ಕಾರ್ನರ್ ಡಿಫೆಂಡಿಂಗ್ ಆಟಗಾರರಾದ ಅಮನ್ ಮತ್ತು ಸೌರಭ್ ನಂದಲ್ ರವರ ಅದ್ಭುತ ಡಿಫೆಂಡಿಂಗ್ ಬಲದಿಂದ ಬೆಂಗಳೂರು ಬುಲ್ಸ್ ತಂಡವು ಬಲಿಷ್ಠ ಯುಪಿ ಯೋಧ ತಂಡವನ್ನು ಮಣಸಿ (38-35) ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು.
ಡಿಫೆನ್ಸ್‌ನಲ್ಲಿ ಹೆಚ್ಚು ವೈಫಲ್ಯ ಕಾಣುತ್ತಿದ್ದ ಬೆಂಗಳೂರು ಬುಲ್ಸ್ ತಂಡದಲ್ಲಿ ಸುಧಾರಣೆ ಕಂಡಿದೆ. ಅಮನ್ ಏಳು ಡಿಫೆಂಡಿಂಗ್ ಪ್ರಯತ್ನಗಳಲ್ಲಿ 5 ಬಾರಿ ಯಶಸ್ಸು ಕಂಡರು. ಇನ್ನೊಂದೆಡೆ ಸೌರಭ್ ನಂದಲ್ ಮೂರು ಬಾರಿ ಪರ್ದೀಪ್ ನರ್ವಾಲ್‌ರವರನ್ನು ಕಟ್ಟಿ ಹಾಕುವಲ್ಲಿ ಸಫಲವಾದರು. ಪರಿಣಾಮ ಬುಲ್ಸ್ ತಂಡವನ್ನು ಯುಪಿ ಯೋಧ ತಂಡವನ್ನು ಎರಡು ಬಾರಿ ಆಲೌಟ್ ಮಾಡಲು ಸಾಧ್ಯವಾಯಿತು.
ಆದರೆ ರೈಡಿಂಗ್ ವಿಭಾಗದಲ್ಲಿ ಬುಲ್ಸ್ ತಂಡಕ್ಕೆ ಹೆಚ್ಚಿನ ಅಂಕಗಳು ಸಿಗಲಿಲ್ಲ. ಭರತ್ 13 ರೈಡ್‌ಗಳಿಂದ 8 ಪಾಯಿಂಟ್ ಪಡೆದರೆ, ವಿಕಾಸ್ ಖಂಡೋಲ 21 ರೈಡ್‌ಗಳಿಂದ ಕೇವಲ 6 ಪಾಯಿಂಟ್ ಪಡೆದರು. ನೀರಜ್ ನರ್ವಾಲ್ 9 ರೈಡ್‌ಗಳಿಂದ 4 ಅಂಕ ಪಡೆದರು. ಆದರೂ ಡಿಫೆಂಡರ್‌ಗಳು ತಮ್ಮ ನೈಜ ಆಟ ಪ್ರದರ್ಶಿಸಿದ ಕಾರಣ ಬೆಂಗಳೂರು ಬುಲ್ಸ್ ತಂಡ ಜಯಭೇರಿ ಬಾರಿಸಿತು.
ಒಂದು ಹಂತದಲ್ಲಿ ಬುಲ್ಸ್ ಮುಂದಿದ್ದರು ಮೂರು ಬಾರಿ ಸತತವಾಗಿ ಸೂಪರ್ ಟ್ಯಾಕಲ್ ಆಗಿ ಪಾಯಿಂಟ್ಸ್ ಚೆಲ್ಲಿತು. ಇನ್ನು 12 ಅಂಕಗಳಿಂದ ಮುಂದಿದ್ದಾಗಲೂ ಆಲೌಟ್ ಆಗಿ ಕೇವಲ 3 ಅಂಕದಿಂದ ಗೆಲ್ಲುವಂತಾಯಿತು.
ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟಾನ್ ತಂಡಗಳು ತಲಾ 20 ಪಂದ್ಯಗಳಿಂದ ತಲಾ 74 ಅಂಕ ಗಳಿಸಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದು ಈಗಾಗಲೆ ಪ್ಲೇ ಆಫ್‌ನಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡಿವೆ. ಬೆಂಗಳೂರು ತಂಡ 20 ಪಂದ್ಯಗಳಿಂದ 68 ಅಂಕ ಗಳಿಸಿದರೆ, ಅಷ್ಟೇ ಪಂದ್ಯಗಳಿಂದ ಯುಪಿ ಯೋಧ ತಂಡ 66 ಅಂಕ ಗಳಿಸಿ ಅದು ಸಹ ಪ್ಲೇ ಆಫ್‌ನಲ್ಲಿ ಸ್ಥಾನ ಪಡೆದಿದೆ.

ಉಳಿದ ಎರಡು ಸ್ಥಾನಗಳಿಗಾಗಿ ತಮಿಳು ತಲೈವಾಸ್ (61 ಅಂಕ), ದಬಾಂಗ್ ಡೆಲ್ಲಿ (55 ಅಂಕ), ಯು ಮುಂಬಾ (51 ಅಂಕ), ಹರ್ಯಾಣ ಸ್ಟೀಲರ್ಸ್ (51 ಅಂಕ), ಗುಜರಾತ್ ಜೈಂಟ್ಸ್ (51 ಅಂಕ), ಬೆಂಗಾಲ್ ವಾರಿಯರ್ಸ್ (50 ಅಂಕ) ಮತ್ತು ಪಟ್ನಾ ಪೈರೇಟ್ಸ್ (49 ಅಂಕ) ಸೇರಿ ಒಟ್ಟು 7 ತಂಡಗಳು ಸೆಣಸಾಟ ನಡೆಸುತ್ತಿವೆ. ಪಟ್ನಾ ತಂಡಕ್ಕೆ 3 ಪಂದ್ಯಗಳಿ ಬಾಕಿ ಇದ್ದರೆ, ಉಳಿದ ತಂಡಗಳಿಗೆ ತಲಾ 2 ಪಂದ್ಯಗಳಿದ್ದು ಎಲ್ಲವನ್ನು ದೊಡ್ಡ ಅಂತರದಲ್ಲಿ ಗೆದ್ದ 2 ತಂಡಕ್ಕೆ ಮಾತ್ರ ಪ್ಲೇ ಆಫ್ ಅವಕಾಶವಿದೆ. ಆದರೆ 18 ಪಂದ್ಯ ಸೋತಿರುವ ತೆಲುಗು ಟೈಟನ್ಸ್ ಮಾತ್ರ ಟೂರ್ನಿಯಿಂದ ಹೊರ ಬಿದ್ದಿದೆ.
ಇಂದು ಪುಣೇರಿ ಪಲ್ಟಾನ್ ಮತ್ತು ಪಟ್ನಾ ನಡುವಿನ ಮೊದಲ ಪಂದ್ಯವಿದೆ. ಇಲ್ಲಿ ಪಟ್ನಾ ಗೆದ್ದಲ್ಲಿ ಅದರ ಪ್ಲೇ ಆಫ್ ಆಸೆ ಜೀವಂತವಾಗಿ ಉಳಿಯುತ್ತದೆ. ಪುಣೇರಿ ಪಲ್ಟಾನ್ ಗೆದ್ದಲ್ಲಿ ಅದು ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿ ಉಳಿಯುವುದರಿಂದ ನೇರವಾಗಿ ಸೆಮಿಫೈನಲ್ ತಲುಪುತ್ತದೆ. ಅದೇ ಎರಡನೇ ಪಂದ್ಯ ಜೈಪುರ್ ಮತ್ತು ಹರ್ಯಾಣ ನಡುವೆ ನಡೆಯಲಿದೆ. ಹರ್ಯಾಣ ಪ್ಲೇ ಆಫ್ ಆಸೆ ಜೀವಂತವಾಗಿಟ್ಟುಕೊಳ್ಳಬೇಕಾದರೆ ಇಂದು ಗೆಲ್ಲಲೇಬೇಕು. ಒಂದು ವೇಳೆ ಜೈಪುರ್ ಗೆದ್ದಲ್ಲಿ ಅದು ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿ ಉಳಿಯುವುದರಿಂದ ನೇರವಾಗಿ ಸೆಮಿಫೈನಲ್ ತಲುಪುತ್ತದೆ.
ಬೆಂಗಳೂರು ಬುಲ್ಸ್ ಬುಧವಾರ ಪಟ್ನಾ ಎದುರು ಆಡಿದರೆ ಶನಿವಾರ ತನ್ನ ಕೊನೆಯ ಪಂದ್ಯವನ್ನು ಯು ಮುಂಬಾ ಎದುರು ಆಡಲಿದೆ. ಅದು ಎರಡು ಪಂದ್ಯಗಳನ್ನು ಗೆಲ್ಲಬೇಕು ಮತ್ತು ಪುಣೆ ಅಥವಾ ಜೈಪುರ್ ಉಳಿದ ಎರಡು ಪಂದ್ಯಗಳನ್ನು ಸೋತರೆ ಮಾತ್ರ ಬೆಂಗಳೂರು ಅಗ್ರ ಮೊದಲ ಅಥವಾ ಎರಡನೇ ಸ್ಥಾನಕ್ಕೆ ಹೋಗಲು ಸಾಧ್ಯ. ಆದರೆ ಅದು ತೀರಾ ಕಷ್ಟ ಎನಿಸುತ್ತದೆ. ಏಕೆಂದರೆ ಆ ಎರೆಡು ತಂಡಗಳು ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಿವೆ.
ಪ್ರೊ ಕಬಡ್ಡಿಯ ಲೀಗ್ ಹಂತ ಡಬಲ್ ರೌಂಡ್ ರಾಬಿನ್ ಆಧಾರದಲ್ಲಿ ನಡೆಯುತ್ತದೆ. ಪ್ರತಿ ತಂಡಕ್ಕೂ 22 ಪಂದ್ಯಗಳು ಸಿಗುತ್ತವೆ. ಅಂಕಪಟ್ಟಿಯಲ್ಲಿ ಮೊದಲ ಆರು ಸ್ಥಾನ ಪಡೆದ ತಂಡಗಳು ಪ್ಲೇಆಫ್ ಪ್ರವೇಶಿಸಿದರೆ, ಉಳಿದ 6 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ. ಅದರಲ್ಲಿಯೂ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ನೇರವಾಗಿ ಸೆಮಿಫೈನಲ್ ತಲುಪುತ್ತವೆ. ಉಳಿದ ನಾಲ್ಕು ತಂಡಗಳು ಪ್ಲೇ ಆಫ್‌ನಲ್ಲಿ ಕ್ವಾಲಿಫೈಯರ್ ಪಂದ್ಯ ಎದುರಿಸಿ ಗೆದ್ದ ತಂಡಗಳು ಮಾತ್ರ ಸೆಮಿಫೈನಲ್ ಪ್ರವೇಶಿಸುತ್ತವೆ. ಸೋತ ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ. ಹಾಗಾಗಿ ಮೊದಲ ಎರಡು ಸ್ಥಾನ ಪಡೆಯುವುದು ಉತ್ತಮ. ಇಷ್ಟು ದಿನ ಮೊದಲು ಮತ್ತು ಎರಡನೇ ಸ್ಥಾನದಲ್ಲಿರುತ್ತಿದ್ದ ಬೆಂಗಳೂರು 3 ಸೋಲಿನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.
ಡಿಸೆಂಬರ್ 13ರಂದು 2 ಎಲಿಮಿನೇಟರ್ ಪಂದ್ಯಗಳು ನಡೆಯುತ್ತವೆ. ಒಂದು ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೂರು ಮತ್ತು ಆರನೇ ಸ್ಥಾನ ಪಡೆದ ತಂಡಗಳು ಸ್ಪರ್ಧಿಸಿದರೆ ಮತ್ತೊಂದು ಪಂದ್ಯದಲ್ಲಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದ ತಂಡಗಳು ಸ್ಪರ್ಧಿಸುತ್ತವೆ. ಗೆದ್ದವರು ಸೆಮಿಫೈನಲ್ ಪ್ರವೇಶಿಸುತ್ತಾರೆ. ಸೋತವರು ಮನೆಗೆ ನಡೆಯುತ್ತಾರೆ.
ಡಿಸೆಂಬರ್ 15ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆದರೆ, ಡಿಸೆಂಬರ್ 17 ರಂದು ಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ; ಇರಾನ್ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್ ವ್ಯವಸ್ಥೆ ರದ್ದು


