6ನೇ ಅಂತರಾಷ್ಟ್ರೀಯ ಹಾರ್ವರ್ಡ್ ಕಾನೂನು ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಭಾವಚಿತ್ರ ಪ್ರದರ್ಶನದಲ್ಲಿ ಜಗತ್ತಿನಾದ್ಯಂತ ಕಾನೂನು ಹಾಗೂ ನೀತಿ ನಿರೂಪಣೆಯ ಕ್ಷೇತ್ರದಲ್ಲಿ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿದ ಮಹಿಳೆಯರಿಗೆ ಗೌರವವನ್ನು ಸಲ್ಲಿಸಲಾಯಿತು. ಆ ಎಲ್ಲ ಮಹಿಳಾ ಪ್ರತಿನಿಧಿಗಳನ್ನು ಆಯ್ಕೆ ಮಾಡಿದವರು ಹಾರ್ವರ್ಡ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗ. ಈ ಎಲ್ಲಾ ಮಹಿಳಾ ಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಗಟ್ಟಿಯಾದ ಧ್ವನಿಯನ್ನು ಮೊಳಗಿಸಿದವರು. ಅದು ಹೈಕೋರ್ಟಿನ ಬೆಂಚಿನಲ್ಲಿ ಕುಳಿತಾಗಿರಬಹುದು, ಕ್ಲಾಕ್‌ರೂಮಿನಲ್ಲಿ ವಿದ್ಯಾರ್ಥಿಗಳ ಎದುರು ನಿಂತಾಗಿರಬಹುದು ಅಥವಾ ರಸ್ತೆಗಳಲ್ಲಿ ಪ್ರತಿಭಟಿಸುವುದಾಗಿರಬಹುದು ಅಥವಾ ಜೈಲಿನಲ್ಲಿ ಕುಳಿತದ್ದಿರಬಹುದು.

ಅಡ್ವೋಕೇಟ್ ಸುಧಾ ಭಾರದ್ವಾಜ್ 2019ರ ಅಂತರಾಷ್ಟ್ರೀಯ ಹಾರ್ವರ್ಡ್ ಕಾನೂನು ಮಹಿಳಾ ದಿನಾಚರಣೆಯ ಗೌರವಾನ್ವಿತರಲ್ಲಿ ಒಬ್ಬರು. ಪುಣೆಯ ಜೈಲು ಕೋಣೆಯಲ್ಲಿ ಕುಳಿತಿರುವ ಅವರ ಚಿತ್ರ ಪ್ರದರ್ಶನಗೊಂಡಿತು. ಒಂದೇ ಸಮಯದಲ್ಲಿ ಈ ಎರಡು ಬಗೆಯ ವಿರೋಧಾಭಾಸಗಳು ಹೇಗೆ ಸಾಧ್ಯ?
ಇದನ್ನೂ ಓದಿ: ಡೀಫಾಲ್ಟ್ ಜಾಮೀನು ಪ್ರಶ್ನಿಸಿದ್ದ ಎನ್‌ಐಎ ಅರ್ಜಿ ವಜಾಗೊಳಿಸಿದ ಸುಪ್ರೀಂ: ನಾಳೆ ಸುಧಾ ಭಾರದ್ವಾಜ್ ಬಿಡುಗಡೆ
ಅತ್ಯಂತ ಪ್ರಸಿದ್ದ ತಂದೆತಾಯಿಯ ಮಗಳಾಗಿ ಅಮೆರಿಕದಲ್ಲಿ ಹುಟ್ಟಿದ ಸುಧಾ ತನ್ನ ವಿದ್ಯಾರ್ಥಿ ಜೀವನದ ಬಹುತೇಕ ಭಾಗವನ್ನು ಅಮೇರಿಕನ್ ಪ್ರಜೆಯಾಗಿ ಕಳೆದರು. ನಂತರ ಐಐಟಿ ಕಾನ್‌ಪುರದಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಗಳಿಸಿದರು. ಮುಂದಿನ 30 ವರ್ಷ ಛತ್ತಿಸಗಡ ಮುಕ್ತಿ ಮೋರ್ಚಾದ (CMM)ದಲ್ಲಿ ಟ್ರೇಡ್ ಯೂನಿಯನ್‌ನ ಭಾಗವಾಗಿ ನಿರಂತರ ಹೋರಾಟದಲ್ಲಿ ಕಳೆದರು. ಅದರ ನಂತರ ವಕೀಲಿ ವೃತ್ತಿ ಆರಂಭಿಸಿದರು. ಅದಕ್ಷ ವಕೀಲರುಗಳಿಂದ ಹಿನ್ನಡೆ ಅನುಭವಿಸುತ್ತಿದ್ದವರಿಗೆ ಸುಧಾ ಅವರ ದಕ್ಷತೆ, ಪ್ರಾಮಾಣಿಕತೆಯಲ್ಲಿ ಪ್ರಭಾವಶಾಲಿ ವಿರೋಧಿಗಳನ್ನು ಎದುರಿಸುವ ಹೊಸ ಭರವಸೆ ಕಂಡಿತು.
ಸುಧಾ ಅವರು ‘ಜನಹಿತ’ ಸ್ಥಾಪಿಸಿ ಅದರಿಂದ ಕಾರ್ಮಿಕರು, ಗಣಿ ಹಾಗೂ ಭೂಕಬಳಿಕೆಯ ವಿರುದ್ದ ಹೋರಾಡುತ್ತಿದ್ದ ಹಳ್ಳಿಗರು, ಅರಣ್ಯದಲ್ಲಿ ಹಕ್ಕುಗಳಿಗಾಗಿ ಹೋರಾಡುತ್ತಿರುವ ಆದಿವಾಸಿಗಳು ಪರವಾಗಿ ಮತ್ತು ಪರಿಸರ ರಕ್ಷಣೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ಮುಂತಾದ ಕಡೆ ತೊಡಗಿಸಿಕೊಂಡರು. ಇಲ್ಲಿಯವರೆಗೆ ‘ಜನಹಿತ’ ಅನೇಕ ಪ್ರಭಾವಶಾಲಿ ಉದ್ಯಮಿಗಳ ವಿರುದ್ಧ ಕೇಸುಗಳನ್ನು ಹಾಕಿದೆ. ಅದರಲ್ಲಿ ಪ್ರಮುಖವಾಗಿ ಜಿಂದಾಲ್, ವೇದಾಂತ, ಬಾಲ್ಕೋ, ಲಫಾರ್ಚ್ ಹಾಲ್ಸಮ್, ಡಿ.ಬಿ ಪವರ್, ವಂದನಾ ವಿದ್ಯುತ್, SECL, , ಭಿಲಾಯ್ ಸ್ಟೀಲ್ ಪ್ಲಾಂಟ್, ಮಾನೆಟ್ ಸ್ಟೀಟ್, ಅದಾನಿ, ಹಿಂಡಾಲ್ಕೋ, ಗ್ರಾನೆಮ್, ಅಲ್ಟಾçಟೆಕ್ ಮತ್ತಿತರಿದ್ದಾರೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (PUCL)ನ ಅಂದಿನ ಅಧ್ಯಕ್ಷ ಬಿನಾಯಕ್ ಸೇನ್ ಅವರ ಬಂಧನದ ನಂತರ ಆ ಗುಂಪನ್ನು ಪುನರ್‌ರಚಿಸುವಲ್ಲಿ ಹಾಗೂ ಒಗ್ಗೂಡಿಸುವಲ್ಲಿ ಸುಧಾ ಅವರ ಕೊಡುಗೆ ಅಪಾರ. ನಂತರ ಸುಧಾ ಭಾರದ್ವಾಜ್ ಆ ಸಂಘಟನೆಗೆ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆ ಆದರು. ಹಾಗೂ ಅಲ್ಪಸಂಖ್ಯಾತರು ಮತ್ತು ಮಾನವ ಕಳ್ಳ ಸಾಗಾಣಿಕೆಯಂತಹ ವಿಷಯಗಳಲ್ಲಿ ಕೆಲಸ ಮಾಡಿದರು. ಬಸ್ತರ್ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಲಿಪಶುಗಳಾದವರಿಗೆ ಸಹಾಯಹಸ್ತ ಚಾಚಿದರು. ಜೊತೆಗೆ ಆಡಳಿತದ ದೌರ್ಜನ್ಯ ಹಾಗೂ ದರ್ಪದ ವಿರುದ್ಧ ಧೈರ್ಯದಿಂದ ಎದುರುನಿಂತ ಕಾರ್ಯಕರ್ತರು ಹಾಗೂ ಪತ್ರಕರ್ತರಿಗೆ ಆಸರೆ ಒದಗಿಸಿದರು. ಇತ್ತೀಚೆಗೆ ‘ಇಂಡಿಯನ್ ಅಸೋಸಿಯೇಷನ್ ಆಫ್ ಪೀಪಲ್ಸ್ ಲಾರ‍್ಸ್ (IAPL)ಗೆ ಉಪಾಧ್ಯಕ್ಷೆಯಾಗಿ ಆಯ್ಕೆ ಆದರು.

ಸುಧಾ ದಲಿತರು ಹಾಗೂ ಮಾನವಹಕ್ಕು ವಕೀಲರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಚಳವಳಿ ಪ್ರಾರಂಭಿಸಿದ್ದರು ಹಾಗೂ ಆ ವಿಷಯಗಳಲ್ಲಿ ಸತ್ಯಶೋಧಕ ಸಮಿತಿಯನ್ನು ರಚಿಸಿದ್ದರು.
ಸುಧಾ ಅವರನ್ನು ಅವರ ಫರೀದಾಬಾದ್‌ನ ಮನೆಯಿಂದ ಬಂಧಿಸಲಾಯಿತು. ಅಲ್ಲಿ ಅವರು ತಮ್ಮ ಮಗಳು ‘ಮಾಯ್‌ಶಾ’ ಜೊತೆ ಇರುತ್ತಿದ್ದರು. ಈ ಸಮಯದಲ್ಲಿ ಅವರು ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯಲ್ಲಿ ಅತಿಥಿ ಪ್ರಾಧ್ಯಾಪಕಿಯಾಗಿ, ಬುಡಕಟ್ಟು ಜನರ ಹಕ್ಕುಗಳು, ಭೂಕಬಳಿಕೆ, 5 ಮತ್ತು 6ನೇ ಶೆಡ್ಯೂಲುಗಳ ಮೇಲೆ ಸೆಮಿನಾರ್ ನೀಡುತ್ತಿದ್ದರು. ಈ ವರ್ಷ ಅವರು ‘ಪ್ರಪಂಚದ ಜಾಗತೀಕರಣದಲ್ಲಿ ಕಾನೂನು ಹಾಗೂ ನ್ಯಾಯ’ ಎಂಬ ವಿಷಯದ ಮೇಲೆ ಪಾಠ ಮಾಡಬೇಕಿತ್ತು. ದುರದೃಷ್ಟವಶಾತ್ ಅವರು ಜೈಲಿಗೆ ಹೋಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಅಲ್ಲಿಯ ವಿದ್ಯಾರ್ಥಿಗಳು ವಿಷಾದ ವ್ಯಕ್ತಪಡಿಸುತ್ತಾರೆ.
ಸುಧಾ ಅವರ ಮಗಳು ಮಾಯ್‌ಶಾ ತಮ್ಮ ತಾಯಿಯ ದಣಿವರಿಯದ ಚೈತನ್ಯ ಹಾಗೂ ಅವರ ಕೆಲಸದ ಬಗೆಗಿನ ನಿಷ್ಠೆ ಬಗ್ಗೆ ‘ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುವುದು, ಕಾರ್ಮಿಕರ ಮತ್ತು ರೈತರ ಮೇಲಾಗುವ ದಬ್ಬಾಳಿಕೆ ಹಾಗೂ ದೌರ್ಜನ್ಯಗಳ ವಿರುದ್ಧ ಹೋರಾಡುವುದು, ತಮ್ಮ ಇಡೀ ಜೀವನವನ್ನು ಇದಕ್ಕಾಗಿ ಮುಡಿಪಾಗಿಡುವುದನ್ನು ನಕ್ಸಲಿಸಂ ಎನ್ನುವುದಾದರೆ ನನಗನ್ನಿಸುವ ಮಟ್ಟಿಗೆ ನಕ್ಸಲರು ಒಳ್ಳೆಯವರು ಎಂದಾಯಿತು’ ಎಂದು ಹೇಳುತ್ತಾರೆ.
ಗುನೀತ್ ಅಹುಜಾ ಎಂಬ ದೆಹಲಿಯ ವಕೀಲರು ಸುಧಾ ಅವರ ಬಗ್ಗೆ ಬಹಿರಂಗ ಪತ್ರ ಬರೆಯುತ್ತಾ ‘ನಾನು ಮೊದಲ ಬಾರಿ ಸುಧಾ ಅವರನ್ನು ಭೆಟ್ಟಿ ಮಾಡಿದಾಗ 47ರ ಸ್ವಾತಂತ್ಯ್ರದ ಅನ್ವೇಷಣೆ ಹಾಗೂ 48ರ ಬಸ್ತರ್‌ದಲ್ಲಿನ ಸ್ವಾತಂತ್ರ‍್ಯದ ಅನ್ವೇಷಣೆ ಮತ್ತು ಅದರ ಸ್ಫರ್ಧಾತ್ಮಕ ನಿರೂಪಣೆಗಳ ಬಗ್ಗೆ ಮಾತಾಡಿದ್ದೆ. ಅವರು ನೀಡಿದ ಉತ್ತರ ನನ್ನ ಮೇಲೆ ಬಹಳ ದೊಡ್ಡ ಪ್ರಭಾವವನ್ನು ಬೀರಿದೆ’ ಎಂದು ಹೇಳುತ್ತಾರೆ.
ಸುಧಾ ಅವರು ತಾವು ಹೋರಾಡುವ ಪ್ರತಿಯೊಬ್ಬರಿಗೂ ಜೊತೆ ಸಾಗುವ ದಾರಿಹೋಕರಂತೆ. ಅವರು ಆ ದಾರಿ ನಮಗೆಲ್ಲರಿಗೂ ಸೇರಿದ್ದು ಎಂದು ನಂಬುತ್ತಾರೆ. ರಾಜ್ಯ ಆಡಳಿತ ಎಂಬುದು ಒಂದು ಕಾರಿದ್ದಂತೆ, ಅದಕ್ಕೆ ದಾರಿಯಲ್ಲಿ ಹೋಗುವ ಜನರನ್ನು ಕಂಡರೆ ಅಸಡ್ಡೆ ಹಾಗೂ ಅದು ರಸ್ತೆ ತನಗೆ ಸೇರಿದ್ದು ಎಂದುಕೊಳ್ಳುತ್ತದೆ. ಅದು ತನ್ನ ಆಪ್ತರ ಕೆಲಸಗಳಲ್ಲಿ ತನ್ನನ್ನು ಗುರುತಿಸಿಕೊಳ್ಳಬಯಸುತ್ತದೆ. ಆಡಳಿತಕ್ಕೆ ಸುಧಾ ಅವರ ಜಾಗ ಜೈಲು ಆದರೆ ನಮಗೆಲ್ಲ ಅವರೊಬ್ಬ ಮಾನವ ಹಕ್ಕುಗಳ ಪ್ರತಿಪಾದಕಿ.
ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ
ಅನುವಾದ: ರಾಜಲಕ್ಷ್ಮಿಅಂಕಲಗಿ
ಇದನ್ನೂ ಓದಿ: ದೇಶದ ಸಾಕ್ಷಿಪ್ರಜ್ಞೆ ಬಾಬಾಸಾಹೇಬರ ಬೌದ್ಧಿಕ ವಾರಸುದಾರ: ಚಿಂತಕ ಆನಂದ್ ತೇಲ್ತುಂಬ್ಡೆ



ಸುದಾ ಭಾರದ್ವಾಜ್ ಮತ್ತು ಸಹವರ್ತಿ ಹೋರಾಟಗಾರರನ್ನು ಸರ್ಕಾರ ಈ ಕೂಡಲೇ ಬಿಡುಗಡೆ ಮಾಡಬೇಕು.