ಇದೇನಿದು ಸೂರ್ಯ ಪಶ್ಚಿಮದಲ್ಲಿ ಹುಟ್ಟಲು ಸಾಧ್ಯವೇ ಅಂತ ಯೋಚನೆ ಮಾಡುತ್ತಿದ್ದಿರಾ? ನಮಗೆ ತಿಳಿದಿರೋ ಹಾಗೆ ಸೂರ್ಯ ಯಾವತ್ತಾದರೂ ಪೂರ್ವ ದಿಕ್ಕಿನಲ್ಲಿ ಹುಟ್ಟುವುದನ್ನೂ ಬಿಟ್ಟು ಬೇರೆ ಯಾವ ದಿಕ್ಕಿನಲ್ಲಾದರೂ ಹುಟ್ಟಿದ್ದಾನೇಯೇ ಅಥವಾ, ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ದರ ಬಗ್ಗೆ ಯಾವುದಾದರೂ ಪುರಾಣ ಕಥೆಗಳಲ್ಲಾದರೂ ಕೇಳಿದ್ದೇವೆಯೇ? ಬಹುಶಃ ಇಲ್ಲ! ನಮ್ಮ ಎಲ್ಲಾ ಕಾಲದ ಗ್ರಹಿಕೆಯಲ್ಲಿ, ಭೂಮಿಯ ಮೇಲೆ ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ ಎಂದೇ ನಮ್ಮ ತಿಳಿವಳಿಕೆ ಅಲ್ಲವೇ? ಭೂಮಿಯಲ್ಲೇನೋ ಈ ಪ್ರಕ್ರಿಯೆ ಸರಿ, ನಮ್ಮ ಸೌರಮಂಡಲದ ಇತರೆ ಗ್ರಹಗಳಲ್ಲೂ ಸೂರ್ಯ ಪೂರ್ವ ದಿಕ್ಕಿನಲ್ಲಿಯೇ ಹುಟ್ಟುತ್ತಾನಾ? ಇಂತಹ ಪ್ರಶ್ನೆಗಳೂ ನಿಮ್ಮಲ್ಲೂ ಹುಟ್ಟಿರಬಹುದು ಅಲ್ಲವೇ?
ಅದಕ್ಕೂ ಮುಂಚೆ, ಈ ಪ್ರಶ್ನೆ ಕೇಳಿಕೊಳ್ಳೋಣ. ನಮ್ಮ ಸೌರಮಂಡಲದಲ್ಲಿ ಭೂಮಿಯ ಗಾತ್ರದಲ್ಲೇ ಇರುವ ಮತ್ತೊಂದು ಗ್ರಹ ಯಾವುದು? ನಿಮ್ಮ ಊಹೆ ಶುಕ್ರ ಗ್ರಹವಾಗಿದ್ದರೆ ಅದು ಸರಿ ಉತ್ತರ. ಬನ್ನಿ ಹಾಗಾದರೆ, ಶುಕ್ರ ಗ್ರಹಕ್ಕೆ ಹೋಗಿ, ಅದರ ವಿಶೇಷತೆಯನ್ನು ತಿಳಿದುಬರೋಣ.
ಸೌರಮಂಡಲದಲ್ಲಿ ಶುಕ್ರ, ಬುಧ ಗ್ರಹದ ನಂತರದ ಗ್ರಹ. ಶುಕ್ರ ನಮ್ಮ ಸೌರಮಂಡಲದಲ್ಲೇ ಅತ್ಯಂತ ವಿಶಿಷ್ಟ ಗ್ರಹ. ಈ ಗ್ರಹದ ವಿಶಿಷ್ಟತೆ ತಿಳಿಯುವ ಮೊದಲು ಭೂಮಿಯ ಮೇಲೆ ಸೂರ್ಯ ಏಕೆ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುತ್ತಾನೆ ಎನ್ನುವ ವಿಚಾರವನ್ನು ತಿಳಿಯೋಣ.
ಭೂಮಿಯು, ತನ್ನ ಉತ್ತರ ಮತ್ತು ದಕ್ಷಿಣ ಧ್ರುವದ ಮೂಲಕ ಹಾದು ಹೋಗುವ ಕಾಲ್ಪನಿಕ ಅಕ್ಷದ ಸುತ್ತ ತಿರುಗುತ್ತಿರುವುದು ನಮಗೆಲ್ಲರಿಗೂ ತಿಳಿದ ವಿಷಯ. ಈ ತಿರುಗುವಿಕೆ ಪಶ್ಚಿಮದಿಂದ ಪೂರ್ವ ದಿಕ್ಕಿಗೆ ಇದೆ. ಇದನ್ನ Diurnal Motion ಅಂತ ಕರೆಯುತ್ತೇವೆ. ಈ ರೀತಿಯ ತಿರುಗುವಿಕೆಯಿಂದ, ಭೂಮಿಯ ಆಗಸದಲ್ಲಿ ಕಾಣುವ ಎಲ್ಲಾ ಆಕಾಶಕಾಯಗಳು ಅಂದರೆ, ಸೂರ್ಯ, ಚಂದ್ರ, ಗ್ರಹ ಮತ್ತು ನಕ್ಷತ್ರ ಎಲ್ಲವೂ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುವಂತೆ ಗೋಚರಿಸುತ್ತವೆ.
ಈಗೆ ಭೂಮಿಯು ತನ್ನ ಅಕ್ಷದ ಸುತ್ತ ಪಶ್ಚಿಮದಿಂದ ಪೂರ್ವ ದಿಕ್ಕಿಗೆ ತಿರುಗಲು ಸುಮಾರು 24 ಗಂಟೆಗಳು ಬೇಕಾಗುತ್ತವೆ. ಇದನ್ನೇ ನಾವು ಒಂದು ಭೂ ದಿನ ಎಂದು ಕರೆಯುತ್ತೇವೆ. ಭೂಮಿಯ ಹಾಗೆ ಇತರೆ ಗ್ರಹಗಳು ಕೂಡ ತನ್ನ ಧ್ರುವಗಳ ಮೂಲಕ ಹಾದು ಹೋಗುವ ಕಾಲ್ಪನಿಕ ಅಕ್ಷದ ಸುತ್ತ ಬೇರೆ ಬೇರೆ ಅವಧಿಯಲ್ಲಿ ತಿರುಗುತ್ತಿವೆ. ಸೌರ ಮಂಡಲದ ಎಲ್ಲಾ ಗ್ರಹಗಳು ಪಶ್ಚಿಮದಿಂದ ಪೂರ್ವ ದಿಕ್ಕಿಗೆ ಸುತ್ತುತ್ತಿದ್ದರೆ, ಶುಕ್ರ ಗ್ರಹ ಮಾತ್ರ ಪೂರ್ವದಿಂದ ಪಶ್ಚಿಮ ದಿಕ್ಕಿಗೆ ತಿರುಗುತ್ತಿದೆ! (ಯುರೇನಸ್ ಗ್ರಹದ ತಿರುಗುವಿಕೆಯು ವಿಭಿನ್ನವಾಗಿದೆ. ಅದನ್ನು ಮುಂದೊಮ್ಮೆ ಚರ್ಚಿಸೋಣ).
ಶುಕ್ರ ಗ್ರಹವು ಪೂರ್ವದಿಂದ ಪಶ್ಚಿಮಕ್ಕೆ ತನ್ನ ಅಕ್ಷದ ಸುತ್ತ ಸುತ್ತುತ್ತಿರುವ ಕಾರಣದಿಂದ, ಶುಕ್ರ ಗ್ರಹಕ್ಕೆ ಮಾನವನೇನಾದರೂ ಒಂದು ದಿನ ಹೋದರೆ, ಅಲ್ಲಿಯ ಆಕಾಶದಲ್ಲಿ ಎಲ್ಲಾ ಆಕಾಶ ಕಾಯಗಳು ಪಶ್ಚಿಮ ದಿಕ್ಕಿನಲ್ಲಿ ಹುಟ್ಟಿ ಪೂರ್ವ ದಿಕ್ಕಿನಲ್ಲಿ ಮುಳುಗುವುದನ್ನ ಕಾಣುತ್ತಾನೆ. ಹಾಗಾಗಿ ಸೂರ್ಯ ಕೂಡ ಶುಕ್ರ ಗ್ರಹದಲ್ಲಿ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗುತ್ತಾನೆ. ಎಷ್ಟು ವಿಸ್ಮಯಕಾರಿ ವಿಷಯ ಅಲ್ಲವೇ?. ಅಂದಹಾಗೆ ಶುಕ್ರ ಗ್ರಹದ ವಿಶೇಷತೆ ಇಲ್ಲಿಗೇ ನಿಲ್ಲುವುದಿಲ್ಲ!
ಶುಕ್ರ ಗ್ರಹ ತನ್ನ ಅಕ್ಷದ ಸುತ್ತ ಒಂದು ಸುತ್ತು ಸುತ್ತಲು ಬರೋಬ್ಬರಿ 243 ಭೂ ದಿನಗಳನ್ನು ತೆಗೆದುಕೊಳ್ಳುತ್ತದೆ. ಇದರ ಅರ್ಥ, ಶುಕ್ರ ಗ್ರಹದ ಒಂದು ದಿನ ಭೂಮಿಯ 243 ದಿನಗಳಿಗೆ ಸಮ ಎಂದು. ಇದರ ಜೊತೆಗೆ, ಶುಕ್ರ ಗ್ರಹವು ಸೂರ್ಯನ ಸುತ್ತ ಒಂದು ಸುತ್ತು ಹಾಕಲು 225 ಭೂ ದಿನಗಳನ್ನು ತೆಗೆದುಕೊಳ್ಳುತ್ತದೆ. ಹಾಗಾದರೆ, ಇದರ ಅರ್ಥ ಏನನ್ನು ಧ್ವನಿಸುತ್ತದೆ? ಶುಕ್ರ ಗ್ರಹದಲ್ಲಿ ಒಂದು ವರ್ಷಕ್ಕೆ 225 ಭೂ ದಿನಗಳು? ಆದರೆ, ಒಂದು ದಿನಕ್ಕೆ 243 ಭೂ ದಿನಗಳು ಎಂದು?
ಇವೆಲ್ಲವುವನ್ನು ಒಟ್ಟಾರೆಯಾಗಿ ಗಮನಿಸಿದರೆ, ಶುಕ್ರ ಗ್ರಹದಲ್ಲಿ ಒಂದು ದಿನ, ಒಂದು ವರ್ಷಕ್ಕಿಂತಲೂ ಹೆಚ್ಚು! ಅಂದರೆ, ಶುಕ್ರ ಗ್ರಹದಲ್ಲಿ ಒಂದು ದಿನವಾಗಬೇಕೆಂದರೆ, ಒಂದು ವರ್ಷ ಕಳೆದು, 18 ಭೂ ದಿನ ಕಳೆದಾಗ ಒಂದು ದಿನವಾಗುತ್ತದೆ! ಆಶ್ಚರ್ಯವಾದರೂ, ನಭೋ ಮಂಡಲದಲ್ಲಿ ಇಂತಹ ವಿಸ್ಮಯವಾದ ಅಂಶಗಳು ಬಹಳಷ್ಟಿವೆ.
ಸೌರಮಂಡಲದ ಇತರೆ ಗ್ರಹಗಳಿಗೆ ಹೋಲಿಸಿದರೆ, ಶುಕ್ರ ಗ್ರಹದ ಈ ವಿಶಿಷ್ಟವಾದ ತಿರುಗುವಿಕೆಗೆ (ಪಶ್ಚಿಮದಿಂದ ಪೂರ್ವಕ್ಕೆ) ವೈಜ್ಞಾನಿಕ ಕಾರಣಗಳು ಇನ್ನೂ ಅಸ್ಪಷ್ಟವಾಗಿದೆ. ಒಂದು ದೊಡ್ಡ ಆಕಾಶಕಾಯದ ಘರ್ಷಣೆಯಿಂದ ಹಾಗೂ ಸೂರ್ಯನ ಗುರುತ್ವ ಬಲದಿಂದ ಶುಕ್ರ ಗ್ರಹಕ್ಕೆ ಈ ರೀತಿಯ ತಿರುಗುವಿಕೆ ಇರಬಹುದು ಎಂದು ಊಹಿಸಲಾಗಿದೆ.