ಮಹತ್ವದ ಆದೇಶವೊಂದರಲ್ಲಿ, ಚುನಾವಣೆಗಳು ಇನ್ನೂ ಘೋಷಣೆಯಾಗದ ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲಿ ಶೇಕಡ 30ರಷ್ಟು ಸ್ಥಾನಗಳನ್ನು ಮಹಿಳಾ ವಕೀಲರಿಗೆ ಮೀಸಲಿಡಲು ಸೋಮವಾರ (ಡಿಸೆಂಬರ್ 8) ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಪ್ರಸಕ್ತ ವರ್ಷಕ್ಕೆ, ಶೇಕಡ 20ರಷ್ಟು ಮಹಿಳಾ ಸ್ಥಾನಗಳನ್ನು ಚುನಾವಣೆಯ ಮೂಲಕ ಮತ್ತು ಉಳಿದ 10ರಷ್ಟು ಸ್ಥಾನಗಳನ್ನು ಸಹ ನಾಮನಿರ್ದೇಶನದ (co-option) ಮೂಲಕ ಭರ್ತಿ ಮಾಡಬೇಕು. ಈಗಾಗಲೇ ಚುನಾವಣೆ ನಡೆದಿರುವ ಬಾರ್ ಕೌನ್ಸಿಲ್‌ಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಿದ್ದರೆ, ಅಲ್ಲಿಗೆ ನಾಮನಿರ್ದೇಶನದ ಮೂಲಕ ಮಹಿಳೆಯರ ಸಂಖ್ಯೆ ಹೆಚ್ಚಿಸುವ ಪ್ರಸ್ತಾವನೆಯನ್ನು ನ್ಯಾಯಾಲಯದ ಮುಂದೆ ಇಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿರುವ ಆರು ಬಾರ್ ಕೌನ್ಸಿಲ್‌ಗಳಲ್ಲಿ ಮಹಿಳೆಯರಿಗಾಗಿ ಸ್ಥಾನಗಳನ್ನು ಮೀಸಲಿಡುವುದು ಸೂಕ್ತವಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಆರು ಬಾರ್ ಕೌನ್ಸಿಲ್‌ಗಳಲ್ಲಿ (ಆಂಧ್ರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ಬಿಹಾರ, ಛತ್ತೀಸ್‌ಗಢ) ಈಗಾಗಲೇ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿರುವುದರಿಂದ, ಅಲ್ಲಿ ಮಹಿಳಾ ಮೀಸಲಾತಿಯನ್ನು ಈ ಬಾರಿ ಜಾರಿಗೊಳಿಸುವುದಿಲ್ಲ. ಆದರೆ, ಮಹಿಳಾ ಅಭ್ಯರ್ಥಿಗಳು ಧೈರ್ಯದಿಂದ ಚುನಾವಣೆಗೆ ಸ್ಪರ್ಧಿಸಲಿ ಮತ್ತು ವಕೀಲ ಮತದಾರರು ತಾವಾಗೇ ಮಹಿಳೆಯರಿಗೆ ಒಳ್ಳೆಯ ಪ್ರಾತಿನಿಧ್ಯ ಕೊಡಲು ಶ್ರಮಿಸಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಉಳಿದ ಬಾರ್ ಕೌನ್ಸಿಲ್‌ಗಳ (ಅಂದರೆ ಚುನಾವಣೆ ಇನ್ನೂ ಆರಂಭವಾಗದೇ ಇರುವ ಎಲ್ಲ ಬಾರ್ ಕೌನ್ಸಿಲ್‌ಗಳು), ಒಟ್ಟು ಸದಸ್ಯ ಸ್ಥಾನಗಳ ಪೈಕಿ ಮಹಿಳೆಯರಿಗೆ ಶೇಕಡ 30ರಷ್ಟು ಪ್ರಾತಿನಿಧ್ಯ ಕಡ್ಡಾಯವಾಗಿ ಇರಬೇಕು. ಇದರಲ್ಲಿ ಶೇಕಡ 20ರಷ್ಟು ಸ್ಥಾನಗಳನ್ನು ಚುನಾವಣೆಯ ಮೂಲಕ ಭರ್ತಿ ಮಾಡಬೇಕು. ಉಳಿದ ಶೇಕಡ 10ರಷ್ಟು ಸ್ಥಾನಗಳನ್ನು ಸಹ-ನಾಮನಿರ್ದೇಶನದ ಮೂಲಕ ಭರ್ತಿಗೊಳಿಸಬೇಕು. ಸಹ-ನಾಮನಿರ್ದೇಶನ ಮಾಡುವ ಪ್ರಸ್ತಾಪವನ್ನು ನ್ಯಾಯಾಲಯದ ಮುಂದೆ ಇಡಬೇಕು (ನ್ಯಾಯಾಲಯದ ಅನುಮೋದನೆ ಪಡೆಯಬೇಕು) ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಒಂದು ವೇಳೆ ಯಾವುದಾದರೂ ಬಾರ್ ಕೌನ್ಸಿಲ್‌ನಲ್ಲಿ ಮಹಿಳಾ ವಕೀಲರು ಶೇಕಡ 30ರಷ್ಟು ಸ್ಥಾನಗಳಿಗೆ ಸ್ಪರ್ಧಿಸಲು ಮುಂದೆ ಬಾರದಿದ್ದರೂ ಸಹ, ಅಂತಹ ಸ್ಥಳಗಳಲ್ಲಿಯೂ ಸಹ-ನಾಮನಿರ್ದೇಶನದ ಮೂಲಕ ಮಹಿಳೆಯರನ್ನು ಸೇರಿಸಿ, ಅಂತಿಮವಾಗಿ ಮಹಿಳೆಯರಿಗೆ ಶೇಕಡ 30ರಷ್ಟು ಪ್ರಾತಿನಿಧ್ಯ ದೊರೆಯುವಂತೆ ಮಾಡಬೇಕು ಎಂದು ಹೇಳಿದೆ.
ಬಾರ್ ಕೌನ್ಸಿಲ್‌ಗಳಲ್ಲಿ ಮಹಿಳಾ ಮೀಸಲಾತಿ ಕೋರಿ ಯೋಗಮಾಯ ಎಂ.ಜಿ ಮತ್ತು ಶೆಹ್ಲಾ ಚೌಧರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು, ಈ ಆದೇಶ ನೀಡಿದೆ.
ಕಳೆದ ವಾರ, ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲಿ ಶೇಕಡ 30 ರಷ್ಟು ಮಹಿಳಾ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ಭಾರತೀಯ ಬಾರ್ ಕೌನ್ಸಿಲ್‌ಗೆ (ಬಿಸಿಐ) ತಿಳಿಸಿತ್ತು. ಇಂದು ಪ್ರಸ್ತಾವನೆಯೊಂದಿಗೆ ಬರುವಂತೆ ನ್ಯಾಯಾಲಯವು ಬಿಸಿಐಗೆ ಸೂಚಿಸಿತ್ತು.
ಬಿಸಿಐ ತಾತ್ವಿಕವಾಗಿ ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲಿ ಕನಿಷ್ಠ ಶೇಕಡ 30ರಷ್ಟು ಮಹಿಳಾ ಮೀಸಲಾತಿ ಇರಬೇಕು ಎಂದು ಅಭಿಪ್ರಾಯಪಟ್ಟಿದೆ. ಆದಾಗ್ಯೂ, ಪ್ರಸ್ತಕ್ತ ವರ್ಷಕ್ಕೆ, ಬಾರ್ ಕೌನ್ಸಿಲ್‌ಗಳು ಮಹಿಳಾ ಅಭ್ಯರ್ಥಿಗಳನ್ನು ಸಹ-ನಾಮನಿರ್ದೇಶನದ ಮೂಲಕ ಭರ್ತಿ ಮಾಡಲು ಅನುಮತಿ ನೀಡಬೇಕು. ಮಹಿಳಾ ಸದಸ್ಯರ ಸಹ-ನಾಮನಿರ್ದೇಶನದ ಮೂಲಕ ಶೇಕಡ 15ರಷ್ಟು ಸ್ಥಾನಗಳನ್ನು ಭರ್ತಿ ಮಾಡಲು ಅವಕಾಶ ಕೊಡಬೇಕು ಎಂದು ಹಿರಿಯ ವಕೀಲ ಹಾಗೂ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದಾಗ್ಯೂ, ಸಹ-ನಾಮನಿರ್ದೇಶನದ ಮೂಲಕ ಶೇಕಡ 10ರಷ್ಟು ಸ್ಥಾನಗಳನ್ನು ಭರ್ತಿ ಮಾಡಲು ಮಾತ್ರ ನ್ಯಾಯಾಲಯ ಅವಕಾಶ ನೀಡಿದೆ.
ಎಲ್ಲಾ ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲೂ ಒಂದೇ ರೀತಿಯಾಗಿ ಮಹಿಳೆಯರಿಗೆ ಶೇಕಡ 30ರಷ್ಟು ಮೀಸಲಾತಿ ಕಡ್ಡಾಯಗೊಳಿಸುವ ಒಟ್ಟು ಆದೇಶ (blanket order) ಸಮಂಜಸವಲ್ಲ. ಏಕೆಂದರೆ, ಅನೇಕ ರಾಜ್ಯಗಳಲ್ಲಿ ವೃತ್ತಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಮಹಿಳಾ ವಕೀಲರ ಸಂಖ್ಯೆ ಅತ್ಯಂತ ಕಡಿಮೆಯಿದೆ (ಕೆಲವು ರಾಜ್ಯಗಳಲ್ಲಿ ಶೇಕಡ 5-10ಕ್ಕಿಂತಲೂ ಕಡಿಮೆ). ಅಂತಹ ರಾಜ್ಯಗಳಲ್ಲಿ ಶೇಕಡ 30ರಷ್ಟು ಮೀಸಲಾತಿ ತುಂಬುವುದು ಕಷ್ಟಸಾಧ್ಯ ಮತ್ತು ವಾಸ್ತವಿಕವಲ್ಲ ಎಂದು ಹಿರಿಯ ವಕೀಲೆ ಮೀನಾಕ್ಷಿ ಅರೋರಾ ವಾದಿಸಿದರು.
ಅರ್ಜಿದಾರರಾದ ಯೋಗಮಾಯ ಪರವಾಗಿ ಹಿರಿಯ ವಕೀಲರಾದ ಶೋಭಾ ಗುಪ್ತಾ ಮತ್ತು ಶ್ರೀರಾಮ್ ಪರಕ್ಕಟ್ ಅವರು ವಾದ ಮಂಡಿಸಿದರು. ಇತರ ಅರ್ಜಿದಾರರಾದ ಶೆಹ್ಲಾ ಚೌಧರಿ ಪರ ವಕೀಲ ಡಾ.ಚಾರು ಮಾಥುರ್ ವಾದ ಮಂಡಿಸಿದರು.
ತಮಿಳುನಾಡು ಬಾರ್ ಕೌನ್ಸಿಲ್‌ನ ಸಹ-ಅಧ್ಯಕ್ಷ ಕೆ. ಬಾಲು ಅವರು ಕರುಣಾಕರನ್ ಎಒಆರ್ ಮೂಲಕ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಶೇಕಡ 30ರಷ್ಟು ಪ್ರಾತಿನಿಧ್ಯವನ್ನು ಬೆಂಬಲಿಸಲಾಗಿತ್ತು. ಬಾಲು ಪರ ಹಾಜರಾದ ಹಿರಿಯ ವಕೀಲರು “ಒಮ್ಮೆ ಅಧ್ಯಕ್ಷರಾದವರು ಯಾವಾಗಲೂ ಅಧ್ಯಕ್ಷ” ಎಂಬ ಪರಿಸ್ಥಿತಿ ಇದೆ. ಅದನ್ನು ಬದಲಾಯಿಸಬೇಕಾಗಿದೆ ಎಂದು ಕೋರಿದ್ದರು.
ವಕೀಲರ ಪರವಾಗಿ ಕೆಲಸ ಮಾಡುವ ವಕೀಲರ ಸರ್ಕಾರೇತರ ಸಂಸ್ಥೆಯಾದ ಜನ ಅದಾಲತ್ ಪರವಾಗಿ ಹಿರಿಯ ವಕೀಲ ವಿನಯ್ ನವರೆ ಹಾಜರಾಗಿದ್ದರು. ಈ ಸಂಸ್ಥೆ ಕೂಡ ಮಧ್ಯಪ್ರವೇಶ ಅರ್ಜಿಯನ್ನು ಸಲ್ಲಿಸಿತ್ತು.


