Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೊರಟಗೆರೆ: ಜಿ.ಪರಮೇಶ್ವರ್-ಸುಧಾಕರ್ ಲಾಲ್ ನಡುವೆ ಮತ್ತೆ ಫೈಟ್; ಲೆಕ್ಕಕ್ಕಿಲ್ಲದ ಬಿಜೆಪಿ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೊರಟಗೆರೆ: ಜಿ.ಪರಮೇಶ್ವರ್-ಸುಧಾಕರ್ ಲಾಲ್ ನಡುವೆ ಮತ್ತೆ ಫೈಟ್; ಲೆಕ್ಕಕ್ಕಿಲ್ಲದ ಬಿಜೆಪಿ ಆಟ

- Advertisement -
- Advertisement -

ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದ, ಒಮ್ಮೆ ಉಪ ಮುಖ್ಯಮಂತ್ರಿ ಮತ್ತು ಹಲವು ಬಾರಿ ಸಚಿವರಾಗಿರುವ ಹಿರಿಯ ದಲಿತ ಮುಖಂಡ ಜಿ.ಪರಮೇಶ್ವರ್‌ರವರು ಪ್ರತಿನಿಧಿಸುತ್ತಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ದಲಿತ ಸಿಎಂ ಕೂಗು ಮತ್ತು 2013ರಲ್ಲಿ ಪರಮೇಶ್ವರ್‌ರವರ ಸೋಲಿನ ಕಾರಣಗಳಿಗಾಗಿ ಗಮನ ಸೆಳೆದಿದ್ದ ಈ ಕ್ಷೇತ್ರದಲ್ಲಿ ಹಾಲಿ ಪರಿಸ್ಥಿತಿ ಹೇಗಿದೆ? ಯಾರ ಕೈ ಮೇಲಿದೆ ಎಂಬುದನ್ನು ನೋಡೋಣ.

ರಾಜಕೀಯ ಇತಿಹಾಸ

1962ರಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರ ರಚನೆಯಾದಾಗ ಅದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿತ್ತು. ಆಗ ಕಾಂಗ್ರೆಸ್ ಪಕ್ಷದ ಆರ್ ಚನ್ನಿಗರಾಮಯ್ಯನವರು ಪ್ರಜಾ ಸೋಷಿಯಲಿಸ್ಟ್ ಪಕ್ಷದ ಎಸ್ ಅಂಜಯ್ಯನವರ ಎದುರು ಗೆಲುವು ಸಾಧಿಸಿದ್ದರು. 1967ರಿಂದ 2008ರವರೆಗೆ ಕೊರಟಗೆರೆ ಸಾಮಾನ್ಯ ಕ್ಷೇತ್ರವಾಗಿತ್ತು. 1967ರಲ್ಲಿ ಕಾಂಗ್ರೆಸ್‌ನಿಂದ ಟಿ.ಎಸ್ ಶಿವಣ್ಣನವರು ಕಣಕ್ಕಿಳಿದು ಸ್ವತಂತ್ರ ಅಭ್ಯರ್ಥಿ ವಿ.ಎ ರೆಡ್ಡಿಯವರನ್ನು ಮಣಿಸಿದ್ದರು.

1972ರಲ್ಲಿ ಕಾಂಗ್ರೆಸ್ ಪಕ್ಷವು ಕ್ಷೇತ್ರದಲ್ಲಿ ಹೆಚ್ಚು ಮತದಾರರಿಲ್ಲದ ತಿಗಳ ಸಮುದಾಯದ ಮುದ್ದರಾಯಯ್ಯನವರಿಗೆ ಟಿಕೆಟ್ ನೀಡಿತು. ಸರಳ, ಸಜ್ಜನ ವ್ಯಕ್ತಿಯೆನಿಸಿಕೊಂಡಿದ್ದ ಅವರು ಸ್ವತಂತ್ರ ಅಭ್ಯರ್ಥಿ ಟಿ.ಎಚ್ ಹನುಮಂತರಾಯಪ್ಪನವರ ಎದುರು ಜಯ ಕಂಡರು. ಶಾಸಕರಾದರೂ ಕೊಡೆ ಹಿಡಿದು ನಡೆದುಕೊಂಡೇ ಓಡಾಡುತ್ತಿದ್ದ, ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದ ಅವರು 1978ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜನತಾ ಪಕ್ಷದ ವೀರಣ್ಣನವರನ್ನು ಮಣಿಸಿ ಎರಡನೇ ಬಾರಿಗೆ ಶಾಸಕರೆನಿಸಿಕೊಂಡರು.

ಸಿ.ಚೆನ್ನಿಗಪ್ಪ

1983ರ ಚುನಾವಣೆಯಲ್ಲಿ ಜನತಾ ಪಕ್ಷದ ವೀರಣ್ಣನವರು ಮುದ್ದರಾಯಪ್ಪರನ್ನು ಸೋಲಿಸಿ ಶಾಸಕರಾದರು. 1985ರಲ್ಲಿಯೂ ವೀರಣ್ಣನವರು ಕಾಂಗ್ರೆಸ್ ಪಕ್ಷದ ಎನ್ ಸುಕುಮಾರ್‌ರನ್ನು ಮಣಿಸಿ ಎರಡನೇ ಬಾರಿಗೆ ಶಾಸಕರಾದರು. 1989ರಲ್ಲಿ ಕೊರಟಗೆರೆ ಕ್ಷೇತ್ರ ಮತ್ತೆ ಕಾಂಗ್ರೆಸ್ ಪಾಲಾಯಿತು. ಸಿ.ವೀರಭದ್ರಯ್ಯನವರು ಜನತಾದಳದಿಂದ ಸ್ಪರ್ಧಿಸಿದ್ದ ಹಾಲಿ ಶಾಸಕ ವೀರಣ್ಣನವರ ಎದುರು ಗೆಲುವು ಸಾಧಿಸಿದರು.

ಸಿ.ಚೆನ್ನಿಗಪ್ಪನವರಿಗೆ ಹ್ಯಾಟ್ರಿಕ್ ಗೆಲುವು

ಸಾಮಾನ್ಯ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ನೆಲಮಂಗಲ ತಾಲ್ಲೂಕಿನ ಭೈರನಾಯಕನಹಳ್ಳಿಯ ಸಿ.ಚೆನ್ನಿಗಪ್ಪನವರು ದೇವೇಗೌಡರ ಸಂಪರ್ಕದಿಂದ ರಾಜಕೀಯಕ್ಕೆ ಧುಮುಕಿದರು. 1994ರ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್ ಪಕ್ಷದ ಸಿ.ವೆಂಕಟಾಚಲಯ್ಯನವರ ಎದುರು ಗೆಲುವು ಕಂಡರು. 1999ರಲ್ಲಿಯೂ ಜೆಡಿಎಸ್‌ನಿಂದ ಕಣಕ್ಕಿಳಿದು ಸಿ.ವೆಂಕಟಾಚಲಯ್ಯನವರನ್ನು ಮಣಿಸಿದ್ದರು. 2004ರಲ್ಲಿ ಜೆಡಿಯು ಪಕ್ಷದ ವೀರಣ್ಣನವರನ್ನು ಮಣಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸಹ ಆಗಿದ್ದರು. ಅವರು 2020ರಲ್ಲಿ ಮರಣ ಹೊಂದಿದ್ದರು. ಅವರ ಪುತ್ರ ಡಿ.ಸಿ ಗೌರಿಶಂಕರ್ ತುಮಕೂರು ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ.

ಮೀಸಲು ಕ್ಷೇತ್ರ – ಜಿ.ಪರಮೇಶ್ವರ್‌ರವರ ಆಗಮನ

2008ರಲ್ಲಿ ಕ್ಷೇತ್ರ ಮರುವಿಂಗಡಣೆಯಲ್ಲಿ ಕೊರಟಗೆರೆ ಮತ್ತೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ಕೊರಟಗೆರೆ ತಾಲ್ಲೂಕಿನ ಚನ್ನರಾಯದುರ್ಗ, ಹೊಳವನಹಳ್ಳಿ, ಕಸಬ, ಕೊಳಾಲ, ತುಮಕೂರು ತಾಲ್ಲೂಕಿನ ಕೋರಾ ಮತ್ತು ಮಧುಗಿರಿ ತಾಲ್ಲೂಕಿನ ಪುರುವರ ಹೋಬಳಿಗಳು ಕೊರಟಗೆರೆ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

ತುಮಕೂರಿನ ಗೊಲ್ಲಹಳ್ಳಿಯವರಾದ ಪರಮೇಶ್ವರ್‌ರವರು ಬೆಂಗಳೂರಿನ ಜಿಕೆವಿಕೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಸಸ್ಯ ಶರೀರಶಾಸ್ತ್ರದಲ್ಲಿ ಪಿಎಚ್.ಡಿ ಪಡೆದಿದ್ದರು. ಆನಂತರ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಡಳಿತಾಧಿಕಾರಿಯಾಗಿದ್ದಾಗ ಅಂದಿನ ಶಿಕ್ಷಣ ಸಚಿವ ಎಂ.ಎಸ್ ಯಾಹ್ಯಾ ಮತ್ತು ಮತ್ತು ಹಿರಿಯ ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರೊಂದಿಗಿನ ಒಡನಾಟದಿಂದ ರಾಜಕೀಯ ಪ್ರವೇಶಿಸಿದರು. ತಮ್ಮ ಮೊದಲ ಯತ್ನದಲ್ಲಿಯೇ 1989ರಲ್ಲಿ ಮಧುಗಿರಿಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜನತಾದಳದ ಸಿ.ರಾಜವರ್ಧನ್ ವಿರುದ್ಧ ಗೆಲುವು ಸಾಧಿಸಿದರು. ಅಲ್ಲದೇ 1993ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಕೆಲಸ ಮಾಡಿದರು.

1994ರ ಚುನಾವಣೆಯಲ್ಲಿ ಜನತಾದಳ ಗಂಗಹನುಮಯ್ಯನವರ ಎದುರು ಕೇವಲ 3 ಸಾವಿರ ಮತಗಳ ಅಂತರದಲ್ಲಿ ಸೋಲುಂಡ ಅವರು, 1999ರಲ್ಲಿ ಅದೇ ಗಂಗಹನುಮಯ್ಯನವರನ್ನು 55,802 ಮತಗಳ ದಾಖಲೆಯ ಅಂತರದಲ್ಲಿ ಸೋಲಿಸಿದರು. ಅಂದಿನ ಎಸ್.ಎಂ ಕೃಷ್ಣರವರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ಮತ್ತು ತುಮಕೂರು ಉಸ್ತುವಾರಿ ಸಚಿವರಾಗಿ ಕೆಲಸ ನಿಭಾಯಿಸಿದ್ದರು.

ಕೆ.ಎನ್ ರಾಜಣ್ಣ

2004ರಲ್ಲಿ ಮಧುಗಿರಿಯಿಂದ ಮತ್ತೆ ಸ್ಪರ್ಧಿಸಿ ಜೆಡಿಎಸ್‌ನ ಎಚ್.ಕೆಂಚಮಾರಯ್ಯನವರ ಎದುರು ಗೆಲುವು ಕಂಡ ಪರಮೇಶ್ವರ್‌ರವರು 2008ರಲ್ಲಿ ಕೊರಟಗೆರೆಗೆ ಬಂದರು. ಆ ಚುನಾವಣೆಯಲ್ಲಿ ಜೆಡಿಎಸ್‌ನ ಚಂದ್ರಯ್ಯನವರ ಎದುರು ಜಯ ಸಾಧಿಸಿದರು. ಅಲ್ಲದೆ 2010ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿ ಪಕ್ಷವನ್ನು ಮುನ್ನಡೆಸಿದರು.

2013ರ ಚುನಾವಣೆಯಲ್ಲಿ ಜಿ.ಪರಮೇಶ್ವರ್ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ವಿರುದ್ಧ 18,155 ಮತಗಳ ಅಂತರದಲ್ಲಿ ಅನಿರೀಕ್ಷಿತ ಸೋಲು ಕಂಡರು. ಸುಧಾಕರ್ ಲಾಲ್ 72,229 ಮತಗಳನ್ನು ಪಡೆದರೆ ಜಿ.ಪರಮೇಶ್ವರ್ ಕೇವಲ 54,074 ಮತಗಳಿಗೆ ಕುಸಿದರು. ದಲಿತ ಸಮುದಾಯದ ಪರಮೇಶ್ವರ್ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯ ಮತ್ತು ತುಮಕೂರಿನ ಕಾಂಗ್ರೆಸ್ ನಾಯಕ ಕೆ.ಎನ್ ರಾಜಣ್ಣನವರು ಪರಮೇಶ್ವರ್‌ರನ್ನು ಸೋಲಿಸಿದರು ಎಂಬ ಆರೋಪ ಇಂದಿಗೂ ಕೇಳಿಬರುತ್ತಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ತುಮಕೂರು ನಗರ ವಿಧಾನಸಭಾ ಕ್ಷೇತ್ರ: ಬಿಜೆಪಿ ಕಚ್ಚಾಟದ ಲಾಭ ಕಾಂಗ್ರೆಸ್‌ಗೊ, ಜೆಡಿಎಸ್‌ಗೊ?

2014ರಲ್ಲಿ ವಿಧಾನ ಪರಿಷತ್ ಸದಸ್ಯರಾದ ಪರಮೇಶ್ವರ್‌ರವರು 2015ರಲ್ಲಿ ಗೃಹ ಸಚಿವರಾದರು. 2018ರ ಚುನಾವಣೆಯಲ್ಲಿ ಸುಧಾಕರ್ ಲಾಲ್ ವಿರುದ್ಧ 7,619 ಮತಗಳಿಂದ ಗೆಲುವು ಕಂಡರು. ಅವರು 81,598 ಮತಗಳನ್ನು ಪಡೆದರೆ ಸುಧಾಕರ್ ಲಾಲ್ 73,979 ಮತಗಳನ್ನು ಪಡೆದರು. ಬಿಜೆಪಿಯ ವೈ.ಎಚ್ ಹುಚ್ಚಯ್ಯ 12,190 ಮತ ಪಡೆದು ಮೂರನೇ ಸ್ಥಾನ ಪಡೆದಿದ್ದರು. ಈ ಚುನಾವಣೆಯಲ್ಲಿ ಕೆ.ಎನ್ ರಾಜಣ್ಣನವರು ಕೊರಟಗೆರೆಯಲ್ಲಿ ಸಾಕಷ್ಟು ದಿನ ಪರಮೇಶ್ವರ್ ಪರ ಪ್ರಚಾರ ಮಾಡಿದ್ದರು ಎಂಬುದು ಗಮನಾರ್ಹ. ಆನಂತರ ಪರಮೇಶ್ವರ್ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದರು.

ಕ್ಷೇತ್ರದ ಅಂದಾಜು ಜಾತಿವಾರು ಮತಗಳು

ಒಟ್ಟು ಮತಗಳು: 2,10,000; ಪರಿಶಿಷ್ಟ ಜಾತಿ: 65,000; ಒಕ್ಕಲಿಗ: 38,000; ಪರಿಶಿಷ್ಟ ಪಂಗಡ: 25,000; ಮುಸ್ಲಿಂ: 15,000; ಲಿಂಗಾಯಿತ: 14,000; ಗೊಲ್ಲರು: 12,000; ಇತರೆ: 41,000

ಹಾಲಿ ಪರಿಸ್ಥಿತಿ

ಪರಮೇಶ್ವರ್‌ರವರು ಇತ್ತೀಚೆಗೆ ಕ್ಷೇತ್ರದಲ್ಲಿ ಒಂದಷ್ಟು ಅಭಿವೃದ್ದಿ ಕೆಲಸ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತವೆ. ಹಳ್ಳಿಗಳ ಸಂಪರ್ಕ ರಸ್ತೆಗಳು ಚೆನ್ನಾಗಿ ಆಗಿವೆ. ಒಳಚರಂಡಿ ವ್ಯವಸ್ಥೆ ಅಗಿದೆ. ಕುಡಿಯುವ ನೀರು ಸಿಗುತ್ತಿದೆ. ಜಯಮಂಗಲಿ ಸೇತುವೆ, ಕೆರೆಗಳ ಏರಿಗಳಲ್ಲಿ ರಸ್ತೆ ಆಗಿದೆ. ತಾಲ್ಲೂಕಿನ ಮೇಲೆ ಹಾದುಹೋಗುವ ಹೆದ್ದಾರಿ ನಿರ್ಮಾಣವಾದ ಬಳಿಕ ಭೂಮಿಗಳಿಗೆ ಒಳ್ಳೆಯ ಬೆಲೆ ಬಂದಿವೆ. ಜನರಿಗೆ ಜೀವನೋಪಾಯಗಳು ಹೆಚ್ಚಾಗಿವೆ ಎಂದು ಜನ ಹೇಳುತ್ತಾರೆ. ಆದರೆ ರಾಜ್ಯನಾಯಕರಾದ ಪರಮೇಶ್ವರ್‌ರವರು ಸುಲಭವಾಗಿ ಜನರ ಕೈಗೆ ಸಿಗುವುದಿಲ್ಲ, ಸೊಫೆಸ್ಟಿಕೇಟೆಡ್ ರಾಜಕಾರಣಿ ಎಂಬ ಆರೋಪವು ಅವರ ಮೇಲಿದೆ. ಆದರೆ ಕಳೆದ ಒಂದು ವರ್ಷದಿಂದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಕ್ಷೇತ್ರದಲ್ಲಿ ಸಾಕಷ್ಟು ಓಡಾಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಕೊರಟಗೆರೆ ಕ್ಷೇತ್ರದ ಟಿಕೆಟ್‌ಗಾಗಿ ಪರಮೇಶ್ವರ್‌ರವರ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿದೆ. ಅವರಿಗೆ ಟಿಕೆಟ್ ಪಕ್ಕಾ ಆಗಿರುವುದರಿಂದ ಬೇರೆ ಯಾರೂ ಸಹ ಪ್ರಯತ್ನಿಸುತ್ತಿಲ್ಲ.

ಜೆಡಿಎಸ್

ಸುಧಾಕರ್ ಲಾಲ್‌ರವರು ಸರಳ ರಾಜಕಾರಣಿ ಎಂದೇ ಖ್ಯಾತರಾಗಿದ್ದರು. ಈಗಲೂ ಅವರು ಜನಸಾಮಾನ್ಯರಿಗೆ ಸುಲಭಕ್ಕೆ ಸಿಗುತ್ತಾರೆ. ಎಲ್ಲರ ಹೆಗಲ ಮೇಲೆ ಕೈ ಹಾಕಿಕೊಂಡು, ಎಲ್ಲರ ಹೆಸರು ನೆನಪಿಟ್ಟುಕೊಂಡು ಮಾತನಾಡಿಸುವ ಛಾತಿ ಅವರದು. ಜನಸಂಪರ್ಕವನ್ನೇ ತನ್ನ ಬಂಡವಾಳ ಮಾಡಿಕೊಂಡು ಈ ಬಾರಿಯೂ ಜೆಡಿಎಸ್ ಟಿಕೆಟ್ ಪಡೆದುಕೊಂಡಿರುವ ಅವರು ಪರಮೇಶ್ವರ್‌ರವರನ್ನು ಎದುರಿಸಲು ಸಜ್ಜಾಗಿದ್ದಾರೆ. ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್ ಆಡಳಿತದಲ್ಲಿರುವುದು ಅವರಿಗೆ ಪ್ಲಸ್ ಪಾಯಿಂಟ್. ದಲಿತರಲ್ಲಿ ಲಂಬಾಣಿ ಸಮುದಾಯದವರಾದ ಅವರು ಕ್ಷೇತ್ರದಲ್ಲಿ ತಮ್ಮ ಜಾತಿಯ ಮತಗಳು ಕಡಿಮೆ ಇದ್ದರೂ ಸಹ ಪೈಪೋಟಿ ಕೊಡುವುದಂತೂ ಗ್ಯಾರಂಟಿ.

ನೆಲೆ ಇಲ್ಲದ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಕಚ್ಚಾಟ

ಕೊರಟಗೆರೆಯಲ್ಲಿ ಬಿಜೆಪಿ ಪಕ್ಷಕ್ಕೆ ಯಾವುದೇ ನೆಲೆ ಇಲ್ಲ. ಇದುವರೆಗಿನ ಅವರ ಸಾಧನೆಯೆಂದರೆ 2018ರಲ್ಲಿ ವೈ.ಎಚ್ ಹುಚ್ಚಯ್ಯನವರು 12,190 ಮತ ಪಡೆದುದೆ ಆಗಿದೆ. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ವಾಲೇ ಚಂದ್ರಯ್ಯನವರು 15,738 ಮತ ಪಡೆದಿದ್ದರು, ಅಂದರೆ ಬಿಜೆಪಿಯ ಪರಿಸ್ಥಿತಿಯನ್ನು ತಿಳಿಯಬಹುದು. ಆದರೂ ಕ್ಷೇತ್ರದ ಟಿಕೆಟ್‌ಗಾಗಿ ಮೂವರು ಆಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.

ಬಿ.ಎಚ್ ಅನಿಲ್ ಕುಮಾರ್‌ (ಫೋಟೊ ಕೃಪೆ ಪ್ರಜಾವಾಣಿ)

ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳ್ಳಾವಿ ಗ್ರಾಮದವರಾದ ಬಿ.ಎಚ್ ಅನಿಲ್ ಕುಮಾರ್‌ರವರು ಐಎಎಸ್ ಅಧಿಕಾರಿಗಳಾಗಿದ್ದು ಸದ್ಯ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದಾರೆ. ಅವರ ತಂದೆ ವಿಶೇಷ ಜಿಲ್ಲಾಧಿಕಾರಿಯಾಗಿದ್ದರು ಮತ್ತು ತಾಯಿ ಕೆಪಿಎಸ್‌ಸಿ ಸದಸ್ಯರಾಗಿದ್ದರು. ಕೆಲವೇ ತಿಂಗಳುಗಳಲ್ಲಿ ನಿವೃತ್ತರಾಗಲಿರುವ ಅವರು ಕೊರಟಗೆರೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರು ಮಾದಿಗ ಸಮುದಾಯದವರಾಗಿದ್ದಾರೆ.

ಇನ್ನು ಸೂರ್ಯ ಆಸ್ಪತ್ರೆಯ ಡಾ.ಲಕ್ಷ್ಮೀಕಾಂತ್‌ರವರು ಮತ್ತೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇತ್ತೀಚೆಗೆ ಕೊರಟಗೆರೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಅವರು ಬಿ.ಎಚ್ ಅನಿಲ್ ಕುಮಾರ್ ವಿರುದ್ಧ ಮಾತಿನ ಚಕಮಕಿ ನಡೆಸಿದ್ದರು. ತಮ್ಮ ಫ್ಲೆಕ್ಸ್‌ಗಳನ್ನು ಅನಿಲ್ ಕುಮಾರ್ ಕಡೆಯವರು ಕಿತ್ತುಹಾಕಿದ್ದಾರೆ ಎಂಬುದು ಅವರ ಆರೋಪವಾಗಿತ್ತು. ಆ ಮೂಲಕ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಬಲರಾಗಿರುವ ಅವರು ಬಲಗೈ ಸಮುದಾಯಕ್ಕೆ ಸೇರಿದ್ದಾರೆ.

ಇನ್ನು ಬೆಂಗಳೂರಿನವರಾದ ಉದ್ಯಮಿ ಕೆ.ಎಂ ಮುನಿಯಪ್ಪನವರು ಸಹ ಕೊರಟಗೆರೆ ಬಿಜೆಪಿ ಟಿಕೆಟ್ ಕೇಳುತ್ತಿದ್ದಾರೆ. ಕಳೆದ ಚುನಾವಣೆ ಮುಗಿದಾಗಿನಿಂದಲೇ ಕೊರಟಗೆರೆಯಲ್ಲಿ ಸಮಾಜಸೇವೆ ಹೆಸರಿನಲ್ಲಿ ಕೆಲಸ ಆರಂಭಿಸಿದ್ದ ಅವರು ’ನಾಲ್ಕೂವರೆ ವರ್ಷ ಬಿಜೆಪಿ ಬೆಳೆಸಿದ್ದೇನೆ, ಹಾಗಾಗಿ ನನಗೆ ಟಿಕೆಟ್ ನೀಡಬೇಕೆಂದು’ ಒತ್ತಾಯಿಸುತ್ತಿದ್ದಾರೆ. ಅವರು ಭೋವಿ ಸಮುದಾಯಕ್ಕೆ ಸೇರಿದ್ದಾರೆ.

2023ರ ಸಾಧ್ಯತೆಗಳು

ಸದ್ಯದ ಮಟ್ಟಿಗೆ ಪರಮೇಶ್ವರ್ ಮತ್ತು ಸುಧಾಕರ್ ಲಾಲ್ ಎದುರು ನೇರಾನೇರ ಪೈಪೋಟಿ ಕಂಡುಬರುತ್ತಿದೆ. ಮಧುಗಿರಿಯ ಮಾಜಿ ಶಾಸಕ ಕೆ.ಎನ್ ರಾಜಣ್ಣ ಮತ್ತು ಪರಮೇಶ್ವರ್ ಇಬ್ಬರೂ ಪೂರ್ಣ ಮನಸ್ಸಿನಿಂದ ಪರಸ್ಪರರ ಪರವಾಗಿ ಪ್ರಚಾರ ಮಾಡಿದರೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂಬ ಸ್ಥಿತಿ ಇದೆ. ಏಕೆಂದರೆ ಪರಿಶಿಷ್ಟ ಪಂಗಡದ 25,000ದಷ್ಟು ಮತಗಳು ಕೊರಟಗೆರೆಯಲ್ಲಿದ್ದು ಅದೇ ಸಮುದಾಯದ ಕೆ.ಎನ್ ರಾಜಣ್ಣನವರು ಅವುಗಳ ಮೇಲೆ ಪ್ರಬಲ ಹಿಡಿತ ಹೊಂದಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಪರಮೇಶ್ವರ್‌ರವರು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು ಮತ್ತು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರುವುದು ಹಾಗೂ ಸಾಕಷ್ಟು ದುಡ್ಡು ಖರ್ಚು ಮಾಡುತ್ತಿರುವುದು ಅವರಿಗೆ ವರವಾಗುವ ಸಾಧ್ಯತೆಗಳಿವೆ.

ಪರಮೇಶ್ವರ್‌ರವರು ದಲಿತರಲ್ಲಿ ಬಲಗೈ ಸಮುದಾಯವಾದ್ದರಿಂದ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಎಡಗೈ ಮಾದಿಗ ಸಮುದಾಯದ ಮತಗಳನ್ನು ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡು ನಾನು ಒಳಮೀಸಲಾತಿ ಜಾರಿಯ ಪರವಾಗಿದ್ದೇನೆ ಎಂಬ ಮಾತುಕೊಟ್ಟಿದ್ದಾರೆ. ಇದು ಎಷ್ಟರಮಟ್ಟಿಗೆ ಫಲ ಕೊಡಲಿದೆ ಕಾದುನೋಡಬೇಕಿದೆ.

ಸುಧಾಕರ್ ಲಾಲ್‌ರವರು ಒಕ್ಕಲಿಗ ಮತಗಳು ಮತ್ತು ಇತರೆ ಸಮುದಾಯಗಳ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ತನ್ನ ಸರಳತೆ ಮತ್ತು ಜನಸಂಪರ್ಕವನ್ನು ಮುಂದಿಟ್ಟುಕೊಂಡು ಮತಬೇಟೆಗೆ ಇಳಿದಿದ್ದಾರೆ.

ಬಿಜೆಪಿಯಲ್ಲಿ ಬಿ.ಎಚ್ ಅನಿಲ್ ಕುಮಾರ್‌ರವರು ಅಭ್ಯರ್ಥಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಅವರು ಮಾದಿಗ ಸಮುದಾಯದವರಾಗಿರುವುದು, ಸಾಕಷ್ಟು ಹಣ ಖರ್ಚು ಮಾಡುವ ಸಾಮರ್ಥ್ಯವಿರುವುದು ಅದಕ್ಕೆ ಕಾರಣ. ಮಾದಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟರುವ ಬಿಜೆಪಿ, ಒಳ ಮೀಸಲಾತಿ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಇನ್ನು ನಿಗೂಢವಾಗಿದೆ. ಆದರೆ ಬಿಜೆಪಿ ಏನೇ ಪ್ರಯತ್ನ ನಡೆಸಿದರೂ ಸಹ ಕೊರಟಗೆರೆಯಲ್ಲಿ ಒಂದಷ್ಟು ಮತಗಳನ್ನು ಪಡೆಯಬಹುದೇ ಹೊರತು ಗೆಲುವಿನ ಸನಿಹಕ್ಕೂ ಬರುವುದಿಲ್ಲ. ಪಕ್ಷಕ್ಕೆ ಕ್ಷೇತ್ರದಲ್ಲಿ ನೆಲೆ ಇಲ್ಲದಿರುವುದು ಮತ್ತು ಟಿಕೆಟ್‌ಗಾಗಿ ಆಂತರಿಕ ಕಚ್ಚಾಟಗಳು ಜೋರಾಗಿರುವುದೇ ಅದಕ್ಕೆ ಕಾರಣ. ಆದರೆ ಬಿಜೆಪಿ ಎಷ್ಟು ಮತಗಳನ್ನು ಕಬಳಿಸುತ್ತದೆ ಎಂಬುದು ಪರಮೇಶ್ವರ್‌ರವರ ಗೆಲುವು ಸೋಲನ್ನು ನಿರ್ಧರಿಸುವ ಸಾಧ್ಯತೆಗಳಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...