಸುವ ಎಲ್ಲರಿಗೂ ಆ ಕಾನೂನು ವ್ಯವಸ್ಥೆ ಅನ್ವಯವಾಗುತ್ತದೆ. ಅಧಿಕಾರದ ಸಂಸ್ಥೆಯಾಗಿ ಪ್ರಭುತ್ವ ಹೆಚ್ಚೆಚ್ಚ್ಚು ಭೂಪ್ರದೇಶಕ್ಕೆ ತನ್ನ ಹಕ್ಕನ್ನು ಚಲಾಯಿಸುತ್ತ ಮತ್ತೂ ಆಕ್ರಮಣಶೀಲವಾಗಬಹುದು – ಇದು ರಾಷ್ಟ್ರೀಯ ಅಂಗಕ್ಕೆ ಅನ್ಯವಾದ ವ್ಯಕ್ತಿತ್ವವಾಗಿದೆ ಮತ್ತು ಅದಕ್ಕೆ ತದ್ವಿರುದ್ಧವಾಗಿ ವಲಸೆಗಳಿಗೆ ಅದು ಬಾಗಿಲು ಮುಚ್ಚಿರುತ್ತದೆ. ರಾಷ್ಟ್ರಗಳಲ್ಲಿ ಅಂತರ್ಗತವಾದ ತಟಸ್ಥವಾದ ನಿಲುವಿನ ಬಿಡುಗಡೆಯಿಂದಲೇ ಶಾಂತಿ ಮತ್ತು ಕಲ್ಯಾಣವನ್ನು ದೃಢಪಡಿಸುತ್ತವೆ ಎಂಬ ಹಳೆಯ ಕನಸು ಎಲ್ಲವೂ ವಂಚನೆಯಿಂದ ಕೂಡಿರಲಿಲ್ಲ.
ರಾಷ್ಟ್ರದ ಮೂಲಕ ಪ್ರಭುತ್ವದ ಆಕ್ರಮಣವನ್ನು ರಾಷ್ಟ್ರೀಯತೆ ಸೂಚಿಸುತ್ತದೆ. ಇದು ರಾಷ್ಟ್ರ-ಪ್ರಭುತ್ವದ (ನೇಶನ್-ಸ್ಟೇಟ್) ಭಾವ. ಹತ್ತೊಂಭತ್ತನೇ ಶತಮಾನದಲ್ಲಿ ರಾಷ್ಟ್ರ ಮತ್ತು ಪ್ರಭುತ್ವದ ಗುರುತಿಸುವಿಕೆ ಎರಡು ರೀತಿಯಲ್ಲಿ ಕಾಣಿಸಿಕೊಂಡಿದೆ: ಶಾಸನಾತ್ಮಕ ಸಂಸ್ಥೆಯಾಗಿ ಪ್ರಭುತ್ವ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಬೇಕಾಗಿದೆ ಎಂದು ಘೋಷಿಸಿಕೊಂಡಿದ್ದರೆ, ರಾಷ್ಟ್ರದ ಜೊತೆಗೆ ಅದು ಗುರುತಿಸಿಕೊಳ್ಳುವುದರಿಂದ ನಾಗರಿಕನನ್ನು ದೇಶವಾಸಿ ಅಥವಾ ರಾಷ್ಟ್ರಕ ಎಂದು ಗುರುತಿಸುವುದಕ್ಕೆ ಅದು ಸೂಚಿಸುತ್ತದೆ ಮತ್ತು ಇದರಿಂದ ವ್ಯಕ್ತಿಗಳ ಹಕ್ಕುಗಳನ್ನು ದೇಶವಾಸಿಗಳ ಹಕ್ಕುಗಳು ಅಥವಾ ರಾಷ್ಟ್ರೀಯ ಹಕ್ಕುಗಳ ಜೊತೆ ಕಲಸೋಗರ ಮಾಡಿ ಗೊಂದಲಗೊಳಿಸಿದೆ. ಮುಂದುವರೆದು, ಇಲ್ಲಿಯವರೆಗೆ “ಅಧಿಕಾರದ ಸಂಸ್ಥೆಯಾಗಿದ್ದ” ಪ್ರಭುತ್ವ ಆಕ್ರಮಣಶೀಲತೆಯನ್ನು ಮೈಗೂಡಿಸಿಕೊಂಡು ಮತ್ತು ವಿಸ್ತರಣೆಯತ್ತ ವಾಲಿಕೊಂಡು, ರಾಷ್ಟ್ರ ಪ್ರಭುತ್ವದ ಜೊತೆಗೆ ಗುರುತಿಸಿಕೊಳ್ಳುವುದರಿಂದ ಈ ಎಲ್ಲಾ ಗುಣಗಳನ್ನು ಪಡೆದುಕೊಳ್ಳುತ್ತದೆ ಮತ್ತು ಆಕ್ರಮಣದಿಂದ ವಿಸ್ತರಣೆ ಮಾಡುವುದು ರಾಷ್ರ್ಟೀಯ ಹಕ್ಕು ಎಂದು ಪ್ರತಿಪಾದಿಸುತ್ತದೆ ಹಾಗು ಇದು ರಾಷ್ಟ್ರದ ಸಲುವಾಗಿ ಅವಶ್ಯಕ ಎಂದು ವಾದಿಸುತ್ತದೆ. “ಆಧುನಿಕ ರಾಷ್ಟ್ರೀಯತೆ ಪದೇಪದೇ ಮತ್ತು ಯಾಂತ್ರಿಕವಾಗಿ ಸಾಮ್ರಾಜ್ಯಶಾಹಿಗೆ ಅಥವಾ ಆಕ್ರಮಣಕ್ಕೆ ಎಡೆಮಾಡಿಕೊಟ್ಟಿರುವುದಕ್ಕೆ ಪ್ರಭುತ್ವ ಮತ್ತು ದೇಶಗಳನ್ನು ಒಟ್ಟಾಗಿ ಗುರುತಿಸುವುದರಿಂದಲೇ.
ರಾಷ್ಟ್ರದ ಮೂಲಕ ಪ್ರಭುತ್ವವನ್ನು ಆಕ್ರಮಿಸಿಕೊಳ್ಳುವುದು, ರಾಷ್ಟ್ರವನ್ನು ಸಾರ್ವಭೌಮ ಎಂದು ಘೋಷಿಸಿಕೊಳ್ಳುವುದರೊಂದಿಗೆ ಪ್ರಾರಂಭವಾಯಿತು. ಪ್ರಭುತ್ವವನ್ನು ರಾಷ್ಟ್ರಕ್ಕೆ ಬೇಕಾದ ಸಾಧನವನ್ನಾಗಿ ರೂಪಾಂತರಿಸುವುದರಲ್ಲಿ ಅದು ಮೊದಲ ಹೆಜ್ಜೆಯಾಗಿತ್ತು. ಅದು ಕೊನೆಗೆ ಸರ್ವಾಧಿಕಾರಿ ರೂಪಗಳ ರಾಷ್ಟ್ರೀಯತೆಯಾಗಿ ಕೊನೆಗೊಂಡು ಪ್ರಭುತ್ವದ ಎಲ್ಲ ಕಾನೂನುಗಳು ಮತ್ತು ಕಾನೂನು ಸಂಸ್ಥಗಳನ್ನು ರಾಷ್ಟ್ರದ ಕಲ್ಯಾಣಕ್ಕಾಗಿ ಇರುವುದು ಎಂದು ಅರ್ಥೈಸಲಾಯಿತು. ಆದುದರಿಂದ ಪ್ರಭುತ್ವದ ದೈವೀಕರಣದಲ್ಲಿ ನಮ್ಮ ಕಾಲದ ಕೆಡುಕನ್ನು ಕಾಣುವುದು ಬಹುಶಃ ತಪ್ಪಾಗಬಹುದು. ದೇವರು ಮತ್ತು ಧರ್ಮದ ಪಾರಂಪರಿಕ ಸ್ಥಾನವನ್ನು ಕಿತ್ತುಕೊಂಡು ಆಕ್ರಮಿಸಿಕೊಂಡಿರುವುದು ರಾಷ್ಟ್ರ.
ಪ್ರಭುತ್ವವನ್ನು ಆಕ್ರಮಿಸಿಕೊಂಡ ಈ ನಡೆ ಸಾಧ್ಯವಾಗಿದ್ದೆ ಹತ್ತೊಂಭತ್ತನೇ ಶತಮಾನದ ಉದಾರವಾದಿ ವ್ಯಕ್ತಿವಾದದಿಂದ. ಪ್ರಭುತ್ವ ಅಧಿಕಾರ ನಡೆಸಬೇಕಿದ್ದು ಕೇವಲ ಬಿಡಿಬಿಡಿ ವ್ಯಕ್ತಿಗಳ ಮೇಲೆ, ವಿಘಟಿತ ಸಮಾಜದ ಮೇಲೆ ಮತ್ತು ಅದೇ ಸಮಾಜದ ವಿಘಟನೆಯನ್ನು ರಕ್ಷಿಸಲು ಅದಕ್ಕೆ ಕರೆ ನೀಡಲಾಗಿತ್ತು. ಮತ್ತೊಂದು ಕಡೆ ಆಧುನಿಕ ಪ್ರಭುತ್ವ “ಬಲಶಾಲಿ ಪ್ರಭುತ್ವವಾಗಿದ್ದು” ಕೇಂದ್ರೀಕರಣದ ಕಡೆಗೆ ತನ್ನ ಗಮನ ಹರಿಸಿ ಇಡೀ ರಾಜಕೀಯ ಜೀವನದ ಮೇಲೆ ಹಿಡಿತ ಸಾಧಿಸಿತು. ಕೇಂದ್ರೀಕೃತ ಪ್ರಭುತ್ವ ಮತ್ತು ವಿಘಟಿತ (ವ್ಯಕ್ತಿಕೇಂದ್ರಿತ, ಉದಾರವಾದಿ) ಸಮಾಜದ ನಡುವೆ ಇದ್ದ ಈ ಭಿನ್ನತೆಯ ಕಂದಕವನ್ನು ರಾಷ್ಟ್ರೀಯ ಭಾವನೆಯ ಶಕ್ತಿಶಾಲಿ ಸಿಮೆಂಟ್‍ನಿಂದ ಬೆಸೆಯಬೇಕಿತ್ತು, ಇದರಿಂದ ಮಾತ್ರ ರಾಷ್ಟ್ರ ಪ್ರಭುತ್ವದ ಬಿಡಿವ್ಯಕ್ತಿಗಳ ನಡುವೆ ಚಲನಶೀಲ ಮತ್ತು ಜೀವಂತ ಬೆಸುಗೆಯಾಗಲು ಸಾಧ್ಯವಾಯಿತು. ವ್ಯಕ್ತಿಯ ಸಾರ್ವಭೌಮತೆಯ ಮಾದರಿಯ ಆಧಾರದಲ್ಲಿ ರಾಷ್ಟ್ರದ ಸಾರ್ವಭೌಮತೆ ರೂಪುಗೊಳ್ಳುತ್ತಿದ್ದಾಗ, ರಾಷ್ಟ್ರ ಪ್ರಭುತ್ವವಾಗಿದ್ದ ಪ್ರಭುತ್ವದ ಸಾರ್ವಭೌಮತೆ ಪ್ರಾತಿನಿಧಿಕವಾಗಿತ್ತು ಮತ್ತು (ಸರ್ವಾಧಿಕಾರದ ರೂಪಗಳಲ್ಲಿ) ಎರಡರ ಮೇಲೂ ಹಿಡಿತ ಸಾಧಿಸುವುದಾಗಿತ್ತು. ರಾಷ್ಟ್ರ ಆಕ್ರಮಿಸಿಕೊಂಡ ಪ್ರಭುತ್ವ ಸರ್ವೋಚ್ಚ ವ್ಯಕ್ತಿಯಾಗಿ ಬೆಳೆಯಿತು ಮತ್ತು ಇದರ ಮುಂದೆ ಉಳಿದೆಲ್ಲ ವ್ಯಕ್ತಿಗಳು ತಲೆತಗ್ಗಿಸಬೇಕಾಯಿತು.
ರಾಷ್ಟ್ರ ತನ್ನನ್ನು ಆಕ್ರಮಿಸಿಕೊಂಡಿದ್ದರಿಂದ ಸಾಧ್ಯವಾಗಿ ಮತ್ತು ಸ್ವಾಯತ್ತ ವ್ಯಕ್ತಿಯ ಮಾದರಿಯ ನಂತರದಲ್ಲಿ ರೂಪುಗೊಂಡಿದ್ದು ಪ್ರಭುತ್ವದ ಅವತಾರ, ಹೆಗೆಲ್‍ನ ಪ್ರಭುತ್ವ ಮತ್ತು ಇತಿಹಾಸದ ಸಿದ್ಧಾಂತ ಮೊದಲ ಬಾರಿಗೆ ಕಂಡುಕೊಂಡಿದ್ದ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ “ಸಮೂಹದ ಒಳಗೆ ನೈತಿಕತೆಯ ಸಾರ್ವತ್ರಿಕತೆಯನ್ನು ವ್ಯಕ್ತಿವಾದಕ್ಕಿಳಿಸುವುದನ್ನು” ನೆಲೆಗೊಳಿಸಿತು. ನಿರ್ದಿಷ್ಟ ಹೆಗೆಲಿಯನ್ ಆದರ್ಶ ಕಣ್ಮರೆಯಾದ ಮೇಲೆ “ರಾಷ್ಟ್ರದ ಪರಿಕಲ್ಪನೆ, ಜನರ ಒಟ್ಟು ಆದರ್ಶ, ಜನಾಂಗದ ಆತ್ಮ ಅಥವಾ ಇನ್ನಿತರ ಸಮಾನಾಂತರ ಕಲ್ಪನೆಗಳು ಹೆಗೆಲ್‍ನ ಆದರ್ಶಗಳ ಸ್ಥಾನವನ್ನು ಬದಲಿಸಿದವು; ಆದರೆ ಪರಿಪೂರ್ಣದ ಪರಿಕಲ್ಪನೆ ಹಾಗೆಯೇ ಉಳಿಯಿತು.”
ಈ ವಿಚಾರದ ಪ್ರಮುಖ ಆಯಾಮವೆಂದರೆ ಯಾವುದೇ ಹೊಸ ಪರಿಕಲ್ಪನೆಯನ್ನು ಸ್ವತಂತ್ರ ಸಂಗತಿಯಾಗಿ ಗುರುತಿಸಲಾಗುವುದಿಲ್ಲ ಬದಲಾಗಿ ಇತಿಹಾಸದ ಚಲನೆಯಲ್ಲಿ ಅಥವಾ ಬದಲಾವಣೆಯಲ್ಲಿ ಅದು ತನ್ನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುತ್ತದೆ ಎಂಬುದು. ಅಂದಿನಿಂದ ಸರ್ವಾಧಿಕಾರಕ್ಕೆ ಎಡೆಮಾಡಿಕೊಡುವ ಎಲ್ಲ ಆಧುನಿಕ ರಾಜಕೀಯ ಸಿದ್ಧಾಂತಗಳು ಇತಿಹಾಸದ ಆಂದೋಲನದ ರೂಪದಲ್ಲಿ ಪರಿಪೂರ್ಣ ತತ್ವವನ್ನು ವಾಸ್ತವದಲ್ಲಿ ಮುಳುಗಿಸುವುದರ ಮೂಲಕ ಪ್ರಸ್ತುತಪಡಿಸಿವೆ. ಮತ್ತು ತಾವು ಸಾಕಾರಗೊಳ್ಳುತ್ತಿರುವಂತೆ ನಟಿಸುವ ಈ ಪರಿಪೂರ್ಣತೆಯೇ ಅವರಿಗೆ ವ್ಯಕ್ತಿಯ ಆತ್ಮಪ್ರಜ್ಞೆಗಿಂತ, ಆದ್ಯತೆಯ “ಹಕ್ಕುಗಳನ್ನು” ನೀಡುವುದು.
ಎಲ್ಲಾ ಒಂದು-ಪಕ್ಷದ ವ್ಯವಸ್ಥೆಗಳು ಹುಟ್ಟಿಕೊಂಡು ಕೆಲಸ ಮಾಡುವುದು ಈ “ಆಂದೋಲನಗಳ” ಮೂಲವಿನ್ಯಾಸದ ದಾರಿಯಲ್ಲಿ ಹೆಜ್ಜೆ ಇಡುವುದರಿಂದಲೇ ಎನ್ನುವುದು ತಾರ್ಕಿಕ. ಈ ಆಂದೋಲನಗಳು “ತಾತ್ವಿಕತೆಯಿಂದ ಕೂಡಿವೆ” ಮತ್ತು ಅದು ಆ ಆಂದೋಲನದಲ್ಲೇ ಸಾಕ್ಷಾತ್ಕಾರಗೊಳ್ಳುತ್ತದೆ. ಆದರೆ ಹಳೆಯ ಪಕ್ಷಗಳು ಸಾದಾ ಯಾವುದಾದರೊಂದು ರಾಜಕೀಯ ಸಿದ್ಧಾಂತದಿಂದ ಸ್ಫೂರ್ತಿಗೊಂಡಿದ್ದರೂ, ತಮ್ಮ ಉದ್ದೇಶಗಳನ್ನು ತಮ್ಮಗಳ ಹೊರಗಿರುವ ಅಂತ್ಯಗಳು ಎಂದೇ ಭಾವಿಸಿದ್ದವು. ಆಧುನಿಕ “ಆಂದೋಲನಗಳ” ಗುಣಲಕ್ಷಣಗಳಾದ – ಮಾರ್ಗಗಳು ಮತ್ತು ಅಂತ್ಯಗಳನ್ನು ಗುರುತಿಸುವುದು – ಚಿರಂತನ ಚಲನಶೀಲತೆಯ ಕಲ್ಪನೆಯ ವ್ಯವಸ್ಥೆಯಲ್ಲಿ ಅಡಗಿದೆ. “ಗುಂಪಿನ ಒಳಗೆ ವ್ಯಕ್ತಿಯನ್ನು ಹೀರಿಕೊಳ್ಳುವುದು ಮಾತ್ರವೇ ಸರ್ವಾಧಿಕಾರದ ಲಕ್ಷಣವಾಗಿರದೆ, ಅವನನ್ನು ವಿಧೇಯನನ್ನಾಗಿ ಅರ್ಪಿಸಿಕೊಳ್ಳುವಂತೆ ಮಾಡುವುದೂ ಆಗಿದೆ”. ಸಾಮಾನ್ಯ ಮತ್ತು ಸಾರ್ವತ್ರಿಕತೆಯಂತೆ ಕಾಣುವ ವಾಸ್ತವಕ್ಕೆ ವಿರುದ್ಧವಾಗಿ, ಪ್ರತ್ಯೇಕ ವ್ಯಕ್ತಿಯ ನಿರ್ದಿಷ್ಟ ವಾಸ್ತವವು, ಆಂದೋಲನವಾಗಿ ಸಂಘಟಿತವಾಗಿರುವ ಮತ್ತು ಅದರಿಂದಲೇ ಸಾರ್ವತ್ರಿಕವೂ ಆಗಿರುವ ಸಾರ್ವಜನಿಕ ಜೀವನದ ತೊರೆಯಲ್ಲಿ ಮುಳಗಿ ಗುಂಪಿನಲ್ಲಿ ಗೋವಿಂದ ಎಂಬಂತೆ ಭಾಸವಾಗುತ್ತದೆ.
ರಾಷ್ಟ್ರೀಯತೆ ಫ್ಯಾಸಿಸಂ ಆಗಿ ಬೆಳೆಯುವುದು ಹೀಗೆ: “ರಾಷ್ಟ್ರ ಪ್ರಭುತ್ವ” ಸರ್ವಾಧಿಕಾರಿ ಪ್ರಭುತ್ವವಾಗಿ ಬದಲಾಗುತ್ತದೆ ಅಥವಾ ಅವತಾರ ಎತ್ತುತ್ತದೆ ಎನ್ನುವುದು ಸೂಕ್ತ. ಸರ್ವಾಧಿಕಾರಗಳ ಪ್ರಾಥಮಿಕ ರೂಪಗಳನ್ನು ಮಾತ್ರ ನಾಶಗೊಳಿಸಿ ನಮ್ಮ ರಾಜಕೀಯ ವ್ಯವಸ್ಥೆಗಳ ಮೂಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದೆ ಹೋದರೆ ನಾಗರಿಕತೆ ನಶಿಸಿಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. “ರಾಷ್ಟ್ರ ಮತ್ತು ಪ್ರಭುತ್ವದ ನಡುವಿನ ಸಂಬಂಧಗಳು – ಸಾಮಾನ್ಯ ಮತ್ತು ನಿರ್ದಿಷ್ಟ ವ್ಯಾಖ್ಯಾನಗಳಲ್ಲಿ ಹೇಳುವುದಾದರೆ – ರಾಜಕೀಯ ವ್ಯವಸ್ಥೆ ಮತ್ತು ರಾಷ್ಟ್ರೀಯತೆಯ ನಡುವಿನ ಸಂಬಂಧ – ನಮ್ಮ ನಾಗರಿಕತೆ ಬಗೆಹರಿಸಿಕೊಳ್ಳಬೇಕಿರುವ ಅತಿಮುಖ್ಯ ಸಮಸ್ಯೆಯನ್ನು ಎತ್ತುತ್ತದೆ”. ಪ್ರಭುತ್ವ ರಾಷ್ಟ್ರದಂತೆಯೇ ಒಂದೇ ತರಹ ಎನ್ನುವ ಮಾತಂತೂ ದೂರವೇ ಇರಬೇಕು, ಆದರೆ ಅದು ಕಾನೂನಿನ ಸರ್ವೋಚ್ಚ ರಕ್ಷಕನಾಗಿದ್ದು, ವ್ಯಕ್ತಿಗೆ ವ್ಯಕ್ತಿಯಾಗಿ ಅವನ ಹಕ್ಕುಗಳನ್ನು, ನಾಗರಿಕನಾಗಿ ಅವನ ಹಕ್ಕುಗಳನ್ನು ಮತ್ತು ರಾಷ್ಟ್ರಕನಾಗಿ ಅವನ ಹಕ್ಕುಗಳನ್ನು ದೃಢಪಡಿಸುತ್ತದೆ. “ಪ್ರಭುತ್ವದ ನಿಜವಾದ ಕೆಲಸ ಎಲ್ಲ ಹಕ್ಕುಗಳನ್ನು ರಕ್ಷಿಸುವ ಕಾನೂನು ವ್ಯವಸ್ಥೆಯನ್ನು ಸ್ಥಾಪಿಸುವುದು” ಮತ್ತು ಅದರ ಶಾಸನ ಸಂಸ್ಥೆಗಳ ಚೌಕಟ್ಟಿನಲ್ಲಿ ರಕ್ಷಣೆಗೊಳ್ಳುವ ಹಲವು ರಾಷ್ಟ್ರೀಯತೆಗಳು ಈ ಕೆಲಸಕ್ಕೆ ಅಡ್ಡಿಯಾಗುವುದಿಲ್ಲ. ಈ ಹಕ್ಕುಗಳಲ್ಲಿ ವ್ಯಕ್ತಿಯ ಮತ್ತು ನಾಗರಿಕನ ಹಕ್ಕುಗಳು ಮಾತ್ರ ಪ್ರಾಥಮಿಕ ಹಕ್ಕುಗಳು, ಆದರೆ ರಾಷ್ಟ್ರಕನ ಹಕ್ಕುಗಳು ಅವುಗಳಿಂದ ಪಡೆದುಕೊಂಡಿರುವಂತವು ಮತ್ತು ಅರ್ಥೈಸಿಕೊಂಡಿರುವಂತವು. “ರಾಷ್ಟ್ರವು ಕಾಲ, ಇತಿಹಾಸ ಮತ್ತು ವಿಶ್ವಮಾನವನಾಗಿ ರೂಪುಗೊಳ್ಳುವಿಕೆಗೆ ಅವಲಂಬಿತನಾಗಿ ವ್ಯಕ್ತಿಯನ್ನು ಪ್ರಸ್ತುತಪಡಿಸಿದರೆ” ಅವನ ಹಕ್ಕುಗಳಿಗೆ “ಅವುಗಳ ಮೂಲದ ಪ್ರಕಾರವಾಗಿ ಸಾಪೇಕ್ಷವಾಗಿ ಪರಿಣಾಮವಾಗುತ್ತದೆ”. ಏಕೆಂದರೆ “ಫ್ರೆಂಚ್‍ನವನಾಗಿರುವುದು, ಸ್ಪಾನಿಶ್ ಅಥವಾ ಇಂಗ್ಲಿಷ್ ಆಗಿರುವುದು ಒಬ್ಬ ವ್ಯಕ್ತಿಯಾಗುತ್ತಿರುವುದಕ್ಕೆ ಮಾರ್ಗಗಳಲ್ಲ, ಅದು ವ್ಯಕ್ತಿಗಳಾಗಿರುವುದರ ಬಗೆ ಅದು”.
ನಾಗರಿಕ ಮತ್ತು ರಾಷ್ಟ್ರಕನ ನಡುವಿನ ಈ ವ್ಯತ್ಯಾಸಗಳು, ರಾಜಕೀಯ ವ್ಯವಸ್ಥೆ ಮತ್ತು ರಾಷ್ಟ್ರಪ್ರಭುತ್ವದ ನಡುವಿನ ವ್ಯತ್ಯಾಸಗಳು, ಒಂದು ಕಡೆ “ಒಗ್ಗಟ್ಟಿನ ಬೆಳವಣಿಗೆ” ಮತ್ತೊಂದು ಕಡೆ ಜನರಲ್ಲಿ ಹೆಚ್ಚುತ್ತಿರುವ ರಾಷ್ಟ್ರೀಯ ಪ್ರಜ್ಞೆಯಿಂದ, ನಮ್ಮ ನಾಗರಿಕತೆಯ ರಾಜಕೀಯ ಅವಶ್ಯಕತೆಯಂತೆ, ವ್ಯಕ್ತಿಯನ್ನು ಸಾರ್ವಜನಿಕ ಜೀವನದಲ್ಲಿ ಸರಿಯಾದ ರಾಷ್ಟ್ರಕನ ಸ್ಥಳದಲ್ಲಿಟ್ಟು ರಾಷ್ಟ್ರೀಯತೆಯ ಬಗ್ಗೆ ಗಂಭೀರವಾಗಿ ಗಮನ ಹರಿಸಿ ಕಾರ್ಯಾಚರಣೆಗೆ ಇಳಿಯುವಂತೆ ಮಾಡುತ್ತದೆ ಮತ್ತು ಇದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಗೆ ಅವಕಾಶ ಮಾಡಿಕೊಡುತ್ತದೆ. ಒಕ್ಕೂಟ ವ್ಯವಸ್ಥೆಗಳಲ್ಲಿ ರಾಷ್ಟ್ರೀಯತೆ ಎಂಬುದು ಗಡಿಯ ಹೆಮ್ಮೆಯ ಭಾವನೆಗಿಂತಲೂ ವೈಯಕ್ತಿಕ ಸ್ಥಾನಮಾನ ಆಗಿರುತ್ತದೆ. ಪ್ರಭುತ್ವ ಮತ್ತೊಂದು ಕಡೆ “ತನ್ನ ಶಾಸನಾತ್ಮಕ ವ್ಯಕ್ತಿತ್ವವನ್ನು ಕಳೆದುಕೊಳ್ಳದೆ ಸೀಮಿತ ಗಡಿಯಲ್ಲಿ ಕಾರ್ಯದಕ್ಷತೆ ನಿರ್ವಹಿಸಬೇಕಾದ ಅಂಗದಂತೆ ಕಾಣತೊಡಗುತ್ತದೆ”.
ಡೆಲೋಸ್ ಅವರ ಅಧ್ಯಯನದ ಮೇಲೆ ಚರ್ಚೆಗೆ ತೊಡಗಲು ಖಂಡಿತಾ ಇದು ಜಾಗವಲ್ಲ. ವಿಮರ್ಶೆಯ ಸೀಮಿತತೆಯಲ್ಲಿ ಟೀಕಿಸುವುದಕ್ಕಿಂತಲೂ ಪ್ರಮುಖವಾದ ಅಧ್ಯಯನ ಇದು. ಆದರೂ ಒಂದನ್ನು ಟಿಪ್ಪಣಿಯನ್ನು ಸೇರಿಸಬಹುದಾದರೆ, ರಾಷ್ಟ್ರೀಯತೆ ಸರ್ವಾಧಿಕಾರವಾಗಿ ಬೆಳೆಯುವ ತಮ್ಮ ಅದ್ಭುತ ಅವಲೋಕನದಲ್ಲಿ ಡೆಲೋಸ್ ಅವರು ಅದಕ್ಕೆ ಅಷ್ಟೇ ಹತ್ತಿರದ ಸಂಬಂಧ ಇರುವ ಸಾಮ್ರಾಜ್ಯಶಾಹಿಯನ್ನು ನಿರ್ಲಕ್ಷಿಸುತ್ತಾರೆ – ಅದನ್ನು ಕೇವಲ ಅಡಿಟಿಪ್ಪಣಿಯಾಗಿ ದಾಖಲಿಸುತ್ತಾರೆ. ಆಧುನಿಕ ರಾಷ್ಟ್ರೀಯತೆಯ ಜನಾಂಗೀಯ ತಾರತಮ್ಯವಾದವನ್ನಾಗಲೀ ಅಥವಾ ಆಧುನಿಕ ಪ್ರಭುತ್ವದ ಅಧಿಕಾರದಾಹದ ತಿಕ್ಕಲುತನವನ್ನಾಗಲೀ ಸಾಮ್ರಾಜ್ಯಶಾಹಿಯ ಸರಿಯಾದ ತಿಳಿವಳಿಕೆಯಿಲ್ಲದೆ ವಿವರಿಸಲು ಸಾಧ್ಯವಿಲ್ಲ.

ಹನ್ನಾ ಅರೆಂಟ್
ಜರ್ಮನಿ ಮೂಲದ ಅಮೆರಿಕದ ರಾಜಕೀಯ ಚಿಂತಕಿ. ನಾಜಿಗಳ ದುರಾಕ್ರಮಣವನ್ನು ತಪ್ಪಿಸಿಕೊಂಡು ಅಮೆರಿಕಕ್ಕೆ ನಿರಾಶ್ರಿತಳಾಗಿ ವಲಸೆಹೋದ ನಂತರ ಹಲವಾರು ಲೇಖನಗಳು ಮತ್ತು ಪುಸ್ತಕಗಳನ್ನು ಬರೆದರು. ಅವರ ‘ಆರಿಜನ್ಸ್ ಆಫ್ ಟೊಟಾಲಿಟಾರಿನಿಸಂ’, ‘ಆನ್ ವಾಯ್ಲೆನ್ಸ್’ ಸೇರಿದಂತೆ, ಅರೆಂಟ್ ಅವರ ರಾಜಕೀಯ ಚಿಂತನೆಯ ಹಲವು ಪುಸ್ತಕಗಳು ಇಂದಿಗೂ ಹಲವು ಸರ್ವಾಧಿಕಾರಿ ವಿರೋಧಿ ಹೋರಾಟಗಳಿಗೆ ತಿಳಿವಳಿಕೆ ನೀಡುವ ಬರಹಗಳಾಗಿವೆ.
ಪ್ರಸ್ತುತ ಬರಹ ಟಿ. ಡೆಲೋಸ್ ಎಂಬ ಲೇಖಕನ ಎರಡು ಸಂಪುಟಗಳ ‘ಲೆ ನೇಶನ್’ ಪುಸ್ತಕದ ವಿಮರ್ಶ ಬರಹವಾಗಿದ್ದು, ಈ ಪ್ರಬಂಧವೇ ಸ್ವತಂತ್ರವಾಗಿ ಪ್ರಭುತ್ವ, ರಾಷ್ಟ್ರ, ರಾಷ್ಟ್ರೀಯತೆ ಮತ್ತು ವ್ಯಕ್ತಿಗಳ ಸಂಬಂಧವನ್ನು ಚರ್ಚಿಸುವುದಲ್ಲದೆ, ರಾಷ್ಟ್ರೀಯತೆ ಸರ್ವಾಧಿಕಾರವಾಗಿ ಬೆಳೆಯುವ ಅಪಾಯವನ್ನೂ ಚರ್ಚಿಸುತ್ತದೆ. ಪ್ರಸ್ತುತ ಪ್ರಬಂಧವನ್ನು ಅವರ ‘ಎಸ್ಸೇಸ್ ಇನ್ ಅಂಡರ್‍ಸ್ಟಾಂಡಿಂಗ್ 1930-1954’ ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ.
ಕನ್ನಡಕ್ಕೆ: ಆಕೃತಿ ಗುರುಪ್ರಸಾದ್


