ಮಹಾತ್ಮ ಗಾಂಧೀಜಿಯವರು ನಡೆಸಿದ ದಂಡಿ (ಉಪ್ಪಿನ) ಸತ್ಯಾಗ್ರಹದ 90ನೇ ವರ್ಷಾಚರಣೆಯ ನೆನಪು ಹಾಗೂ ಸ್ಫೂರ್ತಿಯಲ್ಲಿ ಸಂವಿಧಾನ ಹಾಗೂ ಪೌರತ್ವದ ಹಕ್ಕುಗಳನ್ನು ಉಳಿಸಿಕೊಳ್ಳಲು ಇಂದು ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉಪವಾಸ ಸತ್ಯಾಗ್ರಹ ನಡೆದಿದ್ದು NPR ಜಾರಿಗೊಳಿಸದಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರಗಳನ್ನು ಸಲ್ಲಿಸಲಾಗಿದೆ.
ಸಾವಿರಾರು ಜನರು ಇಂದು ಒಂದೇ ದಿನ, ಒಂದೇ ಬಾರಿಗೆ, ಒಂದೇ ವಿಚಾರದ ಕಾರಣಕ್ಕೆ ಉಪವಾಸವಿದ್ದು ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ವಿರೋಧಿಸಿ ಅಪೂರ್ವ ಸತ್ಯಾಗ್ರಹ ಇದಾಗಿದ್ದು ರಾಜ್ಯದ ಜನರ ಗಮನ ಸೆಳೆದಿದೆ.

ನಾವು ಭಾರತೀಯರು – We the people of India ಜಂಟಿ ಕ್ರಿಯಾ ಸಮಿತಿ – ಕರ್ನಾಟಕ, ಸಂವಿಧಾನ ಉಳಿಸಿ ವೇದಿಕೆಗಳು ಕರೆ ಕೊಟ್ಟಿದ್ದ ಉಪವಾಸ ಸತ್ಯಾಗ್ರಹ ಕಾರ್ಯಕ್ರಮಕ್ಕೆ ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ರಾಯಚೂರು, ಸಿಂಧನೂರು, ಶಿವಮೊಗ್ಗ, ಬಳ್ಳಾರಿ, ಮಣಿಪಾಲ, ತುಮಕೂರು, ಯಾದಗಿರಿ, ರಾಮನಗರ ಮುಂತಾದ ಸ್ಥಳಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ, ಭಾಷಾ ತಜ್ಞರಾದ ಪ್ರೊ.ಜಿ.ಎನ್ ಗಣೇಶ್ ದೇವಿ, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ನ್ಯಾಯವಾದಿ ಬಾಲನ್ ಸೇರಿದಂತೆ ಹಲವು ಗಣ್ಯರು ಸಹ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.

ಭಾರತವನ್ನು ಆಳುತ್ತಿದ್ದ ಬ್ರಿಟಿಷರು, ತಮ್ಮ ಆರ್ಥಿಕ ದಬ್ಬಾಳಿಕೆಯನ್ನು ಮುಂದುವರೆಸುವುದರ ಭಾಗವಾಗಿ ಉಪ್ಪಿನ ಮೇಲೆ ಕರ ವಿಧಿಸಿದ್ದರು. ಅದನ್ನು ವಿರೋಧಿಸಿ ಆಯ್ದ ಸತ್ಯಾಗ್ರಹಿಗಳೊಂದಿಗೆ ಗಾಂಧಿಯವರು ಮಾರ್ಚ್ 12, 1930ರಂದು ದಂಡಿ (ಉಪ್ಪಿನ) ಸತ್ಯಾಗ್ರಹವನ್ನು ಆರಂಭಿಸಿದರು. ಉಪ್ಪು ತಯಾರಿಸಲು ಸಮುದ್ರದೆಡೆಗೆ ನಡೆಸಿದ ಪ್ರಯಾಣ ಅಂದು ಶುರುವಾಗಿತ್ತು. ಅಂತಿಮವಾಗಿ ಸತ್ಯಾಗ್ರಹಿಗಳು ಬಂಧನಕ್ಕೊಳಗಾದರು. ಅಂತಹ ಎಷ್ಟೋ ಬಂಧನಗಳು, ಸಾವುಗಳು, ತ್ಯಾಗ ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ಮತ್ತು ಸಂವಿಧಾನ ಬಂದವು. ಇಂದು ಈ ಸ್ವಾತಂತ್ರ್ಯ ಹಾಗೂ ಸಂವಿಧಾನಗಳಿಗೆ ಕುತ್ತು ಬಂದಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗದ ಪರಂಪರೆಯುಳ್ಳವರು ದೇಶದಲ್ಲಿ ಅಧಿಕಾರ ಹಿಡಿದಿದ್ದಾರೆ. ಸ್ವಾತಂತ್ರ್ಯ ಚಳವಳಿಯಲ್ಲಿ ಧೀರೋದಾತ್ತವಾಗಿ ಸೆಣೆಸಿದ ಎಲ್ಲ ಧರ್ಮಗಳಿಗೆ ಸೇರಿದವರು, ಆದಿವಾಸಿಗಳು, ದಲಿತರು, ರೈತ ಕಾರ್ಮಿಕರು, ಮಹಿಳೆಯರು ತಾವು ಈ ದೇಶದ ಪೌರರು ಎಂದು ತಾವೇ ಓಟು ಹಾಕಿ ಗೆಲ್ಲಿಸಿದ ಸರ್ಕಾರದ ಮುಂದೆ ಸಾಬೀತು ಮಾಡಬೇಕಾದ ದುಸ್ಥಿತಿ ಬಂದಿದೆ ಎಂದು ಸತ್ಯಾಗ್ರಹಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ನಮ್ಮ ಆಂದೋಲನವು ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿಯವರು ಹಾಕಿಕೊಟ್ಟ ಪರಂಪರೆಯಂತೆಯೇ ಅಹಿಂಸಾತ್ಮಕವಾಗಿ ಇರಲಿದ್ದು, ಗುರಿ ಮುಟ್ಟುವವರೆಗೂ ನಿಲ್ಲುವುದಿಲ್ಲ ಎಂದು ನಮ್ಮೊಳಗೇ ಆತ್ಯಾನುಸಂಧಾನ ನಡೆಸಿಕೊಳ್ಳುವ ದಿನವಾಗಿಯೂ ಈ ಸತ್ಯಾಗ್ರಹವು ಇರಲಿದೆ ಎಂದು ಸತ್ಯಾಗ್ರಹಿಗಳು ಘೋಷಿಸಿದ್ದಾರೆ. ಹಲವೆಡೆ ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ಎನ್‌ಪಿಆರ್ ಜಾರಿಗೊಳಿಸಬಾರದೆಂದು ಹಕ್ಕೊತ್ತಾಯ ಪತ್ರಗಳನ್ನು ಸಲ್ಲಿಸಲಾಗಿದೆ.

ಚಿಕ್ಕಮಗಳೂರು, ಚಿತ್ರದುರ್ಗ, ಹೊಸಪೇಟೆ, ಕೊಪ್ಪಳ, ವಿಜಯಪುರ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ನಾಳೆ ಉಪವಾಸ ಸತ್ಯಾಗ್ರಹ ನಡೆಸಲು ಯೋಜಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಅಪಾಯಗಳ ಕುರಿತು ಕಾರ್ಯಗಾರಗಳು ಜರುಗಲಿವೆ.

ಎನ್‌ಪಿಆರ್ ವಿರೋಧಿಸಿ ಮಾರ್ಚ್ 29 ಕ್ಕೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ
ಜನಗಣತಿಯೊಂದಿಗೇನೆ ಏಪ್ರಿಲ್ 15 ರಿಂದ ನಡೆಸಲು ಉದ್ದೇಶಿಸಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಅನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಜನರು ತಮ್ಮ ಗಟ್ಟಿ ನಿರ್ಧಾರವನ್ನು ಪ್ರಕಟಿಸಲು ಮಾರ್ಚ್ 29 ಕ್ಕೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆದಿದೆ.

ಈ ಸಮಾವೇಶದಲ್ಲಿ ಜನಪರ ಸಂಘಟನೆಗಳು, ರಾಜಕೀಯ ಪಕ್ಷಗಳು, ವಿವಿಧ ಧರ್ಮ ಮತ್ತು ಜಾತಿ ಸಂಘಟನೆಗಳು, ರೈತ ಕಾರ್ಮಿಕ ದಲಿತ ಸಂಘಟನೆಗಳು ಸೇರಿದಂತೆ ಲಕ್ಷಾಂತರ ಜನ ಭಾಗವಹಿಸಲಿದ್ದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಹೋರಾಟ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅದಕ್ಕೂ ಸರ್ಕಾರ ಬಗ್ಗದಿದ್ದಲ್ಲಿ ಅಂಬೇಡ್ಕರ್ ಜನ್ಮದಿನವಾದ ಏಪ್ರಿಲ್ 14 ರಂದು ಮತ್ತೊಂದು ಸುತ್ತಿನ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ಸಹ ನೀಡಲಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಎನ್‌ಆರ್‌ಸಿಯ ಮೊದಲ ಹೆಜ್ಜೆಯಾಗಿರುವ ಎನ್‌ಪಿಆರ್ ಜಾರಿಯಾಗಬಾರದೆಂಬುದು ನಾವು ಭಾರತೀಯರು ತಂಡದ ಆಗ್ರಹವಾಗಿದೆ.


