ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಂಗೀಕಾರವನ್ನು ಬೆಂಬಲಿಸುವ ನಿರ್ಧಾರವು ನಾವು ಮಾಡಿದ ದೊಡ್ಡ ತಪ್ಪು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ವಾಗ್ದಾಳಿ ನಡೆಸಿದರು.
”ಜಿಎಸ್‌ಟಿ ಬಂದರೆ ಎಲ್ಲ ರಾಜ್ಯಗಳಿಗೂ ಲಾಭವಾಗಬಹುದು ಎಂದು ಅದನ್ನು ಬೆಂಬಲಿಸಿದ್ದೆವು ಆದರೆ ಕೇಂದ್ರವು ಎಲ್ಲ ಹಣವನ್ನು ಕಸಿದುಕೊಳ್ಳುತ್ತಿದೆ. ಈಗ ಅವರು ಕೇಂದ್ರದಿಂದ ರಾಜ್ಯಗಳಿಗೆ ಬರಬೇಕಿದ್ದ ಎಲ್ಲಾ ಹಣವನ್ನು ಸ್ಥಗಿತಗೊಳಿಸಿದ್ದಾರೆ” ಎಂದು ಹೇಳಿದರು.
ಹಣಕಾಸು ಆಯೋಗವು ನಿರ್ಧರಿಸಿದ ಸೂತ್ರದ ಆಧಾರದ ಮೇಲೆ ಕೇಂದ್ರವು ರಾಜ್ಯಗಳಿಗೆ ಹಣವನ್ನು ವಿತರಿಸಬೇಕು. ಕೇಂದ್ರವು ಸಂಗ್ರಹಿಸುವ ಎಲ್ಲಾ ತೆರಿಗೆಗಳಲ್ಲಿ ಶೇಕಡಾ 41ರಷ್ಟು ಹಣವನ್ನು ರಾಜ್ಯಗಳಿಗೆ ನೀಡಬೇಕು ಎಂದು ಆಯೋಗವು ನಿರ್ಧರಿಸಿತ್ತು.
22 ಜಿಲ್ಲೆಗಳ 30,000 ಹಳ್ಳಿಗಳಲ್ಲಿ ಮುಂದಿನ ಐದು ತಿಂಗಳಲ್ಲಿ 12,000 ಕಿಲೋಮೀಟರ್‌ಗಿಂತಲೂ ಹೆಚ್ಚು ಗ್ರಾಮೀಣ ರಸ್ತೆಗಳನ್ನು ದುರಸ್ತಿ ಮಾಡುವ ಮತ್ತು ನಿರ್ಮಿಸುವ ಗುರಿ ಹೊಂದಿರುವ ಸರ್ಕಾರದ ಪಥಶ್ರೀ-ರಸ್ತೆಶ್ರೀ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಅವರು ಮಾತನಾಡಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ಮುನ್ನ ಮುಂದಿನ ತಿಂಗಳು ರಾಜ್ಯದಲ್ಲಿ ಪಂಚಾಯತ್ ಚುನಾವಣೆಯ ನಡೆಯಲಿದೆ. ಇದು ಎಲ್ಲಾ ರಾಜಕೀಯ ಪಕ್ಷಗಳಿಗೆ ಅಗ್ನಿಪರೀಕ್ಷೆ ಎಂದು ಪರಿಗಣಿಸಲಾಗಿದೆ. ಮುಖ್ಯಮಂತ್ರಿಗಳ ಕಚೇರಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ರಮಗಳ ಸಂದರ್ಭದಲ್ಲಿ, ಹಳ್ಳಿಗಳ ರಸ್ತೆಗಳು ಕಳಪೆಯಾಗಿವೆ ಎನ್ನುವ ದೂರುಗಳೇ ಹೆಚ್ಚಾಗಿ ಬಂದಿವೆ.
ಹಾಗಾಗಿ ವಿವಿಧ ಕಲ್ಯಾಣ ಯೋಜನೆಗಳಿಗೆ ಕೇಂದ್ರದ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಾರ್ಚ್ 29ರಿಂದ ಮಾರ್ಚ್ 30ರ ಸಂಜೆಯವರೆಗೆ ಕೋಲ್ಕತ್ತಾದ ಬಿಆರ್ ಅಂಬೇಡ್ಕರ್ ಪ್ರತಿಮೆಯ ಬಳಿ ಧರಣಿ ಪ್ರತಿಭಟನೆ ನಡೆಸುವುದಾಗಿ ಬ್ಯಾನರ್ಜಿ ಘೋಷಿಸಿದ್ದಾರೆ.
ಬುಧವಾರದಿಂದ ಧರಣಿ ಸತ್ಯಾಗ್ರಹ ನಡೆಸುತ್ತೇನೆ. ಕೇಂದ್ರದಿಂದ ಹಣ ಬಿಡುಗಡೆ ಮಾಡಬೇಕು. ಪ್ರಜಾಪ್ರಭುತ್ವವನ್ನು ಏಕೆ ಹತ್ತಿಕ್ಕಲಾಗುತ್ತಿದೆ ಎಂಬುದಕ್ಕೂ ಅವರು ಉತ್ತರಿಸಬೇಕಾಗಿದೆ ಎಂದು ಅವರು ಹೇಳಿದರು.
ಜುಲೈ 1, 2017 ರಂದು GST ಪ್ರಾರಂಭಿಸಲಾಯಿತು. ಆಗ ತೃಣಮೂಲ ಕಾಂಗ್ರೆಸ್ ಈ ಹೊಸ ತೆರಿಗೆ ಪದ್ಧತಿಯ ಪರಿಚಯವನ್ನು ಬೆಂಬಲಿಸಿತ್ತು.


