ಕೃಪೆ: ದಿ ವೈರ್ – ಎಂ.ಕೆ. ವೇಣು
18-44 ವಯಸ್ಸಿನವರಿಗೆ ಒಕ್ಕೂಟ ಸರ್ಕಾರ ರೂಪಿಸಿರುವ ಲಸಿಕಾ ನೀತಿಯ ಬಗ್ಗೆ ಸುಪ್ರೀಂ ಕೋರ್ಟ್ ಕಠಿಣ ಪ್ರಶ್ನೆಗಳನ್ನು ಶುಕ್ರವಾರ ಕೇಳಿದೆ. ನಾಗರಿಕರು ತಿಂಗಳುಗಳಿಂದ ಕೇಳುತ್ತಿರುವ ಪ್ರಮುಖ ಪ್ರಶ್ನೆಗಳಿಗೆ ಒಕ್ಕೂಟ ಸರ್ಕಾರ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಇಲ್ಲಿ ಒಂದು ಮುಖ್ಯ ಪ್ರಶ್ನೆಯನ್ನು ನ್ಯಾಯಮೂರ್ತಿ ಚಂದ್ರಚೂಡ್ ಕೇಳಿದ್ದಾರೆ. ಈ ಹಿಂದೆ ನಡೆದ ಎಲ್ಲಾ ಲಸಿಕೆ ಖರೀದಿ ಮಾತುಕತೆಗಳ ಎಲ್ಲ ವಿವರಗಳನ್ನು ಕೋರ್ಟ್ ಮುಂದೆ ಇಡುವಂತೆ ಚಂದ್ರಚೂಡ್ ಕೇಂದ್ರಕ್ಕೆ ನಿರ್ದೇಶನ ನೀಡಿದ್ದಾರೆ. ಜುಲೈ 2020 ರಿಂದ ಅಮೆರಿಕದ ಔಷಧಿ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಹೇಳಿಕೊಂಡಿದೆ. ಹಾಗಿದ್ದಲ್ಲಿ, ಒಂಬತ್ತು ತಿಂಗಳಲ್ಲಿ ಯಾವ ಪ್ರಗತಿಯನ್ನು ಸಾಧಿಸಲಾಗಿದೆ ಎಂಬುದು ಒಂದು ಪ್ರಮುಖ ಪ್ರಶ್ನೆಯಾಗಿದೆ.
ಆಮದಿಗಿಂತ ಹೆಚ್ಚು ನಿರ್ಣಾಯಕವಾದುದು, 2020 ರ ನವೆಂಬರ್‌ನಿಂದ ಪ್ರಧಾನ ಮಂತ್ರಿ ದೇಶೀಯ ಉತ್ಪಾದಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಜೊತೆ ನಡೆಸಿದ ಮಾತುಕತೆಗಳ ವಿವರಗಳು ಬಹಿರಂಗ ಆಗಬೇಕಿದೆ. ಕಳೆದ ವರುಷದಿಂದ ಇದು ನಡೆದೇ ಇದೆ. ದೇಶೀಯ ಉತ್ಪಾದಕರಿಂದ ಯಾವುದೇ ಪೂರ್ವ-ಆದೇಶವಿಲ್ಲದೆ ಪೂರೈಕೆಯ ಸ್ಪಷ್ಟ ಭರವಸೆ ಇಲ್ಲದೇ ಅಥವಾ ವಿಸ್ತರಣೆಗೆ ಅವರಿಗೆ ಬಂಡವಾಳದ ಬೆಂಬಲವಿಲ್ಲದೆ ಐದು ತಿಂಗಳುಗಳು ನವೆಂಬರ್‌ನಿಂದ ಮಾರ್ಚಿವರೆಗೆ ಹೇಗೆ ಕಳೆದುಹೋಗಿವೆ ಎಂಬುದರ ಕುರಿತು ಸುಪ್ರೀಂ ಕೋರ್ಟ್ ವಿವರವಾದ ವಿಚಾರಣೆ ನಡೆಸಬೇಕು. ವಾಸ್ತವವಾಗಿ, ಸುಪ್ರೀಂಕೋರ್ಟ್ ಈ ಲೆಕ್ಕ ಪಡೆಯಲು ಎಸ್‍ಐಐ ಮತ್ತು ಭಾರತ್ ಬಯೋಟೆಕ್‌ನಿಂದ ನಿರ್ದಿಷ್ಟ ವಿವರಗಳನ್ನು ಪಡೆಯಬೇಕು, ಕಳೆದ ಡಿಸೆಂಬರ್‌ನಿಂದ ಅವುಗಳ ಮತ್ತು ಪಿಎಂಒ ನಡುವೆ ನಡೆದ ಸಂವಹನಗಳ ಎಲ್ಲ ವಿವರವನ್ನೂ ಪಡೆಯಬೇಕು.
ಲಸಿಕೆಯ ತೀವ್ರ ಕೊರತೆ ಸದ್ಯದಲ್ಲಿಯೇ ಎದುರಾಗುವ ಸಾಧ್ಯತೆ ಇರುವುದರಿಂದ ಸುಪ್ರೀಂಕೋರ್ಟ್ ಅಂತಹ ವಿವರಗಳನ್ನು ಕೇಳುವುದು ಉತ್ತಮವಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾ ನಿರ್ದೇಶಕ ಬಲರಾಮ್ ಭಾರ್ಗವ ಅವರು ಅಧಿಕೃತವಾಗಿ, ದಿನಕ್ಕೆ 10 ಮಿಲಿಯನ್ ಡೋಸ್‍ಗಳ ಪೂರೈಕೆ ಜುಲೈ ಅಂತ್ಯದ ವೇಳೆಗೆ ಅಥವಾ ಆಗಸ್ಟ್ ಆರಂಭದಲ್ಲಿ ಮಾತ್ರ ಕಾರ್ಯಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಈ ಗುರಿಯನ್ನು ಸಹ ತಲುಪಬಹುದೇ ಎಂದು ಅನೇಕ ತಜ್ಞರು ಪ್ರಶ್ನಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಎಸ್‌ಐಐ ಮತ್ತು ಭಾರತ್ ಬಯೋಟೆಕ್ ಒಟ್ಟಾಗಿ 300 ಮಿಲಿಯನ್ ಲಸಿಕೆಗಳಿಗೆ ಅಡ್ವಾನ್ಸ್ ಆರ್ಡರ್‌ಗೆ ಒಪ್ಪಿಕೊಂಡಿದ್ದು, ಅದರಂತೆ ಉತ್ಪಾದನೆ ಮಾಡಿದ್ದರೆ, ಆಗಸ್ಟ್ ವೇಳೆಗೆ ಭಾರತವು ಸಂಪೂರ್ಣ ಲಸಿಕೆ ಹಾಕಬಹುದಿತ್ತು. ಆದರೆ ಈಗಿನ ಪರಿಸ್ಥಿತಿ ನಿರಾಶಾದಾಯಕವಾಗಿದೆ.
ಇದು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ವೈಫಲ್ಯ. ನವೆಂಬರ್‌ನಿಂದ ಮಾರ್ಚಿವರೆಗೆ ಕೇಂದ್ರ ಮತ್ತು ದೇಶೀಯ ಲಸಿಕೆ ಕಂಪನಿಗಳ ನಡುವೆ ರಾಜ್ಯಗಳಿಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ನೀತಿ ಅಳವಡಿಸಲಾಗಿತ್ತು. 18-44 ವಯಸ್ಸಿನವರಿಗೆ ಲಸಿಕೆ ಒದಗಿಸಲು ಕೇಂದ್ರವು ಒಪ್ಪಿದ ನಂತರವಷ್ಟೇ ಮೇ 1 ರಂದು ರಾಜ್ಯ ಸರ್ಕಾರಗಳ ಮೇಲೆ ಜವಾಬ್ದಾರಿ ಹಾಕಿ ಕೇಂದ್ರ ನುಣುಚಿಕೊಳ್ಳುವ ಯತ್ನ ಮಾಡುತ್ತಿದೆ.
ಮುಂಚೂಣಿ ಆರೋಗ್ಯ ಕಾರ್ಯಕರ್ತರು ಮತ್ತು ಇತರ ದುರ್ಬಲ ಗುಂಪುಗಳು ಸೇರಿದಂತೆ 45ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಸರ್ಕಾರವು ಉಚಿತ ಲಸಿಕೆಗಳನ್ನು ನೀಡಲು ಸಾಧ್ಯವಾದರೆ, ಅದೇ ನಿಯಮಗಳನ್ನು 18-44 ವಯಸ್ಸಿನವರಿಗೆ ಏಕೆ ವಿಸ್ತರಿಸಲಾಗಿಲ್ಲ? ಎಂದು ಸುಪ್ರೀಂಕೋರ್ಟ್ ಸರಿಯಾಗಿ ಮತ್ತು ಕಠಿಣವಾಗಿ ಪ್ರಶ್ನಿಸಿದೆ.
ದೇಶೀಯ ಲಸಿಕೆಗಳನ್ನು ಖರೀದಿಸಲು ರಾಜ್ಯಗಳೇಕೆ ಹೆಚ್ಚಿನ ದರ ಪಾವತಿಸಬೇಕು? ಎಂದು ನ್ಯಾಯಾಲಯವು ಕೇಳಿದೆ. ಆದರೆ ಮೊದಲ ಸುತ್ತಿನಲ್ಲಿ ಅದೇ ಲಸಿಕೆಗಳನ್ನು ಹೆಚ್ಚು ಅಗ್ಗವಾಗಿ ಕೇಂದ್ರ ಖರೀದಿಸಿದೆ. ಇದು ಸರಿ. ಆದರೆ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕೋಟಾಗಳನ್ನು ಹಂಚುವ ಆಧಾರವೇನು? ಬೆಲೆಯಲ್ಲಿ ತಾರತಮ್ಯವೇಕೆ ಈ ಎಲ್ಲ ಪ್ರಶ್ನೆಗಳಿಗೂ ನ್ಯಾಯಾಲಯ ಕೇಂದ್ರದಿಂದ ವಿವರ ಕೇಳಿದೆ. ಮುಂದಿನ ವಾರಗಳು ಮತ್ತು ತಿಂಗಳುಗಳಲ್ಲಿ ಲಸಿಕಾ ಅಭಿಯಾನದ ನಿಖರವಾದ ಚಿತ್ರಣವನ್ನು ಪ್ರಸ್ತುತಪಡಿಸಲು ನ್ಯಾಯಾಲಯ ಕೇಂದ್ರವನ್ನು ಕೇಳಿದೆ ಮತ್ತು ಈ ಉದ್ದೇಶಕ್ಕಾಗಿ 35,000 ಕೋಟಿ ರೂ.ಗಳನ್ನು ಹೇಗೆ ವ್ಯಯ ಮಾಡಿದೆ ಮತ್ತು ಮಾಡಲಿದೆ ಎಂದು ಪ್ರಶ್ನೆ ಮಾಡಿರುವ ನ್ಯಾಯಾಲಯ ಈ ಪ್ರಕ್ರಿಯೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ ಎಂಬುದನ್ನು ಗಮನಿಸಿದೆ.
ಸಂಕ್ಷಿಪ್ತವಾಗಿ, ಆತಂಕಕ್ಕೊಳಗಾದ ನಾಗರಿಕರು ಕೇಳುತ್ತಿರುವ ಎಲ್ಲಾ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಕೇಳಿದೆ. ನೀತಿ ನಿರೂಪಣೆಯನ್ನು ಸರಕಾರ ಮತ್ತು ಕಾರ್ಯಾಂಗಕ್ಕೆ ಬಿಡಬೇಕೆಂದು ಕೇಂದ್ರದ ಕಾನೂನು ಅಧಿಕಾರಿ ನ್ಯಾಯಾಲಯಕ್ಕೆ ಸೂಚಿಸಿದಾಗ, “ನೀತಿ ನಿರೂಪಣೆಯು ಕಾರ್ಯನಿರ್ವಾಹಕನ ಏಕೈಕ ಡೊಮೇನ್ ಆಗಿ ಮುಂದುವರಿಯುತ್ತದೆ. ಆ ಪಾತ್ರವನ್ನು ವಹಿಸಿಕೊಳ್ಳುವ ಅಧಿಕಾರವನ್ನು ನ್ಯಾಯಾಂಗವು ಹೊಂದಿಲ್ಲ… ಈ ಅಧಿಕಾರಗಳ ವಿಭಜನೆಯು ಈ ನೀತಿಗಳ ನ್ಯಾಯಾಂಗ ವಿಮರ್ಶೆ ನಡೆಸಲು ನ್ಯಾಯಾಲಯಕ್ಕೆ ಅಡ್ಡಿ ಮಾಡಲಾರದು…..’ ಎಂದು ಸುಪ್ರೀಂಕೋರ್ಟ್ ದೃಢವಾಗಿ ಹೇಳಿದೆ.
ಇದರೊಂದಿಗೆ, ಭಾರತದ ಹಿಂದಿನ ಸಾರ್ವತ್ರಿಕ ಲಸಿಕಾ ಅಭಿಯಾನಗಳ ಹಿನ್ನೆಲೆಯಲ್ಲಿ ಲಸಿಕೆ ನೀತಿಯನ್ನು ಪರೀಕ್ಷಿಸುವುದನ್ನು ಮುಂದುವರಿಸುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ. ಜೀವಿಸುವ ಹಕ್ಕನ್ನು ರಕ್ಷಿಸುವ ಸಾಂವಿಧಾನಿಕ ಬಾಧ್ಯತೆಯನ್ನು ಕೇಂದ್ರವು ಪೂರೈಸುವ ಅಗತ್ಯವಿದೆ.
ಇದನ್ನೂ ಓದಿ: ಖಾಸಗಿ ವಲಯದ ಶೇ.50 ರಷ್ಟು ಲಸಿಕೆ 9 ಕಾರ್ಪೋರೇಟ್ ಆಸ್ಪತ್ರೆಗಳ ಪಾಲು: ಸಣ್ಣ ನಗರಗಳಲ್ಲಿ ಲಸಿಕೆ ಕೊರತೆ


