ಹೆಣ್ಣುಮಕ್ಕಳ ಮೇಲೆ ಲೈಂಗಿಕ ಅಪರಾಧಗಳನ್ನು ಕ್ಷುಲ್ಲಕಗೊಳಿಸುವ ಗಂಡಾಳಿಕೆಯ ಧೋರಣೆಗಳಿಂದ ನ್ಯಾಯಾಲಯಗಳೂ ಮುಕ್ತವಲ್ಲ.
ನ್ಯಾಯಾಧೀಶರ ಪೂರ್ವಗ್ರಹವನ್ನು ಬಿಂಬಿಸುವ ಇಲ್ಲವೇ ಹೆಣ್ಣುಮಕ್ಕಳ ಘನತೆಯನ್ನು ಕುಂದಿಸುವ ಅಥವಾ ನ್ಯಾಯಯುತ ವಿಚಾರಣೆಯ ಮೇಲೆ ಅಡ್ಡ ಪರಿಣಾಮ ಬೀರುವ ಟೀಕೆ ಟಿಪ್ಪಣಿಗಳು ಸರ್ವೇಸಾಮಾನ್ಯ ಆಗಿ ಹೋಗಿವೆ. ಅತ್ಯಾಚಾರಕ್ಕೆ ಈಡಾದ ಹೆಣ್ಣುಮಗಳು ’ಸಡಿಲ ನಡತೆಯವಳು’ ಅಥವಾ ’ಲೈಂಗಿಕ ಕ್ರಿಯೆಗಳ ಅಭ್ಯಾಸವಿರುವವಳು’ ಎಂಬ ವಾದವನ್ನು ಪುರಸ್ಕರಿಸಿ ಆರೋಪಿ ಗಂಡಸಿಗೆ ಜಾಮೀನು ನೀಡಿರುವ ಪ್ರಕರಣಗಳಿಗೆ ಲೆಕ್ಕವಿಲ್ಲ. ಆರೋಪಿ ಮತ್ತು ಹಲ್ಲೆಗೀಡಾದ ಹೆಣ್ಣುಮಗಳ ನಡುವೆ ಮಧ್ಯಸ್ಥಿಕೆ, ಒಡಂಬಡಿಕೆ- ವಿವಾಹ ಏರ್ಪಡಿಸಿ ಅತ್ಯಾಚಾರದಂತಹ ಹೀನ ಅಪರಾಧದ ತೀವ್ರತೆಯನ್ನು ತಗ್ಗಿಸಿ ಕ್ಷುಲ್ಲಕಗೊಳಿಸಲಾಗುತ್ತಿದೆ.
ತನ್ನ ಇಚ್ಛೆಗೆ ವಿರುದ್ಧವಾಗಿ ಮೇಲೆರಗಿ ಉಲ್ಲಂಘಿಸಿದವನನ್ನೇ ಗಂಡನನ್ನಾಗಿ ಕಟ್ಟಿಕೊಳ್ಳುವ ಮತ್ತೊಂದು ಬಲಾತ್ಕಾರವನ್ನು ವ್ಯವಸ್ಥೆಯು ಹೆಣ್ಣಿನ ಮೇಲೆ ಎಸಗತೊಡಗಿದೆ.
ಮನುಧರ್ಮಶಾಸ್ತ್ರವು ನರನಾಡಿಗಳಲ್ಲಿ ನೆಲೆಗೊಂಡಿರುವ ಭಾರತ ಭೂಮಿಯಲ್ಲಿ ಗಂಡಾಳಿಕೆಯ ವಿಕೃತಿಗಳು ಹೆಣ್ಣು ಮೈ-ಮನಗಳನ್ನು ಬಗೆಬಗೆಯ ಕ್ರೌರ್ಯಗಳಿಗೆ ಗುರಿ ಮಾಡಿವೆ. ಹಲ್ಲೆಗೆ ಅನ್ಯಾಯಕ್ಕೆ ಬಲಿಯಾದ ಆಕೆಯನ್ನೇ ಆರೋಪಿಯಂತೆ ಕಾಣಲಾಗುತ್ತಿದೆ. ನ್ಯಾಯ ಪಡೆಯುವ ಪ್ರಕ್ರಿಯೆಯೇ ಆಕೆಯ ಪಾಲಿಗೆ ಚಿತ್ರಹಿಂಸೆಯಾಗಿ ಪರಿಣಮಿಸಿದೆ.
ಅಪರ್ಣಾ ಭಟ್ ಮತ್ತಿತರರು ಈ ಪ್ರವೃತ್ತಿಯನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟು ಇತ್ತೀಚೆಗೆ ನೀಡಿರುವ ತೀರ್ಪು ಕಣ್ಣು ತೆರೆಸುವಂತಹುದು.
ಲೈಂಗಿಕ ಅಪರಾಧಗಳ ವಿಚಾರಣೆಯಲ್ಲಿ ಕೋರ್ಟುಗಳು ಸೂಕ್ಷ್ಮ ಸಂವೇದನಾಶೀಲತೆಯನ್ನು ತೋರುವಂತೆ ತಾಕೀತು ಮಾಡಿದೆ. ಜಾಮೀನು ನೀಡುವಾಗ ಪಾಲಿಸಲೇಬೇಕಾದ ಏಳು ಪ್ರಮುಖ ನಿರ್ದೇಶನಗಳನ್ನು ದೇಶದ ಎಲ್ಲ ಹೈಕೋರ್ಟುಗಳು ಮತ್ತು ಅಧೀನ ನ್ಯಾಯಾಲಯಗಳಿಗೆ ವಿಧಿಸಿದೆ.
1. ಆರೋಪಿಗೆ ಜಾಮೀನು ನೀಡುವಾಗ ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಸಂಪರ್ಕ ಏರ್ಪಡುವಂತಹ ಯಾವ ಷರತ್ತನ್ನೂ ಹಾಕಬಾರದು. ಬದಲಾಗಿ ನ್ಯಾಯಾಲಯ ವಿಧಿಸುವ ಷರತ್ತುಗಳು ಆರೋಪಿಯಿಂದ ಫಿರ್ಯಾದುದಾರಳನ್ನು ಮತ್ತಷ್ಟು ಕಿರುಕುಳದಿಂದ ರಕ್ಷಿಸುವಂತಿರಬೇಕು.
2. ಸಂತ್ರಸ್ತೆಗೆ ಆರೋಪಿಯಿಂದ ಕಿರುಕುಳದ ಅಪಾಯವಿದೆ ಎಂದು ನ್ಯಾಯಾಲಯಕ್ಕೆ ಅನಿಸಿದರೆ ಅಥವಾ ಅಂತಹ ಸಂದೇಹ ವ್ಯಕ್ತವಾದರೆ ಆಕೆಯ ರಕ್ಷಣೆಗೆ ಸೂಕ್ತ ಆದೇಶ ನೀಡಬೇಕು. ಆಕೆಯ ಸಂಪರ್ಕ ಬೆಳೆಸದಂತೆ ಆರೋಪಿಗೆ ನಿರ್ದೇಶನ ನೀಡಬೇಕು.
3. ಆರೋಪಿಗೆ ಜಾಮೀನು ಮಂಜೂರಾದಲ್ಲಿ, ತಕ್ಷಣವೇ ಆ ಕುರಿತು ಸಂತ್ರಸ್ತೆಗೆ ತಿಳಿಯಪಡಿಸಬೇಕು.
4. ಜಾಮೀನಿನ ಷರತ್ತುಗಳು ಮತ್ತು ಆದೇಶಗಳು ಮಹಿಳೆಯರ ಕುರಿತು ಸಮಾಜದಲ್ಲಿ ನೆಲೆಸಿರುವ ರೂಢಿಗತ ಮತ್ತು ಗಂಡಾಳಿಕೆಯ ಧೋರಣೆಗಳನ್ನು ಬಿಂಬಿಸಕೂಡದು. ಈ ಷರತ್ತು-ಆದೇಶಗಳು ಭಾರತೀಯ ಅಪರಾಧ ಸಂಹಿತೆಗೆ ಅನುಗುಣವಾಗಿರತಕ್ಕದ್ದು. ಸಂತ್ರಸ್ತೆಯ ಉಡುಗೆ ತೊಡುಗೆ, ವರ್ತನೆ, ಹಳೆಯ ನಡತೆ ಅಥವಾ ಆಕೆಯ ನೈತಿಕ ಮೌಲ್ಯಗಳ ಕುರಿತ ಯಾವುದೇ ಮಾತುಗಳಿಗೆ ಆದೇಶಗಳಲ್ಲಾಗಲಿ, ಷರತ್ತುಗಳಲ್ಲಾಗಲಿ ಅವಕಾಶ ಇಲ್ಲ.
5. ಲಿಂಗ ಸಂಬಂಧಿ ಅಪರಾಧ ಪ್ರಕರಣಗಳಲ್ಲಿ ನ್ಯಾಯ ನೀಡುವಾಗ ಸಂತ್ರಸ್ತೆ ಮತ್ತು ಆರೋಪಿಯ ನಡುವೆ ರಾಜಿಸಂಧಾನ ಅಥವಾ ಲಗ್ನವಾಗುವಂತೆ ಮನವೊಲಿಸುವ ಸಲಹೆ ಸೂಚನೆಗಳನ್ನು ನೀಡಕೂಡದು. ಇಂತಹ ನಡೆಗಳು ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಮೀರಿದಂತಹವು.
6. ವಿಚಾರಣೆ ಮತ್ತು ವಾದಮಂಡನೆಯ ಕಲಾಪಗಳಲ್ಲಿ ಸಂತ್ರಸ್ತೆಗೆ ಮನೋಯಾತನೆ ಉಂಟು ಮಾಡುವಂತಹ ಯಾವುದೇ ಮಾತುಗಳಿಗೆ ಅವಕಾಶ ನೀಡಕೂಡದು. ಅಂತಹ ಸೂಕ್ಷ್ಮ ಸಂವೇದನೆಯನ್ನು ನ್ಯಾಯಾಧೀಶರು ಸದಾ ಹೊಂದಿರತಕ್ಕದ್ದು.
7. ವಿಶೇಷವಾಗಿ ಸಂತ್ರಸ್ತೆಯ ಆತ್ಮವಿಶ್ವಾಸವನ್ನು ಕುಂದಿಸುವ ಇಲ್ಲವೇ ಕದಲಿಸುವಂತಹ ಯಾವುದೇ ಪದಗಳನ್ನು ಮಾತಿನಲ್ಲಾಗಲಿ, ಬರೆಹದಲ್ಲಾಗಲಿ ನ್ಯಾಯಾಧೀಶರು ಬಳಸತಕ್ಕದ್ದಲ್ಲ.

ನ್ಯಾಯನಿರ್ಣಯ ಮಾಡುವಾಗ ನ್ಯಾಯಾಲಯಗಳು ಈ ಕೆಳಕಂಡ ರೂಢಿಗತ ಧೋರಣೆಗಳನ್ನು ಮೌಖಿಕವಾಗಿ ಅಥವಾ ಲಿಖಿತವಾಗಿ ದೂರವಿಡುವಂತೆಯೂ ಸುಪ್ರೀಮ್ ಕೋರ್ಟು ನಿರ್ದೇಶನ ನೀಡಿದೆ:
1. ಮಹಿಳೆ ದೈಹಿಕವಾಗಿ ದುರ್ಬಲಳು.
2. ಹೆಣ್ಣುಮಕ್ಕಳು ಸ್ವಂತ ನಿರ್ಧಾರ ಮಾಡಲಾರರು.
3. ಪುರುಷರೇ ಮನೆಯ ಮುಖ್ಯಸ್ಥರು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಎಲ್ಲ ತೀರ್ಮಾನಗಳನ್ನು ಅವರೇ ತೆಗೆದುಕೊಳ್ಳಬೇಕು.
4. ಮಹಿಳೆಯರು ವಿಧೇಯರಾಗಿಯೂ ಅಡಿಯಾಳಾಗಿಯೂ ಇರತಕ್ಕದ್ದು.
5. ಲೈಂಗಿಕ ಪರಿಶುದ್ಧಿಯನ್ನು ಹೊಂದಿದವರೇ ಒಳ್ಳೆಯ ಹೆಣ್ಣುಮಕ್ಕಳು.
6. ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಕರ್ತವ್ಯ ಮತ್ತು ಪಾತ್ರ. ಪ್ರತಿಯೊಬ್ಬ ಹೆಣ್ಣೂ ತಾಯಿ ಆಗಬಯಸುವಳು.
7. ಮಕ್ಕಳ ಪಾಲನೆ ಪೋಷಣೆಗೆ ಮಹಿಳೆಯೇ ಬಾಧ್ಯಸ್ಥಳು.
8. ರಾತ್ರಿ ವೇಳೆ ಒಬ್ಬಳೇ ಇರುವ ಅಥವಾ ನಿರ್ದಿಷ್ಟ ಉಡುಪುಗಳನ್ನು ತೊಡುವುದು ಮಹಿಳೆಯ ಮೇಲಿನ ಹಲ್ಲೆಗಳಿಗೆ ಕಾರಣ.
9. ಮದ್ಯಪಾನ ಮತ್ತು ಧೂಮಪಾನ ಮಾಡುವ ಹೆಣ್ಣುಮಗಳು ತನ್ನ ಮೇಲೆ ಪುರುಷರು ನಡೆಸುವ ಹಲ್ಲೆಗಳಿಗೆ ಖುದ್ದು ಬಾಧ್ಯಸ್ಥಳು. ಇಂತಹ ಹಲ್ಲೆಗಳನ್ನು ಆಕೆ ತಾನಾಗಿ ಆಹ್ವಾನಿಸುತ್ತಾಳೆ.
10. ಮಹಿಳೆಯರು ಭಾವುಕರು. ಬಹುತೇಕ ಅತಿಯಾಗಿ ಪ್ರತಿಕ್ರಿಯಿಸುವರು ಹೀಗಾಗಿ ಅವರ ಹೇಳಿಕೆಗಳಿಗೆ ಪುಷ್ಟೀಕರಣ ಬೇಕು.
11. ಲೈಂಗಿಕವಾಗಿ ಸಕ್ರಿಯರಾಗಿರುವ ಮಹಿಳೆಯರು ಲೈಂಗಿಕ ಹಲ್ಲೆಯ ಪ್ರಕರಣಗಳಲ್ಲಿ ತಾವು ಒಪ್ಪಿಗೆ ಕೊಟ್ಟಿರಲಿಲ್ಲ ಎಂಬುದಾಗಿ ನೀಡುವ ಸಾಕ್ಷ್ಯವನ್ನು ಅನುಮಾನದಿಂದ ನೋಡಬೇಕು.
12. ಲೈಂಗಿಕ ಅಪರಾಧದ ಪ್ರಕರಣಗಳಲ್ಲಿ ದೈಹಿಕ ದಾಳಿಯ ಸಾಕ್ಷ್ಯಗಳು ಇಲ್ಲದೆ ಹೋದಲ್ಲಿ ಶಾರೀರಿಕ ಸಂಬಂಧಕ್ಕೆ ಆಕೆ ಒಪ್ಪಿಗೆ ನೀಡಿದ್ದಳು ಎಂದೇ ಅರ್ಥ.
ಈ ಮೇಲಿನ ಧೋರಣೆಗಳನ್ನು ದೂರವಿಟ್ಟು ಎಲ್ಲ ನಿರ್ದೇಶನಗಳನ್ನು ಅಳವಡಿಸಿದ ಲಿಂಗಸೂಕ್ಷ್ಮತೆಯ ಮಾದರಿಯನ್ನು ತಯಾರಿಸಬೇಕು. ಅದನ್ನು ನ್ಯಾಯಾಧೀಶರಿಗೆ ನೀಡುವ ಮೂಲತರಬೇತಿಯಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಮೂರು ತಿಂಗಳ ಒಳಗಾಗಿ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯು ತ್ವರಿತವಾಗಿ ಈ ತರಬೇತಿ ಪಠ್ಯವನ್ನು ಸಮಾಜಶಾಸ್ತ್ರಜ್ಞರು, ಮನಶ್ಯಾಸ್ತ್ರಜ್ಞರು ಹಾಗೂ ಲಿಂಗ ಅಧ್ಯಯನ ತಜ್ಞರ ಜೊತೆ ಸಮಾಲೋಚಿಸಿ ರೂಪಿಸಬೇಕು ಎಂದು ಸುಪ್ರೀಮ್ ಕೋರ್ಟ್ ವಿಧಿಸಿದೆ.
ಇದೇ ರೀತಿ ಕಾನೂನು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾನೂನು ಪದವಿ (ಎಲ್‌ಎಲ್‌ಬಿ) ವ್ಯಾಸಂಗದ ಭಾಗವಾಗಿ ಈ ಸಂಗತಿಗಳನ್ನು ಕಲಿಸತಕ್ಕದ್ದು. ಅಖಿಲ ಭಾರತ ವಕೀಲ ಪರೀಕ್ಷೆಯ ಪಠ್ಯದಲ್ಲಿ ಲೈಂಗಿಕ ಅಪರಾಧಗಳು ಮತ್ತು ಲಿಂಗಸೂಕ್ಷ್ಮತೆ ಕುರಿತ ವಿಷಯಗಳನ್ನು ಕಡ್ಡಾಯವಾಗಿ ಅಳವಡಿಸತಕ್ಕದ್ದು ಎಂದು ಬಾರ್ ಕೌನ್ಸಿಲ್ ಅಫ್ ಇಂಡಿಯಾಗೆ ಸೂಚಿಸಲಾಗಿದೆ.
ಲೈಂಗಿಕ ಅಪರಾಧಗಳ ಕುರಿತು ನ್ಯಾಯಾಧೀಶರು ಹೊಂದಬೇಕಿರುವ ಸೂಕ್ಷ್ಮ ಸಂವೇದನೆಯ ಬಗೆಗೆ ತಜ್ಞರೊಂದಿಗೆ ಎಲ್ಲ ಹೈಕೋರ್ಟುಗಳು ಸಮಾಲೋಚಿಸಿ ನ್ಯಾಯಾಂಗ ಸೇವೆಗಳ ಪರೀಕ್ಷೆಗಳಿಗೆ ಓದಿಕೊಳ್ಳಬೇಕಿರುವ ಪಠ್ಯದಲ್ಲಿ ಅಳವಡಿಸಬೇಕು ಎಂದೂ ಸುಪ್ರೀಮ್ ಕೋರ್ಟು ತಾಕೀತು ಮಾಡಿದೆ.
ಮಾನವೀಯವೂ ಪ್ರಗತಿಪರವೂ ಆಗಿರುವ ಅನೇಕ ತೀರ್ಪುಗಳನ್ನು ವ್ಯವಸ್ಥೆಯು ನುಂಗಿ ಹಾಕಿರುವುದುಂಟು. ಹಾಲಿ ತೀರ್ಪಿಗೆ ಅಂತಹ ದುರ್ಗತಿ ಒದಗದಿರಲಿ.


