ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ. ವಕೀಲ ಮತ್ತು ಅರ್ಜಿದಾರರಾದ ಮ್ಯಾಥ್ಯೂಸ್ ಜೆ ನೆಡುಂಪರ ಅವರು ಪ್ರಕರಣದ ತುರ್ತು ವಿಚಾರಣೆಯನ್ನು ಕೋರಿ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ನೆಡುಂಪರ ಅವರ ವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ನೇತೃತ್ವದ ಪೀಠವು ದೋಷಗಳನ್ನು ಸರಿಪಡಿಸಿದರೆ, ಮಂಗಳವಾರ ವಿಚಾರಣೆಗೆ ಪಟ್ಟಿ ಮಾಡಬಹುದು ಎಂದು ಹೇಳಿದೆ. “(ಅರ್ಜಿಯಲ್ಲಿನ) ದೋಷಗಳನ್ನು ಸರಿಪಡಿಸಿದರೆ ಅದನ್ನು ನಾಳೆ ಪಟ್ಟಿ ಮಾಡಬಹುದು” ಎಂದು ಸಿಜೆಐ ಅವರಿಗೆ ಹೇಳಿದರು. ಇದಕ್ಕೂ ಮೊದಲು ಮೇ 14 ರಂದು, ಸುಪ್ರೀಂಕೋರ್ಟ್ ತುರ್ತು ವಿಚಾರಣೆಗಾಗಿ ಅವರ ಅರ್ಜಿಯನ್ನು ಪಟ್ಟಿ ಮಾಡಲು ನಿರಾಕರಿಸಿತ್ತು.
ಪ್ರಸ್ತುತ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಆಗಿರುವ ವರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಲು ಸುಪ್ರೀಂಕೋರ್ಟ್‌ನಿಂದ ನಿರ್ದೇಶನವನ್ನು ಕೋರಿ ನೆಡುಂಪರ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮೇ 8 ರಂದು, ಸುಪ್ರೀಂಕೋರ್ಟ್ ನೇಮಿಸಿದ ಆಂತರಿಕ ಸಮಿತಿಯು ನ್ಯಾಯಮೂರ್ತಿ ವರ್ಮಾ ಅವರ ವಿರುದ್ಧ ನಗದು ಪತ್ತೆ ಪ್ರಕರಣದಲ್ಲಿ ದೋಷಾರೋಪಣೆ ಮಾಡಿದ ನಂತರ, ಸಿಜೆಐ ಸಂಜೀವ್ ಖನ್ನಾ (ಈಗ ನಿವೃತ್ತರಾಗಿದ್ದಾರೆ) ಗುರುವಾರ ಕೇಂದ್ರಕ್ಕೆ ಅವರ ದೋಷಾರೋಪಣೆಯನ್ನು ಶಿಫಾರಸು ಮಾಡುವ ಪತ್ರವನ್ನು ಕಳುಹಿಸಿದ್ದರು.
ವರ್ಮಾ ನ್ಯಾಯಾಧೀಶ ಸ್ಥಾನದಿಂದ ಹೊರಬರಲು ನಿರಾಕರಿಸಿದ್ದರಿಂದ, ಆಂತರಿಕ ಸಮಿತಿಯಿಂದ ವರದಿಯನ್ನು ಸ್ವೀಕರಿಸಿದ ನಂತರ, ಮಾಜಿ ಸಿಜೆಐ ವರ್ಮಾ ಅವರ ಹೆಸರನ್ನು ದೋಷಾರೋಪಣೆಗೆ ಶಿಫಾರಸು ಮಾಡಲು ನಿರ್ಧರಿಸಿದ್ದರು.
“ನ್ಯಾಯಮೂರ್ತಿ ವರ್ಮಾ ಅವರನ್ನು ದೋಷಾರೋಪಣೆಯ ನಂತರ ರಾಜೀನಾಮೆ ನೀಡುವಂತೆ ಕೇಳಲಾಯಿತು. ಆದರೆ ಅವರು ನಿರಾಕರಿಸಿದ್ದಾರೆ” ಎಂದು ಸುಪ್ರಿಂಕೋರ್ಟ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು TNIE ವರದಿ ಮಾಡಿದೆ.
ಇದಕ್ಕೂ ಮೊದಲು, ಮಾಜಿ ಸಿಜೆಐ, ಆಂತರಿಕ ಕಾರ್ಯವಿಧಾನದ ಪ್ರಕಾರ, ಮೇ 3 ರ ಮೂವರು ಸದಸ್ಯರ ಸಮಿತಿ ವರದಿಯ ಪ್ರತಿಯನ್ನು ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗೆ ಬರೆದ ಪತ್ರವನ್ನು ಅದರೊಂದಿಗೆ ನ್ಯಾಯಮೂರ್ತಿ ವರ್ಮಾ ಅವರಿಂದ ಸ್ವೀಕರಿಸಿದ ಮೇ 6 ರ ಪತ್ರ/ಪ್ರತಿಕ್ರಿಯೆಯೊಂದಿಗೆ ಲಗತ್ತಿಸಿದ್ದಾರೆ.
ಮಾರ್ಚ್ 14 ರಂದು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ನಡೆದ ನಗದು ಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸುಪ್ರೀಂಕೋರ್ಟ್ ನೇಮಿಸಿದ ಮೂವರು ನ್ಯಾಯಾಧೀಶರ ತನಿಖಾ ಸಮಿತಿಯು ಮೇ 4 ರಂದು ಸಿಜೆಐಗೆ ವರದಿಯನ್ನು ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ನ ಮೂವರು ಸದಸ್ಯರ ಆಂತರಿಕ ಸಮಿತಿಯ ದೋಷಾರೋಪಣೆಯ ನಂತರ, ಸಿಜೆಐ ಖನ್ನಾ ಅವರು ನ್ಯಾಯಮೂರ್ತಿ ವರ್ಮಾ ಅವರನ್ನು ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದರು.
ಸುಪ್ರೀಂಕೋರ್ಟ್‌ನ ಸಮಿತಿಯು ಸಾಕ್ಷ್ಯಗಳ ಸರಣಿಯನ್ನು ಕೂಲಂಕಷವಾಗಿ ವಿಶ್ಲೇಷಿಸಿದ ನಂತರ ಮತ್ತು ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಮತ್ತು ದೆಹಲಿ ಅಗ್ನಿಶಾಮಕ ಸೇವೆಯ ಮುಖ್ಯಸ್ಥರು ಸೇರಿದಂತೆ 45 ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿದ ನಂತರ ನ್ಯಾಯಮೂರ್ತಿ ವರ್ಮಾ ಅವರ ವಿರುದ್ಧ ದೋಷಾರೋಪಣೆ ಮಾಡುವ ತೀರ್ಮಾನಕ್ಕೆ ಬಂದಿತ್ತು. ಅದಾಗ್ಯೂ, ನ್ಯಾಯಮೂರ್ತಿ ವರ್ಮಾ ಅವರು ಈ ಆರೋಪವನ್ನು ತೀವ್ರವಾಗಿ ನಿರಾಕರಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸೂರತ್| ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಎರಡು ವರ್ಷಗಳ ಹೋರಾಟ; ಬೌದ್ಧ ಧರ್ಮ ಸ್ವೀಕರಿಸಿದ 80 ದಲಿತ ಕುಟುಂಬಗಳು
ಸೂರತ್| ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಎರಡು ವರ್ಷಗಳ ಹೋರಾಟ; ಬೌದ್ಧ ಧರ್ಮ ಸ್ವೀಕರಿಸಿದ 80 ದಲಿತ ಕುಟುಂಬಗಳು

