ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಇಂದು ಬೆಂಗಳೂರಿನಲ್ಲಿ ವಿದ್ಯಾರ್ಥಿ ಯುವಜನರು ‘ದೇಶಪ್ರೇಮಿ ಯುವಾಂದೋಲನ’ ಹೆಸರಿನಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ನಗರದ ಮೌರ್ಯ ಸರ್ಕಲ್ ಬಳಿಯ ಗಾಂಧಿ ಪ್ರತಿಮೆ ಬಳಿ ಒಟ್ಟುಗೂಡಿದ ನೂರಾರು ವಿದ್ಯಾರ್ಥಿ ಯುವಜನರು ಮತ್ತು ನೂರಾರು ಸಿಖ್ ಧರ್ಮೀಯರು ದೆಹಲಿಯಲ್ಲಿ ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಶ್ರದ್ದಾಂಜಲಿ ಸಲ್ಲಿಸಿದರು.
ಎಸ್‌ಎಫ್‌ಐ ರಾಜ್ಯಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ “ಇಂದು ಆರ್ಥಿಕ ಕುಸಿತದಿಂದಾಗಿ ಉತ್ಪಾದನಾ ಚಟುವಟಿಕೆಗಳು ಕುಸಿತಗೊಂಡಿರುವ ಸಂದರ್ಭದಲ್ಲಿ ರೈತರಿಗೆ ವಿರುದ್ಧವಾದ ಮತ್ತು ಬಂಡವಾಳಶಾಹಿಗಳ ಪರವಾದ ಕೃಷಿ ಕಾಯ್ದೆಗಳನ್ನು ನರೇಂದ್ರ ಮೋದಿ ತಂದಿದ್ದಾರೆ. ಹಾಗಾಗಿ ರೈತರ ಪರವಾಗಿ ಮತ್ತು ದೇಶದ ಆಹಾರ ಸಾರ್ವಭೌಮತೆ ಉಳಿಸಿಕೊಳ್ಳಲು ನಾವು ಹೋರಾಡಲೇಬೇಕು” ಎಂದರು.
ದೆಹಲಿಯಲ್ಲಿ ಕೊರೆವ ಚಳಿಯಲ್ಲಿ ಕಳೆದ 24 ದಿನಗಳಿಂದ ರೈತರು ಹೋರಾಡುತ್ತಿದ್ದಾರೆ. ಆದರೆ ನರೇಂದ್ರ ಮೋದಿ ಅವರತ್ತ ತಿರುಗಿ ನೋಡಿಲ್ಲ. ಇದುವರೆಗೂ 33 ಜನ ಹೋರಾಟನಿರತ ರೈತರು ಸಾವನಪ್ಪಿದ್ದಾರೆ. ಆದರೂ ರೈತರು ತಮ್ಮ ಹೋರಾಟವನ್ನು ಬಿಟ್ಟುಕೊಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಮೋದಿ ಮತ್ತು ಅಮಿತ್ ಶಾ ಚುನಾವಣೆ ಗೆಲ್ಲಲು ಯೋಚಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಪುಷ್ಪಲತ ಮಾತನಾಡಿ “ನಮ್ಮ ದೇಶದಲ್ಲಿ ಈವರೆಗೆ ಜೈಜವಾನ್ ಜೈ ಕಿಸಾನ್ ಎಂದು ಘೋಷಣೆ ಕೂಗುತ್ತಿದ್ದೆವು. ಆದರೆ ಈಗ ಡೈ ಜವಾನ್ ಡೈ ಕಿಸಾನ್ ಎನ್ನುವ ರೀತಿ ಕೇಂದ್ರ ರೈತರ ಮೇಲೆ ದಾಳಿ ಮಾಡುತ್ತಿದೆ” ಎಂದರು.
ದೇಶದ ಬೆನ್ನುಲುಬಾದ ರೈತರು ದೇಶದ ಜನತೆಗೆ ಆಹಾರ ಒದಗಿಸುತ್ತಿದ್ದಾರೆ. ಆದರೆ ಆ ರೈತರ ವಿರುದ್ಧದ ಕೃಷಿ ಕಾಯ್ದೆಗಳನ್ನು ತರಲಾಗಿದೆ. ಪ್ರತಿಯೊಂದು ರಾಜಕೀಯ ಪಕ್ಷಗಳು ಸ್ವಾಮಿನಾಥನ್ ವರದಿ ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಬರೆಯುತ್ತಾರೆ. ಆದರೆ ಅಧಿಕಾರಕ್ಕೆ ಬಂದಾಗ ಅದನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಐಎಸ್‌ಎಫ್ ರಾಜ್ಯಾಧ್ಯಕ್ಷೆ ಕೆ ಜ್ಯೋತಿ ಮಾತನಾಡಿ, “ಕೇಂದ್ರ ಸರ್ಕಾರ ಕೃಷಿಕರು ಕೃಷಿಯಿಂದ ವಿಮುಖರಾಗಿ ಆ ಜಾಗದಲ್ಲಿ ಕಾರ್ಪೊರೇಟ್‌ಗಳು ಬಂದು ಕುಳಿತುಕೊಳ್ಳುವಂತೆ ಮಾಡಲು ಮುಂದಾಗಿದೆ. ಹಾಗಾಗಿ
ಇವತ್ತು ಅನ್ನ ನೀಡುವ ಕೈಗಳು ದಿಕ್ಕಾರ ಕೂಗುತ್ತಿದ್ದಾರೆ. ಅವರೊಡನೆ ನಿಲ್ಲಬೇಕಾದುದು ವಿದ್ಯಾರ್ಥಿ ಯುವಜನರ ಕರ್ತವ್ಯ ಎಂದರು.
ಇದೇ ರೀತಿ ದೇಶದಲ್ಲಿ ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಾ ಹೋದರೆ ಹಿಟ್ಲರ್‌ನನ್ನು ಜರ್ಮನಿಯಲ್ಲಿ ಯಾವ ರೀತಿ ಮಾಡಿದರೋ ಆ ರೀತಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

AIDSO ರಾಜ್ಯ ಕಾರ್ಯದರ್ಶಿಗಳಾದ ಅಜಯ್ ಕಾಮತ್, AISA ಮುಖಂಡರಾದ ವಿಶಾಲ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ AIDSO, AISA, AISF, SFI, KVS, AIDYO, AIYF ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು. ನೂರಾರು ಸಿಖ್ ಧರ್ಮೀಯರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ರೈತ ಹೋರಾಟದ ಹುತಾತ್ಮರಿಗೆ ಇಂದು ಶ್ರದ್ಧಾಂಜಲಿ: ಇಲ್ಲಿವೆ ಪ್ರಮುಖ ಅಂಶಗಳು



AIYF was also present. Missing in your report.