Homeಕಥೆವಿ.ಎಂ ಮಂಜುನಾಥ್ ಹೊಸ ಕಾದಂಬರಿ : ರೈತನೊಬ್ಬನ ಡೈರಿ, ಮೊದಲೆರಡು ಅಧ್ಯಾಯಗಳು

ವಿ.ಎಂ ಮಂಜುನಾಥ್ ಹೊಸ ಕಾದಂಬರಿ : ರೈತನೊಬ್ಬನ ಡೈರಿ, ಮೊದಲೆರಡು ಅಧ್ಯಾಯಗಳು

ಫುಕುವೋಕಾನ ಕೃಷಿ ಪದ್ಧತಿಯನ್ನು ಅನುಸರಿಸುವ ಇವನು ವಿಷಯುಕ್ತ ಔಷಧಿಯನ್ನು ಯಾವ ಬೆಳೆಗೂ, ಒಂದು ಸಣ್ಣಗಿಡಕ್ಕೂ ಸಿಂಪಡಿಸಲಾರ.

- Advertisement -
- Advertisement -

ಅಧ್ಯಾಯ 1

ಚಾರ್ಲ್ಸ್ ಪೆರುಮಾಳ್ ದೀರ್ಘ ಚಿಂತನೆಯಲ್ಲಿರುವಾಗಷ್ಟೇ ತನ್ನ ವಿಲ್ಲೀಸ್ ಜೀಪು ಮತ್ತು ಮೋಟಾರ್‌ಸೈಕಲ್ ಅನ್ನು ಅತ್ಯಂತ ಶಿಸ್ತಿನಲ್ಲಿ ಓಡಿಸುವುದು, ಅಪರಿಮಿತ ಆನಂದದಲ್ಲಿರುವಾಗ ಚಾಲನೆಯ ವೈಖರಿಯನ್ನು ವರ್ಣಿಸುವುದು ಸುಲಭದ ಮಾತಲ್ಲ. ಮೈಲುಗಳಷ್ಟು ದೂರ ತನ್ನ ಕಣ್ಣುಗಳನ್ನು ಮುಚ್ಚಿಕೊಂಡೇ ಜೀಪು ಓಡಿಸುವನು, ಅದೂ ಒನ್‍ವೇನಲ್ಲಿ. ಇಲ್ಲಿಯವರೆಗೆ ಅಪಘಾತಗಳು ಸಂಭವಿಸಿರುವುದು ಇವನು ತನ್ನೆರಡೂ ಕಣ್ಣುಗಳನ್ನು ಎಂಟು ಕಣ್ಣುಗಳನ್ನಾಗಿಸಿಕೊಂಡು ಜಾಗರೂಕತೆಯಿಂದ ಜೀಪು ಓಡಿಸಿದಾಗ. ನಗರದ ಆಚೆಬದಿ, ರಸ್ತೆ ಸೀಳುವ ಗ್ರಾಮದ ಹಂಚಿನ ಮನೆಗಳ ಗೋಡೆಗಳನ್ನು ಉಜ್ಜಿಕೊಂಡು ಜೀಪು ನಿಂತಾಗ ಸುಡುಮಧ್ಯಾಹ್ನ. ಅದು ಹುಲ್ಲುಗಾವಲಿನಿಂದಾವೃತಗೊಂಡ ದುಡುಕಿನ ಹಳ್ಳಿ ಕೊಯಿರಾ. ಪಾಂಡವರು ವನವಾಸದಲ್ಲಿದ್ದಾಗ ಇಲ್ಲಿ ಕೆಲಕಾಲ ತಂಗಿದ್ದರಂತೆ, ಆದಕಾರಣ ಈ ಗ್ರಾಮದಲ್ಲಿ ದ್ರೌಪದಿ ಗುಣರೂಪದ, ಸ್ವಭಾವದ ಹೆಣ್ಣುಗಳು ಜನ್ಮ ತಳೆಯುತ್ತಾರೆ ಎಂಬ ಪ್ರತೀತಿ ಇದೆ. ಬ್ರದರ್ ಕಂಪೆನಿಯ ಪೋರ್ಟಬಲ್ ಟೈಪ್‍ರೈಟರ್ ಎತ್ತಿಕೊಂಡು ಕೆಳಗಿಳಿದು ಸುಸ್ತಾದವನಂತೆ ಮುಂದಿನ ಚಕ್ರಕ್ಕೆ ಆನಿಕೊಂಡು ಕುಳಿತ, ಕಾಲುಗಳನ್ನು ನೀಟಿಕೊಂಡು. ಅಕ್ಷರಗಳನ್ನು ದಕ್ಕಿಸಿಕೊಳ್ಳುವ ಬಿಳಿಹಾಳೆಯನ್ನು ತುರುಕುವುದು ಅಚ್ಚುಮೆಚ್ಚೇನಲ್ಲ, ಅವನ ಮಡುವಿನಲ್ಲಿ ಮುಗ್ಧಮಗುವಿನಂತೆ ಟೈಪ್‍ರೈಟರ್ ಕೀಗಳು ಬಡಿದುಕೊಳ್ಳತೊಡಗಿದವು. ಮೂತ್ರ ಹೊಯ್ಯುವುದನ್ನು ನಿಲ್ಲಿಸಿಬಿಡುತ್ತಾನೆ, ಫುಕುವೋಕಾನ ಚಿತ್ರವುಳ್ಳ ಕ್ಯಾಪ್ ಇಟ್ಟುಕೊಳ್ಳುವುದನ್ನು ಮಾತ್ರ ಮರೆಯಲಾರ. ಎದೆಯತನಕ ಬೆಳೆದ ಗಡ್ಡ, ಮೂಗಿನವರೆಗೂ ಇಳಿದ ಕನ್ನಡಕ, ತುಟಿಯಲ್ಲಿ ಓಡಾಡುವ ಪೈಪ್, ಚರ್ಮದ ಚೀಲ, ರೆಡ್‍ಹಾಕ್ ರಿವಾಲ್ವರ್, ಅಲ್ಲಲ್ಲಿ ಅಸ್ತವ್ಯಸ್ತವಾಗಿ ಬಿದ್ದಿರುವ ಬೂಟುಗಳು ಇವನ ವಿಚಿತ್ರ ನಿವೇದನೆಗೆ ಸಹಕಾರಿಯಾಗಿದ್ದವು. ಆಗೊಂದು ಈಗೊಂದು ಹಾದುಹೋಗುವ ಟ್ರಕ್‍ಗಳು, ಮೋಟಾರ್ ಸೈಕಲ್‍ಗಳು, ಟೆಂಪೋಗಳನ್ನು ಅಲ್ಲಲ್ಲೇ ಕಚ್ಚಿಸಿ, ಸುಟ್ಟುಹಾಕಬೇಕೆನ್ನಿಸಿತು. ಕೀಗಳು ಬಡಿದಾಡಲಾರಂಭಿಸಿದವು; ಆಗಾಗ ಅವು ಕಣ್ಣುಗಳಿಗೆ ತಿವಿಯುವಂತಿದ್ದವು. ಒಮ್ಮೊಮ್ಮೆ ರೇಗುತ್ತವೆ, ಅವುಗಳ ವಿಚಿತ್ರ ಚಲನೆಯಿಂದ, ಮನುಷ್ಯರಂತೆಯೇ ಆಡುತ್ತವೆ; ಆಗ ಮೀಟಿ ಹಾಕಲೂ ಹಿಂಜರಿಯಲಾರ.

ಮಾನ್ಯ ಮುಖ್ಯಮಂತ್ರಿಗಳು,

ಕರ್ನಾಟಕ ಸರ್ಕಾರ,

ಬೆಂಗಳೂರು.

ವಿಷಯ: ಜಿಆರ್ ರೆಡ್ಡಿ ಮತ್ತು ಅವನ ಹೆಂಡತಿ ಕುಮುದರೆಡ್ಡಿ ಇವರಿಬ್ಬರ ಜೋಡಿ ಕೊಲೆ ಮಾಡಲು ಆದೇಶ ಕೋರಿ.

ಮಹಾಸ್ವಾಮಿ,

ಫೋರ್ಡ್ ಥಂಡರ್‌ಬರ್ಡ್ ವಿಂಟೇಜ್ ಕಾರಿನ ಸಹವಾಸದಿಂದ ನನ್ನ ಬದುಕು ಮೂರಾಬಟ್ಟೆಯಾದ ಕತೆ ನಿಮಗಿನ್ನೂ ಗೊತ್ತಿಲ್ಲ ಅಂತ ಕಾಣುತ್ತೆ. ಮನುಷ್ಯನ ವೈಯಕ್ತಿಕ ವಿಚಾರ ನಿಮಗೆ ಹೇಗೆ ಗೊತ್ತಾಗ್ಬೇಕು? ಇರಲಿ, ನಾನು ನನ್ನ ಹೆಂಡತಿ ರೇಚಾ ಪ್ರೇಮದ ಎಲ್ಲ ವರಸೆಗಳನ್ನ ಅನುಭವಿಸ್ತಿದ್ವಿ. ಇಂಡಿಯಾದ ಪ್ರಾಚೀನ ಪ್ರೇಮಪುರಾಣಗಳು ನಮ್ಮೆದುರಿಗೆ ಜೋಲಿ ಹೊಡ್ದುಬಿಡೋವು. ನಾವು ಪ್ರೇಮದ ಗಿಣಿಗಳು, ಪಾರಿವಾಳಗಳು, ಕೊಳದೊಳಗೆ ಈಜಾಡುವ ಹಂಸಪಕ್ಷಿಗಳೇ ಆಗಿದ್ವಿ. ಮದುವೆಯಾದ ಮೇಲೆ ಅವಳಿಗೆ ಪ್ರೇಮಪತ್ರ ಬರೆದೆ. ಇದೆಂಥಾ ಹಳಸಲು ಪ್ರೇಮ ಅಂತ ಉದಾಸೀನ ಮಾಡಬೇಡಿ. ನಾನು ಕೆಲಸದ ಮೇಲಿದ್ದಾಗ ನಾನು ಬರೆದ ಪ್ರೇಮಪತ್ರವನ್ನು ಪಾರಿವಾಳ ಅವಳಿಗೆ ತಲುಪಿಸುವ ಕೆಲಸ ಮಾಡ್ತಿತ್ತು. ಆ ಸಂಜೆ, ನಾನು ನನ್ನ ಹೆಂಡತಿ ರೇಚಾ, ಹೇನ್ಸ್ ರಸ್ತೆಯಲ್ಲಿ ಕೋಣನ ಮಾಂಸ ತಿನ್ತಾ ಮಜವಾಗಿ ಕಾಲ ಕಳೀತಿದ್ವಿ. ರಾಷ್ಟ್ರವ್ಯಾಪಿ ಗೋಹತ್ಯೆ ನಿಷೇಧ ಚಳವಳಿ ಜೋರಾಗಿ ನಡೀತಿತ್ತು. ನಮಗಂತೂ ಅದು ಸುಗ್ಗಿಕಾಲವೇ! ಆಗ ಬಂತು ನೋಡಿ, ಹಳ್ಳಿಗಾಡಿನ ಕೊಳ್ಳಿದೆವ್ವ! ಆ ಕಾರ್ ಬೇಕೇಬೇಕು ಅಂತ ಹಠ ಹಿಡಿದ್ಳು, ಕೊಡಿಸ್ತೀನಿ ಅಂದುಬಿಟ್ಟೆ. ಆ ಕಾರ್‍ನ ಮಾಲೀಕಳಾದ ಕುಮುದ ರೆಡ್ಡಿಯ ಕಾಲಿಗೆ ಬಿದ್ದೆ, ಅವಳ ಗಂಡ ಲ್ಯಾಂಡ್ ಡೆವಲಪರ್, ಭೂಗತ ಪಾತಕಿ, ಕುದುರೆ ವ್ಯಾಪಾರಿ ಜಿಆರ್ ರೆಡ್ಡಿಯನ್ನು ಕೇಳ್ಕೊಂಡೆ. ಎಷ್ಟು ಬೇಕು ಹಣ ಕೇಳು ಅಂದೆ, ಒಪ್ಪಲಿಲ್ಲ. ರೇಚಾ ನನಗೆ ಡೈವೋರ್ಸ್ ಕೊಟ್ಟುಬಿಟ್ಳು. ಮಗ ಚಾರೇ ಅವನು ಮೊದಲೇ ತಬ್ಬಲಿ, ನಿಜವಾಗಲೂ ತಬ್ಬಲಿಯಾಗ್ಬಿಟ್ಟ. ಅವನೊಬ್ಬ archer, ಅವನ ಬಾಣದ ಗುರಿ ಎಷ್ಟು ನಿಖರ ಗೊತ್ತೇ? ಕೆಸರಿನಲ್ಲಿ ಹರಿದಾಡುವ ಏಡಿಕಾಯಿಗಳನ್ನು, ಆಗತಾನೆ ಹುಲ್ಲುಬಯಲಿನ ಮೇಲೆ ಡಾಲ್ಫಿನ್‍ಗಳಂತೆ ವಿನೋದಿಸಲು ಬರುವ ಮಾರ್ವೆ ಮೀನುಗಳನ್ನು ಅವು ಮುಳುಗುವಷ್ಟರೊಳಗೆ ಹೊಡೆದು ಹಾಕುತ್ತಾನೆ.

ನೀವು ಎಲ್ಲ ಯೋಜನೆಗಳನ್ನ, ಪ್ರಕರಣಗಳನ್ನ ಐಎಎಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ತೀರಿ ಅಂತ ಕೇಳಿದ್ದೀನಿ. ಯಾವ ಮೀನಿಗೆ ಯಾವ ಬಲೆ ಅನ್ನೋದೆ ಅವರಿಗೇ ಗೊತ್ತಿರಲ್ಲ. ಹವಾನಿಯಂತ್ರಿತ ರೂಮಿನಲ್ಲಿ ಮಲಕ್ಕೊಂಡು ಮೀನುಗಾರರಿಗೆ ಬಜೆಟ್ ಸಿದ್ಧಪಡಿಸ್ತಾರೆ. ದೊಡ್ಡ ದೊಡ್ಡ ಕೆಸರುಗುಂಡಿಗಳಲ್ಲಿ ಇಳಿದು ಮೀನು ಹಿಡೀತಾರಲ್ಲ, ಅಂತಹ ಮೀನುಗಾರರರನ್ನ ಪಕ್ಕ ಕೂರಿಸಿಕೊಳ್ಳಿ. ಎಷ್ಟು ವೇಗದಲ್ಲಿ ಮೀನು ಚಲಿಸಬಲ್ಲದು, ಎಂಥಾ ಮುಳ್ಳುಗಳನ್ನು ಅವು ಹೊಂದಿರ್ತವೆ ಅನ್ನೋದನ್ನ ಅವನು ಕರಾರುವಾಕ್ಕಾಗಿ ಹೇಳಬಲ್ಲರು. ನನ್ನ ಗ್ರಾಮದ ಮುನಿದಾಸ ಇದಕ್ಕೆ ತಕ್ಕ ಉದಾಹರಣೆ. ಕೆರೆಕೋಡಿಯಲ್ಲಿ ಒಂದು ಟನ್ ಮೀನುಗಳನ್ನು ಹಿಡಿದು ಕೆರೆ ಗುತ್ತಿಗೆದಾರನ ಹುಟ್ಟಡಗಿಸಿದ ವೀರ. ಮನುಷ್ಯ ಜಾತಿಯನ್ನ ಮಾತ್ರ ಸರ್ಕಾರ ಕಂಡುಹಿಡಿದು ಬಯಲು ಮಾಡುತ್ತೆ. ಆ ವಿಷಯ ಈಗ ಬೇಡ. ಏನೇ ಆದರೂ ಮಾನವತೆಯ ನೆಲೆಯಲ್ಲಿ ಈ ಪ್ರಕರಣವನ್ನು ಪರಿಶೀಲಿಸಿ ನನ್ನ ಕೋರಿಕೆಯನ್ನ ಮಂಜೂರು ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಸರಿಸುಮಾರು ಹದಿನೈದು ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದೇನೆ. ಭೂಗತ ಲೋಕದೊಂದಿಗೆ ನಂಟು ಇಟ್ಟುಕೊಂಡಿದ್ದೀನಿ ಅನ್ನೋದು ಅಷ್ಟುಮುಖ್ಯ ಅಲ್ಲ. ಅಂದಹಾಗೆ ಚಾರ್ಲ್ಸ್ ಶೋಭರಾಜ್‍ಗೂ ನನ್ಗೂ ಯಾವ ಸಂಬಂಧವೂ ಇಲ್ಲ, ಹೋಲಿಕೆ ಇರಬಹುದು. ನಿಮ್ಮ ಹೋಲಿಕೆಯೂ ಅನೇಕ ಮಹಾತ್ಮರನ್ನು ಹೋಲುವುದು ಕಾಕತಾಳೀಯವೇ.

ವಿಶೇಷ ಸೂಚನೆ: ನಾನು ಸಹಜ ಕೃಷಿಕ, ಬೇಸಾಯಗಾರ. ಮಳೆ ನಂಬಿ ಬದುಕೋನು. ಜಪಾನಿನ ಮಸನಬು ಫುಕುವೋಕಾ ನನ್ನ ಬದುಕಿನ ಮಹಾನ್ ಗುರು. ನಂದಿಬೆಟ್ಟದ ತಪ್ಪಲಿನಲ್ಲಿ Owl’s farm ಇದೆ, ಹದಿನೈದೆಕರೆ ಜಮೀನು. ಬ್ರೋಕರ್‌ಗಳ ತಂಟೆ ಯಾಕೆ ಬೇಕೂಂತ ನಾನೇ ತರಕಾರಿ, ಸೊಪ್ಪು, ನಾಟಿಕೋಳಿಗಳನ್ನ ಹೊತ್ಕಂಡು ಹೋಗಿ ಮೆಳೆಕೋಟೆ ಸಂತೆಗೆ ಹಾಕ್ತೀನಿ.

ಇಂತಿ ತಮ್ಮ ವಿಶ್ವಾಸಿ,

ಚಾರ್ಲ್ಸ್ ಪೆರುಮಾಳ್, the complete man, since 1969.

ವಿಲ್ಲೀಸ್ ಜೀಪು ತಿರುಗಿಸಿಕೊಂಡು ಅಂಚೆ ಡಬ್ಬ ಇರುವ ಕಡೆ ಡ್ರೈವ್ ಮಾಡತೊಡಗಿದ, ಸಿಟ್ಟು ಮತ್ತು ಅಸಹಾಯಕತೆ ಚಾರ್ಲ್ಸ್‌ನನ್ನು ಇನ್ನಿಲ್ಲದಂತೆ ತಿನ್ನುತ್ತಿದ್ದವು. ಲೆಕ್ಕಕ್ಕೆ ಸಿಗದಷ್ಟು ಕತ್ತೆಗಳು ಅದೆಲ್ಲಿಂದ ರಸ್ತೆಯ ಮೇಲೆ ನುಗ್ಗಿಬಂದವೋ, ಚಕ್ರಗಳಡಿಯಲ್ಲಿ ಸಿಕ್ಕಿಕೊಳ್ಳಲಿಲ್ಲ, ತಾಕಿರಬೇಕು, ಚಕ್ರಗಳನ್ನು ಜಾಡಿಸಿ ಒದ್ದು ಎತ್ತೆತ್ತಲೋ ಓಡಿಹೋದವು. ಆಗಲೇ ಜೀಪು ಬೆದರಿ, ಅಲುಗಾಡಿದ್ದು, ಇಳಿದುಬಿಟ್ಟ. ಅಷ್ಟೊತ್ತಿಗೆ ಅಗಸರ ಹೆಂಗಸು, ತರಹುಣಿಸೆ ಕಡೆಯವಳು, `ಅಯ್ಯಯ್ಯೋ, ನಾ ಗಾಡ್ದಲು ಪೋಯ.’ ಬಾಯಿಬಾಯಿ ಬಡಿದುಕೊಂಡು ಓಡಿಬಂದಳು. ಚಾಲ್ರ್ಸ್‍ಗೆ ತೆಲುಗು ಅರ್ಥವಾಗುವುದು ಕಷ್ಟ, ಆದರೆ ಅವಳ ಅತಿರೇಕದ ನಟನೆ ಅವಳ ತಾಪತ್ರಯವೇನೆಂಬುದನ್ನು ಸ್ಪಷ್ಟಗೊಳಿಸಿತು. ಕೆರಳಿದ ಹುಲಿಯಂತೆ ತನ್ನ ಜೀಪಿಗೆ ಬಿದ್ದ ಗಾಯದ ಗುರುತುಗಳನ್ನು ನೋಡುತ್ತಾ, `ಏಯ್, ನಿನ್ನ ಕತ್ತೆಗಳು ಓಡಾಡೋದಕ್ಕ ರಸ್ತೆ ಮಾಡಿರೋದು. ಸರ್ಕಾರಕ್ಕೆ ಎಷ್ಟು ಟ್ಯಾಕ್ಸ್ ಕಟ್ತೀಯ?’ ಆ ಹೆಂಗಸನ್ನು ಸ್ವಾಗತಿಸಿದ. `ನೇನು ಬಾಗೇಪಲ್ಲಿ ಕಲ್ಲೇ ತಾಗೇದಿ, ಪೋವಯ್ಯೋ…’ ಅನ್ನುತ್ತಾ ಕತ್ತೆಗಳ ಹಿಂದೆ ಓಡಿದಳು. ಚಾರ್ಲ್ಸ್‌ಗೆ ಏನೂಂತ ಅರ್ಥವಾಗಲಿಲ್ಲ, ಇನ್ನೊಂದು ಸಲ ಅವಳನ್ನು ಕರೆದು ಅವಳನ್ನೇ ಕೇಳಬೇಕೆನಿಸಿತು. ತಾನು ಕೂಡ ಹೆಂಡ ಕುಡಿಯಲು ಅಲ್ಲಿಗೆ ಹೋಗುವುದರಿಂದ ಇವಳ ಕಣ್ಣಿಗೆ ಬಿದ್ದಿರಬೇಕು. ಅದನ್ನೇ ಸಾಕ್ಷ್ಯವಾಗಿಸಿಕೊಂಡು ನಿಗುರಿರಬೇಕು, ಅವಳು.

ಕಡೆಗೂ ಅಂಚೆಡಬ್ಬ ಕಂಡಂತಾಯಿತು, ಅದು ತನ್ನ ಕೈಗೆಟುಕುವಂತೆ ಜೀಪ್ ನಿಲ್ಲಿಸಿದ. `ಯಾರು ನೀನು?’ ಎಂದು ಯಾರಾದರೂ ಕೇಳಿದರೆ, `ನಾನಾ?’ ಎಂದು ಗಾಬರಿಗೊಳ್ಳುವಷ್ಟರಮಟ್ಟಿಗೆ ಕ್ರಿಮಿಯಂತಾಗಿದ್ದ, ಅದೇ ಸ್ಥಿತಿಯಲ್ಲಿ ಕಸದಬುಟ್ಟಿಯನ್ನು ಅಂಚೆ ಡಬ್ಬ ಎಂದು ನಂಬಿ ಅದರೊಳಗೆ ಪತ್ರವನ್ನು ಹಾಕಿದ. ಇವನು ಅಂಚೆಡಬ್ಬಿಗೆ ಪತ್ರ ಹಾಕುವಾಗ ಅದರ ರಂಧ್ರಕ್ಕೆ ಕಣ್ಣು ಕೊಟ್ಟು ನೋಡುವುದಿಲ್ಲ, ಅಸಹ್ಯ ಎನಿಸಿಬಿಡುತ್ತದೆ, ಮುಜುಗರದಿಂದ ಕನಲಿಹೋಗುವನು. ರಸ್ತೆಯಲ್ಲಿ ಬರುಬರುತ್ತಾ ಇವನೆದೆಯ ಮೇಲೆ ಹಾದುಬಂದ ಹೆಣ್ಣುಗಳು ಮತ್ತೊಮ್ಮೆ ಕಾಡುವರು.

ಅಧ್ಯಾಯ 2

ನಂದಿಬೆಟ್ಟದ ಬುಡದಲ್ಲಿನ ಪುಟ್ಟಹಳ್ಳಿ, ಕಣಿವೆ ಹೊಸಹಳ್ಳಿಯಲ್ಲಿ ಚಾರ್ಲ್ಸ್‌ನ ಹದಿನೈದೆಕರೆ ತೋಟದ ಜಮೀನು ಇರುವುದು. ಇವನ ಈ ಜಾಗ ನೋಡಲು ಬಂದಾಗಲೆಲ್ಲ ಒಂಟಿಮರದ ತುದಿಯಲ್ಲಿ ಗೂಬೆಯೊಂದು ಇರುತ್ತಿತ್ತಾದ್ದರಿಂದ, `Owl’s farm ಎಂದು ಹೆಸರಿಸಿದ. ಮಿಲಿಟರಿ ಕೆಲಸ ತ್ಯಜಿಸಿ, ಧಿಕ್ಕರಿಸಿ ಬಂದ ಹಣದಲ್ಲಿ ಈ ಭೂಮಿಯನ್ನು ಕೊಂಡುಕೊಂಡ. ಖರೀದಿಸುವ ಮುಂಚೆ ಖರೀದಿಸಿದ ನಂತರ ಇವನು ಹಳ್ಳಿಗಾಡಿನ ದಾಂಢಿಗರೊಂದಿಗೆ, ಮಾಯಾವಿ ಹೆಂಗಸರೊಂದಿಗೆ ಧೀರೋದಾತ್ತವಾಗಿ ಸೆಣಸಾಡಿದ್ದ, ಅದೆಲ್ಲ ಒಂದು ಸಾಹಸದ ಕತೆ. ಆಗಲೇ ಈ ತೋಳ ಸಿಕ್ಕಿದ್ದು, ಶಿಡ್ಲಘಟ್ಟ ಮತ್ತು ಚಿಂತಾಮಣಿ ಕಡೆಯಿಂದ ವಲಸೆ ಬಂದವನು. ಆಗ ಜೊತೆಗಿದ್ದವನು ಇವನೇ. ಈ ಜಮೀನಿಗೆ ರಸ್ತೆಯೇ ಇರಲಿಲ್ಲ, ಇದೇ ಮಿಲಿಟರಿ ಜೀಪಿನ ದೈತ್ಯಚಕ್ರಗಳನ್ನು ಓಡಾಡಿಸಿ ಅಲ್ಲೆಲ್ಲ ಜಾಡು ಏಳಿಸುವಷ್ಟೊತ್ತಿಗೆ ಸತ್ತು ಬದುಕಿದ್ದ. ಜೀಪಿನ ಗಾಜಿನ ಮೇಲೆ ಮುಂಗುಸಿಗಳನ್ನು ಎತ್ತಿ ಬಿಸಾಡುತ್ತಿದ್ದರು, ಇವನ ಕಣ್ಣುಗಳು ಕುರುಡಾಗುವಂತೆ. ಕೆಲವೊಂದರ ಮೂತಿಗಳು ಗಾಜಿಗೆ ಹೊಡೆದುಕೊಂಡು ರಕ್ತ ಈಡಾಡುತ್ತಿತ್ತು. ತನ್ನ ಕುತ್ತಿಗೆಯಲ್ಲಿನ ಸ್ಕಾರ್ಫ್ ಎಳೆದುಕೊಂಡು ಅದರಿಂದಲೇ ಆ ರಕ್ತವನ್ನು ಸ್ವಚ್ಛಗೊಳಿಸುತ್ತಿದ್ದ ಮತ್ತು ಅವುಗಳು ಅಸಾಧ್ಯ ಗಾಯಗಳಿಂದ ಚೀರಿಕೊಂಡು ದೌಡಾಯಿಸುವುದರ ಕುರಿತು ನೋವುಪಡುತ್ತಿದ್ದ. ಗಂಟೆಗಟ್ಟಳೆ ಅಲ್ಲೇ ನಿಂತು ಪೈಪ್ ಸೇದುತ್ತಾ ನಿಂತುಬಿಡುತ್ತಿದ್ದ, ಮತ್ತೆ ಚೈತನ್ಯ ಉಕ್ಕಿಬಿಡುತ್ತಿತ್ತು. ಆಮೇಲೆ ಜೀಪು ಇದೇ ರಸ್ತೆಯಲ್ಲಿ ಹಾದುಹೋಗುವಾಗ ಸಿಂಗ್ರಹಳ್ಳಿಯ ಬೇಟೆಗಾರರು ಇವನ ಮೇಲೆ ಬಾಣಗಳನ್ನು ತೂರುತ್ತಿದ್ದರು. ಓದುಬಲ್ಲ ನಗರದ ಸೂಳೆಯರೊಂದಿಗೆ ಜೀವಿಸುತ್ತಿದ್ದ ಚಾರ್ಲ್ಸ್  ಎದೆಗುಂದಲಿಲ್ಲ. ಹದಿನೈದೆಕರೆ ಭೂಮಿಯನ್ನು ತಾನೊಬ್ಬನೇ ರೂಪಿಸುವುದು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ನಗರಗಳಲ್ಲಿ ಜೀವಿಸುವ ಭೂಗತ ಚಟುವಟಿಕೆಯ ಜನರಿಗೆ ಈ ಕೆಲಸ ತೀರ ಹೊಸದು, ಇಲ್ಲಿ ಬಂದಕೂಡಲೇ ನಿಷ್ಕ್ರಿಯರಾಗಿಬಿಡುತ್ತಿದ್ದರು. ಮೊದಲು ಅಲ್ಲಿ ಉಳಿಯಲು ಒಂದು ಮನೆ ಅಗತ್ಯವಿತ್ತು. ಬೊಂಬುಗಳು ಮತ್ತು ಕೆಲಸಕ್ಕೆ ಬಾರದ ಮರದ ಹಲಗೆಗಳಿಂದ ಚಿಮಣಿ ಹೊಂದಿರುವ, ಪುಟ್ಟ ರೆಸ್ಟೋರೆಂಟ್‍ವುಳ್ಳ ಮನೆ ತಲೆಯೆತ್ತುತ್ತಿದ್ದಂತೆ ಸುತ್ತಲಿನ ಹಳ್ಳಿ ಜನರು ಒಬ್ಬೊಬ್ಬರಾಗಿ ಇವನ ಪೈಪ್ ಹೊಗೆಗೆ ಪರಾಭವಗೊಳ್ಳತೊಡಗಿದರು. ಬ್ಯಾರೆಲ್‍ಗಳ ಸುತ್ತ ನಿಲ್ಲಿಸಿ ವಿದೇಶಿ ಮದ್ಯಗಳಿಂದ, ಜುವಾರಿ ಮೋಜಿನ ಮೂಲಕ ಅವರೆಲ್ಲರನ್ನೂ ಸದೆಬಡಿದು ತನ್ನ ಅಧೀನದಲ್ಲಿಟ್ಟುಕೊಂಡ. ಎರಡೆಕರೆಯಲ್ಲಿ ಕುರಿಫಾರ್ಮ್ ಕಟ್ಟಿ, ಐನೂರು ಕುರಿಗಳನ್ನು ಸಾಕಿದ. ಒಂದೆಕರೆಯಲ್ಲಿ ಥೈಲ್ಯಾಂಡ್‍ನಿಂದ ಹುಲ್ಲಿನಬೀಜಗಳನ್ನು ತರಿಸಿ ಹೂಣಿಸಿ, ಇನ್ನರ್ಧ ಎಕರೆಯಲ್ಲಿ ಲೂಸಾನ್ ಸೊಪ್ಪು ಮತ್ತು ನೇಪಿಯರ್ ಕಡ್ಡಿ ಬೆಳೆದ. ಒಂದು ಎಕರೆ ಅರಣ್ಯಕ್ಕೆ ಬಿಟ್ಟ, ಅಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳಿಗಾಗಿ ಅಂಜೂರ, ಮಾವು, ಗೇರು, ಜಮ್ಮುನೇರಳೆ, ಹಲಸು, ಮೂಸಂಬಿ ಮತ್ತಿತರ ಹಣ್ಣಿನ ಗಿಡಗಳನ್ನು ನೆಡಿಸಿದ. ಒಂದೆಕರೆಯಲ್ಲಿ ನಾಟಿಕೋಳಿಗಳು, ಬಾತುಕೋಳಿಗಳು, ಜೇನು ಮತ್ತು ಮೊಲ ಸಾಕಣಿಕೆಯಾದರೆ; ಇನ್ನುಳಿದ ಭೂಮಿಯಲ್ಲಿ ಜೇಡಿಮಣ್ಣಿನ ಈಜುಕೊಳ, ಕಾಲಾನುಕಾಲಕ್ಕೆ, ಹವಾಮಾನಕ್ಕನುಗುಣವಾಗಿ ರಾಗಿ, ಕಲ್ಲಂಗಡಿ, ಬೀಟ್‍ರೋಟ್, ನೌಕಲ್, ಕ್ಯಾರೆಟ್, ಮೂಲಂಗಿ, ಸೊಪ್ಪು, ಜೋಳ, ಬಾಳೆ, ತೆಂಗು, ಸ್ಟ್ರಾಬೆರ್ರಿ ಎಗ್ಗಿಲ್ಲದೆ ಬೆಳೆಯತೊಡಗಿತು.

ರೇಚಾಳ ಅಧ್ಯಯನಕ್ಕೆ ಪೂರಕವಾಗಿ ಮನೆ ಮುಂಭಾಗದಲ್ಲಿ ನೂರಡಿಯಷ್ಟು ಆಳದ ಬಾವಿ ಕೊರೆಸಿ ಅದನ್ನು ಗ್ರಂಥಾಲಯ ಮಾಡಿದ. ಅದು ತೆರೆದ ಗ್ರಂಥಾಲಯ, ಆದರೆ ಮಳೆಗಾಳಿ ಬಂದಾಗ ಅದನ್ನು ಸಂರಕ್ಷಿಸಲು ಬೊಂಬುಗಳಿಂದ ಚಾವಣಿಯೂ ಇದೆ. ಬೆಟ್ಟದಿಂದ ಸಿಡಿದ ಚೆಕ್‍ಡ್ಯಾಂ ಇವನ ಜಮೀನಿನ ಬದಿಗೆ ಹಾದುಹೋಗುವುದರಿಂದ ಅದನ್ನು ದೋಣಿವಿಹಾರಕ್ಕೆ ಸದ್ಬಳಕೆ ಮಾಡಿಕೊಂಡ. ಮಳೆಗಾಲದಲ್ಲಿ ನೀರು ಹರಿಯುವಾಗಲಷ್ಟೇ ಅದು ಮೈದುಂಬಿಕೊಳ್ಳುತ್ತದೆ. ಚಾರ್ಲ್ಸ್ ಮೀನು ಹಿಡಿಯಲು ಆ ದೋಣಿಯನ್ನು ಏರುವನು. ಸರಿಸುಮಾರು ಅರ್ಧ ಫರ್ಲಾಂಗಿನಷ್ಟು ಉದ್ದನೆಯ ಕಾಲುವೆ ಅದು. ಅಂದಮಾತ್ರಕ್ಕೆ ಏಕಾಏಕಿ ಎಲ್ಲವೂ ಕೈ ಹತ್ತಲಿಲ್ಲ. ಚಿರತೆಗಳಿಗೆ ಕುರಿಮೇಕೆಗಳ ವಾಸನೆ ಮೂಗಿಗೆ ಹತ್ತಿದ್ದೇ ಹಿಂಡುಹಿಂಡು ಖಾಲಿಯಾಗತೊಡಗಿದವು. ಆಗೆಲ್ಲ ತುಂಬಾ ಪರಿತಪಿಸಿದ್ದ, ಕೂಲಿಯಾಳುಗಳು ಹೆಚ್ಚಾಗುತ್ತಿದ್ದಂತೆ ಮತ್ತು ಹಳ್ಳಿಜನರು ಇವನ ತೋಟಕ್ಕೆ ಎಡತಾಕುತ್ತಿದ್ದಂತೆ ಚಿರತೆ ಹಾವಳಿ ತಗ್ಗಿತು. ಫುಕುವೋಕಾನ ಕೃಷಿ ಪದ್ಧತಿಯನ್ನು ಅನುಸರಿಸುವ ಇವನು ವಿಷಯುಕ್ತ ಔಷಧಿಯನ್ನು ಯಾವ ಬೆಳೆಗೂ, ಒಂದು ಸಣ್ಣಗಿಡಕ್ಕೂ ಸಿಂಪಡಿಸಲಾರ.

ವಿ ಎಂ ಮಂಜುನಾಥ್

(ವೆಂಕಟಾಲದವರಾದ ಮಂಜುನಾಥ್ ಕವಿ ಮತ್ತು ಕಾದಂಬರಿಕಾರ. ತಮ್ಮ ವಿಶಿಷ್ಟ ಶೈಲಿ ಗದ್ಯದ ಮೂಲಕ ಕನ್ನಡ ಸಾಹಿತ್ಯಲೋಕದ ಗಮನ ಸೆಳೆದವರು. ಬ್ರಾಂದಿ ಕಥಾಸಂಕಲನವಾದರೆ, ‘ರಾಯಲ್ ಎನ್‍ಫೀಲ್ಡ್’, ‘ಅಸ್ಪೃಶ್ಯ ಗುಲಾಬಿ’ ಮತ್ತು ‘ಸಿಕೆ ಜೇಡನ ಆತ್ಮಚರಿತ್ರೆ’ ಅವರ ಕಾದಂಬರಿಗಳು.)

ಪ್ರಸಕ್ತ ಬರಹವನ್ನು ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಅವರ ಹೊಸ ಕಾದಂಬರಿ ‘ರೈತನೊಬ್ಬನ ಡೈರಿ’ಯಿಂದ ಆಯ್ದುಕೊಳ್ಳಲಾಗಿದೆ.


ಇದನ್ನೂ ಓದಿ: `ರಾಜಾನ ಕಿವಿ ಕತ್ತಿ ಕಿವಿ’: ಈ ಸಾರ್ವಕಾಲಿಕ ಕಥೆ ನಿಮಗೆ ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟ ಮಾಡುತ್ತಿದ್ದ ಯುವಕನಿಗೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...