ಅಯೋಧ್ಯೆ ತೀರ್ಪಿನ ನಂತರ ನಾಳೆ ಮತ್ತೊಂದು ಮಹತ್ವದ ತೀರ್ಪು ನೀಡಲಿದೆ ಸುಪ್ರೀಂಕೋರ್ಟ್. ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ಮರುಪರಿಶೀಲನೆ ಅರ್ಜಿ ತೀರ್ಪು ಹೊರ ಬೀಳಲಿದೆ. ಮಂಡಲ ಮಕರವಿಳಕ್ಕುಂ ಋತುಮಾನ ನ. 16 ರಂದು ಆರಂಭವಾಗಲಿದೆ. ಹೀಗಾಗಿ ತೀರ್ಪು ಹೆಚ್ಚಿನ ಮಹತ್ವ ಪಡೆದಿದೆ. ಅಲ್ಲದೇ ಎಡಪಂಥೀಯ ಸರ್ಕಾರವಿರುವ ರಾಜ್ಯದಲ್ಲಿ ಹಲವು ರಾಜಕೀಯ ಬೆಳವಣಿಗೆಗೂ ಇದು ಕಾರಣವಾಗಲಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿ ರೋಹಿಂಟನ್ ನಾರಿಮನ್, ಡಿ.ವೈ.ಚಂದ್ರಚೂಡ್ ಹಾಗೂ ಇಂದೂ ಮಲ್ಹೋತ್ರಾ ಅವರನ್ನು ಒಳಗೊಂಡ ನ್ಯಾಯಪೀಠ ತೀರ್ಪು ಪ್ರಕಟಿಸಲಿದೆ.
ಇನ್ನು ೨೦೧೮ರ ಸೆಪ್ಟಂಬರ್ ೨೮ರಂದು ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಹಲವು ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು. ದೇವಾಲಯಕ್ಕೆ ತೆರಳುವ ಹಾದಿಯಲ್ಲಿ ಮಹಿಳೆಯರನ್ನು ತಡೆದು, ಬೇರೆ ಮಾರ್ಗದ ಮೂಲಕ ಸಂಚರಿಸುವಂತೆ ಒತ್ತಡ ಹೇರಲಾಗಿತ್ತು. ಮಂಡಲದ ಅವಧಿಯುದ್ದಕ್ಕೂ ಘರ್ಷಣೆ, ಉದ್ವಿಗ್ನತೆಗೆ ಶಬರಿಮಲೆ ಸಾಕ್ಷಿಯಾಗಿತ್ತು.
ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ, ಹಲವು ಪ್ರತಿಭಟನೆಗಳು ನಡೆದಿದ್ದವು. ಅಲ್ಲದೇ ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ, ಹಿಂದೂಗಳ ಸಂಪ್ರದಾಯ, ಪರಂಪರೆ, ಪದ್ಧತಿಗೆ ಮಾಡಿದ ಅವಮಾನ ಎಂದು ಹಲವು ಹಿಂದೂ ಪರ ಸಂಘಟನೆಗಳು, ಶಬರಿಮಲೆ ದೇಗುಲ ಟ್ರಸ್ಟಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮತ್ತು ರ್ಯಾಲಿ ನಡೆದಿತ್ತು. ಅದಾದ ನಂತರ ಸುಪ್ರೀಂ ತೀರ್ಪು ಮರು ಪರಿಶೀಲನೆ ನಡೆಸುವಂತೆ ಹಲವು ಅರ್ಜಿಗಳು ಸುಪ್ರೀಂ ಮೆಟ್ಟಿಲೇರಿದ್ದವು. ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ನಾಳೆ ( ನವೆಂಬರ್ ೧೪) ಮಹತ್ವದ ತೀರ್ಪು ನೀಡಲಿದೆ.
ಶಬರಿಮಲೆ ಸುಮಾರು ೮೦೦ ವರ್ಷಗಳಷ್ಟು ಹಳೆಯದ್ದಾಗಿದೆ. ಮಹಿಳೆಯರ ದೇಗುಲ ಪ್ರವೇಶ ತೀರ್ಪು ದಶಕಗಳಷ್ಟು ಹಳೆಯದ್ದು. ಈಗ ಅಯೋಧ್ಯೆ ತೀರ್ಪು ಒಪ್ಪಿಕೊಂಡಿರುವಂತೆ ಎಲ್ಲರೂ ಶಬರಿಮಲೆ ತೀರ್ಪನ್ನೂ ಸಹ ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ದೇವಸ್ವಂ ಕಡಕಂಪಲ್ಲಿ ಸುರೇಂದ್ರನ್ ಮನವಿ ಮಾಡಿದ್ದಾರೆ. ಎಲ್ಲರೂ ತೀರ್ಪನ್ನು ಶಾಂತವಾಗಿ ಒಪ್ಪಿಕೊಳ್ಳಬೇಕು. ಸುಪ್ರೀಂ ತೀರ್ಪಿನ ಪ್ರಕಾರ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ದೇವಸ್ವಂ ಮಂಡಳಿಯ ಅಧ್ಯಕ್ಷ ಎ. ಪದ್ಮಕುಮಾರ್ ಹೇಳಿದ್ದಾರೆ.
ನಾಳೆ ತೀರ್ಪು ಹೊರ ಬೀಳಲಿರುವ ಹಿನ್ನೆಲೆ ರಾಜ್ಯ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪೊಲೀಸ್ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


