Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮುಳಬಾಗಿಲು: ಪಕ್ಷೇತರ ಅಭ್ಯರ್ಥಿಗಳ ಪಾರುಪತ್ಯಕ್ಕೆ ಈ ಬಾರಿ ಬ್ರೇಕ್ ಬೀಳಲಿದೆಯೆ?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮುಳಬಾಗಿಲು: ಪಕ್ಷೇತರ ಅಭ್ಯರ್ಥಿಗಳ ಪಾರುಪತ್ಯಕ್ಕೆ ಈ ಬಾರಿ ಬ್ರೇಕ್ ಬೀಳಲಿದೆಯೆ?

- Advertisement -
- Advertisement -

ಕೋಲಾರ ಜಿಲ್ಲೆಯ ಪೂರ್ವಕ್ಕಿರುವ ಆಂಧ್ರ ಪ್ರದೇಶದ ಗಡಿಗೆ ಅಂಟಿಕೊಂಡಿರುವ ವಿಧಾನಸಭಾ ಕ್ಷೇತ್ರ ಮುಳಬಾಗಿಲು. ತಿರುಪತಿಗೆ ಹೋಗುವ ದಾರಿಯಲ್ಲಿ ಮುಗ್ಲಿ ಬೆಟ್ಟಗಳ ಶ್ರೇಣಿಯಲ್ಲಿ ಬರುವುದರಿಂದ ಇದನ್ನು ಮೂಡಣ ಬಾಗಿಲು, ಮೂಡು ಬಾಗಿಲು ಎಂದು ಕರೆಯುತ್ತಿದ್ದರು. ಅದರಿಂದ ಮುಳುಬಾಗಿಲು ಅಂತ ಹೆಸರು ಬಂದಿದೆ ಎನ್ನಲಾಗುತ್ತಿದೆ. ಆವಣಿ ನಾಡು ಎಂದು ಕರೆಯುತ್ತಿದ್ದ ಆವಣಿ ಮುಳಬಾಗಿಲಿನ ಪ್ರಾಚೀನ ಊರಾಗಿದೆ. ಬಾಣರು ಮತ್ತು ನೊಳಂಬರು ಆಳಿದ ಕುರುಹುಗಳಿವೆ. ಆನಂತರ ವಿಜಯನಗರ ಅರಸರ ಕಾಲದಲ್ಲಿ ಎರಡನೇ ಚಕ್ರವರ್ತಿ ಎಂದು ಕರೆಸಿಕೊಳ್ಳುತ್ತಿದ್ದ ಲಕ್ಕಣ್ಣ ದಂಡೇಶ ಎಂಬುವವರು ಇಲ್ಲಿನ ರಾಜ್ಯಪಾಲರಾಗಿದ್ದುಕೊಂಡು ವಿರೂಪಾಕ್ಷ ದೇವಾಲಯ ನಿರ್ಮಿಸಿ ಆಡಳಿತದ ನೆಲೆಯನ್ನಾಗಿ ಮಾಡಿಕೊಂಡಿದ್ದರು ಎಂಬುದಕ್ಕೆ 7-8 ಜಿಲ್ಲೆಗಳಲ್ಲಿ ಶಾಸನಗಳು ದೊರೆಯುತ್ತವೆ. ಕನ್ನಡ ಮತ್ತು ತೆಲುಗು ಇಲ್ಲಿನ ಜನರಾಡುವ ಭಾಷೆಗಳಾಗಿವೆ. ತೆಲುಗು ಹೆಚ್ಚು ಇದ್ದಿದ್ದು ಇತ್ತೀಚಿನ ದಿನಗಳಲ್ಲಿ ಕನ್ನಡ ಹೆಚ್ಚು ಬಳಕೆಗೆ ಬಂದಿದೆ.

ರಾಜಕೀಯ ಇತಿಹಾಸ

ಕಾಂಗ್ರೆಸ್ ಭದ್ರಕೋಟೆಯಾಗಿರುವ ಮುಳಬಾಗಿಲಿನಲ್ಲಿ ಪಕ್ಷೇತರ ಅಭ್ಯರ್ಥಿಗಳು 5 ಸಲ ಗೆಲುವು ಸಾಧಿಸಿರುವುದು ವಿಶೇಷ. 15 ಚುನಾವಣೆಗಳಲ್ಲಿ ಕಾಂಗ್ರೆಸ್ 7 ಬಾರಿ ಜಯಕಂಡರೆ ಜೆಡಿಎಸ್ 2 ಬಾರಿ ಮತ್ತು ಸಿಪಿಎಂ ಒಮ್ಮೆ ಗೆಲುವು ಕಂಡಿದೆ.

ಮೈಸೂರು ಪ್ರಾಂತ್ಯದ ಭಾಗವಾಗಿದ್ದಾಗ ಮುಳಬಾಗಿಲು ದ್ವಿಸದಸ್ಯ ಕ್ಷೇತ್ರವಾಗಿದ್ದು ಅದರಲ್ಲಿ ಒಂದು ಸ್ಥಾನ ಪ.ಜಾ ಮೀಸಲು ಕ್ಷೇತ್ರವಾಗಿತ್ತು. 1952ರಲ್ಲಿ ಇಲ್ಲಿಂದ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿ ಹಿರಿಯ ದಲಿತ ಮುಖಂಡ ಟಿ.ಚನ್ನಯ್ಯ ಮತ್ತು ಜಿ.ನಾರಾಯಣಗೌಡ ಆಯ್ಕೆಯಾಗಿದ್ದರು. ಅದೇ ರೀತಿ 1957ರಲ್ಲಿ ಸ್ವತಂತ್ರ ಅಭ್ಯರ್ಥಿ ಬಿ.ಎಲ್ ನಾರಾಯಣಸ್ವಾಮಿ ಮತ್ತು ಕಾಂಗ್ರೆಸ್ ಪಕ್ಷದ ನಾರಾಯಣಪ್ಪ ಆಯ್ಕೆಯಾಗಿದ್ದರು.

ಟಿ.ಚನ್ನಯ್ಯ

1962ರಲ್ಲಿ ಮುಳಬಾಗಿಲು ಏಕಸದಸ್ಯ ಪ.ಜಾ ಮೀಸಲು ಕ್ಷೇತ್ರವಾಯಿತು. ಆಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೆ.ನಾರಾಯಣಪ್ಪನವರು ಸ್ವತಂತ್ರ ಅಭ್ಯರ್ಥಿ ಪಿ.ಮುನಿಯಪ್ಪನವರು ಮಣಿಸಿ ಶಾಸಕರಾದರು. 1967ರಲ್ಲಿ ಕಾಂಗ್ರೆಸ್ ಟಿಕೆಟ್‌ನಡಿ ಸ್ಪರ್ಧಿಸಿದ ಟಿ.ಚನ್ನಯ್ಯನವರು ಅದೇ ಪಿ.ಮುನಿಯಪ್ಪನವರನ್ನು ಸೋಲಿಸಿ ಎರಡನೇ ಬಾರಿಗೆ ವಿಧಾನಸೌಧ ಪ್ರವೇಶಿಸಿದರು. 1972ರಲ್ಲಿ ಕೊನೆಗೂ ಸ್ವತಂತ್ರ ಅಭ್ಯರ್ಥಿ ಪಿ.ಮುನಿಯಪ್ಪನವರು ತಮ್ಮ ಮೂರನೇ ಪ್ರಯತ್ನದಲ್ಲಿ ಶಾಸಕರಾಗಿ ಆಯ್ಕೆಯಾದರು.

1978ರ ಚುನಾವಣೆ ವೇಳೆಗೆ ಮುಳಬಾಗಿಲು ಪ.ಜಾ ಮೀಸಲು ಕ್ಷೇತ್ರ ಹೋಗಿ ಸಾಮಾನ್ಯ ವಿಧಾನಸಭಾ ಕ್ಷೇತ್ರವಾಗಿತ್ತು. ಆಗ ಇಂದಿರಾ ಕಾಂಗ್ರೆಸ್ ಪಕ್ಷದ ಜೆ.ಎಂ ರೆಡ್ಡಿಯವರು ಜನತಾಪಕ್ಷದ ಬೀರೇಗೌಡರನ್ನು ಮಣಿಸಿ ಶಾಸಕರಾದರು. 1983ರಲ್ಲಿ ಅದೇ ಬೀರೇಗೌಡರು ಸ್ವತಂತ್ರವಾಗಿ ಕಣಕ್ಕಿಳಿದು ಕಾಂಗ್ರೆಸ್ ಪಕ್ಷದ ಜೆ.ಎಂ ರೆಡ್ಡಿಯವರ ಎದುರು ಜಯ ಕಂಡರು.

1985ರ ಚುನಾವಣೆಯಲ್ಲಿ ಮುಳಬಾಗಿಲಿನಲ್ಲಿ ಸಿಪಿಎಂ ಗೆಲುವಿನ ಖಾತೆ ತೆರೆದಿತ್ತು. ಪಕ್ಷದ ಆರ್.ವೆಂಕಟರಾಮಯ್ಯನವರು ಕಾಂಗ್ರೆಸ್ ಅಭ್ಯರ್ಥಿ ಎಂ.ವಿ ಪ್ರಮೀಳಮ್ಮನವರ ಎದುರು 22,104 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಆನಂತರ ಸಿಪಿಎಂ ಪಕ್ಷ ಈ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ವಿಫಲವಾಯಿತು.

1989ರಲ್ಲಿ ಕಾಂಗ್ರೆಸ್ ಪಕ್ಷದ ಎಂ.ವಿ ವೆಂಕಟಪ್ಪನವರು ಜನತಾ ಪಕ್ಷ ಕೆ.ವಿ ಶಂಕರಪ್ಪನವರ ಎದುರು ಗೆದ್ದರು. ಆದರೆ 1994ರಲ್ಲಿ ಜನತಾದಳದ ಆರ್ ಶ್ರೀನಿವಾಸ್‌ರವರು ಎಂ.ವಿ ವೆಂಕಟಪ್ಪನವರನ್ನು ಮಣಿಸಿದರು. ಆ ಮೂಲಕ ದೇವೇಗೌಡರ ಸರ್ಕಾರದಲ್ಲಿ ಸಚಿವರೂ ಸಹ ಆಗಿದ್ದರು. ಮತ್ತೆ 1999ರಲ್ಲಿ ಕಾಂಗ್ರೆಸ್ ಎಂ.ವಿ ವೆಂಕಟಪ್ಪನವರು ಜೆಡಿಎಸ್‌ನಲ್ಲಿದ್ದ ಆರ್ ಶ್ರೀನಿವಾಸ್‌ರವರನ್ನು ಮಣಿಸಿ ಎರಡನೇ ಬಾರಿಗೆ ಶಾಸಕರಾಗಿದರು.

2004ರ ಚುನಾವಣೆಯಲ್ಲಿ ಜೆಡಿಎಸ್‌ನ ಆರ್ ಶ್ರೀನಿವಾಸ್‌ರವರು ಬಿಜೆಪಿ ಪಕ್ಷದ ವೈ ಸುರೇಂದ್ರರವರನ್ನು ಮಣಿಸಿ ಎರಡನೇ ಬಾರಿ ವಿಧಾನಸಭೆ ಪ್ರವೇಶಿಸಿದರು. ಮುಳಬಾಗಿಲಿನಲ್ಲಿ ಬಿಜೆಪಿ ಪಕ್ಷವು ಈ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದುದು ಬಿಟ್ಟರೆ ಮತ್ತೆ ಯಾವಾಗಲೂ ಗಮನಾರ್ಹ ಸಾಧನೆ ತೋರಿಲ್ಲ.

2008ರಲ್ಲಿ ಮುಳಬಾಗಿಲು ಮತ್ತೆ ಪ.ಜಾ ಮೀಸಲು ಕ್ಷೇತ್ರವಾಗಿ ಬದಲಾಯಿತು. ಆಗ ಕಾಂಗ್ರೆಸ್ ಅಭ್ಯರ್ಥಿ ಅಮರೇಶ್‌ರವರು ಜೆಡಿಎಸ್‌ನ ಎನ್ ಮುನಿನಂಜಪ್ಪನವರನ್ನು ಮಣಿಸಿ ಶಾಸಕರಾದರು. 2013ರಲ್ಲಿ ಸ್ವತಂತ್ರ ಅಭ್ಯರ್ಥಿ ಕೊತ್ತೂರು ಮಂಜುನಾಥ್‌ರವರು ಅದೇ ಮುನಿನಂಜಪ್ಪರನ್ನು 33,734 ಮತಗಳ ಭಾರೀ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾದರು.

ಕೊತ್ತೂರು ಮುಂಜುನಾಥ್ ಜಾತಿ ಪ್ರಮಾಣ ಪತ್ರ ವಿವಾದ

ಜನಪ್ರಿಯ ಯುವ ನಾಯಕರು, ಶಾಸಕರೂ ಆಗಿದ್ದ ಕೊತ್ತೂರು ಮಂಜುನಾಥ್‌ರವರು 2018ರ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷ ಸೇರಿದ್ದರು. ಬಿ ಫಾರಂ ಪಡೆದು ನಾಮಪತ್ರ ಸಹ ಸಲ್ಲಿಸಿದ್ದರು. ಅಷ್ಟರಲ್ಲಿ ಬೈರಾಗಿ ಎಂಬ ಹಿಂದುಳಿದ ಜಾತಿಯ ಕೊತ್ತೂರು ಮಂಜುನಾಥ್‌ರವರು ಬುಡಗ ಜಂಗಮ ಜಾತಿ ಹೆಸರಿನಲ್ಲಿ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪಡೆದಿದ್ದಾರೆ ಎಂದು ಅವರ ವಿರುದ್ಧ ದೂರು ದಾಖಲಾಗಿತ್ತು. ಹೈಕೋರ್ಟ್ ಆ ದೂರನ್ನು ಪರಿಗಣಿಸಿ ಅವರ ಪ.ಜಾ ಪ್ರಮಾಣ ಪತ್ರವನ್ನು ಅಸಿಂಧು ಎಂದು ಘೋಷಿಸಿತು. ಹಾಗಾಗಿ ನಾಮಪತ್ರ ಪರಿಶೀಲನೆ ವೇಳೆ ಚುನಾವಣಾ ಅಧಿಕಾರಿಗಳು ಕೊತ್ತೂರು ಮಂಜುನಾಥ್‌ರವರ ನಾಮಪತ್ರವನ್ನು ತಿರಸ್ಕರಿಸಿದರು. ಇದರಿಂದ ಶಾಕ್‌ಗೆ ಒಳಗಾದ ಅವರು ಚುನಾವಣೆಯಿಂದ ಅನಿವಾರ್ಯವಾಗಿ ಹಿಂದೆ ಸರಿಯಬೇಕಾಗಿ ಬಂತು. ಕಣದಲ್ಲಿ ಇಲ್ಲದ ಕಾರಣ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಚ್.ನಾಗೇಶ್‌ರವರಿಗೆ ಬೆಂಬಲ ಘೋಷಿಸಿ ಗೆಲ್ಲಿಸಬೇಕಾಯಿತು. ಜೆಡಿಎಸ್ ಪಕ್ಷದ ಸಮೃದ್ಧಿ ಮಂಜುನಾಥ್‌ರವರು ಪ್ರಬಲ ಪೈಪೋಟಿ ಕೊಟ್ಟರೂ ಸಹ 6,715 ಮತಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಕಾಂಗ್ರೆಸ್ ಟಿಕೆಟ್ ಸಿಗದುದ್ದಕ್ಕೆ ಬೇಸರಗೊಂಡು ಬಿಜೆಪಿ ಸೇರಿದ್ದ ಮಾಜಿ ಶಾಸಕ ಅಮರೇಶ್ ಕೇವಲ 8,411 ಮತಗಳಿಗೆ ಸೀಮಿತಗೊಂಡರು.

ಕೊತ್ತೂರು ಮಂಜುನಾಥ್‌

ಆಕಸ್ಮಿಕವಾಗಿ ಶಾಸಕರಾದ ಎಚ್.ನಾಗೇಶ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಅಬಕಾರಿಯಂತಹ ಮಹತ್ವ ಖಾತೆ ಅವರಿಗೆ ಸಿಕ್ಕಿತ್ತು. ಆನಂತರ ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿ ಮಂತ್ರಿಯಾದರು. ಬಿಜೆಪಿಯು ಸದ್ಯ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದೆ.

ಇನ್ನು ತನ್ನ ಜಾತಿ ಪ್ರಮಾಣ ಪತ್ರ ಅಸಿಂಧುವಾಗಲು ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್ ಮುನಿಯಪ್ಪನವರೆ ಕಾರಣ ಎಂದು ಕೊತ್ತೂರು ಮಂಜುನಾಥ್ ಅವರ ಮೇಲೆ ಮುಗಿಬಿದಿದ್ದರು. ಅದಕ್ಕಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ತನ್ನೆಲ್ಲ ಬೆಂಬಲಿಗರಿಗೆ ಬಿಜೆಪಿಗೆ ಮತ ಹಾಕುವಂತೆ ತಾಕೀತು ಮಾಡಿದ್ದರು. ಅದರ ಪರಿಣಾಮ ಬಿಜೆಪಿ ಸಂಸದರಾಗಿರುವ ಮುನಿಸ್ವಾಮಿಯವರಿಗೆ ಮುಳಬಾಗಿಲು ಒಂದೇ ಕ್ಷೇತ್ರದಲ್ಲಿ ಲಕ್ಷಕ್ಕೂ ಅಧಿಕ ಮತಗಳು ಬಂದಿದ್ದವು.

ಸದ್ಯದ ವಿದ್ಯಮಾನ

ಪಕ್ಷೇತರ ಶಾಸಕನಾಗಿ ಎರಡೂ ಸರ್ಕಾರಗಳಲ್ಲಿ ಸಚಿವರಾಗಿದ್ದ ಎಚ್.ನಾಗೇಶ್‌ರವರು ಒಂದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬೂತ್ ಮಟ್ಟದ ಜನಬಲವಿಲ್ಲದಿದ್ದರೂ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಸ್ತೆಗಳು ಮತ್ತಿತರ ಕೆಲಸ ಮಾಡಿದ್ದಾರೆ. ಯಾರೇ ಜನ ಬಂದರೂ ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಕೊತ್ತೂರು ಮಂಜುನಾಥ್‌ರವರು ತನ್ನ ಜಾತಿ ಪ್ರಮಾಣ ಪತ್ರ ಅಸಿಂಧು ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ನಡೆಯುತ್ತಿದೆ. 2023ರ ಚುನಾವಣೆಗೂ ಮುನ್ನವೇ ತೀರ್ಪು ತನ್ನ ಪರವಾಗಿ ಬರಲಿದ್ದು ಮುಂದಿನ ಚುನಾವಣೆಯಲ್ಲಿ ಮುಳುಬಾಗಿಲಿನಲ್ಲೇ ಸ್ಪರ್ಧಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಿರುವ ಅವರು ಒಂದು ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಮುಗಿಯದಿದ್ದರೆ ಕೋಲಾರ ಸಾಮಾನ್ಯ ಕ್ಷೇತ್ರದಿಂದ ಕಣಕ್ಕಿಳಿಯುವ ಆಲೋಚನೆಯಲ್ಲಿದ್ದಾರೆ. ಅದಕ್ಕಾಗಿ ಸಿದ್ದರಾಮಯ್ಯನವರು ಸ್ಪರ್ಧಿಸಲು ಕೋಲಾರಕ್ಕೆ ಬರುತ್ತಾರೊ, ಇಲ್ಲವೊ ಎಂದು ಎದುರು ನೋಡುತ್ತಿದ್ದಾರೆ.

ಸಮೃದ್ಧಿ ಮಂಜುನಾಥ್‌

ಇನ್ನು ಕೊತ್ತೂರು ಮಂಜುನಾಥ್ ಮತ್ತು ಚಿಂತಾಮಣಿಯ ಮಾಜಿ ಶಾಸಕ ಡಾ.ಸುಧಾಕರ್ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದಕ್ಕೆ ಕೆ.ಎಚ್ ಮುನಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ದೂರು ನೀಡಿದ್ದರೂ ರಾಜ್ಯ ಕಾಂಗ್ರೆಸ್ ನಾಯಕರು ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಅವರು ಅಸಮಾಧಾನ ತೋಡಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಮುನಿಯಪ್ಪನವರು ಪಕ್ಷದಲ್ಲಿಯೇ ಉಳಿಯಬೇಕು ಮತ್ತು ಅವರಿಗೆ ಉನ್ನತ ಸ್ಥಾನಮಾನ ಕೊಡಲಾಗುವುದು ಎಂದು ಭರವಸೆ ನೀಡಿದೆ. ಅಲ್ಲದೆ 2024ರ ಚುನಾವಣೆಯಲ್ಲಿ ಮುನಿಯಪ್ಪನವರನ್ನು ಗೆಲ್ಲಿಸಬೇಕೆಂಬ ಷರತ್ತನ್ನು ಕೊತ್ತೂರು ಮುಂಜುನಾಥ್ ಮತ್ತು ಡಾ.ಸುಧಾಕರ್‌ರವರಿಗೆ ವಿಧಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಂದಾಜು ಜಾತಿವಾರು ಮತಗಳು

ಕೋಲಾರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಂತೆ ಮುಳಬಾಗಿಲಿನಲ್ಲಿಯೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಸ್‌ಸಿ, ಎಸ್‌ಟಿ ಮತಗಳು ಸುಮಾರು 60,000ದಷ್ಟಿದ್ದು ಒಕ್ಕಲಿಗ ಮತಗಳು 50,000ದಷ್ಟಿವೆ. ಮುಸ್ಲಿಮರು 35,000ಕ್ಕೂ ಹೆಚ್ಚಿನ ಮತಗಳನ್ನು ಹೊಂದಿದ್ದಾರೆ ಎನ್ನಲಾಗಿದ್ದು ಇತರ ಹಿಂದುಳಿದ ವರ್ಗಗಳ 50,000 ಮತ್ತು ಉಳಿದ ಸಮುದಾಯಗಳ 10,000 ಮತಗಳಿವೆ ಎನ್ನಲಾಗುತ್ತಿದೆ.

ಕ್ಷೇತ್ರದ ಸಮಸ್ಯೆಗಳು

ಸ್ಥಳೀಯ ಉದ್ಯೋಗ ಸೃಷ್ಟಿಯಾಗದಿರುವುದು ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಯುವಜನರು ಬೆಂಗಳೂರಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಟೊಮ್ಯಾಟೋ ಬೆಳೆ ಹೆಚ್ಚು ಬೆಳೆಯುತ್ತಿದ್ದು ಅದು ಕೆಲವೊಮ್ಮೆ ಲಾಟರಿ ಹೊಡೆಯುತ್ತೆ ಮತ್ತು ಲಾಭ ತರುತ್ತದೆ. ಆದರೆ ಬಹಳ ಸಲ ಬೆಲೆ ಸಿಗದೇ ಬೀದಿಗೆ ಸುರಿಯಬೇಕಾದ ಪರಿಸ್ಥಿತಿಯಿದೆ. ಹಾಗಾಗಿ ಬಹಳಷ್ಟು ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ತರಕಾರಿಗಳನ್ನು ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್ ಬೇಕು ಎಂಬ ಬಹಳ ದಿನಗಳ ಬೇಡಿಕೆ ಕನಸಾಗಿಯೇ ಉಳಿದಿದೆ.

ಟಿಕೆಟ್ ರೇಸ್‌ನಲ್ಲಿರುವವರು

ಮುಳಬಾಗಿಲು ಕ್ಷೇತ್ರದಲ್ಲಿ ಇದುವರೆಗೆ ಅಭ್ಯರ್ಥಿ ಘೋಷಿಸಿರುವ ಪಕ್ಷವೆಂದರೆ ಜೆಡಿಎಸ್ ಮಾತ್ರ. ಅದು ಸಮೃದ್ಧಿ ಮಂಜುನಾಥ್‌ರವರಿಗೆ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಉಳಿದ ಎಲ್ಲಾ ಪಕ್ಷಗಳು ಸಹ ಕಾದು ನೋಡುವ ತಂತ್ರ ಅನುಸರಿಸುತ್ತಿವೆ. ಕಾಂಗ್ರೆಸ್ ಪಕ್ಷದ ಕೊತ್ತೂರು ಮಂಜುನಾಥ್‌ರವರು ಸುಪ್ರೀಂ ಕೋರ್ಟ್ ಕಡೆ ನೋಡುತ್ತಿದ್ದಾರೆ. ತನ್ನ ಪ್ರಕರಣ ಇತ್ಯರ್ಥವಾಗಲಿ ಎಂಬುದು ಅವರ ಕನಸು. ಅದು ಈಡೇರಿದರೆ ಮುಳಬಾಗಿಲಿಗೆ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಏಕೆಂದರೆ ಸಾಕಷ್ಟು ಬೆಂಬಲಿಗರನ್ನು ಹೊಂದಿರುವ ಅವರು ಮುಳಬಾಗಿಲಿನಲ್ಲಿ ಭಾರೀ ಪ್ರಭಾವ ಹೊಂದಿದ್ದಾರೆ.

ಇದರ ಜೊತೆಗೆ ಕೆ.ಎಚ್ ಮುನಿಯಪ್ಪನವರು ರಾಜ್ಯ ರಾಜ್ಯಕಾರಣಕ್ಕೆ ಪ್ರವೇಶಿಸಲಿದ್ದು ಅವರು ಮುಳಬಾಗಿಲಿನಿಂದ ಸ್ಪರ್ಧಿಸಬಹುದು, ಕೊರಟಗೆರೆಯಿಂದ ಶಾಸಕರಾಗಿರುವ ಡಾ.ಜಿ ಪರಮೇಶ್ವರ್ ಬರಬಹುದು ಎಂಬೆಲ್ಲ ವದಂತಿಗಳು ಕೇಳಿಬರುತ್ತಿವೆ. ಆದರೆ ಅದು ಎಷ್ಟು ನಿಜ ಎಂಬುದು ಟಿಕೆಟ್ ಘೋಷಣೆಯಾದ ನಂತರವೇ ತಿಳಿಯಲು ಸಾಧ್ಯ.

ಇನ್ನು ಬಿಜೆಪಿ ಈ ಕ್ಷೇತ್ರದಲ್ಲಿ ಇದುವರೆಗೂ ಗುರುತರ ಸಾಧನೆ ಮಾಡಿಲ್ಲ. ಕಾಂಗ್ರೆಸ್‌ನಿಂದ ಬಂದ ಮಾಜಿ ಶಾಸಕ ಅಮರೇಶ್ ಬೇರುಬಿಡಲು ಸಾಧ್ಯವಾಗಿಲ್ಲ. ಹಾಗಾಗಿ 2023ರ ಚುನಾವಣೆಗೆ ಬಿಜೆಪಿ ಹಾಲಿ ಪಕ್ಷೇತರ ಶಾಸಕರಾಗಿರುವ ಎಚ್.ನಾಗೇಶ್‌ರವರ ಮೇಲೆ ಕಣ್ಣಿಟ್ಟಿದೆ. ಕಾಂಗ್ರೆಸ್ ಸಹ ಕೊತ್ತೂರು ಮಂಜುನಾಥ್ ಕಾಂಗ್ರೆಸ್‌ನಿಂದ ಸ್ಪರ್ಧಿಸದಿದ್ದಲ್ಲಿ ನಾಗೇಶ್‌ರವರಿಗೆ ಟಿಕೆಟ್ ಕೊಡುವ ಆಲೋಚನೆಯಲ್ಲಿದೆ. ನಾಗೇಶ್ ಡಿ.ಕೆ ಶಿವಕುಮಾರ್‌ರವರ ಬೆಂಬಲಿಗರಾಗಿದ್ದು ಎರಡು ಪಕ್ಷಗಳ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ’ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ, ಆದರೆ ಯಾವ ಪಕ್ಷದಿಂದ ಎಂಬುದು ಖಚಿತವಾಗಿಲ್ಲ. ಕೊನೆಗೆ ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಸರಿಯೇ ಕಣಕ್ಕಿಳಿಯುತ್ತೇನೆ’ ಎಂದು ನಾಗೇಶ್ ತಿಳಿಸಿದ್ದಾರೆ.

ಒಟ್ಟಿನಲ್ಲಿ 2023ರ ಚುನಾವಣೆ ಮುಳಬಾಗಿಲಿನಲ್ಲಿ ಕೊತ್ತೂರು ಮಂಜುನಾಥ್ ಮತ್ತು ಜೆಡಿಎಸ್‌ನ ಸಮೃದ್ಧಿ ಮಂಜುನಾಥ್‌ರವರ ನಡುವೆ ನಡೆಯಲಿದೆ. ಏಕೆಂದರೆ ಕೊತ್ತೂರು ಮಂಜುನಾಥ್ ಬೆಂಬಲವಿಲ್ಲದೆ ಕಾಂಗ್ರೆಸ್ ಅಥವಾ ಪಕ್ಷೇತರ ಅಭ್ಯರ್ಥಿಗಳ ಗೆಲುವು ಕಷ್ಟ. ಕಾಂಗ್ರೆಸ್‌ಗೆ ಕೊತ್ತೂರು ಅಥವಾ ಅವರ ಕಡೆಯ ಅಭ್ಯರ್ಥಿ ಇಲ್ಲವಾದರೆ ಒಮ್ಮೆ ಸೋತು ಅನುಕಂಪ ಪಡೆದಿರುವ ಸಮೃದ್ಧಿ ಮಂಜುನಾಥ್‌ರವರ ಗೆಲುವು ಸುಲಭವಾಗುತ್ತದೆ ಎನ್ನುವ ಮಾತು ಕೇಳಿಬರುತ್ತದೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆಜಿಎಫ್: ಪರ್ಯಾಯ ಪಕ್ಷಗಳ ನೆಲೆಯಲ್ಲೀಗ ಕಾಂಗ್ರೆಸ್ ಮುಂಚೂಣಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...