ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನಿಗದಿಪಡಿಸುವಾಗ, ಆಯಾ ರಾಜ್ಯ ಸರ್ಕಾರಗಳು ಪ್ರಸ್ತಾಪಿಸಿದ ‘C2’ ಎಂದು ಕರೆಯಲಾಗುವ ಕೃಷಿ ವೆಚ್ಚಕ್ಕೆ ಸಮರ್ಪಕ ಪ್ರಾಮುಖ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಂಬಂಧ ಸುಪ್ರೀಂ ಕೋರ್ಟ್ ಸೋಮವಾರ (ಏ.13) ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ವಕೀಲ ಪ್ರಶಾಂತ್ ಭೂಷಣ್ ಅವರ ವಾದಗಳನ್ನು ಆಲಿಸಿತು. ಈ ವಿಷಯವು ದೇಶದಾದ್ಯಂತ ರೈತರಿಗೆ ಅತ್ಯಂತ ನಿರ್ಣಾಯಕವಾಗಿದೆ ಎಂದು ವಾದಿಸಿದ ಅವರು, ರೈತರ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಸಮರ್ಪಕ ಖರೀದಿ ವ್ಯವಸ್ಥೆ ಇಲ್ಲದಿರುವುದನ್ನು ಬೆಟ್ಟು ಮಾಡಿದರು. ಎಂಎಸ್‌ಪಿಯನ್ನು ಹೆಚ್ಚಾಗಿ ಕೃಷಿಯ ಒಟ್ಟು ವೆಚ್ಚಕ್ಕಿಂತಲೂ ಕಡಿಮೆ ನಿಗದಿಪಡಿಸಲಾಗುತ್ತಿದೆ ಮತ್ತು ಎಂಎಸ್‌ಪಿ ದರದಲ್ಲಿನ ಖರೀದಿ ಪ್ರಕ್ರಿಯೆಯು ಕೇವಲ ಗೋಧಿ ಮತ್ತು ಭತ್ತದಂತಹ ಬೆಳೆಗಳಿಗೆ ಮಾತ್ರ ಸೀಮಿತವಾಗಿದೆ, ಇದರಿಂದಾಗಿ ಇತರ ಬೆಳೆಗಳನ್ನು ಬೆಳೆಯುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಪ್ರತಿಪಾದಿಸಿದರು.
ಪರಿಹಾರವಾಗಿ ಬೆಳೆಯ ವೆಚ್ಚದ ಜೊತೆಗೆ ಶೇಕಡ 50ರಷ್ಟು ಲಾಭಾಂಶವನ್ನು ಅರ್ಜಿಯು ಕೋರುತ್ತಿಲ್ಲ, ಬದಲಿಗೆ ‘C2’ ಎಂದು ಕರೆಯಲಾಗುವ ಕೃಷಿಯ ನಿಖರವಾದ ವೆಚ್ಚವನ್ನು ಮಾತ್ರ ನೀಡುವಂತೆ ವಿನಂತಿಸುತ್ತಿದೆ ಎಂದು ಪ್ರಶಾಂತ್ ಭೂಷಣ್ ಸ್ಪಷ್ಟಪಡಿಸಿದರು. ಈ ಲೆಕ್ಕಾಚಾರಗಳನ್ನು ಈಗಾಗಲೇ ಸರ್ಕಾರವೇ ಮಾಡಿದೆ ಮತ್ತು ರೈತರಿಗೆ ಕನಿಷ್ಠ ಪಕ್ಷ ಅವರು ಮಾಡಿದ ಪೂರ್ಣ ವೆಚ್ಚದ ಮರುಪಾವತಿಯ ಭರವಸೆಯನ್ನಾದರೂ ನೀಡಬೇಕು ಎಂದು ಅವರು ಆಗ್ರಹಿಸಿದರು. ಮುಂದುವರಿದು, ಉಚಿತ ಪಡಿತರ ಯೋಜನೆಗಳಂತಹ ಕಲ್ಯಾಣ ಕ್ರಮಗಳು ರೈತರಿಗೆ ಅವರ ಉತ್ಪಾದನಾ ವೆಚ್ಚವನ್ನು ಭರಿಸುವಂತಹ ಸಂಭಾವನೆಯನ್ನು ನೀಡುವ ವೆಚ್ಚದಲ್ಲಿ ಬರಬಾರದು ಎಂದು ಅವರು ವಾದಿಸಿದರು.
ವಿಚಾರಣೆಯ ಸಂದರ್ಭದಲ್ಲಿ, ಭೂಮಿಯ ಬೆಲೆ ಮತ್ತು ಬಂಡವಾಳದಂತಹ ಅಂಶಗಳನ್ನು ಅಂದಾಜಿಸುವಲ್ಲಿ ತೊಂದರೆಗಳು ಎದುರಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. ಏಕೆಂದರೆ, ಈ ವೆಚ್ಚಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಗಮನಾರ್ಹವಾಗಿ ಬದಲಾಗುತ್ತವೆ ಎಂದು ಅವರು ಹೇಳಿದರು.
ನ್ಯಾಯಮೂರ್ತಿ ಬಾಗ್ಚಿ ಅವರು, ಅರ್ಜಿದಾರರು ಕೋರುತ್ತಿರುವ ಪರಿಹಾರವು ನ್ಯಾಯಾಲಯವು ಆರ್ಥಿಕ ನೀತಿಯನ್ನು ಮರುಬರೆಯುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಭೂಷಣ್ ಅವರು, “ಸರ್ಕಾರವು ಉಚಿತವಾಗಿ ಪಡಿತರ ನೀಡುವುದರಲ್ಲಿ ಅಭ್ಯಂತರವಿಲ್ಲ. ಆದರೆ, ಅದರ ಪರಿಣಾಮವಾಗಿ ರೈತರಿಗೆ ಕನಿಷ್ಠ ಬೆಳೆಯ ವೆಚ್ಚವೂ ಸಿಗದಂತಾಗಬಾರದು… ಇದರಿಂದಾಗಿಯೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಹೇಳಿದರು.
ಮೂರು ಜನ ಮಹಾರಾಷ್ಟ್ರ ಮೂಲದ ರೈತರು (ಪ್ರಕಾಶ್ ಗೋಪಾಲರಾವ್ ಪೋಹರೆ, ಪುರುಷೋತ್ತಮ್ ಗಾವಡೆ ಮತ್ತು ವಿಶಾಲ್ ಓಂಪ್ರಕಾಶ್ ರಾವತ್) ಸಂವಿಧಾನದ 32ನೇ ವಿಧಿಯಡಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕನಿಷ್ಠ ಸರಾಸರಿ ಉತ್ಪಾದನಾ ವೆಚ್ಚಕ್ಕೆ (C2) ಅನುಗುಣವಾಗಿ ನಿಗದಿಪಡಿಸುವಂತೆ ಮತ್ತು ಅದೇ ದರದಲ್ಲಿ ರೈತರಿಂದ ಬೆಳೆಗಳನ್ನು ಖರೀದಿಸುವುದನ್ನು ಖಚಿತಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಈ ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿದಾರರ ಪ್ರಕಾರ, ಭಾರತೀಯ ರೈತರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಅವರು ತಮ್ಮ ಬೆಳೆಗಳನ್ನು ಕನಿಷ್ಠ ಉತ್ಪಾದನಾ ವೆಚ್ಚಕ್ಕೂ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ, ಇದು ವ್ಯಾಪಕ ಸಂಕಷ್ಟ ಮತ್ತು ಆತ್ಮಹತ್ಯೆಗಳಿಗೆ ಕಾರಣವಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಮಹಾರಾಷ್ಟ್ರವೊಂದರಲ್ಲೇ ಹದಿನೇಳು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಕಿ ಅಂಶಗಳನ್ನು ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅರ್ಜಿಯ ಪ್ರಕಾರ, ಕೃಷಿಯ ಸಮಗ್ರ ವೆಚ್ಚ ಅಥವಾ ‘C2’ ಎನ್ನುವುದು ಕೃಷಿ ಪರಿಕರಗಳ ನಿಜವಾದ ವೆಚ್ಚ, ಕುಟುಂಬದ ಶ್ರಮದ ಅಂದಾಜು ಮೌಲ್ಯ, ಸ್ವಂತ ಭೂಮಿಯ ಬಾಡಿಗೆ ಮೌಲ್ಯ, ಗುತ್ತಿಗೆ ಭೂಮಿಗೆ ಪಾವತಿಸಿದ ಬಾಡಿಗೆ ಮತ್ತು ದುಡಿಯುವ ಬಂಡವಾಳದ ಮೇಲಿನ ಬಡ್ಡಿಯನ್ನು ಒಳಗೊಂಡಿರುತ್ತದೆ. ಪ್ರಸ್ತುತ ಎಂಎಸ್‌ಪಿ ನಿಗದಿಪಡಿಸುವ ವಿಧಾನವು ಹೆಚ್ಚಾಗಿ ‘A2+FL’ (ಪಾವತಿಸಿದ ವೆಚ್ಚಗಳು ಮತ್ತು ಕುಟುಂಬದ ಶ್ರಮ) ಅನ್ನು ಆಧರಿಸಿದ್ದು, ಅದಕ್ಕೆ 1.5 ಪಟ್ಟು ಗುಣಿಸುವ ಮೂಲಕ ಲೆಕ್ಕ ಹಾಕಲಾಗುತ್ತದೆ. ಇದು ಭೂಮಿ ಮತ್ತು ಬಂಡವಾಳದ ವೆಚ್ಚದಂತಹ ಪ್ರಮುಖ ಅಂಶಗಳನ್ನು ಹೊರಗಿಡುತ್ತದೆ ಮತ್ತು ರೈತರು ಭರಿಸುವ ನೈಜ ಆರ್ಥಿಕ ವೆಚ್ಚವನ್ನು ಕಡಿಮೆ ಅಂದಾಜು ಮಾಡುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಎಂಎಸ್‌ಪಿ ಬೆಳೆಗಳ ಖರೀದಿ ಪ್ರಕ್ರಿಯೆಯು ಪ್ರಮುಖವಾಗಿ ಗೋಧಿ ಮತ್ತು ಭತ್ತಕ್ಕೆ ಮಾತ್ರ ಸೀಮಿತವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಉಳಿದ ಹೆಚ್ಚಿನ ಬೆಳೆಗಳನ್ನು ಘೋಷಿತ ಎಂಎಸ್‌ಪಿ ದರದಲ್ಲೂ ಖರೀದಿಸುತ್ತಿಲ್ಲ, ಇದು ರೈತರ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆ. ಆಹಾರ ಭದ್ರತಾ ಯೋಜನೆಯಡಿ ಗೋಧಿ ಮತ್ತು ಭತ್ತವನ್ನು ರಿಯಾಯಿತಿ ದರದಲ್ಲಿ ವಿತರಿಸುತ್ತಿರುವುದು ಕೃಷಿ ಮಾರುಕಟ್ಟೆಯ ಸಮತೋಲನವನ್ನು ತಪ್ಪಿಸಿದೆ ಮತ್ತು ಸಿರಿಧಾನ್ಯಗಳಂತಹ ಇತರ ಬೆಳೆಗಳ ಬೇಡಿಕೆಯನ್ನು ಕುಗ್ಗಿಸಿದೆ ಎಂದು ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ, ಸರ್ಕಾರವು ಈಗಾಗಲೇ ಲೆಕ್ಕ ಹಾಕಿರುವ ಸಮಗ್ರ ಉತ್ಪಾದನಾ ವೆಚ್ಚಕ್ಕೆ (C2) ಅನುಗುಣವಾಗಿ ಎಂಎಸ್‌ಪಿ ದರವನ್ನು ನಿಗದಿಪಡಿಸಲು ಮತ್ತು ಆ ದರದಲ್ಲಿ ಬೆಳೆಗಳ ಪರಿಣಾಮಕಾರಿ ಖರೀದಿಯನ್ನು ಖಚಿತಪಡಿಸಿಕೊಳ್ಳಲು ಸೂಕ್ತವಾದ ಖರೀದಿ ಮೂಲಸೌಕರ್ಯಗಳನ್ನು ಸ್ಥಾಪಿಸಲು ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ.
Courtesy : livelaw.in


