ಉತ್ತರ ಪ್ರದೇಶ ಸರ್ಕಾರದ ಆಡಳಿತದಲ್ಲಿನ ಜಾತಿ ತಾರತಮ್ಯದ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ಅಥವಾ ಟ್ವೀಟ್ ಮಾಡಿದ್ದಕ್ಕೆ ದಾಖಲಾಗಿರುವ ಪ್ರಕರಣಗಳಲ್ಲಿ ಪತ್ರಕರ್ತೆ ಮಮತಾ ತ್ರಿಪಾಠಿ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠವು 4 ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಪತ್ರಕರ್ತೆ ಮಮತಾ ತ್ರಿಪಾಠಿ ಪರವಾಗಿ ಆದೇಶ ನೀಡಿದೆ. ಅಲ್ಲದೆ, ಈ ಪ್ರಕರಣ ಸಂಬಂಧ ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ತ್ರಿಪಾಠಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಆದೇಶಿಸಿರುವ ನ್ಯಾಯಮೂರ್ತಿ ಗವಾಯಿ ಅವರು, ಈ ನಡುವೆ ಮಮತಾ ತ್ರಿಪಾಠಿ ವಿರುದ್ದ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿದೆ.
ಇದೇ ಪ್ರಕರಣದಲ್ಲಿ ಮತ್ತೊಬ್ಬ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರಿಗೆ ಅಕ್ಟೋಬರ್ 4ರಂದು ಸುಪ್ರೀಂ ಕೋರ್ಟ್ ಮಧ್ಯಂತರ ರಕ್ಷಣೆ ಒದಗಿಸಿದೆ. ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿನ ಜಾತಿ ತಾರತಮ್ಯದ ಕುರಿತು ಟ್ವೀಟ್ ಮಾಡಿದ್ದಕ್ಕೆ ಇವರ ಮೇಲೆಯೂ ಎಫ್‌ಐಆರ್ ದಾಖಲಾಗಿತ್ತು. ಅದನ್ನು ರದ್ದುಗೊಳಿಸುವಂತೆ ಕೋರಿ ಅಭಿಷೇಕ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಅಭಿಷೇಕ್ ವಿರುದ್ದವೂ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದ ನ್ಯಾಯಾಲಯ, “ಪತ್ರಕರ್ತರ ಬರಹಗಳನ್ನು ಸರ್ಕಾರದ ವಿರುದ್ದದ ಟೀಕೆ ಎಂದು ಗ್ರಹಿಸಿ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ಸಾಧ್ಯವಿಲ್ಲ” ಎಂದಿತ್ತು.
“ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಬ್ಬರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಗೌರವಿಸಲಾಗುತ್ತದೆ. ಭಾರತದ ಸಂವಿಧಾನದ 19 (1) (ಎ) ವಿಧಿಯ ಅಡಿಯಲ್ಲಿ ಪತ್ರಕರ್ತರ ಹಕ್ಕುಗಳನ್ನು ರಕ್ಷಿಸಲಾಗಿದೆ. ಪತ್ರಕರ್ತರ ಬರಹಗಳನ್ನು ಸರ್ಕಾರದ ವಿರುದ್ದದ ಟೀಕೆ ಎಂದು ಗ್ರಹಿಸಿ ಅವರ ವಿರುದ್ದ ಪ್ರಕರಣಗಳನ್ನು ದಾಖಲಿಸಬಾರದು” ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ಹೇಳಿತ್ತು.
ಅಭಿಷೇಕ್ ಉಪಾಧ್ಯಾಯ ಅವರು “ಯಾದವ್ ರಾಜ್ VS ಠಾಕೂರ್ ರಾಜ್ (ಅಥವಾ ಸಿಂಗ್ ರಾಜ್)” ಎಂಬ ಶೀರ್ಷಿಕೆಯೊಂದಿಗೆ ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್‌ನಲ್ಲಿ ಉತ್ತರ ಪ್ರದೇಶದ ಆಡಳಿತ ಯಂತ್ರದಲ್ಲಿನ ಜಾತಿ ಪ್ರಾಬಲ್ಯ ಅಥವಾ ತಾರತಮ್ಯದ ಬಗ್ಗೆ ವಿವರಿಸಿದ್ದರು. ಮಮತಾ ತ್ರಿಪಾಠಿ ಕೂಡ ಎಕ್ಸ್‌ನಲ್ಲಿ ಇದೇ ರೀತಿಯ ಪೋಸ್ಟ್ ಹಾಕಿದ್ದರು.
ಇದನ್ನೂ ಓದಿ : ಉಚಿತ ಕಾನೂನು ನೆರವು ಪ್ರತಿಯೊಬ್ಬರ ಮೂಲಭೂತ ಹಕ್ಕು : ಸುಪ್ರೀಂ ಕೋರ್ಟ್


