HomeUncategorizedಮೀಸಲಾತಿಯ ಕುರಿತ ಸುಪ್ರೀಂ ತೀರ್ಪು ಅಪಾಯಕಾರಿಯಾದುದು..

ಮೀಸಲಾತಿಯ ಕುರಿತ ಸುಪ್ರೀಂ ತೀರ್ಪು ಅಪಾಯಕಾರಿಯಾದುದು..

ನಾವು ಖಾಸಗೀಕರಣದ ವಿರುದ್ಧ ಹೋರಾಡುತ್ತಲೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಕೇಳುವ ಹೋರಾಟಗಳನ್ನು ಕಟ್ಟಬೇಕಿದೆ. ಜೊತೆ ಜೊತೆಗೆ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಕೇಳಬೇಕಾಗುತ್ತದೆ.

- Advertisement -

ಮುಖೇಶ್ ಕುಮಾರ್ ವರ್ಸಸ್‌ ಉತ್ತರಖಂಡ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿಯು ಮೂಲಭೂತ ‌ಹಕ್ಕಲ್ಲ ಎಂದು ತೀರ್ಪು ನೀಡಿದೆ. ಮುಖೇಶ್ ಕುಮಾರ್ ಎನ್ನುವವರು ಉತ್ತರ ಖಂಡ ರಾಜ್ಯ ಸರ್ಕಾರ ಭಡ್ತಿ ಮೀಸಲಾತಿಯನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಸುಪ್ರೀಂ ಮೆಟ್ಟಿಲೇರಿದ್ದರು. ಆಗ ಮೀಸಲಾತಿ ಮೂಲಭೂತ ಹಕ್ಕಲ್ಲ ಮತ್ತು ಮೀಸಲಾತಿ ನೀಡಿ ಎಂದು ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡುವಂತಿಲ್ಲ ಎಂದಿದೆ. ಆದರೆ ಸರ್ಕಾರ ಮೀಸಲಾತಿಯನ್ನು ಕೊಡಲು ಹೊರಟರೆ ಅದನ್ನು ಮೂಲಭೂತ ಹಕ್ಕಾಗಿ ಪರಿಗಣಿಸಬಹುದು ಎಂದು ಹೇಳಿದೆ.

ಮೀಸಲಾತಿ ಎಂಬ ಶಬ್ದ ಕೇಳಿದ ಕೂಡಲೆ ಎಲ್ಲರ ಕಣ್ಣುಗಳು ಎಸ್ಸಿ ಎಸ್ಟಿ ಸಮುದಾಯದ ಕಡೆಗೆ ಹೋಗುತ್ತದೆ. ಮೀಸಲಾತಿ ಎಂದರೆ ದಲಿತರನ್ನು, ಹಿಂದುಳಿದವರನ್ನು ಆರ್ಥಿಕವಾಗಿ ಮೇಲಕ್ಕೆತ್ತುವ ಒಂದು ದಾರಿ ಎಂದು ಹೆಚ್ಚಿನ ಜನರ ಅಭಿಪ್ರಾಯ. ಇಲ್ಲಿ ನಾವು ಮುಖ್ಯವಾಗಿ ತಿಳಿಯಬೇಕಾಗಿರುವುದೇನೆಂದರೆ ತಲತಲಾಂತರದಿಂದ ನೂರು ಶೇಕಡ ಮೀಸಲಾತಿ ಪಡೆಯುವ ಕೆಲವೇ ಕೆಲವು ಸಮುದಾಯಗಳ ಬದಲಿಗೆ ಎಲ್ಲರಿಗೂ ಸಮಾನವಾಗಿ ಹಂಚುವ ಒಂದು ವ್ಯವಸ್ಥೆಯಾಗಿ ಮೀಸಲಾತಿ ಜಾರಿಯಲ್ಲಿದೆ.

ಮೀಸಲಾತಿ ಕೇವಲ ಎಸ್ಸಿ, ಎಸ್ಟಿಗಳು ಮಾತ್ರ ಪಡೆಯುತ್ತಿಲ್ಲ. ಶೇ. 23 ಇತರ ಹಿಂದುಳಿದ ಸಮುದಾಯ ಕೂಡಾ ಪಡೆಯುತ್ತಿದೆ. ಅಸಮಾನತೆಯಿಂದ ಕೂಡಿದ, ತಲೆತಲಾಂತರದಿಂದ ಜಾತಿಯ ಕಾರಣಕ್ಕಾಗಿ ಅನುಮಾನಿಸಲ್ಪಟ್ಟ, ಅವಮಾನಿಸಲ್ಪಟ್ಟ ಸಮಾಜದ ಎಲ್ಲರಿಗೂ ಸಮವಾಗಿ ಮೀಸಲಾತಿ ಸಿಗಬೇಕು ಎಂದು ಬಯಸಬೇಕೆ ಹೊರತು ಮೀಸಲಾತಿ ಬೇಡ ಎನ್ನುವುದು ಅಮಾನವೀಯತೆಯೆ ಆಗಿದೆ. ತೀವ್ರಗತಿಯಲ್ಲಿ ಬೆಳೆಯುತ್ತಿರುವ ಅಸಮಾನ ಸಮಾಜವನ್ನು ಸಮಸಮಾಜವನ್ನಾಗಿ ಕಟ್ಟಲು ಬೇಕಾಗಿ ಈ ಮೀಸಲಾತಿ ಇದೆ‌ಯೇ ಹೊರತು ಬಡತನ ಹೋಗಲಾಡಿಸಲು ಅಲ್ಲ. ಬಡತನ ನಿರ್ಮೂಲನೆಗೋಸ್ಕರ ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಅದು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುತ್ತದೆ ಎಂದು ನಂಬಿದ್ದೇವೆ. ಆದರೆ ಮೀಸಲಾತಿ ಎನ್ನುವುದು ಸಾಮಾಜಿಕ ಸಮಾನತೆಗಾಗಿ.

ಬಡತನ ಹೋದರೆ ಸಾಮಾಜಿಕ ಅಸಮಾನತೆಯ ಹೋಗುತ್ತದೆ ಎಂಬ ವಾದವಿದೆ ಆದರೆ ಇದು ಅರ್ಧ ಸತ್ಯ ಮಾತ್ರವೇ ಆಗಿದೆ.‌ ಉದಾಹರಣೆಗೆ ನಮ್ಮ ದೇಶದ ಪ್ರಥಮ‌ ಪ್ರಜೆ ಎಂದು ಕರೆಯಲ್ಪಡುವ ರಾಷ್ಟ್ರಪತಿಯನ್ನು ದಲಿತ ಎಂಬ ಕಾರಣಕ್ಕೆ ಧಾರ್ಮಿಕ ಕ್ಷೇತ್ರವೊಂದರಿಂದ ಹೊರಗಿಟ್ಟ ಪ್ರಕರಣ ನೀವು ಓದಿರಬಹುದು. ಅಲ್ಲಿಗೆ ಭಾರತದ ಸಾಮಾಜಿಕ ಸ್ಥಿತಿಯ ಬಗ್ಗೆ ನಿಮಗರಿವಾಗಬಹುದು.

ಭಾರತದ ಸಂವಿಧಾನವು ದೇಶದ ಎಲ್ಲಾ ನಾಗರೀಕರಿಗೆ ಸಮಾನತೆಯ ಭರವಸೆ ನೀಡುತ್ತದೆ. ಭಾರತದ ಎಲ್ಲಾ ಜನರಿಗೆ ಸಮಾನ ಅವಕಾಶ, ಪ್ರಾತಿನಿಧಿತ್ವವನ್ನು ನೀಡುವುದಾಗಿ ಭಾರತದ ಸಂವಿಧಾನ ಹೇಳುತ್ತದೆ. ಸಂವಿಧಾನದ 14,15,16 ನೇ ವಿಧಿಗಳು ಸಮಾನತೆಯನ್ನೆ ಹೇಳುತ್ತವೆ. ಆದರೆ ಭಾರತದ ಸಾಮಾಜಿಕ ಸ್ಥಿತಿ ಸಾವಿರಾರು ವರ್ಷಗಳಿಂದ ಒಂದು ಪಿರಮಿಡ್ಡಿನ ರೂಪದಲ್ಲಿ ಇರುವುದರಿಂದ ಸರ್ವ ಭಾರತೀಯರಿಗೆ ಸಮಾನ ಅವಕಾಶಗಳು ಸಿಗಬೇಕೆಂದು ಮೀಸಲಾತಿಯನ್ನು ಪರಿಚಯಿಸಿದೆ. ಪ್ರಸ್ತುತ ಭಾರತದ ಸಾಮಾಜಿಕ ಸ್ಥಿತಿ ಈಗಲೂ ಹಾಗೆಯೇ ಇದೆ, ನೆನಪಿಡಿ ‌ಸ್ವಾತಂತ್ರ್ಯ ಬಂದು ಎಪ್ಪತ್ತೆರಡು ವರ್ಷಗಳಾಗಿವೆ.

ಸಧ್ಯಕ್ಕೆ ನಮ್ಮನ್ನು ಆಳುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ಮಾತೃ ಸಂಘಟನೆಯಾದ ಆರೆಸ್ಸೆಸ್‌ಗೆ ಮೀಸಲಾತಿ ಬಗ್ಗೆ ತೀವ್ರವಾದ ಅಸಮಾಧಾನ ಇರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅದು ಮೀಸಲಾತಿ ಬಗ್ಗೆ ಅವಾಗವಾಗ ತಕರಾರನ್ನೂ ತೆಗೆದು ಈ ಚರ್ಚೆಯನ್ನು ಜೀವಂತವಾಗಿಡುತ್ತಿದೆ. ಇವರ ವಾದದ ಪ್ರಕಾರ ಮೀಸಲಾತಿ ಕೊಟ್ಟರೆ ಗುಣಮಟ್ಟದ ಕೊರತೆ ಉಂಟಾಗುತ್ತದೆ ಎನ್ನುವುದಾಗಿದೆ. ಆದರೆ ಆ ಗುಣಮಟ್ಟದ ಕೊರತೆಗೆ ಕಾರಣ ಏನು‌, ಯಾಕೆ ಭಾರತದ ಸಾಮಾಜಿಕ ಸ್ಥಿತಿ ಹೀಗಾಗಿದೆ ಎಂಬುದರ ಬಗ್ಗೆ ಇವರು ಮಾತೆ‌ ಎತ್ತುವುದಿಲ್ಲ, ಆದರೆ ನಿಜ ಸ್ಥಿತಿ ಇವರಿಗೂ ಗೊತ್ತಿದೆ.

ಭಾರತದಂತಹ ಜಾತಿ ಪೀಡಿತ ದೇಶದಲ್ಲಿ ಎಲ್ಲಿಯವರೆಗೂ ಸಾಮಾಜಿಕ ಅಸಮಾನತೆ ಇರುತ್ತದೆಯೊ ಅಲ್ಲಿವರೆಗೂ ಮೀಸಲಾತಿ ಇರಲೇಬೇಕಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೆರಡು ವರ್ಷಗಳಾದರೂ, ಸಂವಿಧಾನ ರಚಿಸಿ ಅರವತ್ತೊಂಬತ್ತು ವರ್ಷಗಳಾದರೂ ಇನ್ನೂ ಅಸಮಾನತೆ ಇದೆಯೆಂದರೆ ಮೀಸಲಾತಿಯು ಎಲ್ಲಾ ಸಮುದಾಯಗಳಿಗೂ ಸಿಕ್ಕಿದೆಯೇ ಎಂಬುವುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ಮೀಸಲಾತಿಯ ಹಿಂತೆಗೆತಕ್ಕಿಂತ ಇನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದ ಅನಿವಾರ್ಯತೆಯಿದೆ.

ಮೀಸಲಾತಿ ಇದ್ದರೂ ಸಮಾನ ಅವಕಾಶಗಳು ಸಿಗದ ಎಷ್ಟೋ ಸಮುದಾಯಗಳು ನಮ್ಮ ಮುಂದೆ ಇದೆ. ಇದರಲ್ಲಿ ಇನ್ನೂ ತಮ್ಮ ಜಾತಿಗಳು ಯಾವುದು ಎಂಬುದೇ ತಿಳಿಯದ ಜನಸಮುದಾಯಗಳಿವೆ. ಸರ್ಕಾರಗಳು ಕೂಡ ಅವರನ್ನು ಗುರುತಿಸಲು ಪರದಾಡಿದಂತೆ ಮಾಡುತ್ತಿದ್ದರೂ ಇಚ್ಛಾಶಕ್ತಿ ಇಲ್ಲದಿರುವುದು‌ ನೈಜ ಕಾರಣವಾಗಿದೆ. ಒಂದು ಕಡೆ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ತಯಾರಿಸಿ ಉಳ್ಳವರೆ ಪಡೆಯುತ್ತಿದ್ದರೆ, ಇನ್ನೊಂದು ಕಡೆ ಮೀಸಲಾತಿಯ‌ ಕಾನೂನುಗಳು ಇದ್ದರೂ ಅದನ್ನು ಜಾರಿಗೊಳಿಸುವಂತಹ ಜಾಗದಲ್ಲಿ ಭಾರತೀಯ ಜಾತಿ ಮನಸ್ಥಿತಿಯ ಜನರೆ ಕುಳಿತಿದ್ದಾರೆ. ಇಲ್ಲಿ ನಮಗೆ ಮೀಸಲಾತಿ ಇನ್ನೂ ಯಾಕೆ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಎಂಬುವುದರ ಹೊಳಹು ಸಿಗುತ್ತದೆ. ಹೆಚ್ಚಿನ ಎಲ್ಲರೂ ತಮ್ಮ ಜಾತಿಯಾಧಾರಿತ ಮನಸ್ಥಿತಿಯನ್ನು ಬಿಟ್ಟು ಹೊರಬರಲಾರದೆ ಸ್ವಜನ ಪಕ್ಷಪಾತಿಯರೆ ಆಗಿದ್ದಾರೆ. ಅದರಲ್ಲೂ ಅಧಿಕಾರಿ ವರ್ಗದಲ್ಲಿ ಅದು ಇನ್ನೂ ಜಾಸ್ತಿಯೆ ಇದೆ.

ಸಧ್ಯಕ್ಕೆ ಸುಪ್ರೀಂ ಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದಿದೆ. ಇದು ಎಷ್ಟರ ಮಟ್ಟಿಗೆ ದ್ವಂದ್ವ ಸೃಷ್ಟಿಸುತ್ತದೆ ಎಂದರೆ ಸಂವಿಧಾನ ಸಮಾನತೆಯ ಹಕ್ಕು ನೀಡುವ 14, 15, 16 ವಿಧಿಗಳಿಗೆ ಸವಾಲನ್ನೇ ಹಾಕುತ್ತದೆ ಎಂದೆನಿಸುತ್ತದೆ. ಅಲ್ಲದೆ ಈ ಬಗ್ಗೆ ಕಾನೂನು ರೂಪಿಸಲು ಕೋರ್ಟ್ ರಾಜ್ಯಗಳಿಗೆ ನಿರ್ದೇಶನವನ್ನು ನೀಡುವಂತಿಲ್ಲ ಎಂದಿದೆ. ಅಲ್ಲಿಗೆ ಅದು ರಾಜ್ಯಗಳ ವಿವೇಚನೆಗೆ ‌ಬಿಟ್ಟ ವಿಚಾರ ಎಂಬಂತಾಗಿದೆ. ಭಾರತದಲ್ಲಿ ಮೀಸಲಾತಿ ಬಂದು ಇಷ್ಟು ವರ್ಷಗಳಾಗಿಯು ಸಾಮಾಜಿಕ ಅಸಮಾನತೆ ಇನ್ನೂ ಕಣ್ಣಿಗೆ ರಾಚುವಷ್ಟು ಇರುವುದು ನೋಡಿದರೆ ಮಿಸಲಾತಿಯು ತನ್ನ ಅನುಷ್ಠಾನದಲ್ಲಿ ವಿಫಲಗೊಂಡಿದೆ ಎಂಬುವುದು ಎದ್ದು ಕಾಣುತ್ತದೆ. ಆದರೆ ಯಾಕೆ ಅನುಷ್ಠಾನಗೊಂಡಿಲ್ಲ ಎಂಬುವುದನ್ನು ಹುಡುಕುತ್ತಾ ಹೊರಟರೆ ನಮಗೆ ಸಿಗುವುದು ಮತ್ತೇ ಅದೆ “ಜಾತಿ ವ್ಯವಸ್ಥೆ” ಅಷ್ಟೆ.

ಅದರಾಚೆಗೂ ಮೀಸಲಾತಿ ಕೊಡುವ ಉದ್ಯೋಗಗಳು ನಮ್ಮ ಆರ್ಥಿಕ ವ್ಯವಸ್ಥೆಯ ಕೇವಲ ಎರಡರಷ್ಟು ಮಾತ್ರ ಎಂದು ಅಂಕಿ ಅಂಶಗಳು ಹೇಳುತ್ತವೆ. ಅಲ್ಲದೆ ಈಗಿನ ಸರ್ಕಾರ ತನ್ನ ಎಲ್ಲಾ ಸಂಸ್ಥೆಗಳನ್ನು ಖಾಸಗಿಕರಣ ಮಾಡಲು ಹೊರಟಿದೆ. ಅಲ್ಲಿಗೆ ಮೀಸಲಾತಿ ಇದ್ದರೂ ಯಾರಿಗೆ ಎಷ್ಟು ಅವಕಾಶಗಳು ಸಿಗುತ್ತವೆ ಹೇಳಿ? ಸರ್ಕಾರಗಳು ಯಾವುದೆ ಹೊಸ ಸಾರ್ವಜನಿಕ ಸಂಸ್ಥೆಗಳನ್ನು ಕಟ್ಟುತ್ತಿಲ್ಲ. ಇವತ್ತಿಗೆ ನಾವು ಖಾಸಗೀಕರಣದ ವಿರುದ್ಧ ಹೋರಾಡುತ್ತಲೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಕೇಳುವ ಹೋರಾಟಗಳನ್ನು ಕಟ್ಟಬೇಕಿದೆ. ಜೊತೆ ಜೊತೆಗೆ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಕೇಳಬೇಕಾಗುತ್ತದೆ.

ಉತ್ತರ ಖಂಡ ಸುಪ್ರೀಂ ಕೋರ್ಟ್‌ಗೆ ಹೋಗಿರುವುದು ಭಡ್ತಿ ಮೀಸಲಾತಿಯನ್ನು ವಿರುದ್ಧ. ಆದರೆ ಸುಪ್ರೀಂ ತನ್ನ ತೀರ್ಪಿನಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ತಿಳಿಸಿರುವುದು ಅಪಾಯಕಾರಿ ನಡೆಯೇ ಆಗಿದೆ. ಇದು ಸಂವಿಧಾನ ನೀಡಿರುವ ಮೂಲಭೂತ ಹಕ್ಕಾದ ಸಮಾನತೆಯ ಹಕ್ಕಿಗೆ ಸವಾಲೆಸೆಯುವಂತಹದ್ದು. ಈ ಬಗ್ಗೆ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾ಼ದ್ ಮೇಲ್ಮನವಿಯನ್ನು ಹಾಕಿದ್ದಾರೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕರ್ನಾಟಕ ಕೊರೊನಾ: 24 ಗಂಟೆಯಲ್ಲಿ 67 ಸಾವಿರ ಡಿಸ್ಚಾರ್ಜ್, 38 ಸಾವಿರ ಹೊಸ ಪ್ರಕರಣ

0
ಕೊರೊನಾ ಮೂರನೇ ಅಲೆಯಲ್ಲಿ ರಾಜ್ಯದಲ್ಲಿ ಪ್ರಕರಣಗಳು ದಿಢೀರ್‌ ಹೆಚ್ಚಾಗಿದ್ದವು. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಕೇಸಸ್ ಪತ್ತೆಯಾಗಿದ್ದವು. ಆದರೆ, ಕಳೆದ 24 ಗಂಟೆಯಲ್ಲಿ 67 ಸಾವಿರ ಕೊರೊನಾ ಸೋಂಕಿತರು ಚೇತರಿಕೆ ಕಂಡು, ಡಿಸ್ಚಾರ್ಜ್ ಆಗಿದ್ದಾರೆ....
Wordpress Social Share Plugin powered by Ultimatelysocial