Homeಕರ್ನಾಟಕಕೊರೊನಾ ಸೋಂಕಿತ 100 ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ: ವಾಣಿವಿಲಾಸ ಆಸ್ಪತ್ರೆ ವೈದ್ಯ/ದಾದಿಯರಿಗೆ ಮೆಚ್ಚುಗೆಯ ಮಹಾಪೂರ

ಕೊರೊನಾ ಸೋಂಕಿತ 100 ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ: ವಾಣಿವಿಲಾಸ ಆಸ್ಪತ್ರೆ ವೈದ್ಯ/ದಾದಿಯರಿಗೆ ಮೆಚ್ಚುಗೆಯ ಮಹಾಪೂರ

ಇದುವರೆಗೂ ಜನಿಸಿರುವ 100 ಮಕ್ಕಳಲ್ಲಿ 76 ಪ್ರಕರಣಗಳಲ್ಲಿ ಸಿಸೇರಿಯನ್ ಅಗತ್ಯವಾಗಿದೆ. ನಾಲ್ಕು ಜೊತೆಗೆ ಅವಳಿ ಮಕ್ಕಳು ಸಹ ಜನಿಸಿವೆ. ಎಲ್ಲಾ ಮಕ್ಕಳು ಸಹ ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

- Advertisement -

ಕೊರೊನಾ ಸೋಂಕು ದೊಡ್ಡ ಮಟ್ಟದ ಭೀತಿ ಉಂಟುಮಾಡಿದೆ. ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳದೇ, ಬೆಡ್ ಸಿಗದೇ, ಸೂಕ್ತ ಚಿಕಿತ್ಸೆ ಸಿಗದೇ ರೋಗಿಗಳು ಸಾವನಪ್ಪುತ್ತಿರುವ ಹಲವಾರು ವರದಿಗಳು ಕಂಡುಬರುತ್ತಿವೆ. ಈ ಮಧ್ಯೆಯೆ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ ವೈದ್ಯರು ಮತ್ತು ದಾದಿಗಳು ಕೊರೊನಾ ಸೋಂಕಿತ 100 ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ ಮಾಡಿಸುವ ಮೂಲಕ ಭರವಸೆ ತುಂಬಿದ್ದಾರೆ.

ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲಿದರೆ ಅಪಾಯ ಹೆಚ್ಚು. ಸದಾ ಕಾಲ ಅವರ ಸಹಾಯಕ್ಕೊಬ್ಬರೂ ಇರಲೇಬೇಕು. ಅವರಿಗೂ ಸೋಂಕು ಹರಡುವ ಆತಂಕವಿರುತ್ತದೆ. ಮಗುಗೂ ಹರಡಬಹುದೆಂಬ ಭೀತಿ. ಇನ್ನು ವೈದ್ಯರು ಮತ್ತು ಸ್ಟಾಪ್‌ ನರ್ಸ್ ಹೆಚ್ಚು ಕಾಲ ರೋಗಿಯ ಸಮಯ ಕಳೆಯಬೇಕಾದ ಪರಿಸ್ಥಿತಿ ಇರುತ್ತದೆ. ಈ ಎಲ್ಲಾ ಅಡೆತಡೆಗಳನ್ನು ನಮ್ಮ ವೈದ್ಯರು ಮೆಟ್ಟಿನಿಂತಿದ್ದಾರೆ. ಗುರುವಾರ ರಾತ್ರಿ 100ನೇ ಗರ್ಭಿಣಿಗೆ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ.

ಗುರುವಾರ ರಾತ್ರಿಯೇ ನಾಲ್ಕು ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆಯಾಗಿದೆ. ಆ ಸಂಭ್ರಮಕ್ಕೆ ವೈದ್ಯರು “ವಾಣಿವಿಲಾಸ ಟಿಸಿಸಿ ಟೀಮ್ 100” ಎಂಬ ಪೋಸ್ಟರ್ ಹಿಡಿದು ಮಗುವಿನೊಂದಿಗೆ ಚಿತ್ರ ತೆಗೆಸಿಕೊಂಡಿದ್ದಾರೆ. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷವೆಂದರೆ ಎಲ್ಲಾ ನವಜಾತ ಶಿಶುಗಳು ಸಹ ಕೋವಿಡ್ ನೆಗಟಿವ್ ಬಂದಿವೆ.

ಗರ್ಭಿಣಿ ಕೊರೊನಾ ಸೋಂಕಿತರನ್ನು ಹಾರೈಕೆ ಮಾಡುವುದು ಸವಾಲಿನ ಕೆಲಸ. ದಿನವಿಡಿ ಪಿಪಿಇ ಕಿಟ್‌ಗಳನ್ನು ಧರಿಸಿರುವ ವೈದ್ಯರು ಶೌಚಾಲಯ ಬಳಸುವುದು ಕಷ್ಟಕರವಾಗುತ್ತದೆ. ಕೆಲವೊಮ್ಮೆ ವಯಸ್ಕ ಡೈಪರ್ ಧರಿಸಿ ಕೆಲಸ ಮಾಡಬೇಕಾದ ಪರಿಸ್ಥಿತಿಗಳು ಬಂದಿವೆ. ಒಂದು ವಾರ ಸತತ ಕೆಲಸ ಮಾಡುವ ಅವರು 5 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುತ್ತಾರೆ. ಕೊನೆ ದಿನ ಕೋವಿಡ್ ಟೆಸ್ಟ್ ಮಾಡಿಸಿ ನೆಗಟಿವ್ ಬಂದರೆ ಮಾತ್ರ ಮತ್ತೆ ಕೆಲಸಕ್ಕೆ ಹಾಜರಾಗುತ್ತಾರೆ. ಇಷ್ಟೆಲ್ಲಾ ವಿಷಮ ಪರಿಸ್ಥಿತಿಯಲ್ಲಿಯೂ ಯಶಸ್ವಿ ಹೆರಿಗೆ ಮಾಡಿಸುವಲ್ಲಿ ಸಫಲವಾಗಿರುವ ವೈದ್ಯರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ವಿಕ್ಟೋರಿಯಾ ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸರಾಸರಿ 3000 ಹೆರಿಗೆ ಮಾಡಿಸಲಾಗುತ್ತದೆ. ಈಗ ವೈದ್ಯರಿಗೆ ಕೋವಿಡ್ ಮತ್ತು ಕೋವಿಡ್ ಅಲ್ಲದ ಗರ್ಭಿಣಿಯನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿಯಿದೆ. ಒಂದೇ ವಾರದಲ್ಲಿ 66 ಹೆರಿಗೆಗಳಾಗಿದ್ದು 140 ಕೊರೊನಾ ಸೋಂಕಿತ ಗರ್ಭಿಣಿಯರು ದಾಖಲಾಗಿದ್ದಾರೆ. ಕೊರೊನಾ ಸೋಂಕಿತ ಗರ್ಭಿಣಿಯರಿಗೆಂದೇ ಪ್ರತ್ಯೇಕ ಐಸೋಲೇಷನ್ ವಾರ್ಡ್ ತೆರೆಯಲಾಗಿದೆ. ಸದ್ಯ ಅಲ್ಲಿ 350 ಕೊರೊನಾ ಸೋಂಕಿತ ಗರ್ಭಿಣಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 150 ಜನರು ತುರ್ತು ಆರೈಕೆ ಕೇಂದ್ರದಲ್ಲಿದ್ದಾರೆ.

ಪಾದರಾಯನಪುರದಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಮೇ 09ರಂದು ಯಶಸ್ವಿ ಹೆರಿಗೆ ಮಾಡಿಸಿದ್ದವು. ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ, ನಮ್ಮ ಕಾರ್ಯ ಮುಂದುವರೆಯುತ್ತಲೇ ಇದೆ. ಈ ಹಿಂದೆ ಗರ್ಭಿಣಿಯರ ವಾರ್ಡ್ ಅಂದರೆ ಅವರ ಎಲ್ಲಾ ಸಂಬಂಧಿಗಳು ಸೇರಿ ತುಂಬಿ ತುಳುಕುತ್ತಿತ್ತು. ಎಲ್ಲರ ಮುಖದಲ್ಲಿ ತಮ್ಮ ಮನಗೆ ಹೊಸ ಪ್ರತಿನಿಧಿ ಬಂದ ಖುಷಿ ಕಾಣುತ್ತಿತ್ತು. ಆದರೆ ಈಗ ಅದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಸೋಂಕಿನ ಭಯಕ್ಕೆ ರೋಗಿಯೊಂದಿಗೆ ಹೆಚ್ಚು ಮಾತನಾಡಲು ಸಹ ಆಗುತ್ತಿಲ್ಲ. ನೆಮ್ಮದಿಯೆಂದರೆ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ಯಾವೊಬ್ಬ ವೈದ್ಯರು ಸಹ ಸೋಂಕಿಗೆ ತುತ್ತಾಗಿಲ್ಲ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ಜಿ.ಎಸ್ ತಿಳಿಸಿದ್ದಾರೆ.

ಇದುವರೆಗೂ ಜನಿಸಿರುವ 100 ಮಕ್ಕಳಲ್ಲಿ 76 ಪ್ರಕರಣಗಳಲ್ಲಿ ಸಿಸೇರಿಯನ್ ಅಗತ್ಯವಾಗಿದೆ. ನಾಲ್ಕು ಜೊತೆಗೆ ಅವಳಿ ಮಕ್ಕಳು ಸಹ ಜನಿಸಿವೆ. ಎಲ್ಲಾ ಮಕ್ಕಳು ಸಹ ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಸಾಂಕ್ರಾಮಿಕ ಕಾಲದಲ್ಲಿ ತಮ್ಮ ಕರ್ತವ್ಯನಿಷ್ಠೆ ಮೆರೆಯುತ್ತಿರುವ ಈ ವೈದ್ಯರಿಗೆ ಮತ್ತು ಸ್ಟಾಪ್‌ ನರ್ಸ್‌ಗಳಿಗೆ ಜನರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ತಾವು ಕೊರೊನಾ ಸೋಂಕಿಗೆ ಒಳಗಾಗಿದ್ದರೂ ತಮ್ಮ ಕಂದಮ್ಮನನ್ನು ಯಶಸ್ವಿಯಾಗಿ ರಕ್ಷಿಸಿದ ಆರೋಗ್ಯ ಸಿಬ್ಬಂದಿಗಳ ಕುರಿತು ಬಾಣಂತಿಯರು ಅಕ್ಕರೆಯ ಭಾವ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿ “ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವಿಕ್ಟೊರಿಯಾ ಆಸ್ಪತ್ರೆ ಈ ಸಂದರ್ಭದಲ್ಲಿ 100ನೇ ಕೋವಿಡ್ ಸೋಂಕಿತ ಗರ್ಭಿಣಿ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಪೂರೈಸುವ ಮೂಲಕ ಇನ್ನೊಂದು ವಿಶೇಷ ಮೈಲಿಗಲ್ಲು ಸಾಧಿಸಿದೆ. ಇದಕ್ಕೆ ಶ್ರಮಿಸಿದ ವಿಕ್ಟೊರಿಯಾ ಮತ್ತು ವಾಣಿ ವಿಲಾಸ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗೆ ನನ್ನ ಅಭಿನಂದನೆಗಳು” ಎಂದಿದ್ದಾರೆ.


ಇದನ್ನೂ ಓದಿ: ಮರಣ ಹೊಂದಿದ ವ್ಯಕ್ತಿಗಳಿಂದ ಕೊರೊನಾ ಸೋಂಕು ಹರಡುವುದಿಲ್ಲ: ಅಂತ್ಯಸಂಸ್ಕಾರಕ್ಕೆ ಅವಕಾಶಮಾಡಿಕೊಡಿ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial