ಯುದ್ಧ ಪೀಡಿತ ಗಾಝಾದ ಜನತೆಗೆ ಮಾನವೀಯ ನೆರವು ಹೊತ್ತು, ಇಸ್ರೇಲ್‌ನ ನೌಕಾ ದಿಗ್ಬಂಧನ ಮುರಿಯಲು ಹೊರಟಿರುವ ಜಾಗತಿಕ ‘ಸುಮುದ್ ಫ್ಲೊಟಿಲ್ಲಾ’ ನೆರವು ಹಡಗುಗಳ ಗುಂಪು ತನ್ನ ಪ್ರಯಾಣದ ಅಂತಿಮ ಹಂತಕ್ಕೆ ತಲುಪಿದೆ ಎಂದು ಸೋಮವಾರ (ಸೆ.29) ವರದಿಯಾಗಿದೆ.
ಜಾಗತಿಕ ಸುಮುದ್ ಫ್ಲೊಟಿಲ್ಲಾ ಎನ್ನುವುದು ಇಸ್ರೇಲ್ ಗಾಝಾ ಮೇಲೆ ವಿಧಿಸಿರುವ ನಾಕಾಬಂದಿಯನ್ನು ಭೇದಿಸುವ ಗುರಿಯನ್ನು ಹೊಂದಿರುವ ಒಂದು ಪ್ರಮುಖ ಅಂತಾರಾಷ್ಟ್ರೀಯ ಮಿಷನ್ ಆಗಿದೆ. ಈ ಫ್ಲೊಟಿಲ್ಲಾದಲ್ಲಿ 44 ಹಡಗುಗಳು ಇದ್ದು, ಇವು ಮಾನವೀಯ ನೆರವುಗಳಾದ ಆಹಾರ, ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು ಒಯ್ಯುತ್ತಿವೆ. ಜೊತೆಗೆ, ವಿಶ್ವದ ವಿವಿಧ ಭಾಗಗಳ ನೂರಾರು ಪ್ರತಿನಿಧಿಗಳು ಈ ಮಿಷನ್‌ನ ಭಾಗವಾಗಿದ್ದಾರೆ.
ಸುಮುದ್ ಫ್ಲೊಟಿಲ್ಲಾದ ಹಡಗುಗಳು ಪ್ರಸ್ತುತ ಗಾಝಾದಿಂದ ಸುಮಾರು 366 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿವೆ. ಆಯೋಜಕರು ಹೇಳುವಂತೆ, ಈ 44 ಹಡಗುಗಳ ಗುಂಪು ಮುಂದಿನ ನಾಲ್ಕು ದಿನಗಳಲ್ಲಿ ಗಾಝಾ ಸಮುದ್ರ ತೀರ ತಲುಪಲಿದೆ. ಅದಕ್ಕೂ ಮುನ್ನ ಜಲ ಪ್ರದೇಶದ ‘ಕಿತ್ತಳೆ ವಲಯ’ (ಆರೆಂಜ್ ಝೋನ್) ಪ್ರವೇಶಿಸಲಿದೆ. ಅಲ್ಲಿ ಇಸ್ರೇಲ್‌ನ ನೌಕಾಪಡೆ ಈ ಹಡಗುಗಳನ್ನು ತಡೆಯುವ ಸಾಧ್ಯತೆ ಇದೆ.
View this post on Instagram
44 ಹಡಗುಗಳ ಗುಂಪಿನ ಭಾಗವಾದ ಜಾನಿ ಎಂ. ಎಂಬ ಹಡಗಿನ ಇಂಜಿನ್ ಕೋಣೆಯಲ್ಲಿ ಸೋಮವಾರ (ಸೆ.29) ಸೋರಿಕೆ ಕಂಡು ಬಂದಿದ್ದು, ಆ ಬಳಿಕ ಅದರ ಪ್ರಯಾಣ ಸ್ಥಗಿತಗೊಳಿಸಲಾಗಿದೆ.
ಆ ಹಡಗಿನಲ್ಲಿದ್ದ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ. ಈ ಪೈಕಿ ಕೆಲವರನ್ನು ಬೇರೆ ಹಡಗುಗಳಿಗೆ ಹತ್ತಿಸಲಾಗಿದೆ. ಇನ್ನೂ ಕೆಲವರಿಗೆ ಬೇರೆ ಹಡಗಿನ ವ್ಯವಸ್ಥೆ ಮಾಡಲಾಗಿದೆ. ಉಳಿದವರನ್ನು ತೀರಕ್ಕೆ ಕರೆತರಲಾಗಿದೆ.
ಮುಂದಿನ ನಾಲ್ಕು ದಿನಗಳಲ್ಲಿ ಗಾಝಾ ತಲುಪುವ ಗುರಿಗೆ ಇದರಿಂದ ಅಡ್ಡಿಯೇನು ಇಲ್ಲ ಎಂದು ಸಮುದ್ ತಂಡ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದೆ.
View this post on Instagram
46 ದೇಶಗಳ ಪ್ರತಿನಿಧಿಗಳು ಈ ಸುಮುದ್ ಫ್ಲೊಟಿಲ್ಲಾ ತಂಡದಲ್ಲಿ ಇದ್ದಾರೆ. ಇದು ಕಳೆದ 18 ವರ್ಷಗಳಿಂದ ಗಾಝಾದ ಮೇಲೆ ವಿಧಿಸಿರುವ ನಾಕಾಬಂದಿಯನ್ನು ಬೇಧಿಸುವ ಇದುವರೆಗಿನ ಅತಿದೊಡ್ಡ ಸಮುದ್ರ ಆಧಾರಿತ ಪ್ರಯತ್ನವಾಗಿದೆ. ಈ 44 ಹಡಗುಗಳ ಗುಂಪು 500ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯತ್ತಿದೆ. ಇವರಲ್ಲಿ ವೈದ್ಯರು, ವಿವಿಧ ದೇಶಗಳ ಸಂಸದರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸ್ವೀಡನ್‌ನ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ರಂತಹ ಪ್ರಸಿದ್ಧ ಚಳವಳಿಗಾರರು ಇದ್ದಾರೆ.
ಈ ವರ್ಷದ ಆರಂಭದಲ್ಲಿ ಇಸ್ರೇಲಿ ಪಡೆಗಳು ಮದ್ಲೀನ್ ಹಡಗನ್ನು ತಡೆದ ಅದೇ ಜಲ ಪ್ರದೇಶವನ್ನು ಫ್ಲೋಟಿಲ್ಲಾ ಸಮೀಪಿಸುತ್ತಿದೆ ಎಂದು ಜರ್ಮನ್ ಹೋರಾಟಗಾರ್ತಿ ಯಾಸ್ಮಿನ್ ಅಕಾರ್ ದೃಢಪಡಿಸಿದ್ದಾರೆ.
“ನಾವು ಕೇವಲ ಮಾನವೀಯ ನೆರವು ನೀಡುತ್ತಿಲ್ಲ, ಗಾಝಾ ಜನತೆಯಲ್ಲಿ ಭರವಸೆ ಮೂಡಿಸುತ್ತಿದ್ದೇವೆ. ಅವರೊಂದಿಗೆ ಒಗ್ಗಟ್ಟು ಪ್ರದರ್ಶಿಸುತ್ತಿದ್ದೇವೆ. ಜಗತ್ತು ಪ್ಯಾಲೆಸ್ತೀನ್‌ನೊಂದಿಗೆ ಇದೆ ಎಂಬ ಬಲವಾದ ಸಂದೇಶವನ್ನು ಕಳುಹಿಸುತ್ತಿದ್ದೇವೆ” ಎಂದು ಗ್ರೀಸ್‌ನ ದ್ವೀಪ ಕ್ರೀಟ್ ಬಳಿ ಗ್ರೇಟಾ ಥನ್‌ಬರ್ಗ್ ಹೇಳಿದ್ದಾರೆ.
ಸುಮುದ್ ಫ್ಲೊಟಿಲ್ಲಾದ ಹಡಗುಗಳು ಗಾಝಾಕ್ಕೆ ಹತ್ತಿರವಾಗುತ್ತಿವೆ. ಪ್ರತಿ ನಿಮಿಷವೂ ಅವು ಗಾಝಾದ ಜನರಿಗೆ ನ್ಯಾಯ ತಲುಪಿಸಲು ಮುಂದುವರಿಯುತ್ತಿವೆ ಎಂದು ಆಯೋಜಕರು ಹೇಳಿದ್ದಾರೆ. ಅವರ ವೆಬ್‌ಸೈಟ್‌ನಲ್ಲಿ ಒಂದು ಟ್ರ್ಯಾಕರ್ ಇದೆ, ಅದು ಈ ಹಡಗುಗಳು ಮೆಡಿಟರೇನಿಯನ್ ಸಮುದ್ರದಲ್ಲಿ ಮುಂದುವರಿಯುವುದನ್ನು ತೋರಿಸುತ್ತಿದೆ. ಇಡೀ ಜಗತ್ತಿನ ಗಮನ ಈಗ ಸುಮುದ್ ತಂಡ ಮೇಲಿದೆ.
Time moves and flotilla move with it — every minute takes global sumud flotilla nearer to Gaza and the justice it deserves. pic.twitter.com/1GyZ63Vkzq
— Global Sumud Flotilla Commentary (@GlobalSumudF) September 28, 2025
ಸೆಪ್ಟೆಂಬರ್ 26 ಶುಕ್ರವಾರ ಸುಮುದ್ ತಂಡದಿಂದ ಮಾತನಾಡಿದ್ದ ಗ್ರೇಟಾ ಥನ್‌ಬರ್ಗ್, “ನಾನು ಇಸ್ರೇಲ್‌ಗೆ ಹೆದರುವುದಿಲ್ಲ, ಮಾನವೀಯತೆಯ ಎಲ್ಲಾ ಪ್ರಜ್ಞೆಯನ್ನು ಕಳೆದುಕೊಂಡಿರುವ ಜಗತ್ತಿಗೆ ಹೆದರುತ್ತೇನೆ” ಎಂದು ಹೇಳಿದ್ದರು.
View this post on Instagram
ಫ್ಲೋಟಿಲ್ಲಾದ ಸಂಚಾರವು ಅಂತಾರಾಷ್ಟ್ರೀಯ ಗಮನ ಸೆಳೆದಿದೆ ಮತ್ತು ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಓಪನ್ ಸೋರ್ಸ್ ಟ್ರ್ಯಾಕಿಂಗ್ ಪ್ರಕಾರ, ಟರ್ಕಿಯು ಹಡಗುಗಳ ಮೇಲ್ವಿಚಾರಣೆ ಮಾಡಲು ಮತ್ತು ರಕ್ಷಿಸಲು ಡ್ರೋನ್‌ಗಳು ಮತ್ತು ಫ್ರಿಗೇಟ್ ಅನ್ನು ನಿಯೋಜಿಸಿದೆ.
ಇಟಲಿ ಮತ್ತು ಸ್ಪೇನ್ ಸಂಭಾವ್ಯ ರಕ್ಷಣೆ ಮತ್ತು ಮಾನವೀಯ ನೆರವಿಗಾಗಿ ನೌಕಾ ಹಡಗುಗಳನ್ನು ಸನ್ನದ್ಧವಾಗಿ ಇರಿಸಿವೆ.
ಈ ತಿಂಗಳ ಆರಂಭದಲ್ಲಿ, ಫ್ಲೋಟಿಲ್ಲಾದ ಎರಡು ಹಡಗುಗಳನ್ನು ಡ್ರೋನ್‌ಗಳು ಗುರಿಯಾಗಿಸಿಕೊಂಡಿದ್ದವು ಎಂದು ವರದಿಯಾಗಿದೆ. ಈ ದಾಳಿಗಳಿಂದ ಉಂಟಾದ ವಿಳಂಬ ಮತ್ತು ಹವಾಮಾನ ವೈಪರೀತ್ಯಗಳ ಹೊರತಾಗಿಯೂ, ನಾವು ಗಾಝಾ ತಲುಪಿಯೇ ತೀರುತ್ತೇವೆ ಎಂದು ಸುಮುದ್ ತಂಡ ಶಪಥ ಮಾಡಿದೆ.
ಇಸ್ರೇಲಿ ಮಾಧ್ಯಮಗಳ ಪ್ರಕಾರ, ಇಸ್ರೇಲ್‌ನ ನೌಕಾಪಡೆಯ ಗುಂಪಾದ ಶಯೆತೆತ್ 13 ತಂಡವು ಈ ಹಡಗುಗಳನ್ನು ವಶಪಡಿಸಿಕೊಳ್ಳಲು ತಯಾರಿ ನಡೆಸುತ್ತಿದೆ ಮತ್ತು ಈಗಾಗಲೇ ತರಬೇತಿ ಅಭ್ಯಾಸಗಳನ್ನು ಮಾಡುತ್ತಿದೆ. ಅಧಿಕಾರಿಗಳು ಹೇಳುವಂತೆ, ಈ ಹಡಗುಗಳು ಗಾಝಾ ತೀರಕ್ಕೆ ತಲುಪದಂತೆ ತಡೆಯುವುದು ಇಸ್ರೇಲ್ ಗುರಿಯಾಗಿದೆ. ಆದರೆ, ಈ ಸಂದರ್ಭದಲ್ಲಿ ಫ್ಲೊಟಿಲ್ಲಾದ ಭಾಗವಾದವರಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಇಸ್ರೇಲ್ ಯೋಜಿಸಿದೆ.
‘ಭಾರತೀಯ ಇಲಿಗಳು..’ ಎಂದು ಕೆನಡಾದಲ್ಲಿ ದ್ವೇಷಪೂರಿತ ಗೋಡೆ ಬರಹ: ಖಂಡನೆ


