ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ಮೂವರು ದೆಹಲಿಯ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯಲ್ಲಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತಂದು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ವಜಾಗೊಳಿಸುವಂತೆ ಕೋರಿದ್ದರು.
ಮನವಿಯನ್ನು ತಿರಸ್ಕರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ, “ನೀವು ರಾಷ್ಟ್ರಪತಿಯನ್ನು ಕೇಳಬಹುದು. ಮಹಾರಾಷ್ಟ್ರ ಎಷ್ಟು ದೊಡ್ಡದಾಗಿದೆ ಎಂದು ನಿಮಗೆ ತಿಳಿದಿದೆಯೇ?” ಎಂದು ಮನವಿಯನ್ನು ವಜಾಗೊಳಿಸುವಾಗ ಪ್ರಶ್ನಿಸಿದ್ದಾರೆ ಎಂಬುದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ವಕೀಲರಾದ ರಿಷಬ್ ಜೈನ್ ಮತ್ತು ಗೌತಮ್ ಶರ್ಮಾ ಹಾಗೂ ಸಮಾಜ ಸೇವಕ ವಿಕ್ರಮ್ ಗಹ್ಲೋಟ್ ಸಲ್ಲಿಸಿದ್ದ ಮನವಿಯಲ್ಲಿ, ಮಹಾರಾಷ್ಟ್ರದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ನಾನು ಡೊನಾಲ್ಡ್ ಟ್ರಂಪ್ ಅಲ್ಲ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು, ಕಂಗನಾ ರಣಾವತ್ ಬಂಗಲೆ ಉರುಳಿಸುವಿಕೆ ಮತ್ತು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಲಾಲ್ ಶರ್ಮಾ ಮೇಲೆ ನಡೆದ ದಾಳಿಯನ್ನು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿದಾರರು, ಇಡೀ ರಾಜ್ಯಕ್ಕೆ ಸಾದ್ಯವಾಗದಿದ್ದರೂ ಪರವಾಗಿಲ್ಲ. ಕನಿಷ್ಠ ಮುಂಬೈ ಮತ್ತು ಅದರ ನೆರೆಯ ಜಿಲ್ಲೆಗಳನ್ನು ಸಶಸ್ತ್ರ ಪಡೆಗಳಿಂದ ನಿಯಂತ್ರಿಸಬೇಕು ಎಂದು ಕೋರಿದ್ದರು. “ಪ್ರಸ್ತುತ ಸರ್ಕಾರದ ನಡವಳಿಕೆಯಿಂದಾಗಿ ಮುಂಬೈ ನಗರ ಮತ್ತು ನೆರೆಯ ಜಿಲ್ಲೆಗಳಲ್ಲಿ ಯಾವುದೇ ಸಂದರ್ಭದಲ್ಲಿ ಅಲ್ಲಿ ವಾಸಿಸುವ ನಾಗರಿಕರ ಸುರಕ್ಷತೆಗೆ ಗಂಭೀರ ತೊಡಕುಂಟಾಗಿದೆ. ಹಾಗಾಗಿ ಮಹಾರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ” ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ಗಟ್ಟಿಯಾಗಿದೆ : ಸುಳ್ಳು ಹರಡುತ್ತಿರುವವರಿಗೆ ಹೊಟ್ಟೆ ನೋವು- ಶಿವಸೇನೆ


